Saturday, August 25, 2018

ಮೂಷಿಕ ಪುರಾಣ


"ಇದೇನಿದು.... ? , ಗರುಡ ಪುರಾಣ, ಸ್ಕಂದ ಪುರಾಣ ಮತ್ತಿತರ ಪುರಾಣಗಳ ನಡುವೆ ಈ ಮೂಷಿಕ ಪುರಾಣ . ಹೌದು ಇತ್ತೀಚೆಗೆ ಆಫೀಸ್ನಲ್ಲಿ ಇಲಿಗಳ ಹಾವಳಿ ಜಾಸ್ತಿಯಾಗಿದೆ . ಅವುಗಳು ತಮ್ಮ ರಾಜಧಾನಿಯನ್ನು ನನ್ನ ಆಫೀಸ್ ನ  ಫಾಲ್ ಸೀಲಿಂಗ್ ನ ಒಳಗಡೆ ಕಟ್ಟಿ ಬಹಳ ದಿನಗಳಾಗಿವೆ .  ನಾನು ಆಫೀಸ್ ಬಿಡುವಾಗ ರಾತ್ರಿ ಒಂಬತ್ತು ಘಂಟೆಯಾಗುತ್ತದೆ, (ಕೆಲಸದ ಒತ್ತಡವಲ್ಲ ,ಬೆಳಿಗ್ಗೆ ಲೇಟ್ ಹೋಗುವ ಕಾರಣ  ಅಷ್ಟೇ ) ಸಹೋದ್ಯೋಗಿಗಳೆಲ್ಲ ಸಂಜೆಯಾಗುತ್ತಿದ್ದಂತೆ ಮನೆಗೆ ಹೋದರೆ ಈ ಇಲಿಗಳೇ ನನ್ನ ಒಂದಷ್ಟು ಹೊತ್ತಿನ ಸಂಗಾತಿಗಳು.ಅವೂ ಅಷ್ಟೇ ಎಲ್ಲರು ಹೋದಾಗಲೆ ಆಚೆ ಬರುತ್ತವೆ. ನಾನು ಸಂಜೆ ಉಳಿದ ಒಂದೆರಡು ಸ್ನಾಕ್ಸ್ ಮತ್ತು ಬಾಳೆಹಣ್ಣು ಇಟ್ಟು ಅವುಗಳ ಹೊಟ್ಟೆ ತುಂಬಿಸುದು ಸುಳ್ಳಲ್ಲ.

ಗೆಳೆಯನೊಬ್ಬ ಹೇಳುತಿದ್ದ ಈ ಇಲಿಗಳ ಕಾಟ ಯಾಕೋ ಜಾಸ್ತಿಯಾಗುತ್ತಿದೆ , EHS ಗೆ ಹಿಡಿಯಲು ಹೇಳಬೇಕು .ಇಲಿಗಳು ನಮಗೆ ಕಾಟ ಕೊಡುವುದೇ ಅಥವ ನಾವು ಇಲಿಗಳಿಗೆ ಕಾಟ ಕೊಡುವುದೇ .. . . ?
ಇದೇ ಆಫೀಸಿನ ಜಾಗದಲ್ಲಿ , ಇವೇ ಇಲಿಗಳ ತಾತ ಮುತ್ತಾತಂದಿರು ಬಿಲಗಳ ಮಾಡಿ ವರುಷಾನುಗಟ್ಟಲೆ ಬದುಕಿರಬಹುದು ಆದರೆ ನಾವು ಬಂದು ಅದೆಲ್ಲವ ನೆಲಸಮ ಮಾಡಿ ಬಹು ಅಂತಸ್ತಿನ ಕಟ್ಟಡಗಳ ಕಟ್ಟಿದ್ದಾಯಿತು, ಪಾಪ ಇಲಿಗಳು ಎಲ್ಲಿಗೆ ಹೋಗಬೇಕು , ಅವುಗಳಿಗು ಇರಲೊಂದು ಜಾಗ ಬೇಕು ತಾನೇ . ಈ ಭೂಮಿಯಲ್ಲಿ ಎಲ್ಲರಿಗು ಹಕ್ಕಿದೆ ಆದರೆ ಹಕ್ಕು ಕೇಳಲು ಇಲಿ ಕೋರ್ಟ್ ಗೆ ಹೋಗಲಾದೀತೇ ? ಅದಕ್ಕೆ ಇರಬೇಕು ಅದು ಮತ್ತೆ ಅದೇ ಕಟ್ಟಡದೊಳಗೆ ಬಿಡಾರ ಹೂಡಿದ್ದು ಸೇಡು ತೀರಿಸಿಕೊಳ್ಳಲು .

ಇಲಿಗೇನು ಗೊತ್ತು ಇದು ಶ್ರೀಯುತರ ಕಟ್ಟಡವೆಂದು . ಅದು ಬಹುಶ ಯೋಚಿಸರಬಹುದು ವಂಶಪಾರಂಪರ್ಯವಾಗಿ ಬಂದ ಬಿಲಗಳು ನೆಲಸಮವಾದುದಕ್ಕೆ ಯಾರೋ ಪರಿಹಾರವಾಗಿ ಮೂರು ಅಂತಸ್ತಿನ ಕಟ್ಟಡದೊಳಗೆ  ಜಾಗ ಕೊಟ್ಟಿದ್ದಾರೆಂದು !!.

ಇಲಿಗಳ ಬದುಕು ತುಂಬಾ ಸುಂದರವಾದದ್ದು. ಇರಲೊಂದು ಸೂರು ಮತ್ತು ಹೊಟ್ಟೆಗೊಂದಿಷ್ಟು ಆಹಾರ ಬಿದ್ದರೆ ಸಾಕು ಅಷ್ಟೇ ವಂಶಾಭಿವೃದ್ದಿ ಮಾಡಿಕೊಂಡು ನೆಮ್ಮದಿಯಾಗಿರುತ್ತವೆ . ಅದೇ ಮನುಷ್ಯನಿಗೆ . . . . . !! ಎಷ್ಟು ಇದ್ದರು ಸಾಲದು ಎಲ್ಲವು ಬೇಕು , ಎಲ್ಲ ಇದ್ದರೆ ಇನ್ನೂ ಏನೋ ಬೇಕು ಅದು ಏನು ಎನ್ನುದು ತಿಳಿಯದೆ, ಇರುವುದನ್ನು ಅನುಭವಿಸದೆ ಕೊರಗುತ್ತಾನೆ . ಇಲಿಗೆ ಒಂದೇ ವಸ್ತುವಿನ ;ಮೇಲೆ ಮೋಹ ಅಥವಾ ಆಸೆ ಅದು ಆಹಾರ ( ಇಲಿಯ ವೀಕ್ನೆಸ್ ), ಅದನ್ನೇ ಆಯುಧವಾಗಿ ಹಿಡಿದುಕೊಂಡು ನಾವು ಅದನ್ನುಆ ಮೋಹಜಾಲದಲ್ಲಿ ಬೀಳಿಸಿ  ಕೊಲ್ಲಲು , ಹಿಡಿಯಲು ಪ್ರಯತ್ನಿಸುತ್ತವೆ , ಆಹಾರಕ್ಕೆ ವಿಷಹಾಕಿಯೊ ಅಥವಾ ಆಹಾರವನ್ನು ಬೋನಿನ ಒಳಗೆ ಇಟ್ಟು ಹಿಡಿಯುದು ಸಾಮಾನ್ಯ . ಇಲಿಗೇನೋ ಒಂದೇ ವೀಕ್ನೆಸ್ ಆದರೆ ಮನುಷ್ಯನಿಗೆ ?!!!, ಹೆಣ್ಣು, ಹೊನ್ನು,ಮಣ್ಣು ಇನ್ನು ಏನೇನೋ ವ್ಯಾಮೋಹ ಇವಕ್ಕೆ ಬಲಿಯಾಗಿ ಎಷ್ಟೊಂದು ಜನ ಬೋನಿನೊಳಗೆ  ವಿಲಿ ವಿಲಿ ಒದ್ದಾಡಿದ್ದು ನೋಡಿಲ್ಲ .

ಡಿ .ವಿ .ಜಿ  ಅವರು ತಮ್ಮ ಒಂದು ಕಗ್ಗದಲ್ಲಿ ಹೀಗೆ ಬರೆದಿದ್ದಾರೆ .

ದನ ಸಿಂಗ ಹುಲಿ ಹಕ್ಕಿ ಹಾವು ಮೀನ್ ಗಳಿಗೆಲ್ಲ।
ಇನಿಸುಣಿಸು ,ಬೆದೆ ಬೇಡರು -ಅಷ್ಟೆ ಜೀವಿತವು।।
ಮನುಜನೆಂತನಿತರಿಂ ತೃಪ್ತಿವಡೆವನವಂಗೆ।
ಕ್ಷಣಕ್ಷಣವು ಹೊಸ ಹಸಿವು -ಮಂಕುತಿಮ್ಮ ।।

ದನ,ಸಿಂಹ, ಹುಲಿ, ಹಕ್ಕಿ, ಹಾವು, ಮೀನು ಮಂತಾದ ಪ್ರಾಣಿಗಳಿಗೆ ಹಸಿವಾದಾಗ ಆಹಾರ, ಸಂತಾನಾಭಿವೃದ್ಧಿ ಮತ್ತು ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೆ ಪೂರಕವಾದ ಅವಶ್ಯಕತೆಗಳನ್ನು ಬಿಟ್ಟರೆ ಬೇರಾವ ಆಸೆಗಳೂ ಇರದು ಮತ್ತು ಅವುಗಳ ಜೀವಿತವು ಅಷ್ಟಕ್ಕೇ ಸೀಮಿತವು. ಆದರೆ ಕೋಟ್ಯಂತರ ಆಸೆ ಆಕಾಂಕ್ಷೆಗಳ ಆಗರವೇ ಆದ ಮನುಷ್ಯ ಎಂದಿಗೂ ತೃಪ್ತನಾಗುವುದೇ ಇಲ್ಲ. ಕ್ಷಣ ಕ್ಷಣವೂ ಅವನ ಆಸೆಗಳ ಹಸಿವು ಅಧಿಕವಾಗುತ್ತಲೇ ಇರುತ್ತದೆ ಮತ್ತು ಅದಕ್ಕೆ ಕೊನೆಯಿಲ್ಲ . 

ಮನುಷ್ಯನಷ್ಟು ಸ್ವಾರ್ಥಿ ಪ್ರಾಣಿ ಇನ್ನೊಂದಿಲ್ಲ. ಮನುಷ್ಯ ಯಾವತ್ತು ಈ ಕ್ಷಣದಲ್ಲಿ ಬದುಕುದಿಲ್ಲ, ಅವನ ಮನಸ್ಸು ಯಾವಾಗಲು ಆಗಿಹೋದ ನಿನ್ನೆ ಬಗ್ಗೆಯೋ ಅಥವ ಬರುವ ನಾಳೆಯ  ಬಗ್ಗೆಯೋ ಯೋಚಿಸುತ್ತಿರುತ್ತದೆ. ಮನುಷ್ಯ ಈ ಕ್ಷಣವನ್ನು ನಿನ್ನೆಯೇ ಕಳೆದಿರುತ್ತಾನೆ ಅಥವಾ ನಾಳೆ ಯೋಚಿಸಿ ಕಳೆಯುತ್ತಾನೆ."ಇಂದು" ಎಂಬುವುದು ಬರೀ ಕೆಲವೊಂದು ಫೋಟೋಗಳಲ್ಲಿ ಅಷ್ಟೇ ಇರುತ್ತದೆ. ಮನುಷ್ಯ ತನಗಾಗಿ ಮತ್ತು ತನ್ನವರಿಗಾಗಿ ಬದುಕುತ್ತಾನೆ. ನಾಳೆಗಾಗಿ, ತಮ್ಮವರಿಗಾಗಿ ಶೇಖರಿಸುವ ಬುದ್ದಿ ಇರುವುದು ಮನುಷ್ಯನಿಗೆ ಮಾತ್ರ, ಬೇರೆ ಯಾವ ಪ್ರಾಣಿಯು ಹೊಟ್ಟೆ ತುಂಬಿದ ಮೇಲೂ ನಾಳೆಗಾಗಿ ಅಥವಾ ಮೋಜಿಗಾಗಿ ಬೇಟೆಯಾಡುದಿಲ್ಲ.ಹುಲಿ ಜಿಂಕೆಗಳ ಹಿಂಡಿಗೆ ದಾಳಿ ಮಾಡಿದರೆ ಒಂದು ಜಿಂಕೆಯನ್ನು ಹಿಡಿದೀತು ಅದೇ ಮನುಷ್ಯನಾದರೆ ಅವನಿಗೆ ಎಲ್ಲವು ಬೇಕು , ಇಡೀ ಹಿಂಡೇ ಬೇಕು ಅದು ಸಾಲದೆ ಪಕ್ಕದ ಕಾಡಿನ ಪ್ರಾಣಿಗಳು ಬೇಕಾದೀತು !!.

ಕಾಡು ಬಿಟ್ಟು ಮನೆಗೆ, ಊರಿಗೆ ದಾಳಿಮಾಡುದು ಬರೀ ಇಲಿಗಳಿಗಷ್ಟೇ ಸೀಮಿತವಾದುದಲ್ಲ. ದಿನಪತ್ರಿಕೆಗಳಲ್ಲಿ ನೀವೂ ಓದಿರಬಹುದು , ಚಿರತೆ, ಕಾಡಾನೆ ಮುಂತಾದ ಕಾಡನ್ನೇ ನಂಬಿ ಬದುಕುವ ಪ್ರಾಣಿಗಳು ಕಾಡು ನಾಶವಾದಾಗ  ಆಹಾರ ಹುಡುಕಿಕೊಂಡು ನಾಡಿನ ಕಡೆಗೆ ಬರುತ್ತವೆ. ಈ ಕಾಡುಗಳನ್ನೆಲ್ಲ ನಾಶಮಾಡಿ ,ನಮ್ಮ ಊರಿನ ವಿಸ್ತಾರ ಹೆಚ್ಚಿಸಿ ಇಂತಹ ಪರಿಸ್ಥಿತಿ ಸೃಷ್ಟಿಮಾಡಿದವರು ನಾವೇ ತಾನೇ. ಕಾಡಿನ ಮೇಲೆ , ಪೃಕೃತಿಯ ಮೇಲೆ ಹಸ್ತಕ್ಷೇಪ ಮಾಡಿರುವುದರಿಂದಲೇ ಇಂದು ವನ್ಯ ಜೀವಿಗಳು ನಾಡಿನೆಡೆಗೆ ಬರುವಂತಾದುದು. ಅವು ನಾಡಿಗೆ ಬಂದದ್ದಲ್ಲ ನಾವು ಕಾಡಿಗೆ ಹೋದದ್ದು, ಅವುಗಳ ಮನೆಯನ್ನು ದೋಚಿದ್ದು. ಪಾಪ ಅವುಗಳು ಇನ್ನೆಲ್ಲಿಗೆ ಹೋಗಬೇಕು??!!.

 "ಬದುಕುದು ಎಲ್ಲ ಜೀವಿಗಳ ಹಕ್ಕು".

ನಮ್ಮ ಪೂರ್ವಜರು, ಇಲಿ, ಹಾವು, ಹುಲಿ ಮುಂತಾದ ಪ್ರಾಣಿಗಳನ್ನು ದೇವರುಗಳ ಜೊತೆ ಕೂರಿಸಿ ಪೂಜೆಮಾಡುತಿದ್ದದು ಇದೇ ಕಾರಣಕ್ಕೆ . ಅವುಗಳಿಗು ತಮ್ಮ ತಮ್ಮ ಸ್ಥಾನ ಸಿಗಲಿ ಎಂದು , ಸ್ವಲ್ಪ ಭಯ ಭಕ್ತಿ ಇರಲಿ ಎಂದು.ಆನೆ ,ಇಲಿ,ಸಿಂಹ ,ಹಾವು,ಚಿರತೆ ,ಮುಂತಾದವು ಎಲ್ಲವು ದೇವರ ವಾಹನ , ಆದರೆ ಮನುಷ್ಯ ಮಾತ್ರ ಯಾವ ದೇವರ ವಾಹನ ಆಗದಿರುವುದು ವಿಪಾರ್ಯಾಸ!!.ಇತರ ಪ್ರಾಣಿಗಳಿಗಿರುವ ಆ ವಿಶೇಷ ಸ್ಥಾನ ಈ ಬಡಪಾಯಿ ಮನುಷ್ಯನಿಗಿಲ್ಲ. ಎಂತಹ  ನಾಚಿಕೆ. ಆದರು ಮನುಷ್ಯ ಮಾತ್ರ ಶ್ರೇಷ್ಠ ಪ್ರಾಣಿ .

ಮೊನ್ನೆ ಮೊನ್ನೆ ನಮ್ಮ ಊರಿನಲ್ಲಿ ಒಂದು ಗುಡ್ಡವನ್ನೇ ಕಡಿದು ನೆಲಸಮ ಮಾಡಿದರು, ಆದರೆ  ಅಲ್ಲೇ ಒಂದಷ್ಟು ಜಾಗ ಹಾಗೇ ಬಿಟ್ಟಿದ್ದವು, ದಪ್ಪ ದಪ್ಪದ ಮೂರು -ನಾಲ್ಕು ಮರಗಳು ಇತರ ತಮ್ಮವರನ್ನು ಕಳೆದುಕೊಂಡು ಹಾಗೇ ನಿಂತಿದ್ದವು ,ಮಾರಣಹೋಮಕ್ಕೆ ಸಾಕ್ಷಿಯಾಗಿ. ಅಲ್ಲೇ ಇದ್ದ ಯಾರನ್ನೋ ಕೇಳಿದೆ " ಆ ನಾಲ್ಕು ಮರಗಳನ್ನು ಯಾಕೆ ಬಿಟ್ಟದ್ದು ?" " ಅಲ್ಲಿ ನಾಗನ ಬನವಿದ" ಕಾನೂನಿಂದ ತಡೆಯಲಾಗದ್ದು ಒಂದು ನಂಬಿಕೆ ಮತ್ತು ಅದಕ್ಕೆ ಪ್ರತೀಕವಾದ ಒಂದು ಕಲ್ಲು ಆ ಮರಗಳನ್ನು ರಕ್ಷಿಸಿತ್ತು.

ಇನ್ನೇನೋ ವಿನಾಯಕ ಚತುರ್ಥಿ ಬರಿತ್ತಿದೆ . ಗಣಪನ ಜೊತೆಗೆ  ಇಲಿಯ  ಮೂರ್ತಿಗೂ  ಪಂಚಕಜ್ಜಾಯ, ಲಡ್ಡು ಇಟ್ಟು ಪೂಜೆ ಮಾಡುತ್ತಾರೆ. ಅದೇ ಜನ ಪೂಜೆ ಮುಗಿದು ಗಣಪತಿಯ ಆಚೆ ನೀರಿಗೆ ತಳ್ಳಿದಮೇಲೆ ,ಕಜ್ಜಾಯ ತಿನ್ನಲು ಇಲಿ ಬಂದರೆ ಹೊಡೆದು ಸಾಯಿಸುತ್ತಾರೆ . ಈ ಭಕ್ತಿಯೆಲ್ಲ ಬರೀ ಸಂಪ್ರದಾಯ ಮತ್ತು ತೋರಿಕೆಯ ಆಚರಣೆಯಷ್ಟೇಯಾಗಿ ಉಳಿದಿದೆ, ನಿಜ ಜೀವನದಲ್ಲಿ ಅದನ್ನು ಆಚರಿಸುವವರು ಕಡಿಮೆ. ಹೀಗೆ ಮುಂದುವರಿದರೆ ಎಷ್ಟೋ ಪ್ರಾಣಿಗಳು , ಕ್ರಿಮಿ ಕೀಟಗಳು ಈ ಭೂಮಿಯಿಂದ ಕಣ್ಮರೆಯಾದಾವು ಆಗ ನಾವು ದೇವರುಗಳಿಗೆ ಇಲೆಕ್ಟ್ರಾನಿಕ್ ವಾಹನಗಳ ನೀಡಬೇಕಾದೀತು.



--------------------------------------------------------------------ಸುಕೇಶ್ ಪೂಜಾರಿ



ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...