Saturday, December 31, 2016

ಗೋಡೆ ಮೇಲೆ ಹೊಸ ಕ್ಯಾಲೆಂಡರ್

ಸೂರ್ಯ ಯಾಕೋ ಚಳಿಗೆ ಸ್ವಲ್ಪ ಲೇಟ್ ಆಗಿನೇ ಏಳುವನೇನೋ , ಹೊಸ ವರುಷದ ಹೊಸ resolution  ನ ಮರೆತು. ಬಹುಶಃ ಅಲಾರಾಂ snooze ಮಾಡಿರಬೇಕು ನಮ್ಮ ನಿಮ್ಮಂತೆ.
ಮುಂಜಾನೆ ಎದ್ದು ಬಾಗಿಲಾಚೆ ನೋಡಿದೆ, ಯಾರೋ ಯಾವುದೋ ಖುಷಿಗೆ ಸುಟ್ಟು ಬಿಟ್ಟ ಒಂದಷ್ಟು ಪಟಾಕಿಯ ಪೇಪರ್ ಗಳು,ಹರಿದ ಹಳೆಯ ಕ್ಯಾಲೆಂಡರ್ ನ ಚೂರು.

ವರುಷ ಹೇಗೆ ಉರುಳಿ ಹೋಯಿತು  ......... ??

ಇದು ಒಂದು ಪ್ರಶ್ನೆಯೇ!! ಇಷ್ಟೊಂದು ವರುಷಗಳು ಮುಗಿದೇ ಹೋದವು , ಆಗ ಮೂಡದ ಪ್ರಶ್ನೆ ಈಗ ಯಾಕೆ?? ಬಹುಶಃ ಮುಂದಿನ ವರುಷ ಮತ್ತೆ ಇದೇ ಪ್ರಶ್ನೆ ಕಾಡಬಹುದು, ಉತ್ತರ ಹುಡುಕುತ್ತ ಮತ್ತೆ ಅದೇ ಕಳೆದು ಹೋಗ ಬಹುದು .

ಒಂದು ವರುಷ ಏನು ಮಾಡಿದೆ??, ಹಾಗೆ ಯೋಚಿಸಿದೆ , ಕಳೆದ ವರುಷದ ಹೊಸ ವರುಷ ಆಚರಣೆಯಿಂದ ನಿನ್ನೆ ಸಂಜೆ ತಿಂದ ice cream  ವರೆಗೆ ಮನದ ಪರದೆ ಮೇಲೆ ಎಲ್ಲ ಹಾಗೆ slide ಆಗುತಿತ್ತು, ಸಂಭ್ರಮಿಸಿಕೊಳ್ಳಲು ಕಾರಣ ಹುಡುಕುತ್ತಿದ್ದೆ.

ಬದುಕು ಹುಡುಕಾಟ
ಹುಡುಕದೆ
ಕಣ್ ಮುಚ್ಚಿಕೊಂಡರೆ
ನಿತ್ಯ ಪರದಾಟ !!!!.

ರಾತ್ರಿ ತುಂಬಾ ಪಟಾಕಿ ಸದ್ದು, ಮುಗಿದ ಸಾರಾಯಿ ಬಾಟಲಿಗಳೆಷ್ಟೋ ,ಸಂಭ್ರಮಿಸಲು ಕಾರಣ ಹುಡುಕೋ ಜನ.  ಬೆಳಗ್ಗೆ ಎದ್ದು ನೋಡಿದರೆ ಮೊಬೈಲ್ ಪರದೆ ತುಂಬ forwarded ಮೆಸೇಜುಗಳು.

ಮುಂಜಾನೆಯ ಮಂಜು ಕಂಠಪೂರ್ತಿ ಕುಡಿದು ಸೂರ್ಯ ಎದ್ದು ಬಂದ. ಇಳಿಯದ ಅಮಲಿಗೆ ಮುಖದ ಬಣ್ಣದ ಪುರಾವೆ. ಮತ್ತೊಂದು ಹೊಸ ವರುಷದ ಮುಂಜಾವು.

ಗೋಡೆ ಮೇಲೆ ಹೊಸ ಕ್ಯಾಲೆಂಡರ್ .

ಬದಲಾದ
ಕ್ಯಾಲೆಂಡರ್ನಲ್ಲಿ
ಬದಲಾ(ಗುವ!!)ಗದ
ದಿನಗಳು !!!


ಮತ್ತೆ ಕೆಂಪು , ಕಪ್ಪು ಬಣ್ಣದಲ್ಲಿ ರಾರಾಜಿಸುತ್ತಿತ್ತು ಮತ್ತೊಂದು ವರುಷ, ಎಲ್ಲೋ ಓದಿದಿದ ನೆನಪು

"Time is the most precious commodity and invest it only in those activities that truly count" 


                     ಎಲ್ಲರಿಗು ಹೊಸ ವರುಷದ ಶುಭಾಶಯಗಳು

                  Be Healthy, Be Happy , Be Blessed .

  ಓಹ್ ಮರೆತೇ ಬಿಟ್ಟೆ ನನ್ನ ಹೊಸ ವರುಷದ ಹೊಸ resolution.............?

                    watch this blog coming soon.


Tuesday, December 6, 2016

ಚಂದ್ರ ಮತ್ತು ಜಾರಿದ ಭೂಮಿಯ ಸೆರಗು



ದೋಚ ಬಂದರೆ
ಯಾರೋ ಭೂಮಿಯ
ಮೇಲೆ ಚಂದ್ರ,
ಲಾಂದ್ರ ಹಿಡಿದು ಕಾಯುತ್ತಿದ್ದ
ಬಿಟ್ಟ ಕಣ್ಣು ಬಿಟ್ಟು
ಒಂದೇ ಕಡೆ ನೆಟ್ಟು.

ಹಗಲೆಲ್ಲ ಬಿಸಿಲ ರವೆ.
ಹರಿದ ರವಿಕೆ
ಜಾರೋ ಸೆರಗಿಗೆ
ಹಾರೋ ಹಕ್ಕಿಯ ಪಿನ್ನು,
ಸುರಿದ ಬೆವರೂ ಬಿಡದೆ
ನೆಕ್ಕಿ ಹೋದ ಸೂರ್ಯ
ಸಂಜೆ ಕೋಪಗೊಂಡು
ಕೆಂಪಾಗಿದ್ದ ಸಾಲದುದಕ್ಕೆ.

ಗೂಡು ಸೇರಿದ ಹಕ್ಕಿ
ಕಳಚಿದ ಪಿನ್ನು
ತುಂಟ ಗಾಳಿ ಬಿಡಬಹುದೆ ಇನ್ನು.
ಸರಿದ ಸೆರಗು
ಎಂಥ ಬೆರಗು
ಆಹ್ ಕಣ್ ತಪ್ಪಿ ಅತ್ತ ನೋಡಿದ ಚಂದ್ರ
ಏನೋ ಕಂಡ, ನಾಚಿಕೊಂಡ.

ಮೇಲೆ ನಿಂತು ಕಾಯುದ್ದಷ್ಟೇ ಕೆಲಸ
ಬೇಲಿ ತೋಟ ಬಯಸುವ
ಹಾಗಿಲ್ಲ,
ನನಗೂ ನಿನಗೂ ಒಂದೇ ಕಾನೂನು.
ಪಾಳಿ ಮುಗಿಸಿದ
ಒಂಚೂರೆ ಸವೆಸಿ;
ಕ್ಷೀಣಿಸುದು,ಮತ್ತೆ ಬೆಳೆಯುದು
ಹೇಗೆಂದು ತಿಳಿಸಿ.

ಯಾರೋ ನೋಡುವ ಮೊದಲು
ಹಾರಿ ಬಂದ ಹಕ್ಕಿ
ಜಾರಿದ ಸೆರಗಿಗೆ ಪಿನ್ನು.
ಓ ನಿನ್ನೆ ಕೋಪ
ಇಳಿಯಲಿಲ್ಲ ಇನ್ನೂ
ರಮಿಸು ಭೂಮಿ
ನೀ ನಿರಂತರ ಪ್ರೇಮಿ.























-----------------------------------------------------------------------ಸುಕೇಶ್ 









Tuesday, November 1, 2016

ಮತ್ತೆ ಕೆಲವು ಹನಿಗಳು .......

  

    ಬಿಸಿಲು 

ಸೂರ್ಯ ಕಿಚಾಯಿಸಿ
ನಕ್ಕಿದ್ದ
ಭೂಮಿ ಬೆದರಿ
ಬೆವರುತ್ತಿತ್ತು !!!!


                                              
                                               
                                               
                                              
                                               ಗಡಿಯಾರ 

                                              ನೀನು ತಿರುಗಿದ್ದಕ್ಕೆ
                                              ನನ್ನ
                                             ಸಮಯವೆಲ್ಲ
                                             ಖಾಲಿಯಾಗಿದೆ.


ಹಣೆಬರಹ 

ಯಾರೋ
ಹಾಗೇ, ಹೀಗೆ
ಎಂದೋ ಬರೆದಿಟ್ಟ
ಶೀರ್ಷಿಕೆ .


                                            
                   ಪಾಲಿಸಿ 

 ದಿನಾ, ನಾ ಆಫೀಸ್ ಗೆ ಹೊರಟಾಗ
       ನನ್ನವಳು ಅನ್ನುತ್ತಿದ್ದಳು,
  "ರೀ ರಸ್ತೆ ನಿಯಮ ಪಾಲಿಸಿ"
        ಈಗ ಹೇಳುದೇ ಇಲ್ಲ
      ಕಾರಣ ನಾ ಮಾಡಿದ್ದೇನೆ
         "ವಿಮಾ ಪಾಲಿಸಿ"!!.




       ಪರವಾನಿಗೆ 

ಯಾರು ಕೊಟ್ಟರು ನಿನಗೆ
ನನ್ನ ಮನದೊಳಗೆ
ನೂರಾರು ಕನಸ ತುಂಬಿಸಲು
ವಿಶೇಷ ಪರವಾನಿಗೆ??.




-----------------------------------------------------------------ಸುಕೇಶ್ 

Thursday, October 27, 2016

ನೀನು ನನ್ನ ನಾಲ್ಕು ದಿನದ ಫೋನ್ ನ ಸ್ಕ್ರೀನ್ ಸೇವರ್.

ವಿಷಾದಗಳ ಬಗ್ಗೆ ಬರೆಯದೆ ಕೆಲವು ವರುಷಗಳೇ ಕಳೆದಿದ್ದವು , ಬಹುಶಃ ಬರೆಯಲು ಅಂತಹದೊಂದು ವಿಷಾದ ಕಾಡಲಿಲ್ಲವೋ ಏನೋ!!. ಸಮಯದ ಹಿಂದೆ ಮೆಲ್ಲನೆ ಟಿಕ್ ಟಿಕ್ ಹೆಜ್ಜೆ ಹಾಕುತ್ತಾ ನಡೆದ ದೊರ ಎಷ್ಟು ಎಂದು ತಿರುಗಿ ನೋಡಿದರೆ, ಅರೆ!! ಮೊದಲ ಹೆಜ್ಜೆ ಒಂದಷ್ಟು ದೂರ ಹಿಂದೆ ಅಲ್ಲೇ ಇದೆ . ಊರು ಬಿಟ್ಟು ಮತ್ತೊಂದು ಊರಿಗೆ,ಮತ್ತೆ ತಿಂಗಳು ಆಗುವ ಒಳಗೆ ಮತ್ತೆ ಊರಿಗೆ, ಬದುಕು ಒಂದಷ್ಟೇ ತಿರುವುಗಳ ನಡುವೆ ಗಿರಕಿ ಹೊಡೆದಂತೆ ಇತ್ತು. 

ರಾತ್ರೆ ಮನೆಯ ಟೆರೇಸ್ ನ ಮೇಲೆ ಹಾಗೇ ಅಂಗಾತ ಮಲಗಿದ್ದೆ ಆಕಾಶ ನೋಡುತ್ತ . ಒಂಟಿ ಅನಿಸಿದಾಗಲೆಲ್ಲ ಹೀಗೆ ಬಿದ್ದುಕೊಳ್ಳುದು ಯಾವಗಳಿಂದಲೋ ರೂಢಿಯಾಗಿತ್ತು. ಚಂದ್ರ ಎಲ್ಲೋ ಕಳೆದು ಹೋಗಿದ್ದ, ಅಲ್ಲಲ್ಲಿ ಕೆಲವೊಂದು ನಕ್ಷತ್ರಗಳು ಮಿನುಗುತ್ತಿದ್ದವು, ಮನದಲ್ಲಿ ಕೆಲವು ನೆನಪುಗಳು ಮತ್ತೆ ಮತ್ತೆ ಸುಳಿದಾಡುವಂತೆ.

ಬದುಕ  ಪಯಣದಲ್ಲಿ ಯಾರೋ ಜೊತೆಯಾಗುತ್ತಾರೆ,  ಅದನ್ನು ಯಾರೋ ಎಂದೋ ಬರೆದಿರುತ್ತಾರೆ ನಾವು ನಿಲ್ದಾಣ ಗೊತ್ತಿಲ್ಲದ ಬರೀ ಪ್ರಯಾಣಿಕರಷ್ಟೇ.

ಯಾರದೋ ಪಯಣ
ಎಲ್ಲಿಗೋ
ಯಾರ ಜೊತೆಗೋ...
ಮೇಲೆ ಕುಂತವ ನೀ ಚಾಲಕ
ನಾ ಪ್ರಯಾಣಿಕ .!!

ಮನಸು ಗೊಂದಲದ ಗೂಡು ಆಗಿತ್ತು, ಯೋಚನೆಗಳು ಒಳಗೊಳಗೇ ಗುದ್ದಾಡುತಿದ್ದವು , "ನಿನ್ನನ್ನು ಅತಿಯಾಗಿ ಹಚ್ಚಿಕೊಂಡಿದ್ದು ನನ್ನ ತಪ್ಪೇ ??" ಇರಬಹುದೋ ಏನೋ, ಬದುಕ ದಾರಿಯಲಿ ಒಂಟಿಯಾಗಿ ನಡೆದು ಅಭ್ಯಾಸವಾದ ಮೇಲೂ ನಿನ್ನ ಜೊತೆ ಬಯಸಿದ್ದು ಬಹುಷಃ ತಪ್ಪೇ ಇರಬೇಕು.!!!.

ಎಲ್ಲ ಒಂದು ಧಾರವಾಹಿ ಸರಣಿಯಂತೆ ಒಂದಕ್ಕೊಂದು ಜೊತೆಯಾಗಿ ಹೇಗೆ ಹಾಗೇ ಬಂದು ಹೀಗೇ ಎಲ್ಲ ಮುಗಿದೇ ಹೋಯಿತು. ಓ ಎಲ್ಲಿ ಮುಗಿಯಿತು ಇನ್ನೆಷ್ಟು ಸಂಚಿಕೆಗಳು, ತಿರುವುಗಳು ಬಾಕಿ ಇದೆಯೋ , ನಾ ದಿನ ಬೆಳಗ್ಗೆ ಎದ್ದು ಕಣ್ಣುಜ್ಜಿ ಬದುಕಿನ T.V ನೋಡುತ್ತೇನೆ ನೀನು ಮತ್ತೆ ಬರಬಹುದೋ ಏನೋ ಎನ್ನುವ ಪುಟ್ಟ ಆಸೆಯೊಂದಿಗೆ !!. ಬದುಕಿಗೂ ಒಂದು remote ಇದ್ದಿದ್ದರೇ.!!

ಒಮ್ಮೆ ಕಣ್ಣು ಮುಚ್ಚಿ ಧೀರ್ಘ ಉಸಿರೆಳುದುಕೊಂಡೆ, ಕಣ್ಣ ಮುಂದೆ ಒಂದಷ್ಟು ಕನಸುಗಳು ಸ್ಮಶಾನದ ಕಡೆ ನಡೆಯುತ್ತಿದ್ದವು,ಒಂದಿಷ್ಟು ಭ್ರಮೆಗಳು ಮೆಲ್ಲ ಕರಗುತಿದ್ದವು , ಕಣ್ಣು ತೆರೆದೆ ಬದುಕು ಮುಗುಳ್ನಗುತಿತ್ತು,ನಾನು ಮುಗುಳ್ನಕ್ಕೆ ಎದೆ ಹಗುರವಾದಂತೆ ಅನಿಸಿತು. ಎಲ್ಲೋ ಕಳೆದು ಹೋಗಿದ್ದ ನಾನು ಮತ್ತೆ ನನಗೇ ಸಿಕ್ಕಂತೆ,

ಎಲ್ಲ ಬರೆಯಲಾರೆ ಇಲ್ಲಿ. ಒಬ್ಬನೇ ಇದ್ದಾಗ ಎದೆ ಕಾಯಿಸಿಕೊಳ್ಳಲು ಒಂದಷ್ಟು ಬಚ್ಚಿಟ್ಟಿದ್ದೇನೆ,ಕೆಲವೊಂದು ವಿಷಯಗಳ ಹೇಳಿಕೊಳ್ಳುದಕಿಂತ ಬಚ್ಚಿಟ್ಟುಕೊಂಡರೆ ಅದರ ಹಿತ, ಯಾತನೆ ಬಹುಷಃ ಇನ್ನೊಂದು ಕವಿತೆ ಬರೆಹಿಸ ಬಹುದೋ ಏನೋ ನನ್ನ... !!

ನಿನ್ನ ನೆನಪುಗಳಿಗೆ
ನನ್ನ ಕಣ್ಣು ನೀಡಿದ
ಶ್ರದ್ದಾಂಜಲಿ
ಆ ಕಣ್ಣ ಕೊನೆಯ ಕಂಬನಿ....!!!!!

"Hello ನಾಲ್ಕು ದಿನ ರಜೆ ಇದೆ ಕಣೋ ಎಲ್ಲಿಗಾದರೂ ಹೋಗಿ ಬರೋಣ". ಗೆಳೆಯ ಅತ್ತ ಕಡೆಯಿಂದ ಸರಿ ಕಣೋ ಪ್ಲಾನ್ ಮಾಡೋಣ. ಪಯಣ ಮತ್ತೆ ಮುಂದೆ ಹೊರಟಿತ್ತು ಮತ್ತೊಂದಷ್ಟು ನೆನಪುಗಳ  ಹೊತ್ತು . .. . .. .. ..  .. .. .. ... ..

ಫೋನ್ ಅತ್ತ ಎತ್ತಿ ಇಟ್ಟೆ ಸ್ಕ್ರೀನ್ ಸೇವರ್ ಬದಲಾಯಿಸಿ........ !!! ಎದೆಯಲ್ಲಿರುದು ಬದಲಾಯಿಸುದು ಅಷ್ಟು ಸುಲಭವಲ್ಲವೋ ಏನೋ.

Oyee ಹೇಳಲು ಮರೆತೆ "ಎಲ್ಲ ಮುಗಿದ ಮೇಲೆ ಮತ್ತೆ ಏನೋ ಶುರುವಾಗಿದೆ . . . . . . . . . . . . . . " ಪಯಣ ಮುಂದುವರಿಯುದು........... 


Tuesday, September 20, 2016

ಬದುಕು ಮಾಯೆ, ಮೇಲೆ ಕೂತವ ಮಾಟಗಾರ.

ನನಗು ಹೀಗೆ
ನಿನ್ನೆ ಮೊನ್ನೆಗಳ ಹಾಗೆ
ದಿನವೇಕೆ ಹೋಗುತ್ತಿಲ್ಲ
ಹಾಗೆ ಹೀಗೇ . ........

ಮನೆಯೆದುರ ಜಗುಲಿಯ ಮೇಲೆ ಕುಳಿತು ಯಾವುದೋ ಕವಿತೆಗೆ ಇನ್ನೊಂದಿಷ್ಟು ಸಾಲುಗಳ ಹುಡುಕುತ್ತಿದ್ದೆ, ಮಳೆ ತನಗೆ ಇಷ್ಟ ಬಂದಂತೆ ಬಂದು ನಿಂತು ಮತ್ತೆ ಹೋಗುತಿತ್ತು,ಮೂಲೆಯಲ್ಲಿ ಮಡಚಿಟ್ಟ ಒದ್ದೆಯಾದ ಛತ್ರಿ ಚಳಿಗೆ ಮೆಲ್ಲ ನಡುಗುತಿತ್ತು, ಸೂರ್ಯ ಸುದೀರ್ಘ ರಜೆಯಲ್ಲಿದ್ದ.

ಯಾರೋ ಮನೆ ಕಡೆಗೆ ನಡೆದು ಬರುತ್ತಿದ್ದರು, ಮುರಿದ ಅರ್ಧ ಹರಿದ ಛತ್ರಿ, ಬಣ್ಣ ಮಾಸಿದ ಬಟ್ಟೆ,ನಡೆಯಲು ಶಕ್ತಿಗೆ ಒಂದು ಸಣ್ಣ ಊರುಗೋಲು ಹಿಡಿದು. ಬದುಕಿನ ಪೆಟ್ಟು ತಿಂದು ಸೋತ ಬೆನ್ನು ಕೊಂಚ ಬಾಗಿತ್ತು ಭೂಮಿಗೆ. ಬಂದವರೇ ನನ್ನ ಪಕ್ಕ ಒಂದಷ್ಟು ಜಾಗ ಬಿಟ್ಟು ಕುಳಿತೇ ಬಿಟ್ಟರು. "ನಿಮ್ಮನ್ನೆಲ್ಲೂ ನಮ್ಮ ಮನೆ ಪಕ್ಕ ಅಥವಾ ಈ ಊರಲ್ಲಿ ಎಲ್ಲೋ ನೋಡಲಿಲ್ಲವಲ್ಲ ಮೊದಲು, ಯಾರು ನೀವು?"ಅಂದೆ ಕುತೂಹಲ ತಡೆಯದೆ.

ನಾನು ಮೊದಲು ಈ ಮನೆಗೆ ಕೆಲಸಕ್ಕೆ ಬರುತ್ತಿದ್ದೆ, ನಿಮ್ಮ ಮಾವನವರು ಹೊಲ ಗದ್ದೆ ನೋಡುವ ಸಮಯದಲ್ಲಿ,ನೀವು ಆಗ ತುಂಬಾ ಚಿಕ್ಕವರು ಅದಕ್ಕೆ ನಿಮಗೆ ನನ್ನ ಪರಿಚಯವಿಲ್ಲ. ಅಮ್ಮನು ಹೌದು ಎಂಬಂತೆ ತಲೆಯಾಡಿಸಿದರು.
"ಆಮೇಲೆ ಎಲ್ಲಿ ಹೋದಿರಿ ? " ನನಗು ಮಾಡೋಕೆ ಬೇರೆ ಏನು ಕೆಲಸವಿರಲಿಲ್ಲ ಅವರ ಮಾತು ಕೇಳುದ ಬಿಟ್ಟು , ಮಳೆಯ ಹಿನ್ನೆಲೆ ಸಂಗೀತದ ಜೊತೆ ಅವರು ತಮ್ಮ ಕಥೆ-ವ್ಯಥೆ ಹೇಳಲು ಶುರು ಮಾಡಿಕೊಂಡರು.

ಹಲವು ವರುಷಗಳ ಹಿಂದೆ ನಾನು ಈ ಮನೆಗೆ ಗದ್ದೆ ಉಳಲು ಮತ್ತು ಇತರ ಕೃಷಿ ಕೆಲಸಗಳಿಗೆ ಬರುತ್ತಿದ್ದೆ,ಆಗ ಕೆಲಸ ಇತ್ತು ಹೊಟ್ಟೆ ಹೊರೆಯಲು, ಜನಗಳಿದ್ದರು ಕೆಲಸ ಮಾಡಲು, ಯೌವನದ ದಿನಗಳು ಅವು, ಮಳೆ , ಬಿಸಿಲು ನೋಡದೆ ದುಡಿಯುತಿದ್ದೆವು . ಎಲ್ಲರಂತೆ ನನಗು ಒಂದು ಮದುವೆ ಆಯಿತು , ಎರಡು ಮಕ್ಕಳು ಆದವು ಮೊದಲನೆಯದು ಹೆಣ್ಣು ಎರಡನೆಯದು ಗಂಡು. ದಿನಗಳು ಯಾರಿಗೂ ಕಾಯದೆ ಹಾಗೆ ಸರಿಯುತಿತ್ತು ಸದ್ದೇ ಮಾಡದೆ, ಹಾವು ಮೆಲ್ಲ ತೆವಳಿ ಹೋದಂತೆ .

ನನ್ನ ಮುದ್ದಿನ ಮಡದಿ ನನ್ನ ತುಂಬ ಇಷ್ಟ ಪಡುತ್ತಿದ್ದಳು, ಕಷ್ಟ ಪಟ್ಟು ದುಡಿದು ಸಂಜೆಗೆ ಮನೆ ಸೇರಿದರೆ  ಅವಳ ಮುಗುಳ್ನಗುವ ಕಂಡು ದಿನದ ಆಯಾಸವೆಲ್ಲ ಆವಿಯಾಗುತಿತ್ತು , ಮುಂಜಾನೆ ಇಬ್ಬನಿ ಕರಗಿದಂತೆ. ಮಕ್ಕಳು ಬೆಳೆಯತೊಡಗಿದರು. ಹಾಗು ಹೀಗೂ ಕಷ್ಟ ಪಟ್ಟು ಶಾಲೆ ಸೇರಿಸಿದ್ದೆ.

"ಅದೇ ಶಾಲೆ ಮೊನ್ನೆ ನಾಟಕ,ಯಕ್ಷಗಾನ ಎಲ್ಲ ಆಯಿತಲ್ಲ ಅಲ್ಲೇ "  ಅವರಿಗೆ ಶಾಲೆಯ ಹೆಸರು ಗೊತ್ತಿರಲಿಲ್ಲ. ಅವರ ಉದ್ದೇಶ ತಮ್ಮ ಹಾಗೆ ಮಕ್ಕಳು ಕೂಡ ಕಷ್ಟ ಪಡಬಾರದು, ಓದಿ ದೊಡ್ಡವರಾಗಲಿ ಎಂದು. "ನಮ್ಮ ಪುಟ್ಟ ಸಂಸಾರಕ್ಕೆ ಯಾರದೋ ದೃಷ್ಟಿ ಬಿತ್ತು" ಅವರ ದ್ವನಿ ಯಾಕೋ ಭಾರವಾಗಿತ್ತು, ಮಳೆಯೂಕೂಡ ಅವರ ಮಾತು ಕೇಳುವ ತವಕಕ್ಕೆ ಒಂದಷ್ಟು ಹೊತ್ತು ಸುಮ್ಮನೆ ಕೂತಂತೆ ಇತ್ತು . ಅವರು ಮಾತು ಮುಂದುವರಿಸಿದರು.

"ನನಗೆ ಯಾರೋ ಮದ್ದು( ಮಾಟ ಮಾಡಿದರು ) ಹಾಕಿದರು ". ಮಕ್ಕಳು, ಮಡದಿ, ಮನೆ ಎಲ್ಲ ದೂರವಾಯಿತು, ಕುಡಿಯುದು ಶುರುಮಾಡಿದೆ, ದುಡಿಯುದು ಕಡಿಮೆಯಾಯಿತು , ಅಲ್ಲಿ ಇಲ್ಲಿ ಹುಚ್ಚನಂತೆ ಅಲೆದೆ,ಮುಂದೆ ಅದೇ ಹಣೆಪಟ್ಟಿಯಾಯಿತು . ಯಾರದೋ ಮನೆ ಬಾಗಿಲಿಗೆ ಹೋದಾಗ ಒಂದಷ್ಟು ಜನ ಕರುಣೆ ತೋರಿಸಿ ಅನ್ನ  ಹಾಕಿದರು ಇನ್ನು ಕೆಲವರು ಹೊಡೆದು ಓಡಿಸಿದರು. ನಾನು ಓಡುತಿದ್ದೆ ಮನಸಿನ ನಾಗಾಲೋಟದ ಜೊತೆ, ಕಾಲ ಹಿಂಬಾಲಿಸುತಿತ್ತು.

"ಯಾರು ನಿಮಗೆ ಮದ್ದು ಹಾಕಿದ್ದು??" ಓದಿ ಮಾಸ್ಟರ್ ಡಿಗ್ರಿ ಪಡೆದ ನನ್ನ ಮಾತಿನಲ್ಲಿ ಸ್ವಲ್ಪ ವ್ಯಂಗ್ಯವಿತ್ತೋ ಏನೋ. ಹಳ್ಳಿಯಲ್ಲೇ ಬೆಳೆದಿದ್ದರು ಮದ್ದು ,ಮಾಟ ದೆವ್ವದ ಕಲ್ಪನೆ,ಆಲೋಚನೆಗಳ ಮೇಲೆ ನನ್ನ ವಿದ್ಯಾವಂತನೆಂಬ ಅಹಂ ನ ಧೂಳು ಹಾಗೆ ಪಸರಿಕೊಂಡಿತ್ತು .

"ಅದೇ ನನ್ನ ಪಕ್ಕದ ಮನೆಯ ಅನಿಲ ಇದ್ದಾನಲ್ವಾ ಅವನೇ", ಹೀಗೆ ನಾನಿರುವಾಗಲೇ ಮನೆಗೆ ಕೆಲವೊಮ್ಮೆ ಬರುತಿದ್ದ ಹಾಗೆ ಹೀಗೆ ಮಾತಾಡಲು . ನಾನು ನನ್ನನ್ನೇ ಮಾತಾಡಿಸಲು  ಬರುತ್ತಿದ್ದಾನೆ ಎಂದು ಕೊಂಡಿದ್ದೆ. ನನ್ನ ಹೆಂಡತಿ ಎಷ್ಟು ಸುಂದರಿಯೋ ಅಷ್ಟೇ ಒಳ್ಳೆಯವಳು ಒಮ್ಮೆಯು ಸಂಶಯ ಗೊಂಡಿಲ್ಲ. ಅವನೇ ಏನೋ ಮಾಟ  ಮಾಡಿರಬೇಕು ಅವಳಿಗೂ . ಅವಳ ಹೆಜ್ಜೆ ತಪ್ಪಿತು, ಹೋಗೇ ಬಿಟ್ಟಳು ಅವನ ಜೊತೆ ಒಂದು ಮಾತನಾಡದೆ .

"ಮತ್ತೆ ಮಕ್ಕಳು ?"

ಮಗ ದೊಡ್ಡವನಾಗಿದ್ದ ಎಲ್ಲೋ ಕೆಲಸ ಮಾಡಿಕೊಂಡಿದ್ದಾನೆ , ಮಗಳು ಅವರ ಜೊತೆಗೆ ಇದ್ದಳು , ದೊಡ್ಡವಳಾದ ನಂತರ ಅದ್ಯಾರೋ ಜೊತೆಗೆ ಕಳಿಸಿ ಕೊಟ್ಟಳಂತೆ ಬೊಂಬಾಯಿಗೆ.

ನನಗೆ ಮಗನ ಚಿಂತೆ ಇಲ್ಲ ಗಂಡು ಹುಡುಗ ಎಲ್ಲಾದರೂ ಉಂಡು ಬೆಳೆದಾನು , ಆದರೆ ಮಗಳು?  ಎಷ್ಟೋ ಆಸೆಯಿಂದ ಶಾಲೆಗೇ ಕಳಿಸಿದ್ದೆ, ಎಲ್ಲ ಏನೇನೋ ಆಗಿ ಹೋಯಿತು . ಸಾಯುವ ಮೊದಲು ಅವರನ್ನು ಮತ್ತೆ ನೋಡುತ್ತೇನೋ ಗೊತ್ತಿಲ್ಲ.

ಅವರ ಧ್ವನಿ ಸ್ವಲ್ಪ ನಡುಗಿದಂತಿತ್ತು. ಕಣ್ಣ ಅಂಚು ತೇವಗೊಂಡಿತ್ತು. ಬದುಕ ಅದೆಷ್ಟೋ ನೋವು, ಅದೇನೋ ನೆನಪು , ದಿನಾ ಕಣ್ಣ ಪರದೆ ಮೇಲೆ ತೇಲಿ ಹೋಗುವ ಚಿತ್ರಗಳು,ನಿದ್ದೆ ಇರದೇ ಅಲೆವ ಒಂಟಿ ಮನಸು, ಹೇಗೋ ಬದುಕಿ ಉಳಿದ ಇನ್ನೂ ಒಂದಷ್ಟು ದಿನಗಳು.

ಕತೆ ಮುಗಿದ ಸೂಚನೆ ಮಳೆಗೆ ಸಿಕ್ಕಿತೋ ಏನೂ ಮತ್ತೆ ಸುರಿಯಲಾರಂಭಿಸಿತು, ಅಮ್ಮ ಅವರಿಗೆ ಅನ್ನ ಬಡಿಸಿದರು, ಅವರು ನಮ್ಮ ಮನೆಯಲ್ಲಿ ಯಾವತ್ತೋ ಮಾಡಿದ ಜಾಸ್ತಿ ಕೆಲಸಕ್ಕೆ ಈಗ ಊಟ ಮಾಡುತ್ತಿರಬಹುದೇನೋ ಅನ್ನಿಸಿತು. ಬದುಕು ಹಾಗೆ ಕೆಲವೊಮ್ಮೆ ಮತ್ತೆ ತಿರುಗಿ ಬಂದು ಅಲ್ಲೇ ನಿಲ್ಲುತ್ತದೆ. ಮತ್ತೆ ಅಲ್ಲಿಂದಲೇ ಶುರು.

ಊಟ ಮುಗಿಸಿದ ನಂತರ , "ಸರಿ ನಾನು ಇನ್ನು ಬರುತ್ತೇನೆ" ಎಂದು ಹೊರಟೇ ಬಿಟ್ಟರು. .

ಅವರ ಹಳೆಯ ಛತ್ರಿ ಬಹುಶಃ ಈ ಮಳೆಗಾಲಕ್ಕೆ ಮಾತ್ರ ಬರಬಹುದೇನೋ ಎನ್ನುದು ಎಷ್ಟು ನಿಜವೋ ಮುಂದಿನ ಮಳೆಗಾಲ ಅವರು ನೋಡುದು ಅಷ್ಟೇ ಸುಳ್ಳಾಗಿತ್ತು.

ಹಾಗೇ ಅವರು ಕಾಂಪೌಂಡ್ ದಾಟಿ ಹೋದಮೇಲೆ ಮನೆಯಲ್ಲಿ ಕೇಳಿದೆ " ಎಲ್ಲಿ ಇರುತ್ತಾರೆ ಇವರು?" "ಅದೇ ನಮ್ಮ ಗದ್ದೆ ದಟ್ಟಿದ ಮೇಲೆ ಆ ಕಡೆ ಬೆಟ್ಟದಾಚೆ ಒಂದು ಸಣ್ಣ ಬಯಲಿದೆ ಅಲ್ವ ಅಲ್ಲೇ ಎಲ್ಲೋ ಜೋಪಡಿ ಹಾಕಿಕೊಂಡು ಇದ್ದಾರೆ.  ಪಾಪ".

ಅವರ ಬದುಕಿನ ಕತೆ (ವ್ಯಥೆ )  ಎದೆಯಲ್ಲಿ ಮೆಲ್ಲನೆ ಉರಿಯುತ್ತಿತ್ತು, ಬದುಕು ಕೆಲವೊಮ್ಮೆ ಎಷ್ಟೊಂದು ದುರಂತಗಳ ಜೊತೆ ಸಾಗುತ್ತದೆ, ಹಳೆಯ ರೈಲು ಭೋಗಿಗೆ ಮತ್ತೆ ಇನ್ನೊಂದಷ್ಟು ಭೋಗಿ ಜೋಡಿಸಿದಂತೆ . ಪಯಣ ಅಷ್ಟು ಸುಲಭವಲ್ಲ, ತಿರುವುಗಳು ಮೊದಲೇ ತಿಳಿದಿಲ್ಲ.

ನಡೆದ ದಾರಿ
ತಿರುಗಿ ನೋಡಿದರೆ
ಕಾಣಲಿಲ್ಲ,
ನಾ ನಿಂತಲ್ಲಿಯೇ ಇದ್ದೆ.
ಹಾಗಾದರೆ ನಡೆದದ್ದು ಬರಿ ಭ್ರಮೆಯೇ?? .


ಬದುಕು ಮಾಯೆ, ಮೇಲೆ ಕೂತವ ಮಾಟಗಾರ.
----------------------------------------------------------------------------------ಸುಕೇಶ್


Wednesday, July 27, 2016

ಮೋಡದ ಮುನಿಸು

ಬಾರದ ಮಳೆ
ಮೋಡದ ಮುನಿಸು
ಒಡೆದ ಭೂಮಿಯಲ್ಲಿ
ಚಿಗುರೊಡೆಯದ ಮೊಳಕೆ
ಸಿಡಿಲ ದ್ವನಿ 
ಒಂದು ಹನಿಗೆ
ಕತ್ತು ಎತ್ತಿ ಮೇಲೆ
ನೋಡುವಾಗ
ಜಾರಿದ್ದು ಕಂಬನಿ. 

ಕಪ್ಪೆ,ಕತ್ತೆಗಳಿಗೆ
ಮದುವೆ ಮಾಡಿದ್ದಾಯಿತು.
ಅಭಿಷೇಕಕ್ಕೂ
ವರುಣ ಒಲಿಯಲಿಲ್ಲ
ಊರ ಹಳ್ಳ ತುಂಬಲಿಲ್ಲ. 

ಬರಡು ಭೂಮಿಗೆ
ಸರಕಾರದ ಕುರುಡು
ಅದೇನೋ ಕಲ್ಯಾಣ ಯೋಜನೆ,
ಕಾದು ಕಾದು ತುಕ್ಕು ಹಿಡಿದ ನೇಗಿಲು
ಜೀವ ಸುಕ್ಕು ಚರ್ಮ ಹೊದ್ದು
ಕಾಯುತಿತ್ತೆ ಕೊನೆಗೊಂದು 
ನಿಟ್ಟುಸಿರು ಬಿಡಲು.












---------------------------------------------------------------ಸುಕೇಶ್ 

Monday, July 4, 2016

ಗುಂಗು ,ಗೆರೆ ಮತ್ತು ಗೊಂದಲ


ಗುಂಗಲ್ಲೇ
ಕಳೆದುಹೋಗುದು
ಯಾಕೋ ರೂಢಿಯಾಗಿದೆ,
ಹೃದಯ, ಮನಸಿನ ಮಾತು
ಕೇಳುತ್ತಿಲ್ಲವೆಂದು
ಮೆಲ್ಲ ಚಾಡಿ ಹೇಳಿದೆ.

ಸುತ್ತ ನಾನೇ ಎಳೆದ  ಗೆರೆ,
ದಾಟಲೊಲ್ಲದೆ,
ನಿಮಿಷಗಳು, ವರುಷಗಳ
ನಡುವಿನ ವ್ಯತ್ಯಾಸದ ಜೊತೆ
ಅದೆಸ್ಟೋ ಬದುಕಿದ್ದೆ.
ಮನಸು ಗೆರೆ ಪಕ್ಕ ನಿಂತು
ಇನ್ನೂ ಕಾಯುದೆ??!!

ಅರೆ!! ಹಾಕಿಕೊಂಡ ಗೆರೆ
ಕಾಣುತ್ತಿಲ್ಲ,
ಯಾರೋ ಬಂದು
ಅಳಿಸಿ ಹೋದರೆ?
ಪುಟ್ಟ ಹೃದಯ
ಬಲಿಯಾಗಬಹುದೇನೋ
ಮತ್ತೆ ಹೀಗೆ ಆದರೆ.

ತಿಳಿಯದಾಗಿದೆ ಯಾಕೋ,
ಏನೋ ಗೊಂದಲ.
ಮನಸ್ಸೇ ದಯವಿಟ್ಟು
ಕ್ಷಮಿಸು ಅಂದಿತು
ಹೃದಯ ಮತ್ತೆ ಈ ಸಲ.

ಗುಂಗಲ್ಲೇ
ಕಳೆದುಹೋಗುದು
ಯಾಕೋ ರೂಢಿಯಾಗಿದೆ,
ಹೃದಯ ಮಾತು ಕೇಳದೆ
ಎಲ್ಲೋ ಓಡಿಹೋಗಿದೆ!!!!!.

-------------------------------------------------------------------ಸುಕೇಶ್




Wednesday, May 18, 2016

ಸಂಬಂಧಗಳು


ಮೋಡ ಆಗಸ್ಟೇ ಒಂದಿಸ್ಟು ಮಳೆ ಸುರಿಸಿ ,ಭೂಮಿಯನ್ನು ಮತ್ತೆ ಮತ್ತೆ ಪೀಡಿಸುತಿತ್ತು. ಮಿಂಚು ಹುಳವೊಂದು ತನ್ನ ಬೆಳಕು ಉರಿಸಿ ಇರುಳ ಆಗಸದಲ್ಲಿ ಚಂದಿರನ ಯಾಕೋ ಹುಡುಕುತಿತ್ತು,ದಾರಿ ದೀಪವೊಂದು ವಿದ್ಯುತ್ ಬರುದನ್ನೇ ಕಾದು ಕಾದು ಸೋತು ತಲೆ ಬಾಗಿ ನಿಂತೇ  ಇತ್ತು, ಗಾಳಿಗೇನೋ ಆಸೆ, ಉರಿವ ಮೇಣದ ಬತ್ತಿಯ ಆರಿಸಲು, ಬಹುಶಃ ಆಗಷ್ಟೇ ಬಿದ್ದ ಮಳೆಗೆ ಖುಷಿಯಿಂದ ಭೂಮಿಯಿಂದ ಎದ್ದ ಚಿಟ್ಟೆ ಹುಳದ ಆತ್ಮಹತ್ಯೆ ತಡೆವ ಕಡೆಯ ಪ್ರಯತ್ನ ಇರಬೇಕು.

ಗೆಳೆಯ ಫೋನಿನಲ್ಲಿ ತನ್ನ ಹುಡುಗಿ ಜೊತೆ ಅತಿ ದೊಡ್ಡ ಸ್ವರದಲ್ಲಿ ಕಿರುಚುತಿದ್ದ "This is the end!! I don't want to discuss anything about our relationship, Don't call me!! Don't text me. this is the end!!!".
ತುಂಬ ಜನರನ್ನು ನೋಡಿದ್ದೇ,ಕೇಳಿದ್ದೆ , ಒಬ್ಬರನ್ನು ಇಷ್ಟ ಪಡುತ್ತೇನೆ ಎಂದು ಹೇಳುದಕ್ಕೆ ತಿಂಗಳು, ವರ್ಷಗಟ್ಟಲೆ ಕಾಯುತ್ತಾರೆ,ಕೆಲವರಂತು ಹೇಳಲಾಗದೆ ಜೀವನ ಪೂರ್ತಿ ಒದ್ದಾಡುತ್ತಾರೆ. ಅಂಥಹುದರಲ್ಲಿ ಅದೇ ಸಂಬಂಧಗಳನ್ನು ಕಡಿಡುಕೊಳ್ಳಲು ಕೆಲವೇ ಕ್ಷಣಗಳು ಸಾಕೇ ?? ಸಂಬಂಧಗಳ ಬಂಧ ಅಸ್ಟೊಂದು ತೆಳುವಾಗಿ ಜೋಡಿಸಲ್ಪಟ್ಟಿದೆಯ?.

ಒಡೆದ ಸಂಬಂಧಗಳು, ಒಡೆದ ಮೊಬೈಲ್ ನ ಪರದೆ ಬದಲಾಯಿಸಿದಸ್ಟೇ  ಸುಲಭವಾಗಿ ಬದಲಾಗುವ so called ಆಧುನಿಕ ಯುಗವಿದು. living in relationship ಸಂಬಂಧ ಶಬ್ದದ ವ್ಯಾಖ್ಯಾನವನ್ನು ಬದಲಾಯಿಸಿದೆ , ಗಂಡ- ಹೆಂಡತಿ, ಅಪ್ಪ-ಅಮ್ಮ, ಅಕ್ಕ- ಅಣ್ಣ, ಮುಂತಾದ ರಕ್ತ ಸಂಬಂಧಗಳು ಪೋನ್ ನ ಹಾಯ್, ಹಲೋ ಗಲಿಗಸ್ಟೇ ಸೀಮಿತವಾಗಿದೆಯೇನೋ ಅಂತ ಅನಿಸುತಿದೆ . ಕೆಲವರನ್ನು ನೋಡಿದ್ದೇನೆ , ಯಾರೋ ಪೋನ್ ಮಾಡಿದರೆ ಸುಮಾರು ಅರ್ಧ ಗಂಟೆ ಮಾತಾಡಿ ಆಮೇಲೆ ಪೋನ್ ಕಟ್ ಮಾಡಿ ಮತ್ತೊಂದಷ್ಟು ಹೊತ್ತು ಅವರು  ಯಾಕಾಗಿ ಪೋನ್ ಮಾಡಿದರೋ  ಅಂತ ಬಯಿದುಕೊಳ್ಳುತ್ತಾರೆ.ಕೆಲವೊಂದು ಸಂಬಂಧಗಳನ್ನು ಅರ್ಥ ಮಾಡಿ ಕೊಲ್ಲುದು ತುಂಬಾ ಕಷ್ಟ!!!.

ಬಸ್ಸಿನ ಪಕ್ಕದ ಸೀಟಿನಲ್ಲಿ ಒಂದಸ್ಟು ಹೊತ್ತು ಕುಳಿತು ಅದೇನೋ ಮಾತಾಡಿ ಹೋದ ಅಪರಿಚಿತರು, ಜೀವನ ಪೂರ್ತಿ ಜೊತೆಗಿರುತ್ತೀನಿ ಎಂದು ಹೇಳುತ್ತ, ಕಾರಣವೇ ಇರದೆ ಎದ್ದು ಹೋದ ಪರಿಚಿತರು ,ಬರಿ ಮುಗುಳ್ನಗುಗಳಿಗೆ ಜೊತೆಯಾಗುವ ಇನ್ನು ಕೆಲವರು, ಸಂಬಂಧಗಳಿಗೆ ಅರ್ಥ ಹುಡುಕುವಾಗಲೆಲ್ಲ ಮತ್ತೆ ಮತ್ತೆ ಕಾಡುತ್ತಾರೆ.

ನಾವು ಹುಟ್ಟಿದಾಗ ನಮ್ಮ ಜೊತೆ ಸಂಬಂಧಗಳು ಹುಟ್ಟಿಕೊಳ್ಳುತ್ತವೆ, ಆದರ ಸಾಯುವಾಗ ನಾವು ಮಾತ್ರ ಸಾಯುತ್ತೇವೆ ನಮ್ಮ ಜೊತೆಗಿನ ಸಂಬಂಧಗಳು ಹಾಗೇ ಉಳಿಯುತ್ತವೆ.  ಇದೇ ಬದುಕಿನ ವಿಚಿತ್ರ !!. ಸಂಬಂಧಗಳ ಕಡಿದುಕೊಂಡು ಬದುಕುವ ನೋವು ಸಂಬಂಧಗಳ ಜೊತೆ ಹುಟ್ಟುವಾಗಿನ ನೋವಿನಸ್ಟೇ ಇರಬಹುದೇನೋ ಬಹುಶಃ.


----------------------------------------------ಸುಕೇಶ್ 

Wednesday, May 4, 2016


ಕಿವಿಯ ಜುಮುಕಿ
ಕದ್ದು ಇಣುಕಿ
ನೋಡಲತ್ತ ಮೆಲ್ಲಗೆ,
ಕಂಪ ಸೂಸಿ ಬಿರಿಯುತಿತ್ತು
ತುಟಿಯ ನಗು ಮಲ್ಲಿಗೆ

ಸರಸ ತಂಪು ಗಾಳಿಗೆ,
ಕಚಗುಳಿಯು ಕೆನ್ನೆಗೆ
ಗಲ್ಲದಲೆದ್ದ ಸಣ್ಣ ಗುಳಿ
ಸೆಳೆದುಕೊಂಡಿತೇಕೋ
ನನ್ನ, ನಿನ್ನ ಬಳಿ.

ಕಣ್ಣ ಮುಚ್ಚಿದಾಗಲೆಲ್ಲ
ಕಣ್ಣ ಪರದೆಯ ಮೇಲೆ ಬಂದು
ಖಾಲಿ ಹಾಳೆ ಹಿಡಿದು, ಕವಿತೆ ಬರೆ
ಎಂದು ಕಾಡುದ್ಯಾಕೆ ಇತ್ತೀಚೆಗೆ ??!!
ಸಾಲು ಸಾಲುಗಲನು ಎಲ್ಲ, ನೀನೇ ಹೇಳಿಕೊಟ್ಟು
ಎನೋ ತಿಳಿಯದಂತೆ ನಗುತ , ತಿರುಗಿ
ಹೋಗುದ್ಯಾಕೆ ಮತ್ತೆ ದೂರದಾಚೆಗೆ??!!.

ಕನಸ ಸರಣಿ
ಎದೆಯ ಧರಣಿ
ಜಾರಲೊಲ್ಲದ ಸಮಯ,
ಮತ್ತೆ ಹೀಗೆ ಯಾರಿಗೋ
ಕಾಯುದಕ್ಕೆ ಇನ್ನು ಕೊನೆಯ?!!!!!.


--------------------------------------------------------------------------ಸುಕೇಶ್ 

Wednesday, April 13, 2016

ಹಾಗೆ ಸುಮ್ಮನೆ -೪

ಅರ್ಧ ಚಂದಿರ ಕಳೆದುಕೊಂಡಿರುವ ಇನ್ನರ್ಧ ಹುಡುಕುತ್ತ ಬಾನೆಲ್ಲ ಅಲೆಯುತಿದ್ದ,ಒಂಟಿ ದಾರಿ ದೀಪ ತಿರುವು ರಸ್ತೆಗಳ ಜೊತೆಗೂಡಿ ಯಾರದೋ ದಾರಿ ಕಾಯುತಿತ್ತು,ಚಳಿಗಾಳಿಗೆ ಹೆದರಿ ಮರವೊಂದು ಮೆಲ್ಲ ನಡುಗುತಿತ್ತು, ನೀರವ ರಾತ್ರಿಯಲ್ಲಿ ಮೋಡಗಳು ಒಂದಕ್ಕೊಂದು ಏನೋ ಪಿಸುಗುಡುತಿದ್ದವು, ನಾ ಎಂದೋ ಬರೆದಿಟ್ಟ ಕೆಲವು ಸಾಲುಗಳಿಗೆ ಮತ್ತೊಂದಿಸ್ಟು ಸಾಲುಗಳ ಸೆರಿಸುತಿದ್ದೆ. 

ಅಜ್ಜನ ಹಳೆಯ ಚಪ್ಪಲಿ ಮೂಲೆಯಲ್ಲಿ ಹಾಗೆ ಬಿದ್ದಿತ್ತು, ಬದುಕಿನ ತುಂಬ ನಡೆದು ಸುಸ್ತಾದಂತೆ, ಮತ್ತೆ ಎಂದೋ ನಡೆಯುವ ಹಂಬಲ , ಅಜ್ಜ ಚಪ್ಪಲಿಯನೊಮ್ಮೆ ನೋಡಿ ನಿಟ್ಟಿಸಿರು ಬಿಟ್ಟ.ಏನೋ ಕೇಳಬೇಕೆಂದು ಕೊಂಡೆ, ಮತ್ತೆ ಇನ್ನೇನೋ ನೆನಪಾಯಿತು,ಹಿಂದೆ ಮೈಲುಗಳಗಟ್ಟಲೆ ನಡೆದೇ ಹೋಗುತಿದ್ದರಂತೆ ಊರಿಂದ ಊರಿಗೆ ಹೆಗಲ ಮೇಲೆ ಬುತ್ತಿ ಕಟ್ಟಿಕೊಂಡು, ಹಿಂತಿರುಗಿ ಬರುವಾಗ ಖಾಲಿ ಬುತ್ತಿಯಲ್ಲಿ ಆ ಊರಿಂದ ಈ ಊರಿಗೆ ಕನಸುಗಳ ಹೊತ್ತುಕೊಂಡು. 

ಸವೆಸಿದ ದಾರಿಗೆ ಸವೆದ ಚಪ್ಪಲಿಗಳ ಪುರಾವೆ!! ದಾರಿಯ ತಿರುವಿನ ಕಟ್ಟೆಗಳಲ್ಲಿ, ಬೀದಿಯಾಚೆಯ ಕೆರೆಯ ದಂಡೆಗಳಲ್ಲಿ ಯಾರೋ ಪ್ರತಿ ನಿತ್ಯ ಕಾಯೋರು , ದಾರಿ ದೀಪಗಳಿಲ್ಲದ ಊರು, ಮಲಗಿದಲ್ಲಿ ಆಕಾಶವೇ ಸೂರು, ಚೂರು ಚೂರು ಕನಸು!!ಬದುಕು ಮುಗಿಯದ ಪಯಣ. 

'ಊರು ಸುತ್ತಿ ನೋಡು ಕೋಶ ಓದಿ ನೋಡು' ಅಂದಿದ್ದರು ಹಿರಿಯರು, ಊರು ಸುತ್ತುವಾಗ ಕೋಶ ಹೇಗೆ ಓದಲಿ?? ಅಂದಿದ್ದರು ಅಜ್ಜ ಒಮ್ಮೆ. ಊರು ಊರುಗಳ ಜನ , ಅವರ ಬದುಕು, ಕಥೆ , ಕನಸು, ಈಗ ಮನೆಯಲ್ಲೇ ಕೂತು ನೋಡುವ ಸೀರಿಯಲ್ಲುಗಳಿಗಿಂತ ಚೆನ್ನಾಗಿತ್ತಂತೆ !! 

ನಮಗೆ ಎಲ್ಲಿದೆ ಸಮಯ ಅವರಂತೆ ಊರು ತಿರುಗಲು ,ನಾವು ಬದುಕನ್ನು ಕಟ್ಟಿಕೊಳ್ಳುವ ನೆಪದಲ್ಲಿ ನಮ್ಮನ್ನು ನಾವೇ ಒಂದು ಕಡೆ ಕಟ್ಟಿಕೊಳ್ಳುತ್ತೇವೆ. ಕೆಲವೊಮ್ಮೆ ಅಂದುಕೊಳ್ಳುತ್ತೇನೆ ನಾಗರಿಕತೆ ಹೀಗೆ  ಬೆಳೆಯ  ಬಾರದಿತ್ತೇನೋ ಎಂದು ,ಇಲ್ಲದಿದ್ದರೆ ನಾವು ಊರಿಂದ ಊರಿಗೆ ಅಲೆಯಬಹುದಿತ್ತು ಕನಸುಗಳ ಕಟ್ಟಿಕೊಂಡು. ಚಪ್ಪಲಿ ಸವೆಯ ಬಹುದೆಂಬ ಭಯ ಬಹುಶಃ ಕಾಡದೆ ಇರುತಿತ್ತು! . 

ಊರು ಅಂದಾಗ ನೆನಪಾಯಿತು ,ಊರಿನ ಮನೆಗೆ ಹೋಗದೆ ತಿಂಗಳುಗಳೇ ಆಗಿ ಹೋಗಿದ್ದವು, ಮೊನ್ನೆ ಹೋಗಿ ಬಂದೆ .ಹಳೆ ರಸ್ತೆ ,ಟಾರು ಹೊದ್ದು ನನಗೆ ಏನೋ ಎಂಬಂತೆ ಕಾಯುತ್ತಿತ್ತು . ಆಗಷ್ಟೇ ಬಿದ್ದ ಮಳೆ ನಾ ಬರೋ ಮುಂಚೆ ರಸ್ತೆ ಶುಭ್ರಗೊಳಿಸಿ ಹೊರಡುವ ತಯಾರಿಯಲ್ಲಿತ್ತು. 

ಓ ಊರ ದಾರಿಯಾಚೆಯ ದಿಬ್ಬ ರಸ್ತೆ ನೆಪದಲ್ಲಿ ಕರಗಿ ಹೋಗಿದೆ ,ಈಗ  ಅಲ್ಲಿ ಹೋಗಿ ನಿಂತರೆ ಮುಳುಗೋ ಸೂರ್ಯ, ಗದ್ದೆಯ ಪೈರು,ಬಾನಚೆ ಹಾರುವ ಹಕ್ಕಿ ಕಾಣುದಿಲ್ಲಆದರು ಒಂದಷ್ಟು ಹೊತ್ತು ಸುಮ್ಮನೆ ನಿಂತೆ ಅಲ್ಲಿ , ಗಿರಕಿ  ಹೊಡೆವ ನೆನಪುಗಳ ಸಾಂತ್ವಾನಿಸಲು. 

ಇವತ್ತಿಗೆ ಇಷ್ಟು ಸಾಕು , ಮುಂದೊಂದು ದಿನ ಸಿಕ್ಕಾಗ ಮತ್ತೆ  ಮಾತಾಡೋಣ. 

ಗಡಿಯಾರದ ಮುಳ್ಳು ನಿಂತು ನಿಂತು ಪಯಣಿಸುತಿತ್ತು, ಸಮಯ ಕಳೆಯುತಿದೆ ಎಂದು ಮುಳ್ಳು ಚುಚ್ಚಿ ಚುಚ್ಚಿ ಹೇಳಿದಂತೆ . ಚುಚ್ಚಿಕೊಳ್ಳೋ ನೋವು ಹಚ್ಚೆ ಹಾಕಿಸಿಕೊಂಡ ನಂತರದ ಸುಖದ ಮುಂದೆ ಏನೇನೋ ಅಲ್ಲ . 

ನಡೆದ ದಾರಿಗಳನ್ನೇ ಮತ್ತೆ ಮತ್ತೆ ನಡೆಯುದು,

ನೋವುಗಳಿಗೇ  ಬಣ್ಣ ತುಂಬಿಸಿ ಖುಶಿಪಡುದೇ  ಬದುಕೇ??


----------------------------------------------------------------ಸುಕೇಶ್   






Monday, February 15, 2016

ಹಾಗೆ ಸುಮ್ಮನೆ -೩


ಮೊದ ಮೊದಲ ಮಳೆಗೆ 
ಬಾರೆ ನನ್ನ ಜೊತೆ
ತುಸು ದೂರ ನಡೆಯಲು,
ಮನೆಸೇಕೋ ಕಾದಿದೆ 
ಕನಸೊಂದ ಪಿಸು ನುಡಿಯಲು 
ಸುರಿವ ಮಳೆಗೂ ಕೇಳದಂತೆ..........!!!!! 

ಕನವರಿಕೆಗಳಲ್ಲಿ ಬಂದು 
ಕವಿತೆಗಳ ಕೊಟ್ಟು 
ತಿರುಗಿ ಹೋದಾಗಿನ ಹೆಜ್ಜೆ ಸದ್ದು,
ಮತ್ತೆ ಕೇಳ  ಬಯಸುತ್ತೇನೆ 
ಮೌನಗಳಿಗೂ ತಿಳಿಯದಂತೆ ಕದ್ದು ಕದ್ದು!! 

ಎದೆ ಹಳೆಯ ಸೂರು, 
ಜೋತಾಡುತ್ತಿರುವ ಕನಸು, 
ನೆನಪು ಮಂದಾನಿಲ.  
ಸನಿಹಕು ದೂರಕು ನಡುವಿನ 
ಅಂತರ ಅಳೆಯುವ 
ಗಡಿಯಾರಕ್ಕೆ ಅದೆಂಥದೋ ಕುತೂಹಲ . 

ಮೊದ  ಮೊದಲ ಮಳೆಗೆ 
ಬಾರೆ ನನ್ನ ಜೊತೆ
ತುಸು ದೂರ ನಡೆಯಲು.  
ಬರೆದಿರುವ ಹೊಸದೊಂದು ಕವಿತೆ 
ನಿನಗೆಂದೇ  ಗುನುಗಲು 
ಸುರಿವ ಮಳೆಗೂ ಕೇಳದಂತೆ !!!!!. 


---------------------------------------------------------------------ಸುಕೇಶ್


Saturday, January 9, 2016

ಹುಡುಕಾಟ


ಚಂದ್ರ ಏನು ಮೋಡದಾಚೆ
ಹುಡುಕುತಿರುವನು!!
ಬಿಳಿ ಮೋಡ, ಕಪ್ಪು ಮೋಡಗಳ
ಹಿಂಡುಗಳ ನಡುವೆ
ಮತ್ತೆ ಮತ್ತೆ ತಿರುಗುತಿರುವನು!!

ಮೊನ್ನೆ ಮೊನ್ನೆ ಹುಡುಕಿ ಹುಡುಕಿ
ತನ್ನನ್ನೇ ಕಳೆದುಕೊಂಡಿದ್ದ.
ನಾ ಹುಡುಕುತಿದ್ದೆ ಅವನ
ಬಾನ ದಾರಿಯ ತಿರುವುಗಳಲ್ಲಿ.
ಕತ್ತಲೆ ಹೊದ್ದು ಮಲಗಿತ್ತು
ಚಂದಿರನ ತಲೆದಿಂಬಾಗಿಸಿ !!!

ಒಂದೊಂಚೂರೆ ಬೆಳೆದು
ಕತ್ತಲೆ ಕಳೆದು
ಬೆಳಕು ಕೊಡಿಸುವ ಅದೇನು ಲೆಕ್ಕಾಚಾರ ?
ರಾತ್ರಿ ಹಗಲುಗಳ ನಡುವೆ
ಮಾಡುತ್ತಾನೆ ಅದೆಂತದೋ ಚಮತ್ಕಾರ.

ಬಹುಶಃ ಮೊನ್ನೆ ಬಿದ್ದ ಮಳೆಹನಿಗಳನ್ನು
ಮತ್ತೆ ಹುಡುಕುತಿದ್ದ ಇಂದು
ಮೋಡಗಳಾಚೆ!!
ನಾ ನೋಡುತಿದ್ದೆ ಅವನನ್ನೇ
ಏನೂ ಅರಿಯದೆ
ಕಿಟಕಿಗಳಿಂದಾಚೆ!!!!

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...