Wednesday, April 13, 2016

ಹಾಗೆ ಸುಮ್ಮನೆ -೪

ಅರ್ಧ ಚಂದಿರ ಕಳೆದುಕೊಂಡಿರುವ ಇನ್ನರ್ಧ ಹುಡುಕುತ್ತ ಬಾನೆಲ್ಲ ಅಲೆಯುತಿದ್ದ,ಒಂಟಿ ದಾರಿ ದೀಪ ತಿರುವು ರಸ್ತೆಗಳ ಜೊತೆಗೂಡಿ ಯಾರದೋ ದಾರಿ ಕಾಯುತಿತ್ತು,ಚಳಿಗಾಳಿಗೆ ಹೆದರಿ ಮರವೊಂದು ಮೆಲ್ಲ ನಡುಗುತಿತ್ತು, ನೀರವ ರಾತ್ರಿಯಲ್ಲಿ ಮೋಡಗಳು ಒಂದಕ್ಕೊಂದು ಏನೋ ಪಿಸುಗುಡುತಿದ್ದವು, ನಾ ಎಂದೋ ಬರೆದಿಟ್ಟ ಕೆಲವು ಸಾಲುಗಳಿಗೆ ಮತ್ತೊಂದಿಸ್ಟು ಸಾಲುಗಳ ಸೆರಿಸುತಿದ್ದೆ. 

ಅಜ್ಜನ ಹಳೆಯ ಚಪ್ಪಲಿ ಮೂಲೆಯಲ್ಲಿ ಹಾಗೆ ಬಿದ್ದಿತ್ತು, ಬದುಕಿನ ತುಂಬ ನಡೆದು ಸುಸ್ತಾದಂತೆ, ಮತ್ತೆ ಎಂದೋ ನಡೆಯುವ ಹಂಬಲ , ಅಜ್ಜ ಚಪ್ಪಲಿಯನೊಮ್ಮೆ ನೋಡಿ ನಿಟ್ಟಿಸಿರು ಬಿಟ್ಟ.ಏನೋ ಕೇಳಬೇಕೆಂದು ಕೊಂಡೆ, ಮತ್ತೆ ಇನ್ನೇನೋ ನೆನಪಾಯಿತು,ಹಿಂದೆ ಮೈಲುಗಳಗಟ್ಟಲೆ ನಡೆದೇ ಹೋಗುತಿದ್ದರಂತೆ ಊರಿಂದ ಊರಿಗೆ ಹೆಗಲ ಮೇಲೆ ಬುತ್ತಿ ಕಟ್ಟಿಕೊಂಡು, ಹಿಂತಿರುಗಿ ಬರುವಾಗ ಖಾಲಿ ಬುತ್ತಿಯಲ್ಲಿ ಆ ಊರಿಂದ ಈ ಊರಿಗೆ ಕನಸುಗಳ ಹೊತ್ತುಕೊಂಡು. 

ಸವೆಸಿದ ದಾರಿಗೆ ಸವೆದ ಚಪ್ಪಲಿಗಳ ಪುರಾವೆ!! ದಾರಿಯ ತಿರುವಿನ ಕಟ್ಟೆಗಳಲ್ಲಿ, ಬೀದಿಯಾಚೆಯ ಕೆರೆಯ ದಂಡೆಗಳಲ್ಲಿ ಯಾರೋ ಪ್ರತಿ ನಿತ್ಯ ಕಾಯೋರು , ದಾರಿ ದೀಪಗಳಿಲ್ಲದ ಊರು, ಮಲಗಿದಲ್ಲಿ ಆಕಾಶವೇ ಸೂರು, ಚೂರು ಚೂರು ಕನಸು!!ಬದುಕು ಮುಗಿಯದ ಪಯಣ. 

'ಊರು ಸುತ್ತಿ ನೋಡು ಕೋಶ ಓದಿ ನೋಡು' ಅಂದಿದ್ದರು ಹಿರಿಯರು, ಊರು ಸುತ್ತುವಾಗ ಕೋಶ ಹೇಗೆ ಓದಲಿ?? ಅಂದಿದ್ದರು ಅಜ್ಜ ಒಮ್ಮೆ. ಊರು ಊರುಗಳ ಜನ , ಅವರ ಬದುಕು, ಕಥೆ , ಕನಸು, ಈಗ ಮನೆಯಲ್ಲೇ ಕೂತು ನೋಡುವ ಸೀರಿಯಲ್ಲುಗಳಿಗಿಂತ ಚೆನ್ನಾಗಿತ್ತಂತೆ !! 

ನಮಗೆ ಎಲ್ಲಿದೆ ಸಮಯ ಅವರಂತೆ ಊರು ತಿರುಗಲು ,ನಾವು ಬದುಕನ್ನು ಕಟ್ಟಿಕೊಳ್ಳುವ ನೆಪದಲ್ಲಿ ನಮ್ಮನ್ನು ನಾವೇ ಒಂದು ಕಡೆ ಕಟ್ಟಿಕೊಳ್ಳುತ್ತೇವೆ. ಕೆಲವೊಮ್ಮೆ ಅಂದುಕೊಳ್ಳುತ್ತೇನೆ ನಾಗರಿಕತೆ ಹೀಗೆ  ಬೆಳೆಯ  ಬಾರದಿತ್ತೇನೋ ಎಂದು ,ಇಲ್ಲದಿದ್ದರೆ ನಾವು ಊರಿಂದ ಊರಿಗೆ ಅಲೆಯಬಹುದಿತ್ತು ಕನಸುಗಳ ಕಟ್ಟಿಕೊಂಡು. ಚಪ್ಪಲಿ ಸವೆಯ ಬಹುದೆಂಬ ಭಯ ಬಹುಶಃ ಕಾಡದೆ ಇರುತಿತ್ತು! . 

ಊರು ಅಂದಾಗ ನೆನಪಾಯಿತು ,ಊರಿನ ಮನೆಗೆ ಹೋಗದೆ ತಿಂಗಳುಗಳೇ ಆಗಿ ಹೋಗಿದ್ದವು, ಮೊನ್ನೆ ಹೋಗಿ ಬಂದೆ .ಹಳೆ ರಸ್ತೆ ,ಟಾರು ಹೊದ್ದು ನನಗೆ ಏನೋ ಎಂಬಂತೆ ಕಾಯುತ್ತಿತ್ತು . ಆಗಷ್ಟೇ ಬಿದ್ದ ಮಳೆ ನಾ ಬರೋ ಮುಂಚೆ ರಸ್ತೆ ಶುಭ್ರಗೊಳಿಸಿ ಹೊರಡುವ ತಯಾರಿಯಲ್ಲಿತ್ತು. 

ಓ ಊರ ದಾರಿಯಾಚೆಯ ದಿಬ್ಬ ರಸ್ತೆ ನೆಪದಲ್ಲಿ ಕರಗಿ ಹೋಗಿದೆ ,ಈಗ  ಅಲ್ಲಿ ಹೋಗಿ ನಿಂತರೆ ಮುಳುಗೋ ಸೂರ್ಯ, ಗದ್ದೆಯ ಪೈರು,ಬಾನಚೆ ಹಾರುವ ಹಕ್ಕಿ ಕಾಣುದಿಲ್ಲಆದರು ಒಂದಷ್ಟು ಹೊತ್ತು ಸುಮ್ಮನೆ ನಿಂತೆ ಅಲ್ಲಿ , ಗಿರಕಿ  ಹೊಡೆವ ನೆನಪುಗಳ ಸಾಂತ್ವಾನಿಸಲು. 

ಇವತ್ತಿಗೆ ಇಷ್ಟು ಸಾಕು , ಮುಂದೊಂದು ದಿನ ಸಿಕ್ಕಾಗ ಮತ್ತೆ  ಮಾತಾಡೋಣ. 

ಗಡಿಯಾರದ ಮುಳ್ಳು ನಿಂತು ನಿಂತು ಪಯಣಿಸುತಿತ್ತು, ಸಮಯ ಕಳೆಯುತಿದೆ ಎಂದು ಮುಳ್ಳು ಚುಚ್ಚಿ ಚುಚ್ಚಿ ಹೇಳಿದಂತೆ . ಚುಚ್ಚಿಕೊಳ್ಳೋ ನೋವು ಹಚ್ಚೆ ಹಾಕಿಸಿಕೊಂಡ ನಂತರದ ಸುಖದ ಮುಂದೆ ಏನೇನೋ ಅಲ್ಲ . 

ನಡೆದ ದಾರಿಗಳನ್ನೇ ಮತ್ತೆ ಮತ್ತೆ ನಡೆಯುದು,

ನೋವುಗಳಿಗೇ  ಬಣ್ಣ ತುಂಬಿಸಿ ಖುಶಿಪಡುದೇ  ಬದುಕೇ??


----------------------------------------------------------------ಸುಕೇಶ್   






ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...