Tuesday, September 20, 2016

ಬದುಕು ಮಾಯೆ, ಮೇಲೆ ಕೂತವ ಮಾಟಗಾರ.

ನನಗು ಹೀಗೆ
ನಿನ್ನೆ ಮೊನ್ನೆಗಳ ಹಾಗೆ
ದಿನವೇಕೆ ಹೋಗುತ್ತಿಲ್ಲ
ಹಾಗೆ ಹೀಗೇ . ........

ಮನೆಯೆದುರ ಜಗುಲಿಯ ಮೇಲೆ ಕುಳಿತು ಯಾವುದೋ ಕವಿತೆಗೆ ಇನ್ನೊಂದಿಷ್ಟು ಸಾಲುಗಳ ಹುಡುಕುತ್ತಿದ್ದೆ, ಮಳೆ ತನಗೆ ಇಷ್ಟ ಬಂದಂತೆ ಬಂದು ನಿಂತು ಮತ್ತೆ ಹೋಗುತಿತ್ತು,ಮೂಲೆಯಲ್ಲಿ ಮಡಚಿಟ್ಟ ಒದ್ದೆಯಾದ ಛತ್ರಿ ಚಳಿಗೆ ಮೆಲ್ಲ ನಡುಗುತಿತ್ತು, ಸೂರ್ಯ ಸುದೀರ್ಘ ರಜೆಯಲ್ಲಿದ್ದ.

ಯಾರೋ ಮನೆ ಕಡೆಗೆ ನಡೆದು ಬರುತ್ತಿದ್ದರು, ಮುರಿದ ಅರ್ಧ ಹರಿದ ಛತ್ರಿ, ಬಣ್ಣ ಮಾಸಿದ ಬಟ್ಟೆ,ನಡೆಯಲು ಶಕ್ತಿಗೆ ಒಂದು ಸಣ್ಣ ಊರುಗೋಲು ಹಿಡಿದು. ಬದುಕಿನ ಪೆಟ್ಟು ತಿಂದು ಸೋತ ಬೆನ್ನು ಕೊಂಚ ಬಾಗಿತ್ತು ಭೂಮಿಗೆ. ಬಂದವರೇ ನನ್ನ ಪಕ್ಕ ಒಂದಷ್ಟು ಜಾಗ ಬಿಟ್ಟು ಕುಳಿತೇ ಬಿಟ್ಟರು. "ನಿಮ್ಮನ್ನೆಲ್ಲೂ ನಮ್ಮ ಮನೆ ಪಕ್ಕ ಅಥವಾ ಈ ಊರಲ್ಲಿ ಎಲ್ಲೋ ನೋಡಲಿಲ್ಲವಲ್ಲ ಮೊದಲು, ಯಾರು ನೀವು?"ಅಂದೆ ಕುತೂಹಲ ತಡೆಯದೆ.

ನಾನು ಮೊದಲು ಈ ಮನೆಗೆ ಕೆಲಸಕ್ಕೆ ಬರುತ್ತಿದ್ದೆ, ನಿಮ್ಮ ಮಾವನವರು ಹೊಲ ಗದ್ದೆ ನೋಡುವ ಸಮಯದಲ್ಲಿ,ನೀವು ಆಗ ತುಂಬಾ ಚಿಕ್ಕವರು ಅದಕ್ಕೆ ನಿಮಗೆ ನನ್ನ ಪರಿಚಯವಿಲ್ಲ. ಅಮ್ಮನು ಹೌದು ಎಂಬಂತೆ ತಲೆಯಾಡಿಸಿದರು.
"ಆಮೇಲೆ ಎಲ್ಲಿ ಹೋದಿರಿ ? " ನನಗು ಮಾಡೋಕೆ ಬೇರೆ ಏನು ಕೆಲಸವಿರಲಿಲ್ಲ ಅವರ ಮಾತು ಕೇಳುದ ಬಿಟ್ಟು , ಮಳೆಯ ಹಿನ್ನೆಲೆ ಸಂಗೀತದ ಜೊತೆ ಅವರು ತಮ್ಮ ಕಥೆ-ವ್ಯಥೆ ಹೇಳಲು ಶುರು ಮಾಡಿಕೊಂಡರು.

ಹಲವು ವರುಷಗಳ ಹಿಂದೆ ನಾನು ಈ ಮನೆಗೆ ಗದ್ದೆ ಉಳಲು ಮತ್ತು ಇತರ ಕೃಷಿ ಕೆಲಸಗಳಿಗೆ ಬರುತ್ತಿದ್ದೆ,ಆಗ ಕೆಲಸ ಇತ್ತು ಹೊಟ್ಟೆ ಹೊರೆಯಲು, ಜನಗಳಿದ್ದರು ಕೆಲಸ ಮಾಡಲು, ಯೌವನದ ದಿನಗಳು ಅವು, ಮಳೆ , ಬಿಸಿಲು ನೋಡದೆ ದುಡಿಯುತಿದ್ದೆವು . ಎಲ್ಲರಂತೆ ನನಗು ಒಂದು ಮದುವೆ ಆಯಿತು , ಎರಡು ಮಕ್ಕಳು ಆದವು ಮೊದಲನೆಯದು ಹೆಣ್ಣು ಎರಡನೆಯದು ಗಂಡು. ದಿನಗಳು ಯಾರಿಗೂ ಕಾಯದೆ ಹಾಗೆ ಸರಿಯುತಿತ್ತು ಸದ್ದೇ ಮಾಡದೆ, ಹಾವು ಮೆಲ್ಲ ತೆವಳಿ ಹೋದಂತೆ .

ನನ್ನ ಮುದ್ದಿನ ಮಡದಿ ನನ್ನ ತುಂಬ ಇಷ್ಟ ಪಡುತ್ತಿದ್ದಳು, ಕಷ್ಟ ಪಟ್ಟು ದುಡಿದು ಸಂಜೆಗೆ ಮನೆ ಸೇರಿದರೆ  ಅವಳ ಮುಗುಳ್ನಗುವ ಕಂಡು ದಿನದ ಆಯಾಸವೆಲ್ಲ ಆವಿಯಾಗುತಿತ್ತು , ಮುಂಜಾನೆ ಇಬ್ಬನಿ ಕರಗಿದಂತೆ. ಮಕ್ಕಳು ಬೆಳೆಯತೊಡಗಿದರು. ಹಾಗು ಹೀಗೂ ಕಷ್ಟ ಪಟ್ಟು ಶಾಲೆ ಸೇರಿಸಿದ್ದೆ.

"ಅದೇ ಶಾಲೆ ಮೊನ್ನೆ ನಾಟಕ,ಯಕ್ಷಗಾನ ಎಲ್ಲ ಆಯಿತಲ್ಲ ಅಲ್ಲೇ "  ಅವರಿಗೆ ಶಾಲೆಯ ಹೆಸರು ಗೊತ್ತಿರಲಿಲ್ಲ. ಅವರ ಉದ್ದೇಶ ತಮ್ಮ ಹಾಗೆ ಮಕ್ಕಳು ಕೂಡ ಕಷ್ಟ ಪಡಬಾರದು, ಓದಿ ದೊಡ್ಡವರಾಗಲಿ ಎಂದು. "ನಮ್ಮ ಪುಟ್ಟ ಸಂಸಾರಕ್ಕೆ ಯಾರದೋ ದೃಷ್ಟಿ ಬಿತ್ತು" ಅವರ ದ್ವನಿ ಯಾಕೋ ಭಾರವಾಗಿತ್ತು, ಮಳೆಯೂಕೂಡ ಅವರ ಮಾತು ಕೇಳುವ ತವಕಕ್ಕೆ ಒಂದಷ್ಟು ಹೊತ್ತು ಸುಮ್ಮನೆ ಕೂತಂತೆ ಇತ್ತು . ಅವರು ಮಾತು ಮುಂದುವರಿಸಿದರು.

"ನನಗೆ ಯಾರೋ ಮದ್ದು( ಮಾಟ ಮಾಡಿದರು ) ಹಾಕಿದರು ". ಮಕ್ಕಳು, ಮಡದಿ, ಮನೆ ಎಲ್ಲ ದೂರವಾಯಿತು, ಕುಡಿಯುದು ಶುರುಮಾಡಿದೆ, ದುಡಿಯುದು ಕಡಿಮೆಯಾಯಿತು , ಅಲ್ಲಿ ಇಲ್ಲಿ ಹುಚ್ಚನಂತೆ ಅಲೆದೆ,ಮುಂದೆ ಅದೇ ಹಣೆಪಟ್ಟಿಯಾಯಿತು . ಯಾರದೋ ಮನೆ ಬಾಗಿಲಿಗೆ ಹೋದಾಗ ಒಂದಷ್ಟು ಜನ ಕರುಣೆ ತೋರಿಸಿ ಅನ್ನ  ಹಾಕಿದರು ಇನ್ನು ಕೆಲವರು ಹೊಡೆದು ಓಡಿಸಿದರು. ನಾನು ಓಡುತಿದ್ದೆ ಮನಸಿನ ನಾಗಾಲೋಟದ ಜೊತೆ, ಕಾಲ ಹಿಂಬಾಲಿಸುತಿತ್ತು.

"ಯಾರು ನಿಮಗೆ ಮದ್ದು ಹಾಕಿದ್ದು??" ಓದಿ ಮಾಸ್ಟರ್ ಡಿಗ್ರಿ ಪಡೆದ ನನ್ನ ಮಾತಿನಲ್ಲಿ ಸ್ವಲ್ಪ ವ್ಯಂಗ್ಯವಿತ್ತೋ ಏನೋ. ಹಳ್ಳಿಯಲ್ಲೇ ಬೆಳೆದಿದ್ದರು ಮದ್ದು ,ಮಾಟ ದೆವ್ವದ ಕಲ್ಪನೆ,ಆಲೋಚನೆಗಳ ಮೇಲೆ ನನ್ನ ವಿದ್ಯಾವಂತನೆಂಬ ಅಹಂ ನ ಧೂಳು ಹಾಗೆ ಪಸರಿಕೊಂಡಿತ್ತು .

"ಅದೇ ನನ್ನ ಪಕ್ಕದ ಮನೆಯ ಅನಿಲ ಇದ್ದಾನಲ್ವಾ ಅವನೇ", ಹೀಗೆ ನಾನಿರುವಾಗಲೇ ಮನೆಗೆ ಕೆಲವೊಮ್ಮೆ ಬರುತಿದ್ದ ಹಾಗೆ ಹೀಗೆ ಮಾತಾಡಲು . ನಾನು ನನ್ನನ್ನೇ ಮಾತಾಡಿಸಲು  ಬರುತ್ತಿದ್ದಾನೆ ಎಂದು ಕೊಂಡಿದ್ದೆ. ನನ್ನ ಹೆಂಡತಿ ಎಷ್ಟು ಸುಂದರಿಯೋ ಅಷ್ಟೇ ಒಳ್ಳೆಯವಳು ಒಮ್ಮೆಯು ಸಂಶಯ ಗೊಂಡಿಲ್ಲ. ಅವನೇ ಏನೋ ಮಾಟ  ಮಾಡಿರಬೇಕು ಅವಳಿಗೂ . ಅವಳ ಹೆಜ್ಜೆ ತಪ್ಪಿತು, ಹೋಗೇ ಬಿಟ್ಟಳು ಅವನ ಜೊತೆ ಒಂದು ಮಾತನಾಡದೆ .

"ಮತ್ತೆ ಮಕ್ಕಳು ?"

ಮಗ ದೊಡ್ಡವನಾಗಿದ್ದ ಎಲ್ಲೋ ಕೆಲಸ ಮಾಡಿಕೊಂಡಿದ್ದಾನೆ , ಮಗಳು ಅವರ ಜೊತೆಗೆ ಇದ್ದಳು , ದೊಡ್ಡವಳಾದ ನಂತರ ಅದ್ಯಾರೋ ಜೊತೆಗೆ ಕಳಿಸಿ ಕೊಟ್ಟಳಂತೆ ಬೊಂಬಾಯಿಗೆ.

ನನಗೆ ಮಗನ ಚಿಂತೆ ಇಲ್ಲ ಗಂಡು ಹುಡುಗ ಎಲ್ಲಾದರೂ ಉಂಡು ಬೆಳೆದಾನು , ಆದರೆ ಮಗಳು?  ಎಷ್ಟೋ ಆಸೆಯಿಂದ ಶಾಲೆಗೇ ಕಳಿಸಿದ್ದೆ, ಎಲ್ಲ ಏನೇನೋ ಆಗಿ ಹೋಯಿತು . ಸಾಯುವ ಮೊದಲು ಅವರನ್ನು ಮತ್ತೆ ನೋಡುತ್ತೇನೋ ಗೊತ್ತಿಲ್ಲ.

ಅವರ ಧ್ವನಿ ಸ್ವಲ್ಪ ನಡುಗಿದಂತಿತ್ತು. ಕಣ್ಣ ಅಂಚು ತೇವಗೊಂಡಿತ್ತು. ಬದುಕ ಅದೆಷ್ಟೋ ನೋವು, ಅದೇನೋ ನೆನಪು , ದಿನಾ ಕಣ್ಣ ಪರದೆ ಮೇಲೆ ತೇಲಿ ಹೋಗುವ ಚಿತ್ರಗಳು,ನಿದ್ದೆ ಇರದೇ ಅಲೆವ ಒಂಟಿ ಮನಸು, ಹೇಗೋ ಬದುಕಿ ಉಳಿದ ಇನ್ನೂ ಒಂದಷ್ಟು ದಿನಗಳು.

ಕತೆ ಮುಗಿದ ಸೂಚನೆ ಮಳೆಗೆ ಸಿಕ್ಕಿತೋ ಏನೂ ಮತ್ತೆ ಸುರಿಯಲಾರಂಭಿಸಿತು, ಅಮ್ಮ ಅವರಿಗೆ ಅನ್ನ ಬಡಿಸಿದರು, ಅವರು ನಮ್ಮ ಮನೆಯಲ್ಲಿ ಯಾವತ್ತೋ ಮಾಡಿದ ಜಾಸ್ತಿ ಕೆಲಸಕ್ಕೆ ಈಗ ಊಟ ಮಾಡುತ್ತಿರಬಹುದೇನೋ ಅನ್ನಿಸಿತು. ಬದುಕು ಹಾಗೆ ಕೆಲವೊಮ್ಮೆ ಮತ್ತೆ ತಿರುಗಿ ಬಂದು ಅಲ್ಲೇ ನಿಲ್ಲುತ್ತದೆ. ಮತ್ತೆ ಅಲ್ಲಿಂದಲೇ ಶುರು.

ಊಟ ಮುಗಿಸಿದ ನಂತರ , "ಸರಿ ನಾನು ಇನ್ನು ಬರುತ್ತೇನೆ" ಎಂದು ಹೊರಟೇ ಬಿಟ್ಟರು. .

ಅವರ ಹಳೆಯ ಛತ್ರಿ ಬಹುಶಃ ಈ ಮಳೆಗಾಲಕ್ಕೆ ಮಾತ್ರ ಬರಬಹುದೇನೋ ಎನ್ನುದು ಎಷ್ಟು ನಿಜವೋ ಮುಂದಿನ ಮಳೆಗಾಲ ಅವರು ನೋಡುದು ಅಷ್ಟೇ ಸುಳ್ಳಾಗಿತ್ತು.

ಹಾಗೇ ಅವರು ಕಾಂಪೌಂಡ್ ದಾಟಿ ಹೋದಮೇಲೆ ಮನೆಯಲ್ಲಿ ಕೇಳಿದೆ " ಎಲ್ಲಿ ಇರುತ್ತಾರೆ ಇವರು?" "ಅದೇ ನಮ್ಮ ಗದ್ದೆ ದಟ್ಟಿದ ಮೇಲೆ ಆ ಕಡೆ ಬೆಟ್ಟದಾಚೆ ಒಂದು ಸಣ್ಣ ಬಯಲಿದೆ ಅಲ್ವ ಅಲ್ಲೇ ಎಲ್ಲೋ ಜೋಪಡಿ ಹಾಕಿಕೊಂಡು ಇದ್ದಾರೆ.  ಪಾಪ".

ಅವರ ಬದುಕಿನ ಕತೆ (ವ್ಯಥೆ )  ಎದೆಯಲ್ಲಿ ಮೆಲ್ಲನೆ ಉರಿಯುತ್ತಿತ್ತು, ಬದುಕು ಕೆಲವೊಮ್ಮೆ ಎಷ್ಟೊಂದು ದುರಂತಗಳ ಜೊತೆ ಸಾಗುತ್ತದೆ, ಹಳೆಯ ರೈಲು ಭೋಗಿಗೆ ಮತ್ತೆ ಇನ್ನೊಂದಷ್ಟು ಭೋಗಿ ಜೋಡಿಸಿದಂತೆ . ಪಯಣ ಅಷ್ಟು ಸುಲಭವಲ್ಲ, ತಿರುವುಗಳು ಮೊದಲೇ ತಿಳಿದಿಲ್ಲ.

ನಡೆದ ದಾರಿ
ತಿರುಗಿ ನೋಡಿದರೆ
ಕಾಣಲಿಲ್ಲ,
ನಾ ನಿಂತಲ್ಲಿಯೇ ಇದ್ದೆ.
ಹಾಗಾದರೆ ನಡೆದದ್ದು ಬರಿ ಭ್ರಮೆಯೇ?? .


ಬದುಕು ಮಾಯೆ, ಮೇಲೆ ಕೂತವ ಮಾಟಗಾರ.
----------------------------------------------------------------------------------ಸುಕೇಶ್


ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...