Saturday, January 9, 2016

ಹುಡುಕಾಟ


ಚಂದ್ರ ಏನು ಮೋಡದಾಚೆ
ಹುಡುಕುತಿರುವನು!!
ಬಿಳಿ ಮೋಡ, ಕಪ್ಪು ಮೋಡಗಳ
ಹಿಂಡುಗಳ ನಡುವೆ
ಮತ್ತೆ ಮತ್ತೆ ತಿರುಗುತಿರುವನು!!

ಮೊನ್ನೆ ಮೊನ್ನೆ ಹುಡುಕಿ ಹುಡುಕಿ
ತನ್ನನ್ನೇ ಕಳೆದುಕೊಂಡಿದ್ದ.
ನಾ ಹುಡುಕುತಿದ್ದೆ ಅವನ
ಬಾನ ದಾರಿಯ ತಿರುವುಗಳಲ್ಲಿ.
ಕತ್ತಲೆ ಹೊದ್ದು ಮಲಗಿತ್ತು
ಚಂದಿರನ ತಲೆದಿಂಬಾಗಿಸಿ !!!

ಒಂದೊಂಚೂರೆ ಬೆಳೆದು
ಕತ್ತಲೆ ಕಳೆದು
ಬೆಳಕು ಕೊಡಿಸುವ ಅದೇನು ಲೆಕ್ಕಾಚಾರ ?
ರಾತ್ರಿ ಹಗಲುಗಳ ನಡುವೆ
ಮಾಡುತ್ತಾನೆ ಅದೆಂತದೋ ಚಮತ್ಕಾರ.

ಬಹುಶಃ ಮೊನ್ನೆ ಬಿದ್ದ ಮಳೆಹನಿಗಳನ್ನು
ಮತ್ತೆ ಹುಡುಕುತಿದ್ದ ಇಂದು
ಮೋಡಗಳಾಚೆ!!
ನಾ ನೋಡುತಿದ್ದೆ ಅವನನ್ನೇ
ಏನೂ ಅರಿಯದೆ
ಕಿಟಕಿಗಳಿಂದಾಚೆ!!!!

Friday, October 9, 2015

ಹಾಗೆ ಸುಮ್ಮನೆ-೩

ತಂಗಾಳಿ ಯಾರೋ ಬೆವರುತಿದ್ದಕ್ಕೆ ಜೋರಾಗಿ ಬೀಸುತಿತ್ತು, ಕರೆಂಟು ಮತ್ತೆ ಯಾವಾಗ ಬರುತ್ತದೆ ಎಂದು ಹೇಳದೆ ಹೊರಟು  ಹೋಗಿತ್ತು, ಮೇಣದ ದೀಪ ಇರುಳ ಜೊತೆ ಒಂಟಿಯಾಗಿ ಹೊರಾಡುತಿತ್ತು, ಬೀಸೋ ಗಾಳಿ ಜೊತೆ ಒಂದಿಸ್ಟು ಮಳೆ ಹನಿಗಳು ತಮಗೇ ಗೊತ್ತಿಲ್ಲದಂತೆ ಎಲ್ಲಿಗೋ ಬೀಳುತಿದ್ದವು,ಬದುಕು ಯಾರಿಗೂ, ಯಾಕೂ ಕಾಯದೆ ಮೆಲ್ಲನೆ ಸವೆಯುತಿತ್ತು.

ಉತ್ತರಗಳೇನೇ ಇರಲಿ ಪ್ರಶ್ನೆಗಳ ಅರ್ಥ ಹುಡುಕುದರೊಳಗೆ, ಪ್ರಶ್ನೆಗಳು ಅರ್ಥ ಕಳೆದು ಕೊಂಡಾಗಿತ್ತು. ನಿನ್ನೆಗಳು ನಾಳೆಗಳ ಬಗ್ಗೆ  ನಾಳೆಗಳು ನಿನ್ನೆಗಳ ಬಗ್ಗೆ ಯೋಚಿಸುತ್ತ ಬದುಕು ,ಹಸಿದ ಗಡಿಯಾರದ ಮುಳ್ಳಿಗೆ ನೇಣು ಹಾಕಿತ್ತು.

ಮೊನ್ನೆ ಹೀಗೆ ಯೋಚಿಸುತಿದ್ದೆ, ಬರೆಯಬೇಕು ಅನಿಸಿದನ್ನೆಲ್ಲ ಬರೆದಿದ್ದರೆ, ಹೇಳಬೇಕು ಅಂದು ಕೊಂಡದ್ದೆಲ್ಲ ಹೇಳಿದ್ದರೆ,ಮಾಡಬೇಕು ಅಂಥ ಯೋಚಿಸಿದ್ದೆಲ್ಲ ಮಾಡಿದ್ದರೆ, ಈಗ ಒಬ್ಬನೇ ಕುಳಿತು ಯೋಚಿಸಲು, ಕನವರಿಸಲು , ಚಿಂತಿಸಲು, ಮೆಲುಕು ಹಾಕಲು ಏನು ಉಳಿಯುತಿತ್ತು ?? so no regrets!!!.

                 ಬದುಕು ಅರ್ಧ ಬರೆದಿಟ್ಟ ಕವಿತೆ ಸಾಲು
                         ಹೆಣೆದು ಉಳಿದ ಸ್ವಲ್ಪ ಬಣ್ಣದ ನೂಲು
                                 ಸುಮ್ಮನೆ ಗೀಚಿದ ಚಿತ್ರ,
                    ಪಯಣದ ಎಲ್ಲ ತಿರುವುಗಲಾಚೆಯ ವಿಚಿತ್ರ!!!

ಕಣ್ಣು ಮುಚ್ಚಿ ಕುಳಿತರೆ, ಕಣ್ಣ ಪರದೆಯ ಹಿಂದೆ ಹಾಗೆ ಎಲ್ಲ ಚಿತ್ರಗಳು ಒಂದರ ಹಿಂದೆ ಒಂದರಂತೆ ತಿರುಗಿತ್ತಲೇ ಇರುತ್ತವೆ!! ನನ್ನ ಬದುಕಿನ ಸಿನಿಮಾ ಹಾಲ್ ನಲ್ಲಿ no intervals!! ಬದುಕು ಎಂದು ಮುಗಿಯದ ಕಿರುತೆರೆಯ ಧಾರವಾಹಿ,ಆಗಿಂದೊಮ್ಮೆ ಈಗಿಂದೊಮ್ಮೆ ಬರುವ ಕೆಲವು ಪಾತ್ರಗಳಿಗೆ ಸಂಭಂದವಿಲ್ಲ ಅಸ್ಟೇ.

                        ತೆರೆಯ ಮುಂದೆ ನಾ ರಂಗ ನಾಯಕ
                               ತೆರೆಯ ಹಿಂದೆ ಎಲ್ಲವು ನನ್ನದೇ ಕಾಯಕ
                         ಗದ್ಯ, ಪದ್ಯ ಗಮಕಗಳಿಗೆಲ್ಲ,
                                  ಅರ್ಥ ಹುಡುಕುದೇ ಬದುಕ???


ರಾತ್ರಿ ಮೆಲ್ಲನೆ ಸವೆಯುತಿತ್ತು,ಕರಿ ಮೋಡದ ಆಚೆಯಿಂದ ಚಂದ್ರ ಈಚೆ ಇಣುಕುತಿದ್ದ ,ಕನಸುಗಳಿಗೆ ರಾತ್ರಿ ಬೇಜಾರಾಗಿತ್ತು ನಿದ್ದೆ ಸದ್ದು ಮಾಡದೆ ತನ್ನೆಡೆಗೆ ಎಳೆಯುತ್ತಿತ್ತು.
                       
                 ಮತ್ತದೇ ಮುಂಜಾವು ನೋಡುವ ತವಕ
      ಇರುಳು ಹಗಲುಗಳ ನಡುವೆ ಇದೂ  ಒಂದು ಬದುಕ ????



ಸುಕೇಶ್




Sunday, September 13, 2015

ಸ್ವಗತ


ಊರ ದಾರಿಯ ಮತ್ತದೆ ತಿರುವು
ಅದೇ ದಿಬ್ಬ
ನೆನಪು ಊರಿನಾಚೆ ನಡೆವ
ಮಾರಿಹಬ್ಬ!!!

ಸವೆದ ಚಪ್ಪಲಿಯ
ಸವೆದ ಸದ್ದು
ಖಾಲಿ ಮನಸ್ಸು
ಎಲ್ಲೆಲ್ಲೊ ಹಾರುವ ಒಂಟಿ ಹದ್ದು!

ತಿರುಗಿ ತಿರುಗಿ ಮತ್ತಲ್ಲೇ
ಬಂದು ನಿಂತ ಬದುಕು
ದಾರಿಯಲ್ಲಿ,ಸಿಕ್ಕಿದಲ್ಲೆಲ್ಲ
ತುಂಬಿ ಕೊಂಡ  ನೆನಪುಗಳ ಸರಕು!

ಕಳೆದು ಕೊಂಡದ್ದೆಲ್ಲೋ
ಹುಡುಕಿದ್ದೆಲ್ಲೋ,
ರಾತ್ರಿ ಕಂಡ ಕನಸಿಗೆ
ಹಗಲು ಅರ್ಥ ಹುಡುಕುದರೊಳಗೆ
ಮೇಲೆ ಚಂದ್ರ ಬಂದಿದ್ದ!!

ಹೊದ್ದು ಮಲಗುವ ಸಮಯ,
ಸದ್ದು ಮಾಡುವ ಗಡಿಯಾರ
ಸುದ್ದಿ ಓದುವ ಹೃದಯ
ಕದ್ದು ಕೇಳುವ ಮನಸು,
ನಿದ್ದೆ ಜಾರಿದೆ ಕನಸು!!!

ಸುಕೇಶ್ 

Tuesday, July 14, 2015

ಹರೆಯದಲ್ಲಿ

ಹರೆಯದಲ್ಲಿ ಮನಸ್ಸು
ಜಮ್ಮು ಕಾಶ್ಮೀರ,
ಯಾರು ಯಾವಾಗ ಎದೆಯ
ಪರಿದಿಗೆ ಬಂದು
ದಾಳಿ ಇಡುತ್ತಾರೆಂದು ಗೊತ್ತಿಲ್ಲ.

ಸಿಡಿವ ಫಿರಂಗಿ ಹೊಗೆಯ
ಕಮಟು ವಾಸನೆ, ಈ ಯೋಚನೆ
ಟ್ಯಾಂಕರುಗಳಂತೆ ಢವಗುಟ್ಟುವ ಎದೆ!!
ಅತ್ತಿತ್ತ ಕದಲುವ ಸೈನಿಕರಂತೆ
ಈ ಕಂಗಳ ಹುಡುಕಾಟ!!

ಸತ್ತು ಬಿದ್ದ ಕಂಡ ಕನಸುಗಳ
ರಾಶಿ ರಾಶಿ ಹೆಣ,
ಹುತಾತ್ಮರಾದವುಗಳು ಹಲವು,
ಮಹಾತ್ಮರಾದವುಗಳು ಕೆಲವು!!!
ಕಟ್ಟಿಟ್ಟ ಸ್ಮಾರಕಗಳು ಇತಿಹಾಸ ಹೇಳುತ್ತಿವೆ.



Tuesday, June 16, 2015

ದಾರಿ

ಗುರಿ ಮರೆತ ದಾರಿ
ನಡೆದರೆಸ್ಟು,ಬಿಟ್ಟರೆಸ್ಟು
ವಿರಾಮಿಸಿದ ನಿಮಿಷಗಳು
ನಕ್ಕಾಗಲೇ ಅರಿವಾಗಲಿಲ್ಲ ಯಾಕೆ,
ಗುರಿಯೆಡೆಗೆ ದಾರಿ
ಹುಡುಕ ಬೇಕಿತ್ತೆಂದು.

ಕಲ್ಲು, ಮುಳ್ಳು, ತಿರುವುಗಳಿಗೆ ಹೆದರಿ
ಸಣ್ಣ ದಾರಿ
ಹಿಡಿಯಲಿಲ್ಲ ಕಾಲು.
ದಾರಿದೀಪ ರಥ ಬೀದಿಗಳಲ್ಲಿ
ನಡೆಯಲು ನಾಚುತಿತ್ತು ಬರಿಗಾಲು.
ಕನವರಿಕೆ ಬೆಂಬಿಡದ ಭೂತ!!!

ದೂರದಾಚೆಯ ರಸ್ತೆ ನಡೆದರೆ,
ಮುಳ್ಳುಗಳಿಲ್ಲದ  ಹೋವು,
ವಿಷಗಳಿಲ್ಲದ ಹಾವು,
ಕಣ್ಣೀರು ಬರದ ನೊವು.
ಆದರೆ ನಡೆಯುದು ಹೇಗೆ?
ಅಂಧ ಮನಸ್ಸು,ಅರ್ಧ ಕನಸು,
ಸಮಯದ ಜೊತೆ ಓಡಲು ಒಲ್ಲದ ವಯಸ್ಸು!!!

ಮೌನದೊಳಗಿನ ಮನಸು
ಪಿಸುಗುಟ್ಟಿದೆ
ಮತ್ತೊಂದು ದಾರಿ ಹುಡುಕಲು,
ಮತ್ತೆ ಹೆಜ್ಜೆ ಹಾಕುತ್ತಿದ್ದೇನೆ
ನನ್ನ ಸದ್ದು ಬರೀ ನನಗೆ ಕೇಳುವಂತೆ!!

ಸುಕೇಶ್ 


Thursday, June 11, 2015

ಹನಿ ಕವಿತೆ

ದುರಂತ 
ಕೆಲವೊಮ್ಮೆ ನಮಗೆ
ಸ್ವಾತಂತ್ರ್ಯ ಸಿಕ್ಕಿದೆ
ಎಂದು ಗೊತ್ತಾಗುದು
ನಡು ಬೀದಿಯಲ್ಲಿ ಕೊಲೆಗಳು ನಡೆದಾಗಲೇ!!!


                                             
                                       

                                          ಮಳೆ
                                    ಜೋಪಾನವಾಗಿ
                                    ಬಚ್ಚಿಟ್ಟ ಮುತ್ತಿನ
                                     ಮಳೆ ಹನಿಗಳನ್ನು
                             ಮುಗಿಲು ಮರೆತು ಚೆಲ್ಲಿ ಬಿಟ್ಟಿತು .!!

                                             
                                              ವ್ಯತ್ಯಾಸ 
                                  ಒಂದೊಂದೇ ಮೆಟ್ಟಿಲು ಏರಿದರೆ
                                               ಸುಲಭ ಈ ದಾರಿ !
                                    ಒಂದು ಬಿಟ್ಟು ಒಂದು ಏರ ಹೋದರೆ
                                            ಬೀಳಬಹುದು ನೀ ಜಾರಿ !!


ಮೌನ 
ಅವರಿಗೇನು ಗೊತ್ತು
ನಮ್ಮ ಮೌನಗಳಿಗೆ ನೂರಾರು
ಅರ್ಥಗಲಿವೆಂದು!
ಒಂದಾದರು ಅರ್ಥವಾಗಿದ್ದರೆ
ನಾವು ಮಾತಾಡಬಹುದಿತ್ತು !!


                                                     

                                                       ನೆನಪು
                                              ಈ ನೆನಪುಗಳೇ ಹೀಗೆ
                                                  ರಂಗದ ಹಿಂದೆ
                                              ಚಲಿಸುವ ನೆರಳಿನ ಹಾಗೆ.


Thursday, June 4, 2015

ಮೌನಗಳಿಗೇನು ಅರ್ಥ ??

ನೀನೆ ತಾನೆ ಅಂದು,
ಎದೆಯ ಬಾಗಿಲಿಗೆ ಬಂದು
ಪರಿಚಯದ ನಗೆ ನಕ್ಕವಳು,
ಎದೆ ಬೀದಿಗಳಲೆಲ್ಲ
ನಿನ್ನದೇ ಗೋಡೆ ಬರಹ!!

ಎಲ್ಲಗಳ ಜೊತೆ,ಏನೂ ಇಲ್ಲದೆ,
ಬದುಕುವಾಗ ಎಲ್ಲ ನೀನೆ ಆದದ್ದು,
ಎಲ್ಲ ತಿಳಿದಿದೆ.
ಆದರೂ,ಮೌನಗಳಿಗೇಕೆ ನೀನು
ಅಸ್ಟೊಂದು ಅರ್ಥಕೊಟ್ಟೆ.

ನಿನ್ನೆಗಳೊಂದಿನ ನೆನಪುಗಳಿಗಿಂತ
ನಾಳೆಗಳ ಜೊತೆಗಿನ
ಕನಸುಗಳೇ ಜಾಸ್ತಿಯಾಗಿದೆ.
ಹೇಳಿಬಿಡು ಮೆಲ್ಲ,
ಎಲ್ಲ ಮುಗಿವ ಮೊದಲು,
ನಿನ್ನ ಮೌನಗಳಿಗೇನು ಅರ್ಥ ??


ಸುಕೇಶ್ 

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...