Sunday, January 1, 2017

ಚಿತ್ರ ಬರಹ -೧



ಹಾಯ್,

ಆಗಷ್ಟೇ ಹೇಳಿದ್ದೆ ಹೊಸ ವರುಷದ ಹೊಸ resolution,

ಹಾಗೇ  ಹೀಗೆ ಹೊಳೆವ  ಕೆಲವು ಸಾಲುಗಳನ್ನು ಯಾವುದೋ ಫೋಟೋ ಜೊತೆ ಸೇರಿಸುತ್ತೇನೆ. 

ವಾರಕ್ಕೆ ಒಂದು ಆಗಲಿಲ್ಲವಾದರೂ, ತಿಂಗಳಿಗೊಂದೋ , ಎರಡೋ ಬರೆವ ಸಣ್ಣ ಪ್ರಯತ್ನ . 

ಈ ಬರಹಗಳು ನಿಮ್ಮನ್ನೊಂದಿಷ್ಟು inspire ಮಾಡಿದರೆ ನನಗಷ್ಟೇ ಸಾಕು . 

ನಿಮ್ಮ ಸಲಹೆ ಸೂಚನೆಗಳಿಗೆ ಈ ಬ್ಲಾಗಿನ ಬಾಗಿಲು ಸದಾ ತೆರೆದಿರುತ್ತದೆ.

ಮೊದಲನೆಯದು :

Saturday, December 31, 2016

ಗೋಡೆ ಮೇಲೆ ಹೊಸ ಕ್ಯಾಲೆಂಡರ್

ಸೂರ್ಯ ಯಾಕೋ ಚಳಿಗೆ ಸ್ವಲ್ಪ ಲೇಟ್ ಆಗಿನೇ ಏಳುವನೇನೋ , ಹೊಸ ವರುಷದ ಹೊಸ resolution  ನ ಮರೆತು. ಬಹುಶಃ ಅಲಾರಾಂ snooze ಮಾಡಿರಬೇಕು ನಮ್ಮ ನಿಮ್ಮಂತೆ.
ಮುಂಜಾನೆ ಎದ್ದು ಬಾಗಿಲಾಚೆ ನೋಡಿದೆ, ಯಾರೋ ಯಾವುದೋ ಖುಷಿಗೆ ಸುಟ್ಟು ಬಿಟ್ಟ ಒಂದಷ್ಟು ಪಟಾಕಿಯ ಪೇಪರ್ ಗಳು,ಹರಿದ ಹಳೆಯ ಕ್ಯಾಲೆಂಡರ್ ನ ಚೂರು.

ವರುಷ ಹೇಗೆ ಉರುಳಿ ಹೋಯಿತು  ......... ??

ಇದು ಒಂದು ಪ್ರಶ್ನೆಯೇ!! ಇಷ್ಟೊಂದು ವರುಷಗಳು ಮುಗಿದೇ ಹೋದವು , ಆಗ ಮೂಡದ ಪ್ರಶ್ನೆ ಈಗ ಯಾಕೆ?? ಬಹುಶಃ ಮುಂದಿನ ವರುಷ ಮತ್ತೆ ಇದೇ ಪ್ರಶ್ನೆ ಕಾಡಬಹುದು, ಉತ್ತರ ಹುಡುಕುತ್ತ ಮತ್ತೆ ಅದೇ ಕಳೆದು ಹೋಗ ಬಹುದು .

ಒಂದು ವರುಷ ಏನು ಮಾಡಿದೆ??, ಹಾಗೆ ಯೋಚಿಸಿದೆ , ಕಳೆದ ವರುಷದ ಹೊಸ ವರುಷ ಆಚರಣೆಯಿಂದ ನಿನ್ನೆ ಸಂಜೆ ತಿಂದ ice cream  ವರೆಗೆ ಮನದ ಪರದೆ ಮೇಲೆ ಎಲ್ಲ ಹಾಗೆ slide ಆಗುತಿತ್ತು, ಸಂಭ್ರಮಿಸಿಕೊಳ್ಳಲು ಕಾರಣ ಹುಡುಕುತ್ತಿದ್ದೆ.

ಬದುಕು ಹುಡುಕಾಟ
ಹುಡುಕದೆ
ಕಣ್ ಮುಚ್ಚಿಕೊಂಡರೆ
ನಿತ್ಯ ಪರದಾಟ !!!!.

ರಾತ್ರಿ ತುಂಬಾ ಪಟಾಕಿ ಸದ್ದು, ಮುಗಿದ ಸಾರಾಯಿ ಬಾಟಲಿಗಳೆಷ್ಟೋ ,ಸಂಭ್ರಮಿಸಲು ಕಾರಣ ಹುಡುಕೋ ಜನ.  ಬೆಳಗ್ಗೆ ಎದ್ದು ನೋಡಿದರೆ ಮೊಬೈಲ್ ಪರದೆ ತುಂಬ forwarded ಮೆಸೇಜುಗಳು.

ಮುಂಜಾನೆಯ ಮಂಜು ಕಂಠಪೂರ್ತಿ ಕುಡಿದು ಸೂರ್ಯ ಎದ್ದು ಬಂದ. ಇಳಿಯದ ಅಮಲಿಗೆ ಮುಖದ ಬಣ್ಣದ ಪುರಾವೆ. ಮತ್ತೊಂದು ಹೊಸ ವರುಷದ ಮುಂಜಾವು.

ಗೋಡೆ ಮೇಲೆ ಹೊಸ ಕ್ಯಾಲೆಂಡರ್ .

ಬದಲಾದ
ಕ್ಯಾಲೆಂಡರ್ನಲ್ಲಿ
ಬದಲಾ(ಗುವ!!)ಗದ
ದಿನಗಳು !!!


ಮತ್ತೆ ಕೆಂಪು , ಕಪ್ಪು ಬಣ್ಣದಲ್ಲಿ ರಾರಾಜಿಸುತ್ತಿತ್ತು ಮತ್ತೊಂದು ವರುಷ, ಎಲ್ಲೋ ಓದಿದಿದ ನೆನಪು

"Time is the most precious commodity and invest it only in those activities that truly count" 


                     ಎಲ್ಲರಿಗು ಹೊಸ ವರುಷದ ಶುಭಾಶಯಗಳು

                  Be Healthy, Be Happy , Be Blessed .

  ಓಹ್ ಮರೆತೇ ಬಿಟ್ಟೆ ನನ್ನ ಹೊಸ ವರುಷದ ಹೊಸ resolution.............?

                    watch this blog coming soon.


Tuesday, December 6, 2016

ಚಂದ್ರ ಮತ್ತು ಜಾರಿದ ಭೂಮಿಯ ಸೆರಗು



ದೋಚ ಬಂದರೆ
ಯಾರೋ ಭೂಮಿಯ
ಮೇಲೆ ಚಂದ್ರ,
ಲಾಂದ್ರ ಹಿಡಿದು ಕಾಯುತ್ತಿದ್ದ
ಬಿಟ್ಟ ಕಣ್ಣು ಬಿಟ್ಟು
ಒಂದೇ ಕಡೆ ನೆಟ್ಟು.

ಹಗಲೆಲ್ಲ ಬಿಸಿಲ ರವೆ.
ಹರಿದ ರವಿಕೆ
ಜಾರೋ ಸೆರಗಿಗೆ
ಹಾರೋ ಹಕ್ಕಿಯ ಪಿನ್ನು,
ಸುರಿದ ಬೆವರೂ ಬಿಡದೆ
ನೆಕ್ಕಿ ಹೋದ ಸೂರ್ಯ
ಸಂಜೆ ಕೋಪಗೊಂಡು
ಕೆಂಪಾಗಿದ್ದ ಸಾಲದುದಕ್ಕೆ.

ಗೂಡು ಸೇರಿದ ಹಕ್ಕಿ
ಕಳಚಿದ ಪಿನ್ನು
ತುಂಟ ಗಾಳಿ ಬಿಡಬಹುದೆ ಇನ್ನು.
ಸರಿದ ಸೆರಗು
ಎಂಥ ಬೆರಗು
ಆಹ್ ಕಣ್ ತಪ್ಪಿ ಅತ್ತ ನೋಡಿದ ಚಂದ್ರ
ಏನೋ ಕಂಡ, ನಾಚಿಕೊಂಡ.

ಮೇಲೆ ನಿಂತು ಕಾಯುದ್ದಷ್ಟೇ ಕೆಲಸ
ಬೇಲಿ ತೋಟ ಬಯಸುವ
ಹಾಗಿಲ್ಲ,
ನನಗೂ ನಿನಗೂ ಒಂದೇ ಕಾನೂನು.
ಪಾಳಿ ಮುಗಿಸಿದ
ಒಂಚೂರೆ ಸವೆಸಿ;
ಕ್ಷೀಣಿಸುದು,ಮತ್ತೆ ಬೆಳೆಯುದು
ಹೇಗೆಂದು ತಿಳಿಸಿ.

ಯಾರೋ ನೋಡುವ ಮೊದಲು
ಹಾರಿ ಬಂದ ಹಕ್ಕಿ
ಜಾರಿದ ಸೆರಗಿಗೆ ಪಿನ್ನು.
ಓ ನಿನ್ನೆ ಕೋಪ
ಇಳಿಯಲಿಲ್ಲ ಇನ್ನೂ
ರಮಿಸು ಭೂಮಿ
ನೀ ನಿರಂತರ ಪ್ರೇಮಿ.























-----------------------------------------------------------------------ಸುಕೇಶ್ 









Tuesday, November 1, 2016

ಮತ್ತೆ ಕೆಲವು ಹನಿಗಳು .......

  

    ಬಿಸಿಲು 

ಸೂರ್ಯ ಕಿಚಾಯಿಸಿ
ನಕ್ಕಿದ್ದ
ಭೂಮಿ ಬೆದರಿ
ಬೆವರುತ್ತಿತ್ತು !!!!


                                              
                                               
                                               
                                              
                                               ಗಡಿಯಾರ 

                                              ನೀನು ತಿರುಗಿದ್ದಕ್ಕೆ
                                              ನನ್ನ
                                             ಸಮಯವೆಲ್ಲ
                                             ಖಾಲಿಯಾಗಿದೆ.


ಹಣೆಬರಹ 

ಯಾರೋ
ಹಾಗೇ, ಹೀಗೆ
ಎಂದೋ ಬರೆದಿಟ್ಟ
ಶೀರ್ಷಿಕೆ .


                                            
                   ಪಾಲಿಸಿ 

 ದಿನಾ, ನಾ ಆಫೀಸ್ ಗೆ ಹೊರಟಾಗ
       ನನ್ನವಳು ಅನ್ನುತ್ತಿದ್ದಳು,
  "ರೀ ರಸ್ತೆ ನಿಯಮ ಪಾಲಿಸಿ"
        ಈಗ ಹೇಳುದೇ ಇಲ್ಲ
      ಕಾರಣ ನಾ ಮಾಡಿದ್ದೇನೆ
         "ವಿಮಾ ಪಾಲಿಸಿ"!!.




       ಪರವಾನಿಗೆ 

ಯಾರು ಕೊಟ್ಟರು ನಿನಗೆ
ನನ್ನ ಮನದೊಳಗೆ
ನೂರಾರು ಕನಸ ತುಂಬಿಸಲು
ವಿಶೇಷ ಪರವಾನಿಗೆ??.




-----------------------------------------------------------------ಸುಕೇಶ್ 

Thursday, October 27, 2016

ನೀನು ನನ್ನ ನಾಲ್ಕು ದಿನದ ಫೋನ್ ನ ಸ್ಕ್ರೀನ್ ಸೇವರ್.

ವಿಷಾದಗಳ ಬಗ್ಗೆ ಬರೆಯದೆ ಕೆಲವು ವರುಷಗಳೇ ಕಳೆದಿದ್ದವು , ಬಹುಶಃ ಬರೆಯಲು ಅಂತಹದೊಂದು ವಿಷಾದ ಕಾಡಲಿಲ್ಲವೋ ಏನೋ!!. ಸಮಯದ ಹಿಂದೆ ಮೆಲ್ಲನೆ ಟಿಕ್ ಟಿಕ್ ಹೆಜ್ಜೆ ಹಾಕುತ್ತಾ ನಡೆದ ದೊರ ಎಷ್ಟು ಎಂದು ತಿರುಗಿ ನೋಡಿದರೆ, ಅರೆ!! ಮೊದಲ ಹೆಜ್ಜೆ ಒಂದಷ್ಟು ದೂರ ಹಿಂದೆ ಅಲ್ಲೇ ಇದೆ . ಊರು ಬಿಟ್ಟು ಮತ್ತೊಂದು ಊರಿಗೆ,ಮತ್ತೆ ತಿಂಗಳು ಆಗುವ ಒಳಗೆ ಮತ್ತೆ ಊರಿಗೆ, ಬದುಕು ಒಂದಷ್ಟೇ ತಿರುವುಗಳ ನಡುವೆ ಗಿರಕಿ ಹೊಡೆದಂತೆ ಇತ್ತು. 

ರಾತ್ರೆ ಮನೆಯ ಟೆರೇಸ್ ನ ಮೇಲೆ ಹಾಗೇ ಅಂಗಾತ ಮಲಗಿದ್ದೆ ಆಕಾಶ ನೋಡುತ್ತ . ಒಂಟಿ ಅನಿಸಿದಾಗಲೆಲ್ಲ ಹೀಗೆ ಬಿದ್ದುಕೊಳ್ಳುದು ಯಾವಗಳಿಂದಲೋ ರೂಢಿಯಾಗಿತ್ತು. ಚಂದ್ರ ಎಲ್ಲೋ ಕಳೆದು ಹೋಗಿದ್ದ, ಅಲ್ಲಲ್ಲಿ ಕೆಲವೊಂದು ನಕ್ಷತ್ರಗಳು ಮಿನುಗುತ್ತಿದ್ದವು, ಮನದಲ್ಲಿ ಕೆಲವು ನೆನಪುಗಳು ಮತ್ತೆ ಮತ್ತೆ ಸುಳಿದಾಡುವಂತೆ.

ಬದುಕ  ಪಯಣದಲ್ಲಿ ಯಾರೋ ಜೊತೆಯಾಗುತ್ತಾರೆ,  ಅದನ್ನು ಯಾರೋ ಎಂದೋ ಬರೆದಿರುತ್ತಾರೆ ನಾವು ನಿಲ್ದಾಣ ಗೊತ್ತಿಲ್ಲದ ಬರೀ ಪ್ರಯಾಣಿಕರಷ್ಟೇ.

ಯಾರದೋ ಪಯಣ
ಎಲ್ಲಿಗೋ
ಯಾರ ಜೊತೆಗೋ...
ಮೇಲೆ ಕುಂತವ ನೀ ಚಾಲಕ
ನಾ ಪ್ರಯಾಣಿಕ .!!

ಮನಸು ಗೊಂದಲದ ಗೂಡು ಆಗಿತ್ತು, ಯೋಚನೆಗಳು ಒಳಗೊಳಗೇ ಗುದ್ದಾಡುತಿದ್ದವು , "ನಿನ್ನನ್ನು ಅತಿಯಾಗಿ ಹಚ್ಚಿಕೊಂಡಿದ್ದು ನನ್ನ ತಪ್ಪೇ ??" ಇರಬಹುದೋ ಏನೋ, ಬದುಕ ದಾರಿಯಲಿ ಒಂಟಿಯಾಗಿ ನಡೆದು ಅಭ್ಯಾಸವಾದ ಮೇಲೂ ನಿನ್ನ ಜೊತೆ ಬಯಸಿದ್ದು ಬಹುಷಃ ತಪ್ಪೇ ಇರಬೇಕು.!!!.

ಎಲ್ಲ ಒಂದು ಧಾರವಾಹಿ ಸರಣಿಯಂತೆ ಒಂದಕ್ಕೊಂದು ಜೊತೆಯಾಗಿ ಹೇಗೆ ಹಾಗೇ ಬಂದು ಹೀಗೇ ಎಲ್ಲ ಮುಗಿದೇ ಹೋಯಿತು. ಓ ಎಲ್ಲಿ ಮುಗಿಯಿತು ಇನ್ನೆಷ್ಟು ಸಂಚಿಕೆಗಳು, ತಿರುವುಗಳು ಬಾಕಿ ಇದೆಯೋ , ನಾ ದಿನ ಬೆಳಗ್ಗೆ ಎದ್ದು ಕಣ್ಣುಜ್ಜಿ ಬದುಕಿನ T.V ನೋಡುತ್ತೇನೆ ನೀನು ಮತ್ತೆ ಬರಬಹುದೋ ಏನೋ ಎನ್ನುವ ಪುಟ್ಟ ಆಸೆಯೊಂದಿಗೆ !!. ಬದುಕಿಗೂ ಒಂದು remote ಇದ್ದಿದ್ದರೇ.!!

ಒಮ್ಮೆ ಕಣ್ಣು ಮುಚ್ಚಿ ಧೀರ್ಘ ಉಸಿರೆಳುದುಕೊಂಡೆ, ಕಣ್ಣ ಮುಂದೆ ಒಂದಷ್ಟು ಕನಸುಗಳು ಸ್ಮಶಾನದ ಕಡೆ ನಡೆಯುತ್ತಿದ್ದವು,ಒಂದಿಷ್ಟು ಭ್ರಮೆಗಳು ಮೆಲ್ಲ ಕರಗುತಿದ್ದವು , ಕಣ್ಣು ತೆರೆದೆ ಬದುಕು ಮುಗುಳ್ನಗುತಿತ್ತು,ನಾನು ಮುಗುಳ್ನಕ್ಕೆ ಎದೆ ಹಗುರವಾದಂತೆ ಅನಿಸಿತು. ಎಲ್ಲೋ ಕಳೆದು ಹೋಗಿದ್ದ ನಾನು ಮತ್ತೆ ನನಗೇ ಸಿಕ್ಕಂತೆ,

ಎಲ್ಲ ಬರೆಯಲಾರೆ ಇಲ್ಲಿ. ಒಬ್ಬನೇ ಇದ್ದಾಗ ಎದೆ ಕಾಯಿಸಿಕೊಳ್ಳಲು ಒಂದಷ್ಟು ಬಚ್ಚಿಟ್ಟಿದ್ದೇನೆ,ಕೆಲವೊಂದು ವಿಷಯಗಳ ಹೇಳಿಕೊಳ್ಳುದಕಿಂತ ಬಚ್ಚಿಟ್ಟುಕೊಂಡರೆ ಅದರ ಹಿತ, ಯಾತನೆ ಬಹುಷಃ ಇನ್ನೊಂದು ಕವಿತೆ ಬರೆಹಿಸ ಬಹುದೋ ಏನೋ ನನ್ನ... !!

ನಿನ್ನ ನೆನಪುಗಳಿಗೆ
ನನ್ನ ಕಣ್ಣು ನೀಡಿದ
ಶ್ರದ್ದಾಂಜಲಿ
ಆ ಕಣ್ಣ ಕೊನೆಯ ಕಂಬನಿ....!!!!!

"Hello ನಾಲ್ಕು ದಿನ ರಜೆ ಇದೆ ಕಣೋ ಎಲ್ಲಿಗಾದರೂ ಹೋಗಿ ಬರೋಣ". ಗೆಳೆಯ ಅತ್ತ ಕಡೆಯಿಂದ ಸರಿ ಕಣೋ ಪ್ಲಾನ್ ಮಾಡೋಣ. ಪಯಣ ಮತ್ತೆ ಮುಂದೆ ಹೊರಟಿತ್ತು ಮತ್ತೊಂದಷ್ಟು ನೆನಪುಗಳ  ಹೊತ್ತು . .. . .. .. ..  .. .. .. ... ..

ಫೋನ್ ಅತ್ತ ಎತ್ತಿ ಇಟ್ಟೆ ಸ್ಕ್ರೀನ್ ಸೇವರ್ ಬದಲಾಯಿಸಿ........ !!! ಎದೆಯಲ್ಲಿರುದು ಬದಲಾಯಿಸುದು ಅಷ್ಟು ಸುಲಭವಲ್ಲವೋ ಏನೋ.

Oyee ಹೇಳಲು ಮರೆತೆ "ಎಲ್ಲ ಮುಗಿದ ಮೇಲೆ ಮತ್ತೆ ಏನೋ ಶುರುವಾಗಿದೆ . . . . . . . . . . . . . . " ಪಯಣ ಮುಂದುವರಿಯುದು........... 


ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...