Wednesday, May 27, 2015

ಬದುಕು, ಬಣ್ಣ ಮತ್ತು ಕನಸು

ಎದೆಯ ಅಂಟಾರ್ಟಿಕದಲ್ಲಿ
ನೆನಪ ಮಂಜು ಹೆಪ್ಪುಗಟ್ಟಿದೆ
ನಿನ್ನ ಹೆಸರ ಕಾವಿಲ್ಲದೆ.
ಕನಸ ಗೋಪುರದ ಕಮಾನುಗಳು
ಬಣ್ಣ ಕಳೆದುಕೊಂಡಿದೆ
ಕಣ್ಣ ಹನಿಯ ನೋವಿಗೆ.

ನಡೆದ ದಾರಿಯಲ್ಲಿ ಹಿಂದೆ ತಿರುಗಿ
ಮತ್ತೆ ನೋಡುತ್ತೇನೆ,
ತಿರುವುಗಳಾಚೆಯ ಕವಲುಗಳಲ್ಲಿ
ನಿಂತು ಹಾಗೇ ಕಾಯುತ್ತೇನೆ
ನಿನ್ನದೇ ಹೆಜ್ಜೆಗಳ ನಿರೀಕ್ಷೆಯಲ್ಲಿ.

ಒಮ್ಮೆ ನೆನಪಿಸಿಕೊ,ಮೊದಲ ಪಿಸುಮಾತಿಗು,
ಕಡೆಯ ಮೌನದ ನಡುವಿನ ದಿನಗಳ
ಅಚ್ಚರಿಗಳಿಗೆ ಅರ್ಥವಿಲ್ಲ!!!
ಬರೆಯ ಬೇಕೆಂದ ಕವಿತೆಗಳಿಗೆ
ಸಾಲುಗಳಿಲ್ಲ !!

ಮತ್ತೆ ಬಾ, ದೂರದಾಚೆಯ ಊರಿನಲ್ಲಿ
ಕನಸುಗಳಿಗೊಂದಸ್ಟು ಜಾಗವಿದೆಯಂತೆ,
ಬಾಡಿಗೆ ಪಡೆಯೋಣ ,
ಬರೆಯದ ಕವಿತೆಗೊಂದು ಸಾಲು,
ಕನಸ ಗೋಪುರದ ಕಮಾನುಗಳಿಗೊಂದಿಸ್ಟು ಬಣ್ಣ
ಮತ್ತೆ ಹಚ್ಚೋಣ !!!











ಸುಕೇಶ್ 

ಒಂದು ಕವಿತೆ

ನಿನಗೆಂದು ಅರ್ಧ ಬರೆದಿಟ್ಟ ಕವಿತೆ,
ಕೊನೆಯ  ಬೆಳಕಿಗೆ ಉರಿವ ಹಣತೆ
ಆರಿ ಹೋಗುವ ಮುಂಚೆ ಓದಿ ಬಿಡು
ಶಬ್ಧಗಳು ನಿದ್ದೆ ಹೋಗ ಬಹುದು!!

ಸ್ವರಗಳಿಗೆ ವ್ಯಂಜನಗಳನ್ನು ಧೀರ್ಘಗಳ ಜೊತೆ ಸೇರಿಸಿ
ಪದಗಳೆದೆಗೆ  ಅರ್ಥಗಳ ಕೂಡಿಸಿ
ಹಾಡಬೇಕು ಅಂದುಕೊಂಡಾಗಲೇ,
ಗಂಟಲು ಕೆಮ್ಮಿಗೆ ಬಲಿಯಾದದ್ದು.

ಪುಸ್ತಕದ ಮೊದಲ ಪುಟ,
ಕವಿತೆಯ ಮೊದಲ ಪಲ್ಲವಿಯಲ್ಲೇ
ಎಲ್ಲ ಹೇಳಿಬಿಟ್ಟರೆ ಮತ್ತೆ ಓದಲೇನಿದೆ
ತಿರುಗೋ ಪುಟದ ಜೊತೆ ತಿರುಗೋ ಬೆರಳು!!

ಕವಿತೆ ಕೊನೆಗೆ ಇಟ್ಟ  ಬಿಂದು ಮಾತ್ರ ನನ್ನದು
ಅದರ ಆಚೆ,ಈಚೆ,
ಬಹುಶಃ ನಿನ್ನದಿರಬೆಕು!
ಯಾರಿಗೆ ಗೊತ್ತು??
ಕವಿತೆ ಅಮ್ಮ ಎತ್ತಿ ಕೊಟ್ಟ ಕೊನೆಯ ತುತ್ತು.



Sunday, May 24, 2015

ಸಿಗರೇಟು ಮತ್ತು ಹೊಗೆ

ತುಟಿಯ ಕುಲುಮೆಗೆ ಇಂಧನವಾಗಿ,
ಉರಿವ ಸಿಗರೇಟಿನ
ಶವದ ಬಿಸಿ ಹೊಗೆಗೆ
ಎದೆಯ ಸ್ತಭ್ದ  ಚಿತ್ರಗಳು ಮಬ್ಬಾಗುತಿತ್ತು.

ಕಣ್ಣ ಕೊನೆಯಲ್ಲಿನ ಕೆಂಪು ಬೆಂಕಿ ಉಂಡೆ
ಮೆಲ್ಲ ಮೆಲ್ಲನೆ ಉರಿದು
ತುಟಿಯ  ಚರ್ಮ ಸೋಕಿದಾಗಲೆ
ಅರಿವಾದದ್ದು ಸುಟ್ಟುಕೊಳ್ಳುವ ನೊವು.

ಇರುಳ ಕತ್ತಲಲ್ಲಿ, ಬಿಳಿಯ ಹೊಗೆ
ಶಾಂತಿ ಸಾರುತ್ತಾ ನಡೆದ ದಾರಿಯನ್ನೇ
ನೋಡುತ್ತಿದ್ದ ನನಗ
ಚಂದಿರ ಮೋಡ ಮರೆಗೆ ಹೋಗಿ
ಮೆಲ್ಲ ಕೆಮ್ಮಿದ್ದು ಕೇಳಲೇ ಇಲ್ಲ.

ಕೆಳಗೆ ಬಿದ್ದ ಬೂದಿಯೊಳಗಿನ ಕೆಂಡ
ಗಾಳಿ ಜೊತೆ ಹೋರಾಡಿ
ಬೂದಿಯಾದಾಗ
ಗಾಳಿ ಚೀಲ ಸೇರಿದ ಹೊಗೆ
ತನ್ನ ಕೆಲಸ ಮಾಡಿ ಈಚೆ ಬಂದಿತ್ತು.

ನೀರವ ರಾತ್ರಿ,
ಸಣ್ಣನೆ ಕೆಮ್ಮು ಉರಿದ ಬೇಗೆ,
ಉರಿದ ಸಿಗರೇಟಿನ ಶವಕ್ಕೆ
ಶ್ರದ್ದಾಂಜಲಿ ಸಲ್ಲಿಸುತಿತ್ತು .


ಸುಕೇಶ್ 

ಅಲೆಮಾರಿ ಬದುಕು

ಅಲೆಮಾರಿ ಬದುಕು ಅಲೆಯುತ್ತಿದೆ
ನೆಲೆ ಇಲ್ಲದ ಊರಿನಲ್ಲಿ
ಹರಕು ಕುರ್ಚಿಗೆ ರಾಜನಾದ ಕನಸು
ಪಾಳು ಬಿದ್ದ ಊರಿನ ಕಾವಲುಗಾರ!!!

ಹೀಗೆ ಮೊನ್ನೆ ಎಲ್ಲೋ ಒಂದು ರಾತ್ರಿ
ಆಗಸಕ್ಕೆ ಮುಖಮಾಡಿ
ಮಲಗಲಾಗದೆ ಹೊರಳಾಡಿದ್ದೆ 
ಬೆನ್ನಿಗಂಟಿದ ಧೂಳು , ಕೊಡವಿದಸ್ಟು ಹಾರುತ್ತದೆ

ಯಾರಿಗೇನು ಗೊತ್ತು ಮನದ ಬೇಗೆ
ಸುಟ್ಟು ಹೊಗೆಯಾಡುವ ಕನಸು
ಮತ್ತೆ ಬೇಕೆನ್ನುವ ಮನಸು
ಬಾವಲಿ ಬದುಕು ನೇತಾಡುತ್ತಿದೆ
ಎಲ್ಲ ತಲೆ ಕೆಳಗೆ .

ಹೊಟ್ಟೆ ಹುಳುಗಳಿಗೆ ಆಹಾರ ಕೊಟ್ಟಸ್ಟು
ತೀರದ ಚೀರಾಟ
ಕೊನೆಯಿಲ್ಲದ ದಾಹಗಳಿಗೆ,
ಬದುಕಿನ ಒಂದಷ್ಟು ಮೋಹಗಳಿಗೆ ,
ಅಲೆಮಾರಿ ಬದುಕು ಮತ್ತೆ ಅಲೆಯುತ್ತಿದೆ.



ಸುಕೇಶ್

Sunday, May 17, 2015

ಚಿಂದಿ ಹೃದಯ ಮತ್ತು ಕನಸು

ಮಾರಿಕೊಂಡ  ಹೃದಯದಲ್ಲಿ
ಮಾರಿ ಹಬ್ಬ ನಡೆದಿದೆ,
ಎಲ್ಲೆಲ್ಲೂ ರಕ್ತ ಸಿಕ್ತ,
ಕನಸುಗಳು ಕೊಲೆಯಾಗಿದೆ.

ಭ್ರಮೆಯ ದೆವ್ವ
ಬೆನ್ನು ಹತ್ತಿದೆ.
ಕನಸುಗಳ ಶವ ಸಂಸ್ಕಾರಕ್ಕೆ
ನೆನಪುಗಳ ಚಿತೆ ಉರಿಯುತ್ತಿದೆ.

ನೀರವತೆಯ ಸೂತಕಕ್ಕೆ
ಬದುಕು ಬಿಕ್ಕುತ್ತಿದೆ
ಮೌನಕ್ಕೆ ಗಿರವಿ ಇಟ್ಟುಕೊಂಡಿದ್ದ
ಮಾತುಗಳು ಅರ್ಥ ಕಳೆದು ಕೊಂಡಾಗಿದೆ.

ಬೋಳು ಆತ್ಮ,ಉತ್ಸವ ಮೂರ್ತಿ
ಮೆರವಣಿಗೆ ನಡೆಯುತ್ತಿದೆ
ನೀನು ಬಾ,
ಅಲ್ಲಲ್ಲಿ ಉಘೇ ಎನ್ನಲು.

ದಯಮಾಡಿ ಯಾರಾದರು ಬನ್ನಿ,
ಒಂದಿಸ್ಟು  ಕನಸ ಸಾಲ ತನ್ನಿ,
ಚಿಂದಿ ಹೃದಯ ಮತ್ತೆ ಮಾರಿಕೊಳ್ಳುತ್ತೇನೆ
ಮುಂದಿನ ಸಾರಿ ಹಬ್ಬ ಮಾಡುದು ನಿಮ್ಮ ಸರದಿ!!!!!

                                                                         ಸುಕೇಶ್ 

Thursday, May 14, 2015

ಬದುಕು


ಕರುಳ ಬಳ್ಳಿಯಾಚೆ ಸರಿದು,
ಕಣ್ಣ ಬಿಂಬಗಳ ಮೆಲ್ಲ ತೆರೆದು,
ಗಾಳಿ ಚೀಲಗಳಿಗೆಲ್ಲ ಉಸಿರ ತುಂಬಿ,
ಎದೆಯ ಢವ ಢವಕ್ಕೆ ಅಮ್ಮ ಕಿವಿಗೊಟ್ಟು,
ನಿಟ್ಟಿಸಿರು  ಬಿಟ್ಟಾಗಲೇ
ತಿರುಗಿದ್ದು ಬದುಕಿನ ಮೊದಲ ಹಾಳೆ .

ಮೇಲೆ ಆಸೆಯಿಂದ ಕದ್ದು ನೋಡುವ
ಚಂದಿರನ ವಂಚಿಸಿ,
ಅಮ್ಮ ತಿನ್ನಿಸುತ್ತಿದ್ದ ಪ್ರೀತಿಯ ತುತ್ತು,
ಹಾಗೆ ಕರಗುತ್ತಿತ್ತು
ಚಂದಿರನ ಜೊತೆ ಜೊತೆಗೆ,

ಬದುಕ ದಾರಿಯಲ್ಲಿ
ಗಡಿಯಾರದ ಮುಳ್ಳುಗಳ ಹಿಂದೆ ಓಡುವ ನಮಗೆ,
ಕನಸುಗಳದ್ದೆ ಬೆಂಗಾವಲು,
ಅಲ್ಲಲ್ಲಿ ಹರಿದ ಪುಟಗಳು ಇತಿಹಾಸ ಹೇಳಿದ್ದುಂಟು !!

ಪ್ರತಿ ದಿನ  ಕನ್ನಡಿಯ ಎದುರು ನಿಂತು,
ಹಣೆ ಬರಹ ಓದಿಕೊಳ್ಳುವಾಗ ,
ಎಲ್ಲಿ ಹಸ್ತ ರೆಕೆಗಳು ಕರಗಿ ,
ಭವಿಷ್ಯ ಬದಲಾಗುತ್ತದೋ ಎಂದು ಕೊಳ್ಳುತ್ತೇನೆ ,

ಬದಲಾದದ್ದು ಭವಿಷ್ಯವಲ್ಲ ,
ಹಣೆಬರಹವಂತು ಅಲ್ಲವೇ ಅಲ್ಲ!!!

ನಡೆದದ್ದೆಲ್ಲ ದಾರಿ,ಬರೆದದ್ದೆಲ್ಲ ಕವಿತೆಗಳು
ಎಂದು ಬೀಗುವ ಹೊತ್ತಿಗೆ,
ಈ ಬದುಕ ಪುಸ್ತಕದ ಪ್ರವಾಸ ಕಥನದ ಪುಸ್ತಕಕ್ಕೆ,
ಯಾರೋ ಹೊದಿಕೆಯಾಗಿ,
ಇನ್ನಾರೋ ಮುಕಪುಟಗಳಾಗಿ,
ಮತ್ತಾರೋ ಹಿನ್ನುಡಿ ಬರೆಯುತ್ತಾರೆ.
ಕಡೆಗೆ ಪ್ರಕಟ ಮಾಡೋರಿಲ್ಲದೆ 
 ಪುಸ್ತಕ ಭೂಮಿಯೂಡಲ ಹಳೇ ಟ್ರಂಕು ಸೆರುತ್ತದೆ.

ಅರೆ ಆಶ್ಚರ್ಯ ,ಅಲ್ಲಿ ಅಪ್ಪನದ್ದು,
ಬೀದಿ ಕೊನೆಯ ಅಜ್ಜನದ್ದು,ಇನ್ನಾರದ್ದೋ
ಬದುಕ ಪುಸ್ತಕಗಳ
ಓರಣವಾಗಿ ಜೋಡಿಸಲಾಗಿದೆ,
ಪಕ್ಕದಲ್ಲಿ ಕೆಲವು ಖಾಲಿ ಟ್ರಂಕುಗಳು ,
ನಿಮ್ಮ ಪುಸ್ತಕದ ನಿರೀಕ್ಷೆಯಲ್ಲಿ !!!

ಪ್ರತಿ ದಿನದ ಬರವಣಿಗೆಯ
ಮೆರವಣಿಗೆ ಈಗ ಸ್ಮಶಾನ ಮೌನ,
ನನ್ನ ಸಮಾದಿಯ ಒಳಗೆ ಕೆಲವರು
ಕದ್ದು ನೋಡುತ್ತಾರೆ,
ಬದುಕ ಪುಸ್ತಕ ನಕಲು ಮಾಡಲು !!!!


ಸುಕೇಶ್

Thursday, May 7, 2015

ಹಕ್ಕಿಗೆ ಯಾರು ಸಾಲ ಕೊಡುತ್ತಾರೆ ???

ಹಕ್ಕಿಗೆ ಯಾರು ಸಾಲ ಕೊಡುತ್ತಾರೆ ???
ಅಸ್ಟೊಂದು ಕಾಳು ....... 
ಒಮ್ಮೆ ಅತ್ತಿತ್ತ ಹಾರಿ ತಿರುಗಿ ಬಂದಕೂಡಲೆ,
ಅದರ ಹೊಟ್ಟೆ ತುಂಬುತ್ತದೆ . 
ಸಾಲ ಕೊಟ್ಟವ ಲೆಕ್ಕ ಇಡುದಿಲ್ಲವೇ ?

ಹಕ್ಕಿಗೆ ಯಾರು ಸಾಲ ಕೊಡುತ್ತಾರೆ 
ಅಸ್ಟೊಂದು ನೂಲು ?
ಗೂಡು ಕಟ್ಟಿ, ಮೊಟ್ಟೆ ಇಟ್ಟು 
ರೆಕ್ಕೆ ಬಲಿತು ಮರಿ ಹಕ್ಕಿ ಹಾರಿದ ಕೂಡಲೆ 
ಗೂಡು ಖಾಲಿ ಮಾಡುತ್ತದೆಯಲ್ಲ ಹಕ್ಕಿ,
ನೂಲು ಕೊಟ್ಟವ ಬಾಡಿಗೆ ಕೆಳುದಿಲ್ಲವೇ??

ಹಕ್ಕಿಗೆ ಯಾರು ಕೊಟ್ಟರು
ಅಂತಹದೊಂದು ಬಾಳು,
ಬೆವರು ಸುರಿಸದೆ ಕಾಳು ,
ಗೂಡು ನೇಯಲು ನೂಲು??
ಎ ದಯವಿಟ್ಟು ಹೇಳು .


ಏನು ನಿನ್ನ ಗೋಳು 
ಪ್ರಶ್ನೆ ನನ್ನನ್ನೇಕೆ ಕೆಳುತ್ತಿ 
ಹಕ್ಕಿಯನ್ನೇ ಕೇಳು 
ಅಂದಿತು ನನ್ನ ಕವಿತೆ ಸಾಲು!!. 


ಸುಕೇಶ್ 

Tuesday, May 5, 2015

ಹಾಗೆ ಸುಮ್ಮನೆ-೨

ಊರ ಜಾತ್ರೆ ,ಒಂಟಿ ಮನಸ್ಸು ,ತಿರುಗುತ್ತಿರುವ ರಥದ ಚಕ್ರ,ಉರುಳುವ ಬಂಡಿ,ರಥ ಮುಂದೆ ಚಲಿಸಿದಂತೆ ನೆನಪು ಹಿಂದೆ ಹಿಂದೆ ಹೊಗುತಿತ್ತು. ದಾರಿ ಬದಿಯ ಅಂಗಡಿ ,ಗಿರಾಕಿಗಾಗಿ ಕಾದು ಕುಳಿತ ಬೊಂಬೆಗಳು ,ಬಲೂನಿಗೆ ಕೈ ಚಾಚಿದ ಕಂದಮ್ಮ , ಹಸಿ ಮಣ್ಣು ಈ ಮನಸ್ಸು.
ಚಿತ್ರಣ ಬದಲಾಗುತಿತ್ತು ಕ್ಷಣ ಕ್ಷಣಕ್ಕೂ ಕಣ್ಣು ಮುಚ್ಚಿದಂತೆ,ನನಗೇ ಗೊತ್ಹಿಲ್ಲದಂತೆ ನಾನು ಕೈ ಚಾಚಿದೆ ಗಾಳಿಯಲ್ಲಿ ,ಅಲೆಮಾರಿ ಬದುಕು ಅಳುತ್ತಿತ್ತು ನೆನಪುಗಳ ನೆನಪಿಸಿಕೊಂಡು.

                                ನೆನಪುಗಳೇ ಹೀಗೆ,
                              ರಂಗದ ಹಿಂದೆ ಚಲಿಸುವ
                                ನೆರಳುಗಳ ಹಾಗೆ.

ಕಣ್ಣು ಬಿಟ್ಟು ನೋಡಿದೆ, ಚಿತ್ರಣ ಬದಲಾಗಿತ್ತು ,ಕಾಂಪೌಂಡಿನೊಳಗಿನ ಮನೆ, ಹೊಸ್ತಿಲು ದಾಟದ ಮಕ್ಕಳು,ಸಿಮೆಂಟ್ ಬಿಲ್ಡಿಂಗಿನಂತೆ ಗಟ್ಟಿ ಮನಸ್ಸು ,ಕಾಂಕ್ರೀಟ್  ಮರದ ಕೆಳಗಿನ ನೆರಲು, ನೀರವ ಸಂಜೆ,ಬೀಸಲು ಗಾಳಿಗೂ ಭಯ,ಧಾರಾವಾಹಿಯಂತೆ ಎಂದು ಮುಗಿಯದ ಯಂತ್ರಿಕ ಬದುಕು ,ಮತ್ತದೆ ಮುಗಿಯದ ಪಾತ್ರಗಳು.
                                ಬದುಕೇ ಹೀಗೆ,
                               ಇಲ್ಲೇ ಎಲ್ಲೋ ಬಿಟ್ಟು
                                ಮತ್ತೆ ಹುಡುಕುವ
                                  ವಸ್ತುವಿನ ಹಾಗೆ !!!


ಮತ್ತೆ ಕಣ್ಣು ಮುಚ್ಚಿ ಕುಳಿತೆ ಇನ್ನೊಂದಿಸ್ಟು ಹೊತ್ತು, ಮನಸ್ಸು ಇತಿಹಾಸ ಬಯಸುತಿತ್ತು.
ಯಾರಿಗೋ ಬರೆದ ಕವಿತೆ ಸಾಲು, ಹೇಳದೆ ಎದೆಯಲ್ಲೇ ಗೋರಿಯಾದ ಶಬ್ಧಗಳು,ವಾಸ್ತವದಾಚೆಯ ಕನವರಿಕೆ, ಏನನ್ನೋ ಹಂಬಲಿಸುವ ಮನಸ್ಸು, ಗುರಿಯೇ ಇರದ ದಾರಿ, ಗೊತ್ತೆ ಆಗದಂತೆ ಶಾಶ್ವತವಾಗಿ ಮುಗಿದು ಹೋದ ಆ ದಿನಗಳು, ಪಡೆದಕ್ಕಿಂತ ಜಾಸ್ತಿ ಕಳೆದುಕೊಂಡಿರುವ ಲೆಕ್ಕ ಇಟ್ಟುಕೊಂಡು ಮುಂದೆ ಸಾಗಿದ ಬಡಪಾಯಿ ಮನಸ್ಸು.

ಮರಳ ಮೇಲೆ  ಗೀಚಿದ್ದು ಕಡಲಿನ ಅಲೆಗಳಿಗೆ ಕವಿತೆ ಹೇಳಿದ್ದು, ನೆನಪು ಖಾಲಿ ಅಕೌಂಟ್ನಲ್ಲಿ ಬೌನ್ಸ್ ಆದ ಚೆಕ್ಕ್ !!!


                          ಉಸಿರ ಜೊತೆ ಕಂಪಿಸಿದ
                          ಕವಿತೆ ಸಾಲುಗಳು....
                          ಕನಸುಗಳ ಜೊತೆ ನಡೆದ
                           ಹೆಜ್ಜೆ ಗುರುತುಗಳು ..!!!
                         
                                                 ಮರಳ ಮೇಲೆ ಬರೆದು
                                             ಸವೆದ ಬೆರಳಿನ ಕುಂಚ,
                                          ನೆನಪು, ಕನವರಿಕೆ
                                 ಬದುಕಿನಾಚೆಯ ಸುಂದರ ಪ್ರಪಂಚ,




ಸುಕೇಶ್

                       

Friday, May 1, 2015

ಪಯಣ

                           ಎಲ್ಲಿಗೆ ಹಕ್ಕಿ ಪಯಣ 
                              ಯಾವುದದು ಗಮ್ಯ ತಾಣ ?
                               ಇಲ್ಲಿಗಿಂತ ಅಲ್ಲಿ ಚೆನ್ನವೆ ,
                                 ಅಲ್ಲಿ ಕೂಡ ಆಕಾಶ ನೀಲಿ ಬಣ್ಣವೆ 

    ಅಲ್ಲಿ ಯಾರು ಜೊತೆ 
      ಅಲ್ಲಿದ್ದೇನು ಭಾಷೆ,ಏನು ಕಥೆ. 
           ಕನಸ ಮಾರುವವರು, ಕೊಳ್ಳುವವರು 
              ಅಲ್ಲಿಯು ಇದ್ದಾರೆಯೆ ?


ನಿನ್ನೆ ಇಲ್ಲಿಯ ಗೂಡು,
ಅದರೊಳಗಿನ ಸಂಸಾರ 
ಕಳಚಿತೇ  ನಂಟು ಅಷ್ಟು ಬೇಗ 
ಮರೆತು ಹೋದಂತೆ ಜೊತೆಗೆ ಕಲಿತ ರಾಗ !!!

          
   ನಿನ್ನೆ ಅಲ್ಲಿ, ಇಂದು ಇಲ್ಲಿ 
                  ನಾಳೆ ಎಲ್ಲಿ......... 
               ಪತ್ತೇದಾರಿ ಮನಸು ಪ್ರಶ್ನೆ ಕೇಳುತ್ತದೆ . 
                    ಹಕ್ಕಿ ಉತ್ತರ ಹುಡುಕಲು ಎಲ್ಲಿಗೋ ಹಾರಿ ಹೋಗುತ್ತದೆ . 


        ಇಲ್ಲಿ ಸ್ಥಿರವಲ್ಲ, ಅಲ್ಲಿ ನಮ್ಮದಲ್ಲ 
          ಇಲ್ಲಿಂದ ಅಲ್ಲಿಗೆ ಹಾರುತ್ತಿರ ಬೇಕು 
           ಇಲ್ಲಿ ಅಲ್ಲದಿದ್ದರೆ ಅಲ್ಲಿ  ಬದುಕ ಕಟ್ಟಲು 
                ಪಯಣದ ಗುರಿಯ ಮುಟ್ಟಲು !!!





ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...