Saturday, November 4, 2017

ಎರಡು ನೆರಳು

ನಾನು ನಾನಾಗದಿರುವಾಗ 
ನನ್ನೊಳಗೆ ನಾನ್ಯಾರು ?
ಪ್ರಶ್ನೆಗಳ ವರ್ತುಲ 
ಉತ್ತರದ ಕೈಚೀಲ 
ತಡಕಾಡಿದಸ್ಟು 
ಮುಗಿಯದ ಗೊಂದಲ. 

ಸುಮ್ಮನೆ ಕುಳಿತು 
ನನ್ನ ಹಿಂದೆ ನಾನೇ ಅವಿತು 
ಆಡಿಕೊಂಡ ಆಟ 
ಕಣ್ಣಾಮುಚ್ಚಾಲೆಯಂತೂ ಅಲ್ಲ,
ಬಣ್ಣದ ಮುಖವಾಡ 
ಮಾಸಿಹೋಗಬಹುದೆಂಬ 
ಭಯಕ್ಕೆ 
ಬೆದರಿ,ಬೆವರಿ ಒಂದಷ್ಟು 
ನಾ ಕಂಡರೆ, ಕ್ಷಮಿಸಿ 
ನಾ ಅವನಲ್ಲ. 

ಕುಣಿಕೆಯ ಕೊನೆಗೆ 
ನಾ ಅಲ್ಲದ ನನ್ನ 
ನೇತಾಡಿಸಿ,ನರಳಿಸಿ 
ಮುಗಿಸಿಬಿಟ್ಟರೆ?
ನೀವು ಪರಿಚಯದ 
ನಗೆ ಬೀರುದು ಹೇಗೆ?
ನನ್ನ ಬಿಟ್ಟ ನಾನು 
ನಿಮಗೆ ಅಪರಿಚಿತ 
ನನಗಷ್ಟೇ ಚಿರಪರಿಚಿತ. 

ಒಂದು ದಿನ ನೀವು,
ಹಠ ಹಿಡಿದು 
ನನ್ನೊಳಗಿನ ನನ್ನ 
ಹುಡುಕ ಹೊರಟರೆ?
ನಾನಲ್ಲದ ನನ್ನ 
ನಾನೇ ಆವರಿಸಿ,
ನಿಮ್ಮನ್ನೆಲ್ಲ ಯಾಮಾರಿಸಿ 
ಸದ್ದೇ ಮಾಡದೆ ಎದ್ದು ಹೋಗುವೆ. 
ಆಗ ನೀವು,
ನಿಮ್ಮೊಳಗಿನ ನಿಮ್ಮ ಹುಡುಕಿಕೊಳ್ಳಿ. 

ನಾನು ನಾನಾಗಿರುವಾಗ 
ನನ್ನೊಳಗೆ ಮತ್ತೆ ನೀನ್ಯಾರು?. 
ನನಗೆ ಎರಡು ನೆರಳು 
ಒಂದು ನನ್ನದು,
ಇನ್ನೊಂದು ನನ್ನದೇ.!!
ಪ್ರಶ್ನೆಗಳಿಗುತ್ತರ 
ಲೀಲಾಜಾಲ,
ಎಲ್ಲ ನನ್ನೊಳಗಿನ ನನ್ನ 
ಮಾಯಾಜಾಲ. 

------------------------------------------------------------------ಸುಕೇಶ್ ಪೂಜಾರಿ 
 

Saturday, October 28, 2017

ಚುಟುಕುಗಳು- ಕನ್ನಡ ರಾಜ್ಯೋತ್ಸವಕ್ಕೆ

                   ೧

ಬೆಂಗಳೂರಿನಲ್ಲಿ ಕನ್ನಡ 

ಬೆಂಗಳೂರಿನಲ್ಲಿ ಕನ್ನಡ
ಕನ್ನಡಿಯೊಳಗಿನ
ಚಿನ್ನದ ಗಂಟು.
ಹೊರಗು
ಅಳಿದುಳಿದದ್ದು
ಅಲ್ಪ ಸ್ವಲ್ಪ ಅಲ್ಲಲ್ಲಿ ಉಂಟು.


ಪರ ರಾಜ್ಯದ ಕನ್ನಡಿಗರು 

ಮೊನ್ನೆ ಪರ ರಾಜ್ಯದವರೊಬ್ಬರು
ಅರ್ಧಂಬರ್ಧ ಕನ್ನಡದಲ್ಲಿ
ಮಾತಾಡಲು ಶುರುವಿಟ್ಟರು,
ಖುಷಿಯಿಂದ ಹೇಳಿದೆ
ಈ ಬಾರಿಯ ರಾಜ್ಯೋತ್ಸವ
ಪ್ರಶಸ್ತಿ ನಿಮಗೇ ಕೊಟ್ಟಾರು!!ಕಾನ್ವೆಂಟ್ ನ ಕಂದ 

ಕಾನ್ವೆಂಟಿಗೆ ಸೇರಿಸುವಾಗ
ಕಂದನ ಕೇಳಿದರು,
"ನಿನಗೆ ಇಂಗ್ಲಿಷ್ ಗೊತ್ತಾ ?"
ಇಲ್ಲವೆಂದು ತಲೆಯಾಡಿಸಿದ
ಕನ್ನಡದ ಪೋರ,
"ಸರಿ ನಾವು ಕಳಿಸಿ ಕೊಡುತ್ತೇವೆ"
"ನಿನಗೆ ಕನ್ನಡ ಗೊತ್ತೇ ?"
ಹೌದೆಂದ ಹೆಮ್ಮೆಯಿಂದ.
"ಸರಿ ನಾವು ಮರೆಸಿ ಬಿಡುತ್ತೇವೆ" .


ಕನ್ನಡದ ಮೇಲೆ ಕಾಗೆ, ಗೂಬೆ 

ಮೊನ್ನೆ ಹೀಗೆ
ಕಾಗೆ
ಕನ್ನಡದ ಬಾವುಟದ
ಕಂಬದಲ್ಲಿ ಕೂತಿತ್ತು,
ಓಡಿಸಲು ಕಲ್ಲೆಸೆದೆ
ಮಿಟುಕಾಡಲಿಲ್ಲ .
ಸುತ್ತ ಜನ ಸೇರಿದರು
ಕನ್ನಡದ ಬಾವುಟಕ್ಕೆ
ಕಲ್ಲೆಸೆದು
ಅವಮಾನ ಮಾಡಿದೆನೆಂದರು,
ಕೋರ್ಟು ಮುಂದೆ ನಿಂತೆ .
"ಬಾವುಟದ ಮೇಲೆ ಕುಳಿತ
ಕಾಗೆ ಓಡಿಸುತಿದ್ದೆ ಜನ ತಪ್ಪು ತಿಳಿದರು " ಅಂದೆ .

ತಕ್ಕಡಿ ನನ್ನ ಕಡೆ ತೂಗಿತು
"ಸರಿ ಆ ಕಾಗೆಯನ್ನು ಹಿಡಿದು ತನ್ನಿ"
ನಗುತ್ತಾ ಆಜ್ಞಾಪಿಸಿದರು
ಜಡ್ಜ್ ಸಾಹೇಬರು .

"ನೀವು ಬನ್ನಿ ಕಾಗೆ ಓಡಿಸುದು ತಪ್ಪಲ್ಲ"

ಪುಸ್ತಕದ ಅಂಗಡಿಯಲ್ಲಿ

ಒಂದು ಕನ್ನಡ ಪುಸ್ತಕ ಕೊಡಿ,
ಇನ್ನಾದರೂ ಶುರುಮಾಡೋಣ
ಓದಲು
ನಮ್ಮ ನಾಡು ನುಡಿ.


ಕನ್ನಡಿಗ 
ಗೊತ್ತೇ ನಿನಗೆ
ಕುವೆಂಪು, ಮಾಸ್ತಿ,ಅಡಿಗ?
ಗೊತ್ತಿಲ್ವೆ ?
ನೀ ಯಾವ ಸೀಮೆ ಕನ್ನಡಿಗ!!!---------------------------------------------------------------------ಸುಕೇಶ್ ಪೂಜಾರಿ Saturday, September 9, 2017

ಹೀಗೊಂದು ಸ್ವಗತ

ನೆನಪು ಅರ್ಧ ಬೆಂದ ಜೋಳ
ಮನಸು ಹಸಿದ ತೋಳ
ಬದುಕು ತಳ್ಳೋ ಗಾಡಿ
ಎದೆಯಲ್ಲಿ ನಿಗಿ ನಿಗಿ ಕೆಂಡ, ಕಿಡಿ
ಯಾರೋ ಮೆಲ್ಲಗೆ
ಗಾಳಿ ಹಾಯುತಿದ್ದಾರೆ

ಗಾಡಿ ಸುತ್ತ ನಿಂತ ಜನ
ಜಾತ್ರೆಯಂತೂ ಅಲ್ಲ
ಇಲ್ಲಿ ಸುಟ್ಟ ನೆನಪುಗಳಿಗೆ
ಬೇಡಿಕೆ ಜಾಸ್ತಿ
ಕೆಲವರಂತೂ
ಉಪ್ಪು-ಖಾರ ಹಚ್ಚಿಕೊಳ್ಳುತ್ತಾರೆ.
ಹೊಗೆ ನೆಪ,
ಸುಟ್ಟುಕೊಳ್ಳಲು ಕಾರಣ
ಅದು ನನ್ನ ಮೇಲಿನ ಕೋಪ.

ಜನ ದೂರ ಹೋದಾಗ
ಕೂಗಿ ಕರೆಯೋಣವೆಂದುಕೊಂಡೆ
ತಳ್ಳೋ ಗಾಡಿಯ ಕೀರಲು ಶಬ್ದಕ್ಕೆ
ನನ್ನ ಬೊಬ್ಬೆ ಯಾರಿಗೂ ಕೇಳಲೇ ಇಲ್ಲ
ಕೆಲವರದಂತೂ
ಕಿವುಡತೆಯ ನಾಟಕಕ್ಕೆ,
ನಾನು ಬಯಲು ರಂಗಮಂದಿರ.

ಮೇಲೆ ಯಾಕೋ ಮೋಡ
ಅಳಲು ಶುರುಮಾಡುದರಲ್ಲಿತ್ತು.
ಕಿಡಿ ಆರುವ ಹೊತ್ತು
ಪಕ್ಕದಲ್ಲಿ ಯಾರೋ
ಹಾಗೇ ನಡೆದು ಹೋದ ಹಾಗಿತ್ತು
ಮತ್ತೆ ತಿರುಗಿ ನೋಡದೆ.
ಖಾಲಿ ಗಾಡಿ ,
ಎಂದಿಗಿಂತ ಸ್ವಲ್ಪ ಹಗುರ,
ಹೆಜ್ಜೆ ಯಾಕೋ ಕೊಂಚ ಭಾರ. 

ನೆನಪು ಅರ್ಧ ಬೆಂದ ಜೋಳ
ಮನಸು ಹಸಿದ ತೋಳ
ಬದುಕು ತಳ್ಳೋ ಗಾಡಿ
ತಳ್ಳುತಿದ್ದೇನೆ ಮತ್ತೆ ಪ್ರಯತ್ನ ಮಾಡಿ!!!.
----------------------------------------------------------ಸುಕೇಶ್
Friday, August 11, 2017

ಹೃದಯ

          
ಒಂದೊಮ್ಮ,
ವೈಭವದ ಹಂಪಿ. 
ಕೋಟೆ ಕೊತ್ತಲಗಳ 
ಸುತ್ತಲಲ್ಲಿ ಜನ. 
ಸಂಗೀತ,ಮಾಧುರ್ಯ 
ಮೆರವಣಿಗೆ,
ಕವಿಯ ಬರವಣಿಗೆ,
ಸಿಂಹಾಸನದ ಗಾಂಭಿರ್ಯ,
ಎಲ್ಲ ಗೆದ್ದ ಹಮ್ಮು,
ಸಹಜತೆಯ ಮಾಚಿ 
ಒಳೊಗೊಳಗೆ ನಾಚಿ 
ಸಂಭ್ರಮದ ಹಾಳೆಗಂಟಿದ 
ಸುಂದರ ತೈಲ ಚಿತ್ರ. 


ಈಗ,  
ಕಳಚಿದ ಕಂಬ 
ಹಳೇ ಸ್ಮಾರಕ 
ಆಗೊಮ್ಮೆ ಈಗೊಮ್ಮೆ 
ಬಂದು ಹೋಗುವ ಜನ,
ಇತಿಹಾಸದ ಮೆಲುಕು,
ಪ್ರತಿ ಪುಟದಲ್ಲು ಹುಳುಕು.  
ಕುಹಕಗಳ ಪಿಸುಮಾತು 
ಅರ್ಧ ಬಿದ್ದ ಗೋಡೆಗಳಲ್ಲಿ 
ಪ್ರತಿದ್ವನಿ. 
ಯಾರೋ ಅರ್ಧ ಬರೆದ ಚಿತ್ರ 
ನೆನಪು ಮಾತ್ರ. 

ಮತ್ತೆ,
ಒಡೆದ ಸ್ಮಾರಕ 
ನಾನು ಬಂಧಿ. 
ಮತ್ತೆ ಕಟ್ಟಿಕೊಳ್ಳಲು 
ನನಗೆ ನಾನೇ 
ನೇಮಿಸಿಕೊಂಡ ಸಿಬ್ಬಂದಿ. 


 

Saturday, July 29, 2017

ವಿದ್ಯುತ್ ತಂತಿಎತ್ತರದ ಕಂಬಗಳಲ್ಲಿ
ಸದ್ದೇ ಮಾಡದೆ ಹರಿದಾಡಿ
ಅಲ್ಲಲ್ಲಿ, ಗಲ್ಲಿಗಳಲ್ಲಿ
ಕಾರ್ಖಾನೆಗಳಲ್ಲಿ
ಕೊಳೆಗೇರಿ ಬೀದಿಯ
ಗುಡಿಸಲುಗಳಲ್ಲಿ,
ಸಂಚಲನ ಮಾಡುವವೆ
ತಂತಿ ಕೊನೆಗೆ ಇಳಿಬಿಟ್ಟ
ದೀಪದೊಳಗೆ.

ಯಾರದೋ ವಿಶಾಲ ಚಾದರಗಳ
ಒಣಗಿಸಲು
ಹಗ್ಗ ಎಳೆದಂತೆ
ಕಂಬದಿಂದ ಕಂಬದ ಹೆಗಲಿಗೆ .
ಕಾಮಗಾರಿ  ಪ್ರಗತಿಯಲ್ಲಿದೆ
ಕತ್ತಲೆ ಓಡಿಸಲು .


ಪಾಳು  ಬಿದ್ದ ತಂತಿ ಮೇಲೆ
ಶಕ್ತಿ ಸಂಚಲನದ ಅಲೆ.
ಕಾಯೋ ಜನ ಗುಂಡಿ ಕೈಯಲ್ಲಿ ಹಿಡಿದು
ಹಳೇ ಬಲ್ಬು  ಉರಿವ ವೇಳೆಗೆ,
ಕಣ್ಣ ತುಂಬಾ ಒಮ್ಮೆ
ದೇವರ ಗುಡಿಯ
ಕೆಂಪಗಿನ ದೀಪ ನೋಡುವಾಸೆಗೆ.

ಗೋಡೆಗೆ ನೇತಾಡುವ ಲಾಂದ್ರ
ಅಪಶಕುನವೆಂಬಂತೆ
ಗಾಳಿಯಲಿ ತೂರಾಡಿತು
ಎಣ್ಣೆ  ಕುಡಿದ ಅಮಲಿಗೆ!.
ಮೂಲೆಯಲಿ ಕೂತ
ಅಜ್ಜಿಯ ಕೋಲು,
ಮತ್ತು ,ಜಪ್ಪಯ್ಯ ಎಂದರು
ಮೇಲೇಳದ ಕಾಲು
ಗಳ ನಡುವೆ
ನಿಸ್ತಂತು ವ್ಯವಹಾರ
ಎಂದೋ ಮುಗಿದ ಸಮಾಚಾರ.

ಕಣ್ಣ, ಬುರುಡೆ ದೀಪ  
ಆರೋ ಹೊತ್ತು
ಎದೆಯ ಬಾಗಿಲು ತೆರೆದು 
ಹಕ್ಕಿ ಹಾರಿತ್ತು.ದುಡ್ಡು ತಿಂದ ಮಂತ್ರಿ
ಕುತಂತ್ರಿ.
ನಿಂತ ಕಾಮಗಾರಿ,
ಕತ್ತಲೊಳಗೆ ಕೊಳೆಗೇರಿ,
ಮೂಡದ ಸಂಚಲನ
ಅರ್ಥವಾಗದ ವ್ಯವಕಲನ.

ಗೋಡೆಬದಿಗೆ
ಜೋತುಬಿದ್ದ(ಸೋತು ಬಿದ್ದ),
ಹಳೇ ಸೀಮೆಎಣ್ಣೆ ದೀಪ
ಎಷ್ಟು  ಹೋರಾಡುದು
ಅದು ಪಾಪ.

ಜಡ, ಚೇತನ
ಮರಣ ,ಜನನ .

--------------------------------------------------------------ಸುಕೇಶ್
ಸಾಕ್ಷಾತ್ಕಾರ

ನವದ್ವಾರಗಳ ನಗರ
ತಲೆ ಗೋಪುರ 
ಕಂಡು ಕಾಣದೆ 
ಸುಮ್ಮನಿರುದೇ ಕಣ್ಣು 
ಕೇಳಿಯು ಕೇಳದಂತಿರಲು 
ಕಿವಿಗೆ ಭೋದಿಸಿ . 

ಎದೆ ಹೊಡೆವ ಘಂಟೆ,
ರಕ್ತದ ಚಲನೆ 
ಶುದ್ಧ,ಕಲ್ಮಶಗಳ ನಡುವೆ.  
ಒಂದೆಡೆ ನಿಲ್ಲದ ಕಾಲು 
ನಗರವನ್ನೇ ಎತ್ತಿ ಸಾಗಿದೆ 
ಅಲ್ಲಿಂದ ಇಲ್ಲಿಗೆ 
ಇಲ್ಲಿಂದ ಎಲ್ಲಿಗೆ? . 

ಮೌನಿಯಾಗದ ಬಾಯಿ 
ಬತ್ತದ ಕೊಳವೆ ಬಾವಿ,
ಮುಚ್ಚಿಕೊಂಡರೆ ನಗರವೇ 
ಖಾಲಿ,ಖಾಲಿ,ನೀರವ 
ಬಂಧಿ ಹಕ್ಕಿಯ ಗುಟುರಿಗೆ 
ನಗರದ ಮೂಲೆ, ಮೂಲೆ,
ಪ್ರತಿಧ್ವನಿಗಳ ಸ್ಥಾವರ. 


ಎಲ್ಲ ಕಡೆ ತೋರುವ ಮೂಗು,
ಎಲ್ಲ ಕಲಿವ ಹಂಬಲದ ಮಗು. 
ಗದರಿಸಿ,ಮಲಗಿಸಿ 
ಹೆಗಲಿಗೇರಿಸಿಕೊಂಡರೆ 
ಗಾಳಿ ಚೀಲ 
ನಾ ಹರಕಲು ಕುಚೇಲ. 

ನಗರ ನಿನ್ನದು 
ನನಗೆ ಒಂದಷ್ಟು  ದಿನದ ಗುತ್ತಿಗೆ 
ಮರೆತು,
ಸುಖಾಸುಮ್ಮನೆ ಮಲಗಿದ್ದೆ. 
ಎಬ್ಬಿಸು,ಉದ್ಧರಿಸು,
ಶುದ್ದೀಕರಿಸು,
ನಿನ್ನ  ಸಾಕ್ಷಾತ್ಕಾರದ ಭಕ್ತಿಗೆ,
ಮುಕ್ತಿಗೆ. 


--------------------------------------------------------------------------ಸುಕೇಶ್ 

Monday, June 19, 2017

"ಮಳೆ" ಒಂದು ನೆಪ

ನೀನು ನನ್ನ ಹಗಲುಗನಸು,
ಅದಕೆ ನನಗೆ ಇರುಳ ಮೇಲೆ ಮುನಿಸು
ಕ್ಷಮಿಸು, ಮತ್ತೆ
ಬೆಳಗಿಗೆ ಕಾಯುತ್ತೇನೆ
ತಾರೆಗಳ ಎಣಿಸುತ.

ಕುಂಟೆ ಬಿಲ್ಲೆಯ ಸದ್ದು
ಈಗಲೂ ಕೇಳುತ್ತದೆ
ನಿನ್ನ ನೆನೆಸಿಕೊಂಡು ಸುಮ್ಮನೆ
ಕುಳಿತರೆ,
ಕಲ್ಲು ಉಜ್ಜಿ , ಬೆರಳ ಜಜ್ಜಿಕೊಂಡು
ನೀ ಅತ್ತಾಗ, ನಾನು ಅಳುತಿದ್ದೆ
ಆ ಕಲ್ಲ ಮೇಲಿನ ಮುನಿಸು
ಇನ್ನೂ ಹೋಗಿಲ್ಲ,
ಗಲ್ಲ ಜಾರಿದ ಕಂಬನಿ
ಒರೆಸಿದ ಈ ಕೈ
ನಿನ್ನ ಮರೆತಿಲ್ಲ.

ಮೊದ ಮೊದಲ
ಸಣ್ಣ ಮಳೆಗೆ
ತೆರೆದ ಕಾಗದದ ದೋಣಿಯ
ಕಾರ್ಖಾನೆ .
ಹೆಸರ ಬರೆದು,
ಒಂದೊಮ್ಮೆ ಉಸಿರ ಎಳೆದು,
ಊದಿ ,ತೇಲಿಬಿಟ್ಟ
ಮೊದಲ ದೋಣಿ
ಈಗಲೂ ಸಾಗುತ್ತಿದೆ
ನೆನಪಿನಂತರಾಳದ ಸಾಗರದಲಿ.

ನೀ ಶಾಲೆಗ ನನಗಿಂತ  ಬೇಗ ಹೋದರೆ,
ಹೂದೆನೆಂದು ನನಗೆ ತಿಳಿಸಲು
ರಸ್ತೆಯಲ್ಲಿ ಹಾಕಿ ಹೋಗುತ್ತಿದ್ದ
ಒಂದು ಸೊಪ್ಪಿನ ಕಡ್ಡಿ,
ಅದು ಸಂದೇಶ ಮಾತ್ರವಲ್ಲ
ಮುಂದೆ ಆಗುವ
ನಿನ್ನ ಮುನಿಸಿನ, ಸಣ್ಣ ಜಗಳದ
ಸೂಚನೆ,
ನನ್ನ ಪೂರ್ತಿ ದಿನದ ಯಾತನೆ.

ತಪ್ಪು ನನ್ನದೇ
ಎಲ್ಲೋ ಮರೆತು ಬಿಟ್ಟ ಸ್ಲೆಟು, ಬಳಪ.
ಸಮಯಕ್ಕೆ ಸರಿಯಾಗಿ
ಕಾಲು ಮುರಿದುಕೊಂಡ ಚಪ್ಪಲಿ,
ಬಿಸಿ ಬುತ್ತಿಯಲ್ಲಿ  ಅಮ್ಮಮಾಡಿದ
ಕೋಳಿ ಸಾರು ನಿನಗೆಂದು ಎತ್ತಿಟ್ಟು,
ಅಕ್ಕ ನನಗೊಂದು ದೇವರ ಬೊಟ್ಟು ಇಟ್ಟು
ಕಳುಹಿಸಿ ಕೊಡುವಾಗ
ನನ್ನ ನೋಡಬೇಕಿತ್ತು ,
ನನಗೆ ನಿನ್ನ ನೋಡಬೇಕಿತ್ತು !!!

ದಾರಿ ತುಂಬಾ ನಾನು ಒಂಟಿ,
ಹಾಗೇ ನಡೆಯುತ್ತಿದೆ
ನಿನ್ನ ಪುಟ್ಟ ಹೆಜ್ಜೆಗುರುತುಗಳ
ಅನುಸರಿಸಿ.
ನಿನ್ನ ಕೋಪ
ವಾಲ್ಮೀಕಿಯ ಶಾಪ,
ಕೋಳಿ ಸಾರಿಗು ತಣಿಯಲೊಲ್ಲದು,
ಮಣಿಯಲೊಲ್ಲದು.
ಸಂಜೆ ಮತ್ತೆ ಜೊತೆಗೆ ನಡೆದರೂ
ತೆರೆಯದ ತುಟಿ, ಶಬ್ದಗಳ ಮುಷ್ಕರ,
ವಿಧಿಯಿಲ್ಲ ,ನಾನು ಕಾಯಬೇಕು ನಾಳೆ ನಿನ್ನ, 
ನಿನಗಿಂತ ಮುಂಚೆ ಬಂದು
ದಯವಿಟ್ಟು ಕ್ಷಮಿಸು ಎಂದು.

ನಿನ್ನಿಂದ ಎರವಲು ಪಡೆದ
ಕೈವಾರ  ಈಗಲೂ ಇದೆ.
ಕೆಲವೊಮ್ಮೆ ನೋಡುತ್ತೇನೆ,
ಅದರ ಮೊನೆ,
ನಿನ್ನ ನೆನಪಿನಷ್ಟೆ ಚೂಪು.
ತುಕ್ಕು ಹಿಡಿಯದಂತೆ
ನೆನಪ ಬಚ್ಚಿಟ್ಟಿದ್ದೇನೆ ಎದೆಯ
geometry boxನಲ್ಲಿ.

ಅಷ್ಟು ಬೇಗ
ದೊಡ್ಡವರಾದೆವು ಯಾಕೆ,
ಚಡ್ಡಿ ಬೆಳೆದು ಪ್ಯಾಂಟ್ ಆಯಿತು,
ನಿನ್ನ ಚಿಟ್ಟೆ ಚಿತ್ತಾರದ ಲಂಗ
ಬೆಳೆಯುದ ನಿಲ್ಲಿಸಿ
ಸಣ್ಣಗಾಯಿತು
ಸಂಪರ್ಕಕ್ಕೆ ಇದ್ದ ಹಳೆಯ ಫೋನ್
ತಂತಿ ಕಳೆದು ಕೊಂಡಿತು
ಎಡೆಯಕೊಂಡಿ,ಬದುಕ ಬಂಡಿ
ಯಾವುದೋ ತಿರುವುಗಳಲ್ಲಿ
ನುಣುಚಿಕೊಂಡಿತು,
ಕಳಚಿಕೊಂಡಿತು.

ಹೇ ಮೊನ್ನೆ ನೀನು ನಿನ್ನ ಮಗಳ ಜೊತೆ
ಫೇಸ್ಬುಕ್ ನಲ್ಲಿ
ಹಾಕಿದ ಫೋಟೋ ನೋಡಿದೆ
ಮುದ್ದಾಗಿದೆ,
ನೀ ಎಂದೋ ಹೇಳಿದ
ಒಂದು ಮಾತು ಮತ್ತೆ ಕಾಡಿದೆ
ಇರಲಿ ಬಿಡು
ಮೌನ ದಿನಪತ್ರಿಕೆಯಲ್ಲಿ
ಮತ್ತೆ ಬಿಸಿ ಬಿಸಿ ಸುದ್ದಿ
ಮುದ್ರಿಸಲಿ ಯಾಕೆ!!

ಮತ್ತೆ ಮಳೆ ಬರುವಹಾಗಿದೆ,
ಈ ಬಾರಿಯ ಮಳೆಯ ಸೀಸನ್
ನಿನಗೆಂದು ಮೀಸಲು,
ಮತ್ತೆ ಬರಿಗಾಲಲ್ಲಿ ನಡೆಯಬೇಕು
ಮಳೆಗೆ ನೆನೆಯುತ್ತಾ,
ಅಮ್ಮನ ಕೈಯಲ್ಲಿ ಕೋಳಿಸಾರು
ಮಾಡಿಸಬೇಕು
ಪಟ್ಟಿ ದೊಡ್ಡದಿದೆ. 

ಹ ಹೇಳಲು ಮರೆತೆ,
ನನ್ನ ಗೋಳು ಇದ್ದದ್ದೇ
ಮರೆತುಬಿಡು, 
ಅದು ನನಗೇ ಇರಲಿ,
ನೀನು, ನಿನ್ನ ಮಗಳಿಗೆ
ರೈನ್ ಕೋಟ್ ತೆಗಿಸಿ ಕೊಡು,
ಅದರಲ್ಲಿ ಚಿಟ್ಟೆ ಚಿತ್ತಾರವಿರಲಿ.

-----------------------------------------------------------------ಸುಕೇಶ್ 

ಎರಡು ನೆರಳು

ನಾನು ನಾನಾಗದಿರುವಾಗ  ನನ್ನೊಳಗೆ ನಾನ್ಯಾರು ? ಪ್ರಶ್ನೆಗಳ ವರ್ತುಲ  ಉತ್ತರದ ಕೈಚೀಲ  ತಡಕಾಡಿದಸ್ಟು  ಮುಗಿಯದ ಗೊಂದಲ.  ಸುಮ್ಮನೆ ಕುಳಿತು  ನನ್ನ ಹಿಂದ...