Sunday, September 13, 2015

ಸ್ವಗತ


ಊರ ದಾರಿಯ ಮತ್ತದೆ ತಿರುವು
ಅದೇ ದಿಬ್ಬ
ನೆನಪು ಊರಿನಾಚೆ ನಡೆವ
ಮಾರಿಹಬ್ಬ!!!

ಸವೆದ ಚಪ್ಪಲಿಯ
ಸವೆದ ಸದ್ದು
ಖಾಲಿ ಮನಸ್ಸು
ಎಲ್ಲೆಲ್ಲೊ ಹಾರುವ ಒಂಟಿ ಹದ್ದು!

ತಿರುಗಿ ತಿರುಗಿ ಮತ್ತಲ್ಲೇ
ಬಂದು ನಿಂತ ಬದುಕು
ದಾರಿಯಲ್ಲಿ,ಸಿಕ್ಕಿದಲ್ಲೆಲ್ಲ
ತುಂಬಿ ಕೊಂಡ  ನೆನಪುಗಳ ಸರಕು!

ಕಳೆದು ಕೊಂಡದ್ದೆಲ್ಲೋ
ಹುಡುಕಿದ್ದೆಲ್ಲೋ,
ರಾತ್ರಿ ಕಂಡ ಕನಸಿಗೆ
ಹಗಲು ಅರ್ಥ ಹುಡುಕುದರೊಳಗೆ
ಮೇಲೆ ಚಂದ್ರ ಬಂದಿದ್ದ!!

ಹೊದ್ದು ಮಲಗುವ ಸಮಯ,
ಸದ್ದು ಮಾಡುವ ಗಡಿಯಾರ
ಸುದ್ದಿ ಓದುವ ಹೃದಯ
ಕದ್ದು ಕೇಳುವ ಮನಸು,
ನಿದ್ದೆ ಜಾರಿದೆ ಕನಸು!!!

ಸುಕೇಶ್ 

Tuesday, July 14, 2015

ಹರೆಯದಲ್ಲಿ

ಹರೆಯದಲ್ಲಿ ಮನಸ್ಸು
ಜಮ್ಮು ಕಾಶ್ಮೀರ,
ಯಾರು ಯಾವಾಗ ಎದೆಯ
ಪರಿದಿಗೆ ಬಂದು
ದಾಳಿ ಇಡುತ್ತಾರೆಂದು ಗೊತ್ತಿಲ್ಲ.

ಸಿಡಿವ ಫಿರಂಗಿ ಹೊಗೆಯ
ಕಮಟು ವಾಸನೆ, ಈ ಯೋಚನೆ
ಟ್ಯಾಂಕರುಗಳಂತೆ ಢವಗುಟ್ಟುವ ಎದೆ!!
ಅತ್ತಿತ್ತ ಕದಲುವ ಸೈನಿಕರಂತೆ
ಈ ಕಂಗಳ ಹುಡುಕಾಟ!!

ಸತ್ತು ಬಿದ್ದ ಕಂಡ ಕನಸುಗಳ
ರಾಶಿ ರಾಶಿ ಹೆಣ,
ಹುತಾತ್ಮರಾದವುಗಳು ಹಲವು,
ಮಹಾತ್ಮರಾದವುಗಳು ಕೆಲವು!!!
ಕಟ್ಟಿಟ್ಟ ಸ್ಮಾರಕಗಳು ಇತಿಹಾಸ ಹೇಳುತ್ತಿವೆ.



Tuesday, June 16, 2015

ದಾರಿ

ಗುರಿ ಮರೆತ ದಾರಿ
ನಡೆದರೆಸ್ಟು,ಬಿಟ್ಟರೆಸ್ಟು
ವಿರಾಮಿಸಿದ ನಿಮಿಷಗಳು
ನಕ್ಕಾಗಲೇ ಅರಿವಾಗಲಿಲ್ಲ ಯಾಕೆ,
ಗುರಿಯೆಡೆಗೆ ದಾರಿ
ಹುಡುಕ ಬೇಕಿತ್ತೆಂದು.

ಕಲ್ಲು, ಮುಳ್ಳು, ತಿರುವುಗಳಿಗೆ ಹೆದರಿ
ಸಣ್ಣ ದಾರಿ
ಹಿಡಿಯಲಿಲ್ಲ ಕಾಲು.
ದಾರಿದೀಪ ರಥ ಬೀದಿಗಳಲ್ಲಿ
ನಡೆಯಲು ನಾಚುತಿತ್ತು ಬರಿಗಾಲು.
ಕನವರಿಕೆ ಬೆಂಬಿಡದ ಭೂತ!!!

ದೂರದಾಚೆಯ ರಸ್ತೆ ನಡೆದರೆ,
ಮುಳ್ಳುಗಳಿಲ್ಲದ  ಹೋವು,
ವಿಷಗಳಿಲ್ಲದ ಹಾವು,
ಕಣ್ಣೀರು ಬರದ ನೊವು.
ಆದರೆ ನಡೆಯುದು ಹೇಗೆ?
ಅಂಧ ಮನಸ್ಸು,ಅರ್ಧ ಕನಸು,
ಸಮಯದ ಜೊತೆ ಓಡಲು ಒಲ್ಲದ ವಯಸ್ಸು!!!

ಮೌನದೊಳಗಿನ ಮನಸು
ಪಿಸುಗುಟ್ಟಿದೆ
ಮತ್ತೊಂದು ದಾರಿ ಹುಡುಕಲು,
ಮತ್ತೆ ಹೆಜ್ಜೆ ಹಾಕುತ್ತಿದ್ದೇನೆ
ನನ್ನ ಸದ್ದು ಬರೀ ನನಗೆ ಕೇಳುವಂತೆ!!

ಸುಕೇಶ್ 


Thursday, June 11, 2015

ಹನಿ ಕವಿತೆ

ದುರಂತ 
ಕೆಲವೊಮ್ಮೆ ನಮಗೆ
ಸ್ವಾತಂತ್ರ್ಯ ಸಿಕ್ಕಿದೆ
ಎಂದು ಗೊತ್ತಾಗುದು
ನಡು ಬೀದಿಯಲ್ಲಿ ಕೊಲೆಗಳು ನಡೆದಾಗಲೇ!!!


                                             
                                       

                                          ಮಳೆ
                                    ಜೋಪಾನವಾಗಿ
                                    ಬಚ್ಚಿಟ್ಟ ಮುತ್ತಿನ
                                     ಮಳೆ ಹನಿಗಳನ್ನು
                             ಮುಗಿಲು ಮರೆತು ಚೆಲ್ಲಿ ಬಿಟ್ಟಿತು .!!

                                             
                                              ವ್ಯತ್ಯಾಸ 
                                  ಒಂದೊಂದೇ ಮೆಟ್ಟಿಲು ಏರಿದರೆ
                                               ಸುಲಭ ಈ ದಾರಿ !
                                    ಒಂದು ಬಿಟ್ಟು ಒಂದು ಏರ ಹೋದರೆ
                                            ಬೀಳಬಹುದು ನೀ ಜಾರಿ !!


ಮೌನ 
ಅವರಿಗೇನು ಗೊತ್ತು
ನಮ್ಮ ಮೌನಗಳಿಗೆ ನೂರಾರು
ಅರ್ಥಗಲಿವೆಂದು!
ಒಂದಾದರು ಅರ್ಥವಾಗಿದ್ದರೆ
ನಾವು ಮಾತಾಡಬಹುದಿತ್ತು !!


                                                     

                                                       ನೆನಪು
                                              ಈ ನೆನಪುಗಳೇ ಹೀಗೆ
                                                  ರಂಗದ ಹಿಂದೆ
                                              ಚಲಿಸುವ ನೆರಳಿನ ಹಾಗೆ.


Thursday, June 4, 2015

ಮೌನಗಳಿಗೇನು ಅರ್ಥ ??

ನೀನೆ ತಾನೆ ಅಂದು,
ಎದೆಯ ಬಾಗಿಲಿಗೆ ಬಂದು
ಪರಿಚಯದ ನಗೆ ನಕ್ಕವಳು,
ಎದೆ ಬೀದಿಗಳಲೆಲ್ಲ
ನಿನ್ನದೇ ಗೋಡೆ ಬರಹ!!

ಎಲ್ಲಗಳ ಜೊತೆ,ಏನೂ ಇಲ್ಲದೆ,
ಬದುಕುವಾಗ ಎಲ್ಲ ನೀನೆ ಆದದ್ದು,
ಎಲ್ಲ ತಿಳಿದಿದೆ.
ಆದರೂ,ಮೌನಗಳಿಗೇಕೆ ನೀನು
ಅಸ್ಟೊಂದು ಅರ್ಥಕೊಟ್ಟೆ.

ನಿನ್ನೆಗಳೊಂದಿನ ನೆನಪುಗಳಿಗಿಂತ
ನಾಳೆಗಳ ಜೊತೆಗಿನ
ಕನಸುಗಳೇ ಜಾಸ್ತಿಯಾಗಿದೆ.
ಹೇಳಿಬಿಡು ಮೆಲ್ಲ,
ಎಲ್ಲ ಮುಗಿವ ಮೊದಲು,
ನಿನ್ನ ಮೌನಗಳಿಗೇನು ಅರ್ಥ ??


ಸುಕೇಶ್ 

Wednesday, May 27, 2015

ಬದುಕು, ಬಣ್ಣ ಮತ್ತು ಕನಸು

ಎದೆಯ ಅಂಟಾರ್ಟಿಕದಲ್ಲಿ
ನೆನಪ ಮಂಜು ಹೆಪ್ಪುಗಟ್ಟಿದೆ
ನಿನ್ನ ಹೆಸರ ಕಾವಿಲ್ಲದೆ.
ಕನಸ ಗೋಪುರದ ಕಮಾನುಗಳು
ಬಣ್ಣ ಕಳೆದುಕೊಂಡಿದೆ
ಕಣ್ಣ ಹನಿಯ ನೋವಿಗೆ.

ನಡೆದ ದಾರಿಯಲ್ಲಿ ಹಿಂದೆ ತಿರುಗಿ
ಮತ್ತೆ ನೋಡುತ್ತೇನೆ,
ತಿರುವುಗಳಾಚೆಯ ಕವಲುಗಳಲ್ಲಿ
ನಿಂತು ಹಾಗೇ ಕಾಯುತ್ತೇನೆ
ನಿನ್ನದೇ ಹೆಜ್ಜೆಗಳ ನಿರೀಕ್ಷೆಯಲ್ಲಿ.

ಒಮ್ಮೆ ನೆನಪಿಸಿಕೊ,ಮೊದಲ ಪಿಸುಮಾತಿಗು,
ಕಡೆಯ ಮೌನದ ನಡುವಿನ ದಿನಗಳ
ಅಚ್ಚರಿಗಳಿಗೆ ಅರ್ಥವಿಲ್ಲ!!!
ಬರೆಯ ಬೇಕೆಂದ ಕವಿತೆಗಳಿಗೆ
ಸಾಲುಗಳಿಲ್ಲ !!

ಮತ್ತೆ ಬಾ, ದೂರದಾಚೆಯ ಊರಿನಲ್ಲಿ
ಕನಸುಗಳಿಗೊಂದಸ್ಟು ಜಾಗವಿದೆಯಂತೆ,
ಬಾಡಿಗೆ ಪಡೆಯೋಣ ,
ಬರೆಯದ ಕವಿತೆಗೊಂದು ಸಾಲು,
ಕನಸ ಗೋಪುರದ ಕಮಾನುಗಳಿಗೊಂದಿಸ್ಟು ಬಣ್ಣ
ಮತ್ತೆ ಹಚ್ಚೋಣ !!!











ಸುಕೇಶ್ 

ಒಂದು ಕವಿತೆ

ನಿನಗೆಂದು ಅರ್ಧ ಬರೆದಿಟ್ಟ ಕವಿತೆ,
ಕೊನೆಯ  ಬೆಳಕಿಗೆ ಉರಿವ ಹಣತೆ
ಆರಿ ಹೋಗುವ ಮುಂಚೆ ಓದಿ ಬಿಡು
ಶಬ್ಧಗಳು ನಿದ್ದೆ ಹೋಗ ಬಹುದು!!

ಸ್ವರಗಳಿಗೆ ವ್ಯಂಜನಗಳನ್ನು ಧೀರ್ಘಗಳ ಜೊತೆ ಸೇರಿಸಿ
ಪದಗಳೆದೆಗೆ  ಅರ್ಥಗಳ ಕೂಡಿಸಿ
ಹಾಡಬೇಕು ಅಂದುಕೊಂಡಾಗಲೇ,
ಗಂಟಲು ಕೆಮ್ಮಿಗೆ ಬಲಿಯಾದದ್ದು.

ಪುಸ್ತಕದ ಮೊದಲ ಪುಟ,
ಕವಿತೆಯ ಮೊದಲ ಪಲ್ಲವಿಯಲ್ಲೇ
ಎಲ್ಲ ಹೇಳಿಬಿಟ್ಟರೆ ಮತ್ತೆ ಓದಲೇನಿದೆ
ತಿರುಗೋ ಪುಟದ ಜೊತೆ ತಿರುಗೋ ಬೆರಳು!!

ಕವಿತೆ ಕೊನೆಗೆ ಇಟ್ಟ  ಬಿಂದು ಮಾತ್ರ ನನ್ನದು
ಅದರ ಆಚೆ,ಈಚೆ,
ಬಹುಶಃ ನಿನ್ನದಿರಬೆಕು!
ಯಾರಿಗೆ ಗೊತ್ತು??
ಕವಿತೆ ಅಮ್ಮ ಎತ್ತಿ ಕೊಟ್ಟ ಕೊನೆಯ ತುತ್ತು.



ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...