Saturday, June 30, 2018

ಒಂದು ತಪ್ಪಿನ ಸುತ್ತ



"ಹೇ ನಿನಗೆ ವೇದ ಗೊತ್ತಾ ..... ??".

ಆ ಕಡೆಯಿಂದ ಗೆಳೆಯನೊಬ್ಬ ಫೋನ್ ಮಾಡಿ ಹಾಗೆ ಕೇಳಿದ್ದ,

"ಹೌದು ಗೊತ್ತು , ಋಗ್ವೇದ, ಯಜುರ್ವೇದ , ಸಾಮ..... "

"ಅದಲ್ಲವೋ , ನಿನಗೆ  BSc ಯಲ್ಲಿ Physics ಕಲಿಸುತಿದ್ದರಲ್ಲ ಅವರು "

ಅವನ ದನಿಯಲ್ಲಿ ನನ್ನ ಬಗ್ಗೆ ಅದೇನೋ ಕಂಡುಹಿಡಿದ ಹೆಮ್ಮೆ ಮತ್ತು ಅದಕ್ಕಿಂತಲೂ ಅದರ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿಯುವ ಕುತೂಹಲ ಇತ್ತು .

ಹೌದು ಆಕೆ ವೇದ, ನಮ್ಮ ಫಿಸಿಕ್ಸ್ ಟೀಚರ್ , ಆಗಷ್ಟೇ MSc ಮುಗಿಸಿ ನಮ್ಮ ಕಾಲೇಜಿಗೆ ಅಧ್ಯಾಪಕಿಯಾಗಿ ಸೇರಿಕೊಂಡಿದ್ದರು. ಅವರದ್ದು ಮೊದಲ ವೃತ್ತಿ . ಅಧ್ಯಾಪನ ಅಂದ್ರೆ ನಿಮಗೆ ಗೊತ್ತಿರಬಹುದಲ್ಲ ,ತಮಗೆ ಗೊತ್ತಿಲ್ಲದನ್ನು ಇನ್ನೊಬ್ಬರಿಗೆ ಅರ್ಥವಾಗದಂತೆ ಹೇಳುದನ್ನು ಅಧ್ಯಾಪನ ಅನ್ನುತ್ತಾರೆ!!!. ಆಗಷ್ಟೇ MSc ಮುಗಿಸಿ ಬಂದಿದ್ರು , ಇನ್ನು ಕೇಳುದು ಬೇಡ , ಅವರು ಓದದಿದ್ದರು ನಾವು ಸ್ವಲ್ಪ ತಿಳಿದುಕೊಳ್ಳಲಿ ಅನ್ನುದು ಬಹುಶಃ ಅವರ ಪ್ರಾಮಾಣಿಕ ಪ್ರಯತ್ನ ಇರಬೇಕು, ಸಣ್ಣ ವಯಸ್ಸು ನಮಗೆ ನಮ್ಮ ಸೀನಿಯರ್ಸ್ ಅನ್ನು ಕಂಡ ಹಾಗೆ ಆಗುತಿತ್ತು, ಅದಲ್ಲದೆ ಆ ಕಾಲೇಜಿನಲ್ಲಿ ಹೀಗೆ ಒಂದು ವರ್ಷಕೆ ತರಬೇತಿಗೆಂಬಂತೆ  ಬಂದು ಹೋಗುವವರು ತುಂಬಾ ಜನ ಸಿಗುತ್ತಾರೆ ಅದಕ್ಕೇ ಇರಬೇಕು ಬಹುಷಃ ನಾವು ಈ ಮಹಿಳಾ ಮಣಿಗಳನ್ನು ನಮ್ಮ ಕಾಲೇಜು ದಿನಗಳಲ್ಲಿ ಅಷ್ಟು ಸೀರಿಯಸ್ ಆಗಿ ತಗೊಳ್ಳದೆ ಇದ್ದದ್ದು.

ಅದು ನಾನು ಓದಿದ ಡಿಗ್ರಿ ಕಾಲೇಜು , ಓದಿದ್ದು ಅನ್ನದಕ್ಕಿಂತ ಮೂರು ವರುಷ ಕಳೆದದ್ದು ಅನ್ನುದು ಸೂಕ್ತ. ಸಾಹಿತ್ಯದಲ್ಲಿ ಇದ್ದ ನನ್ನ ಅಭಿರುಚಿಗೆ ವಿಜ್ಞಾನ ಅಷ್ಟಾಗಿ ರುಚಿಸುತ್ತಿರಲಿಲ್ಲ, ಹಾಗಾಗಿ ತರಗತಿಗಳಲ್ಲಿ  ನನಗೆ ನನ್ನದೇ ಲೋಕವನ್ನು ಸೃಷ್ಟಿಸಿಕೊಂಡು  ಆರಾಮಾಗೆ ಇದ್ದೆ.
ನಮ್ಮದೊಂದು ವಿಚಿತ್ರ ತರಗತಿ ಇದ್ದದ್ದು 12 ಜನ, ಅದರಲ್ಲಿ 6 ಕೆಮಿಸ್ಟ್ರಿ ಮೇಜರ್ ಇನ್ನುಳಿದ 6 ಕಂಪ್ಯೂಟರ್ ಸೈನ್ಸ್ ಮೇಜರ್ . ನಾನು ಕೆಮಿಸ್ಟ್ರಿ ಮೇಜರ್ ನಮ್ಮ 6 ಜನರಲ್ಲಿ ಒಂದು ಹುಡುಗಿಯು ಇಲ್ಲ , ಇದ್ದ 4 ಹುಡುಗಿಯರು ಕಂಪ್ಯೂಟರ್ ಸೈನ್ಸ್. ಹುಡುಗಿಯರು ಎಲ್ಲ ಕೆಮಿಕಲ್ ಗಳಿಗೆ ಹೆದರಿ CPU ಒಳಗೆ ಸೇರಿಕೊಂಡ ಹಾಗಿತ್ತು. ಕಾಮನ್ ಕ್ಲಾಸುಗಳಾದ ಗಣಿತ ,ಭೌತಶಾಸ್ತ್ರ   ಒಟ್ಟಿಗೆ ಇರುತಿತ್ತು ಈ ಕ್ಲಾಸುಗಳಲ್ಲೇ ನಮ್ಮ ಕಿತಾಪತಿ ಜಾಸ್ತಿ . ಕಿತಾಪತಿಯನ್ನು ಸ್ವಲ್ಪ ಸಿಂಪಲ್ ಆಗಿ ಹುಡುಗಿಯರ ಮುಂದೆ ತೋರುವ  ಪೌರುಷ ಅನ್ನಬಹುದು!!!.

ಕೆಮಿಸ್ಟ್ರಿ ಕ್ಲಾಸಿನ   ಆರು  ಜನ ಹುಡುಗರ ಬಗ್ಗೆ ನಾನು ಇಲ್ಲಿ ಹೇಳಿಕೊಳ್ಳದಿದ್ದರೆ ಬೇರೆ ಎಲ್ಲೂ ಯಾರೊ ಹೇಳಿಕೊಳ್ಳುದಿಲ್ಲ!!. ಸ್ಟೀವನ್ ,ಸ್ವಲ್ಪ ಎತ್ತರ, ನೋಡೋಕೆ ಚೆಂದ ಇದ್ದ , ನಮ್ಮ ಕ್ಲಾಸ್ ಹುಡುಗಿಯರು ಮಾತಾಡೋಕೆ ಸಾಲದೇ , ಸೀನಿಯರ್ಸ್ , PUC ಹುಡುಗಿಯರೆಲ್ಲ ಪರಿಚಯ ಮಾಡಿಸಿಕೊಂಡಿದ್ದ, ಚೇತನ್ , ಆಗಿನ ಕಾಲದಲ್ಲೇ ಎರಡು ಮೊಬೈಲ್ ಫೋನ್ , ಡಿಸ್ಕವರ್ ಬೈಕ್ , ಮುಂದಿನದು ನಾನು ಹೇಳಬೇಕಾಗಿಲ್ಲ ನಿಮ್ಮ ನಿಮ್ಮ ಯೋಚನೆಗೆ ಬಿಟ್ಟದ್ದು , ಇನ್ನು ನಾನು ಹಳ್ಳಿಯಿಂದ ಬಂದವ,ಒಂದಷ್ಟು ದಿನ ಮಧ್ಯಾಹ್ನದ ಊಟಕ್ಕೆ ಬುತ್ತಿ ತಗೊಂಡು ಹೋಗುತಿದ್ದೆ , ಮತ್ತೆ ಸ್ವಲ್ಪ ಸಮಯದ ನಂತರ ಜೈನ ಮುನಿಗಳ ಆಶೀರ್ವಾದದಿಂದ ಬಿಸಿಯೂಟ ಕೊಡುತಿದ್ದರು. ಕಾಲೇಜು , ತಿರುಗಾಟ, ವಯೋ ಸಹಜ ಪೋಲಿಗಳು ಇತ್ಯಾದಿ ಎಲ್ಲ ಹೊಸತು . ನಮ್ಮ ಮೂವರದ್ದು ಜನುಮದ ಗೆಳೆತನ . ತಿರುಗಾಡಲು ಚೇತನ್ ನ ಬೈಕ್ ಇತ್ತು , ಸ್ಟೀವನ್ ತಾಯಿ ವಿದೇಶದಲ್ಲಿ ಇದ್ದದ್ದರಿಂದ ಅಲ್ಪ ಸ್ವಲ್ಪ ದುಡ್ಡು ಬರುತಿತ್ತು , ನಾನು ಇಬ್ಬರ ನಡುವೆ ಒಗ್ಗಿ ಹೋಗಿದ್ದೆ , ಇನ್ನು ಇಬ್ಬರು ಗಾಂಧಿ ಪೀಸ್ , ಜಾಸ್ತಿ ಹೇಳಬೇಕಾಗಿಲ್ಲ ಇಲ್ಲಿ ಬರುವ ಪಾತ್ರಗಳಿಗೆ ಮುಖ್ಯವಾದುದಲ್ಲ, ಮತ್ತೊಬ್ಬ, ಅತ್ತ ನಮ್ಮ ಕಡೆಗೂ ಅಲ್ಲ  ಗಾಂಧಿವಾದಿಯು ಅಲ್ಲ ಒಂದು ತಟಸ್ಥ ಧೋರಣೆ .

ಎಲ್ಲ ಡಿಗ್ರಿ ಕಾಲೇಜುಗಳಂತೆ ನಮ್ಮದು ನಡೆದಿತ್ತು , ವಿಶೇಷವೇನು ಇಲ್ಲ, ಅದೇ ಕ್ಲಾಸುಗಳು , NCC, ವಾರ್ಷಿಕೋತ್ಸವ , ಇತ್ಯಾದಿ ಇತ್ಯಾದಿ. ನಾನು ಕಾಲೇಜು ಮ್ಯಾಗಜಿನ್ ಗೆ ಕತೆ-ಕವಿತೆ ಬರೆದುಕೊಂಡು , ಇತರ ಕಾಲೇಜುಗಳಲ್ಲಿ ಕವಿತೆ ವಾಚಿಸಿಕೊಂಡು, ತರಗತಿಗಳ ಮದ್ಯದಲ್ಲಿ  ಖಾಲಿ ಹಾಳೆಗಳ ಮೇಲೆ ಗೀಚಿಕೊಂಡು , ಕಾಲೇಜಿನ ಲೈಬ್ರರಿಯಲ್ಲಿ ಯಾವುದೋ ಕನ್ನಡ ಪುಸ್ತಕ ಓದಿಕೊಂಡು ಆರಾಮಾಗೆ ಇದ್ದೆ. ಹೀಗೆ ಎರಡು ವರುಷ ಹೇಗೋ ಮುಗಿದಿತ್ತು , ನಾವುಗಳು ಸೀನಿಯರ್ಸ್ ಆದ್ವಿ.

ರಕ್ಷಿತ ಮತ್ತು ಫೋನ್ ನಂಬರ್:

ಮೂರನೇ ವರ್ಷಕ್ಕೆ ನಮಗೆ ಕೆಮಿಸ್ಟ್ರಿ ಕ್ಲಾಸ್ ತೆಗೆದುಕೊಳ್ಳಲು ಒಬ್ರು ಮೇಡಂ ಬರ್ತಿದ್ರು , ಆಕೆಯ ಹೆಸರು "ರಕ್ಷಿತ" (ಹೆಸರು ಬದಲಾಯಿಸಲಾಗಿದೆ) ಅವರೇ ಈ ಕಥೆಯ ನಾಯಕಿ ಮತ್ತು ನಮ್ಮ ಬದುಕಿನ ಖಳನಾಯಕಿ!!. ಮೊದಲೇ ಹೇಳಿದಂತೆ ಕೆಮಿಸ್ಟ್ರಿ ಕ್ಲಾಸ್ನಲ್ಲಿ ಇದ್ದದ್ದೆಲ್ಲ ಹುಡುಗರೇ , ಈ ಮೇಡಂ ಮೊದ  ಮೊದಲು ನಾಚಿಕೊಂಡು ,ಬೋರ್ಡಿಗೆ ಅಂಟಿಕೊಂಡೇ ಏನೋ ಪಾಠ ಮಾಡುತಿದ್ದರು ಬಹುಶಃ ನೇರವಾಗಿ ಹೇಳಬೇಕೆಂದರೆ ನೋಟ್ಸ್ ಓದುತಿದ್ದರು !!. ನಮಗೂ ಪಾಠದ ಅವಶ್ಯಕತೆ ಇರಲಿಲ್ಲ ಪಾಸ್ ಆಗುವ ಧೈರ್ಯ ಇತ್ತು . ಇಂಟರ್ನಲ್ ಗಳಲ್ಲಿ ಹೇಗೆ ಪಾಸ್ ಆಗುತಿದ್ದೆವು ಅನ್ನುದು ನಾವು ಡಿಗ್ರಿಯಲ್ಲಿ ಮಾಡಿದ ಅತಿ ದೊಡ್ಡ ಹಗರಣಗಳಲ್ಲಿ ಒಂದು ಅದನ್ನು ಕಡೆಯದಾಗಿ ಹೇಳುತ್ತೇನೆ.

ಒಂದು ದಿನ ಕೆಮಿಸ್ಟ್ರಿ ಯ ಗಂಡು ಪಡೆ ಕೆಮಿಸ್ಟ್ರಿ ಲ್ಯಾಬ್ ನಲ್ಲಿ ಇತ್ತು,  ,ಲ್ಯಾಬ್ ಹೊರಗಡೆ  ಸ್ಟಾಫ್ ರೂಮಿನಲ್ಲಿ ರಕ್ಷಿತ ತನ್ನ ಫೋನ್ ಅಲ್ಲೇ ಬಿಟ್ಟು ಎಲ್ಲೋ ಹೋಗಿದ್ದರು ,ಚೇತನ್ ಗೆ ಅದೇನು ಅನ್ನಿಸಿತೋ , ಹೋಗಿ ಆಕೆಯ ಫೋನ್ ನಿಂದ ಅವನ ಫೋನ್ ಗೆ ಮಿಸ್ಸ್ಡ್ ಕಾಲ್ ಮಾಡಿ ನಂಬರ್ ಪಡೆದುಕೊಂಡ , ಅವನೇ ಹೇಳಿದಂತೆ ಅವನಿಗೆ ಯಾವುದೇ ದುರುದ್ದೇಶ ಇರಲಿಲ್ಲ , ಯಾಕೋ ಸ್ವಲ್ಪ attitude ತೋರಿಸುತ್ತಿದ್ದಳು ಅಂತಾನೋ ಅಥವಾ ಅವನಿಗೆ ಕ್ಲಾಸ್ ನಲ್ಲಿ ಏನೋ ಅಂದಳು ಅಂತ ಸ್ವಲ್ಪ ಸತಾಯಿಸುವ ಇರಾದೆ ಅಷ್ಟೇ . ಅಲ್ಲಿಂದ ಶುರುವಾಯಿತು ರಕ್ಷಿತ ಮೇಡಂ ಗೆ ಕಾಟ , ಕ್ಲಾಸ್ ಅಲ್ಲಿ ಇದ್ದಾಗ , ಬೇರೆ ಕ್ಲಾಸಲ್ಲಿ ಇರುವಾಗ ಮಿಸ್ಸ್ಡ್ ಕಾಲ್ ಮಾಡುದು , ಮೆಸೇಜ್ ಮಾಡುದು ಇತ್ಯಾದಿ . ಇಷ್ಟೆಲ್ಲ ವಿಷಯಗಳು ನನಗೆ ತಿಳಿದದ್ದು ಆಮೇಲೆ , ಜೊತೆಗೆ ಇದ್ದರು ಈ ತರದ ಕಿಲಾಡಿ ಕೆಲಸವೊಂದು ನನ್ನ ಗಮನಕ್ಕೆ ಬರದೇ ನಡೆಯುತಿತ್ತು.

ನಾನು : ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿತಂತೆ

ನನ್ನ ಹತ್ರ  ಫೋನ್ ಇರಲಿಲ್ಲ , ಯಾವುದೋ ವಿಷಯಕ್ಕೆ ನನಗೆ ಫೋನ್ ನ ಅವಶ್ಯಕತೆ ಇತ್ತು , ಬಹುಶಃ NCC ಕ್ಯಾಂಪ್ ಗೆ ಹೊರ ರಾಜ್ಯಕ್ಕೆ ಹೋಗಲಿಕ್ಕೆ ಇತ್ತು ಒಂದಷ್ಟು ಇತರ ವಿದ್ಯಾರ್ಥಿಗಳನ್ನು ಕರೆದುಕೊಂಡು , ನಾನು ಚೇತನ್ ಬಳಿ ಕೇಳಿ ಒಂದು ಫೋನ್ ಪಡೆದುಕೊಂಡೆ ಆತನ ಬಳಿ ಇನ್ನೊಂದಿತ್ತು (ನನಗೆ ಕೊಟ್ಟ ಫೋನ್ ಸ್ವಲ್ಪ ದಿನ ಸ್ವಿಚ್ ಆಫ್ ಇತ್ತಂತೆ , ವಿಷಯ ನನಗೆ ಕೊನೆಗೆ ಗೊತ್ತಾಯಿತು ), ಮನೆಗೆ ತಲುಪಿ ಚಾರ್ಜ್ ಮಾಡಿ ಸ್ವಿಚ್ ಆನ್ ಮಾಡಿದೆ ,

ರಕ್ಷಿತ ಮೇಡಂ ನ (ನನಗೆ ಇನ್ನೂ ತಿಳಿದಿರಲಿಲ್ಲ ಅದು ನಮ್ಮ ಮೇಡಂ ನಂಬರ್ ಎಂದು ) ಮೆಸೇಜ್ಗಳು ಸಾಲು ಸಾಲು ಬಂದು inbox ಸೇರಿತು, ಯಾಕೋ ಸ್ವಲ್ಪ ಗಾಬರಿಯಾಯಿತು ಏನೋ ಇದೆ ಈ phone ನಲ್ಲಿ. ಮತ್ತದೇ ನಂಬರ್ನಿಂದ ಕಾಲ್ ಬಂತು , ನನಗೇನು ಗೊತ್ತು ಅದು ನಮ್ಮ ಮೇಡಂ ದು ಎಂದು ನಾನು ಮಾತಾಡಿದೆ , ಅಲ್ಲಿಗೆ ಎಲ್ಲ ಬಯಲಾಗಿತ್ತು ನಾನು ವಿಲನ್ ಆಗಿದ್ದೆ.

ಚೇತನ್ ಗೆ ಕಾಲ್ ಮಾಡಿದೆ, ಯಾರೋ ಹುಡುಗಿ ಫೋನ್ ಮಾಡಿತ್ತು ಅಂತ, "ಅದು ರಕ್ಷಿತಾ ಮೇಡಂ ಪರವಾಗಿಲ್ಲ ಬಿಡು text ಮಾಡು ಮಾತಾಡು ಅಂದ" , ನಾನು ಏನು text ಮಾಡಿದೆ ಎಂದು ನೆನಪಿಲ್ಲ ಬಹುಶಃ ನಾವು ಅಂತ ಗೊತ್ತಾದರು ನಾವು ಅಲ್ಲ ಅಂತ prove ಮಾಡೋಕೆ ಏನೋ ಹೇಳಿರಬೇಕು (ನಾನು ಮಾಡಿದ ದೊಡ್ಡ ತಪ್ಪು ಅದೇ , ಇದ್ದದ್ದು ಇದ್ದ ಹಾಗೆ ಹೇಳಿದ್ದರೆ ನಾನು ಬಚಾವ್ ಆಗುತಿದ್ದೆ, ಬಹುಷಃ ನಾನು ಇದರ ಜೊತೆ ಸಿಕ್ಕಿ ಹಾಕಿಕೊಂಡಿದ್ದರಿಂದ ಇರಬೇಕು ಚೇತನ್ ಸ್ವಲ್ಪ ಮಟ್ಟಿಗೆ ಪಾರಾದದ್ದು !! ಇಲ್ಲದಿದ್ದರೆ ಆತನ ಕಾಲೇಜ್ ದಿನಗಳು ಅಲ್ಲಿಗೆ ಮುಗಿಯುತಿದ್ದವೋ ಏನೋ ಯಾಕೆಂದರೆ ಎಲ್ಲರಿಗು ಒಂದು ಕಣ್ಣಿತ್ತು ಅವನ ಮೇಲೆ ).

ಮರುದಿನದ  ಕಾಲೇಜು ನನ್ನ ಪಾಲಿನ ಕರಾಳ ದಿನ. ಈಗ ಕ್ಲಾಸ್ ಅಲ್ಲಿ ಎಲ್ಲರಿಗು ವಿಷಯ ತಿಳಿದಿದೆ ಇತರ ಮೇಡಂಗಳು ಅದೇನೋ ಸಂಶಯಾಸ್ಪದವಾಗಿ ನೋಡುತಿದ್ದರು. ಫಿಸಿಕ್ಸ್ ನ ಹಿರಿಯ ಅಧ್ಯಾಪಕಿಯಾದ ಶಾಲಿನಿ ಮೇಡಂ (ಹೆಸರು ಬದಲಾಯಿಸಲಾಗಿದೆ),  ನನ್ನನ್ನು ಮತ್ತು ಚೇತನ್ ನ  ಡಿಪಾರ್ಟ್ಮೆಂಟ್ ಗೆ ಕರೆದರು. ಅಲ್ಲಿ ಏನಾಯಿತು ಎನ್ನುದು ನಿಮ್ಮ ಊಹೆಗೆ ಬಿಟ್ಟದ್ದು , ಕಡೆಗೂ sorry ಹೇಳಿ ತಪ್ಪು ಒಪ್ಪಿಕೊಂಡದ್ದಾಯಿತು. ಮಾಡದ ತಪ್ಪಿಗೆ ನಾನು ಬಲಿಪಶುವಾಗಿದ್ದೆ,


Sometime legends makes mistake: 

ಆ ಮಾತು ಇನ್ನು ನೆನಪಿದೆ, ಮೊದಲೇ ಹೇಳಿದಂತೆ ಕತೆ, ಕವಿತೆ, NCC,NSS ಅಂತ ಎಲ್ಲರ ಜೊತೆ ಬೆರೆತು ಒಳ್ಳೆ ಹುಡುಗ ಅಂತ ಹೆಸರು ಮಾಡಿದ್ದ ನಾನು ಖಳನಾಯಕನಾಗಿದ್ದೆ, ಕಾಲೇಜು ದಿನಗಳು ಮುಗಿಯುತ್ತಿತ್ತು ಒಂದಷ್ಟು ಕ್ಲಾಸ್ ಮತ್ತು ಲ್ಯಾಬ್ ಬಾಕಿ ಇತ್ತು. ನನ್ನನ್ನು ಅತೀ ಹೆಚ್ಚು ಇಷ್ಟಪಡುತಿದ್ದಕೆಮಿಸ್ಟ್ರಿ HOD ಗೋವಿಂದಪ್ಪ ಸರ್ ಅವರ ಕೊನೆಯ ಕ್ಲಾಸ್ ನಡೆದಿತ್ತು ಕೊನೆಗೆ ಅದೇನೋ ಹೇಳಿ ಬೋರ್ಡು ಕಡೆ ತಿರುಗಿ " Sometime Legends Makes Mistake "  ಅಂದರು. ಎಲ್ಲ ಕ್ಲಾಸ್ ನ ಆಚೆ ನಡೆದರೆ ನಾನಿನ್ನು ಕ್ಲಾಸಿನಲ್ಲೇ ಇದ್ದೆ, ಕಣ್ಣ ಹನಿಗಳು ಕೆನ್ನೆಯಿಂದ ಜಾರುತಿದ್ದವು . lifeನಲ್ಲಿ ಅತ್ತ ಕೆಲವೇ ಬೆರಳೆಣಿಕೆಯ ಕ್ಷಣಗಳಲ್ಲಿ ಅದೊ ಒಂದು.

ಅವರು ಕರೆದು ಎರಡು ಪೆಟ್ಟು ಕೊಟ್ಟು , ಬೈದು ಕಳುಹಿಸುತಿದ್ದರೂ ಅಷ್ಟೊಂದು ನೋವು ಆಗುತ್ತಿರಲಿಲ್ಲವೋ ಏನೋ, ಎದೆಯೊಳಗೊಂದು ಅಚ್ಚಳಿಯದ ನೋವಿನ ಗೆರೆ ಹಾಗೆ ಜೋರಾಗಿ ಬಿದ್ದಿತ್ತು.

ಮೇಲಿನ ಘಟನೆಯ ಪರಿಣಾಮಗಳು ಹಲವು ,

ರಕ್ಷಿತಾ ಮೇಡಂ ಲ್ಯಾಬ್ ಎಕ್ಸಾಮ್ನಲ್ಲಿ ಕಡಿಮೆ ಮಾರ್ಕ್ ಕೊಟ್ಟು ಸೇಡು ತೀರಿಸಿಕೊಂಡಿದ್ದರು, ಅದರಿಂದಾಗಿ ಒಂದು ಮಾರ್ಕ್ ಅಂತರದಲ್ಲಿ ಯೂನಿವರ್ಸಿಟಿ free ಸೀಟ್ ಸಿಗಲಿಲ್ಲ, ಇಷ್ಟಪಟ್ಟು ಮಾಡುತಿದ್ದ NCC ಅರ್ಧಕ್ಕೆ ನಿಂತಿತು, ಎಲ್ಲಕ್ಕಿಂತ ಜಾಸ್ತಿ ಮೂರು ವರುಷ ಗಳಿಸಿದ್ದ  ನಂಬಿಕೆಯನ್ನು ಕಳೆದುಕೊಂಡಿದ್ದೆ. ಕಾಲೇಜ್ ದಿನದ ನೆನಪುಗಳಿಗೊಂದು ಸಣ್ಣ ಕಪ್ಪು ಚುಕ್ಕೆ ಹಾಗೇ ಅಂಟಿ ಕೊಂಡಿತ್ತು.


ಇಂಟರ್ನಲ್ ಮಾರ್ಕ್ಸ್ ನ ಹಗರಣ :

ಆಗಷ್ಟೇ ಕಾಲೇಜು ಲೈಬ್ರರಿ ಗೆ ಜೆರಾಕ್ಸ್ ಮಾಡಿಸಲು ಒಬ್ಬರು ಸೇರಿಕೊಂಡಿದ್ದರು , ಅವರು ನಮ್ಮ ಊರಿನವರೆ, ನನಗೆ ಗೊತ್ತಿರುವವರು. ಈ ಮಹಿಳಾ ಅಧ್ಯಾಪಕಿಯರು ಮತ್ತು ಇತರ ಅಧ್ಯಾಪಕರು ಪ್ರಶ್ನೆ ಪತ್ರಿಕೆ ಅಲ್ಲಿ ಜೆರಾಕ್ಸ್ ಮಾಡಲು ಕೊಟ್ಟರೆ, ಒಂದು ಪ್ರತಿ ಮೊದಲೇ ನಮಗೆ ತಲುಪುತಿತ್ತು. ನಿಜವಾಗಿ ಹೇಳಬೇಕು ಅಂದರೆ ಈ ಉಪಾಯ ಮೊದಲು ಹೊಳೆದಿರಲಿಲ್ಲ , ಕಡೆಯ ಕೆಲವು ಇಂಟರ್ನಲ್ examಗಳಿಗಂತೂ ತುಂಬಾನೇ ಅನುಕೂಲವಾಗಿತ್ತು ಯಾಕೆಂದರೆ ಮಹಿಳಾಮಣಿಗಳು ಸೇಡು ತೀರಿಸಿಕೊಳ್ಳಲು ಅತೀ ಕಷ್ಟದ ಪ್ರಶ್ನೆಗಳ ಹಣೆಯುತ್ತಿದ್ದರು .


ಕಡೆಯದಾಗಿ:

ಇಷ್ಟೆಲ್ಲ ಬರೆದದ್ದು ನಾನು ಮಾಡಿದ್ದು ಸರಿ ಅಥವಾ ಇನ್ನಾರೋ ಮಾಡಿದ್ದು ತಪ್ಪು ಎಂದು ಸಾರುವುದಕ್ಕಲ್ಲ, ಈವಾಗ ಒಮ್ಮೆ ಹಿಂತಿರುಗಿ ಆ ಘಟನೆಗಳ ನೋಡಿದರೆ  ಅವರವರ ದೃಷ್ಟಿಯಲ್ಲಿ ಎಲ್ಲವೂ ಸರಿ ಮತ್ತು ಎಲ್ಲವೂ ತಪ್ಪು  ಎಲ್ಲವು ಬದಲಾಗುತ್ತದೆ. ಬದುಕಿನ ಯಾವುದೋ ಕಹಿ ಘಟನೆ ಸ್ವಾರಸ್ಯಕ ಕತೆಯಾಗುತ್ತದೆ ಮತ್ತು ಸಣ್ಣ  ನಗು ಮೂಡಿಸುತ್ತದೆ.
ತಪ್ಪು ಯಾರದೇ ಇರಲಿ ಅದರಲ್ಲಿ ನನ್ನ ಪಾತ್ರವು ಇತ್ತು, ಒಪ್ಪಿಕೊಳ್ಳಬೇಕಾದದ್ದೆ. ಕ್ಷಮೆ ಇರಲಿ.... 



----------------------------------------------------------------------------ಸುಕೇಶ್  

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...