Saturday, November 3, 2018

ಸವತಿಯ ಕನಸು !!!!.

ನನಗೆ ನಿದಿರೆಯ ಮೇಲೆ ಮುನಿಸು
ನಿನ್ನೆಯ ಅರ್ಧ ಕನಸ
ಕಾಣುವ ಮನಸು.
ಕೆಂಬಣ್ಣದ ಗುಲಾಬಿಯ
ಬಣ್ಣಗಳ,
ಸಂಪಿಗೆಯ ಸೌಗಂಧಗಳ,
 ಮೈ ಮೇಲೆ ಮೆತ್ತಿ,
ಸುಕೋಮಲೆ ನೀ,
ಹಾಗೆ ನಡೆದು ಬಂದಾಗಲೇ
ಬೆಳಕಾಗಬೇಕ,
ಕೋಳಿ ಕೂಗಬೇಕ.!!.

ಕೈಯಲ್ಲಿ ಹಿಡಿದ
ಲಾಂದ್ರದ ಬೆಳಕು
ನಾಚುತ್ತಿದೆ ನೋಡಿ
ಸೊಂಟದ ಬಳುಕು .
ಕಾಡಿಗೆಯದೇನೋ ಬೇಡಿಕೆ ,
ಕಣ್ಣು ಅದ ಹುಡುಕಾಡುತ್ತಿದೆ .

ದಾರಿ ನಿನ್ನಯ ಹೆಜ್ಜೆಯ
ಸದ್ದಿಗೆ
ದಿಕ್ಕು ತಪ್ಪಿದೆ
ಕಣ್ಣು , ನಿನ್ನ ಕಾಣಲೇ ಬೇಕೆಂಬ
ಹಠಕ್ಕೆ ಜೋತುಬಿದ್ದಿದೆ .
ಇನ್ನೇನೊ ನೀ 
ನನ್ನೊಡನೆ ಬಂದು ಕೂರಬೇಕು
ಎನ್ನುವಷ್ಟರಲ್ಲಿ
ಬೆಳಕು ಹರಿದಿದೆ
ಹೊದಿಕೆ ಸರಿದಿದೆ .

ಇಂದು ಮತ್ತೆ ,
ನಿದಿರೆಗೆ ನನಮೇಲೆ ಮುನಿಸು,
ನನಗೆ ಆಕೆಯ ಸವತಿಯ ಕನಸು !!!!.



------------------------------------------------------------------------------ಸುಕೇಪು

Wednesday, October 31, 2018

ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಧ್ವಜಯಾವುದು ??

ಇನ್ನೇನು ಸ್ವಲ್ಪ ದಿವಸದಲ್ಲೇ ಕನ್ನಡ ರಾಜ್ಯೋತ್ಸವ ಬರುತ್ತದೆ . "ಹ್ಯಾಪಿ ಕನ್ನಡ ರಾಜ್ಯೋತ್ಸವ" ಎಂದು english ನಲ್ಲಿ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕನ್ನಡ ಅಭಿಮಾನವನ್ನು ತೇಲಿಬಿಡುವವರಿಗೆ (ಹೇಳಿಬಿಡುವವರಿಗೆ!!) ಏನೂ ಕಡಿಮೆ ಇಲ್ಲ. ಇದು ಬರಿ ಕನ್ನಡ ರಾಜ್ಯೋತ್ಸವಕ್ಕಷ್ಟೇ ಸೀಮಿತವಲ್ಲದ ಸಮಸ್ಯೆ , ಹಬ್ಬ ಸಂಸ್ಕೃತಿ ,ಆಚರಣೆಗಳು  ಮತ್ತು ಯಾವುದೇ ಉತ್ಸವದ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದಿದ್ದರು ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಗಳು ಮಾತ್ರ ತಪ್ಪದೆ ಬದಲಾಗುತ್ತದೆ. ಸರಿ ಅಷ್ಟಾದರು ಮಾಡುತ್ತಾರಲ್ಲ ಎಂದು ಸಮಾಧಾನ ಮಾಡಿಕೊಳ್ಳಬೇಕು ಅಷ್ಟೇ .

ಮೊನ್ನೆ ನನ್ನ ಕಛೇರಿಯಲ್ಲಿ ನೆರೆ ರಾಜ್ಯದ ಹುಡುಗನೊಬ್ಬ ನನ್ನ ಗೆಳೆಯನಲ್ಲಿ  ಕೇಳಿದ ( ಆಂಗ್ಲ ಭಾಷೆಯಲ್ಲಿ ) "ನಿಮ್ಮ ಧ್ವಜದಲ್ಲಿ ಆ ಎರಡು ಬಣ್ಣಗಳು ಯಾವುದರ ಸಂಕೇತ ? ನಮಗಿಲ್ಲದ ವಿಶೇಷ  ಧ್ವಜ ನಿಮಗೆ ಯಾಕೆ ಬೇಕಾಯಿತು ?" ಈ ಅನಿರೀಕ್ಷಿತ ಪ್ರಶ್ನೆಗೆ ಗೆಳೆಯ ತಬ್ಬಿಬ್ಬಾಗಿದ್ದ. ನೆರೆ ರಾಜ್ಯದವರು ಯಾರೋ ನಿಮಗೆ  ಈ ಪ್ರಶ್ನೆ ಕೇಳಿದರೆ ನಿಮಗದರ ಉತ್ತರ ಗೊತ್ತೇ ?. ನಾನು ಹಾಗೆ  ಒಂದು ಕ್ಷಣ ಯೋಚಿಸಿದೆ, " ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಬಣ್ಣ, ಅರಶಿನ ಮತ್ತು ಕುಂಕುಮ. ಯಾವುದೇ ಶುಭ ಸಂಭ್ರಮಕ್ಕೆ ನಾವು ಅದನ್ನು ಉಪಯೋಗಿಸುತ್ತೇವೆ ,ಅದು ನಮ್ಮ ಸಂಪತ್ತು ಮತ್ತು ಸೌಭಾಗ್ಯದ ಸಂಕೇತ " ಎಂದೆ .
೧೦ ಅಂಕದ ಪ್ರಶ್ನೆಗೆ ೧ ಅಂಕದ ಉತ್ತರ ಕೊಟ್ಟಂತೆ . ಆ ಕ್ಷಣ ಆತನ ಮುಂದೆ ತೇರ್ಗಡೆ ಆಗಬೇಕಿತ್ತು. ಇಲ್ಲದಿದ್ದರೆ ಗೊತ್ತಿಲ್ಲವೆಂದು ತಲೆ ತಗ್ಗಿಸಬೇಕಿತ್ತು . Nice .. !! ಎಂದ ಆತ ಮುಗುಳ್ನಗುತ್ತ . ಬೀಸೋ ಚಾಟಿ ತಪ್ಪಿಸಿಕೊಂಡದ್ದಾಯಿತು ಆದರೆ ತಲೆಯೊಳಗೊಂದು ಹುಳ ಹೊಕ್ಕಿತ್ತು.. !!.

ನಮ್ಮ ದೇಶದಲ್ಲಿ ಜಮ್ಮು- ಕಾಶ್ಮೀರ ರಾಜ್ಯ ಹೊರತುಪಡಿಸಿ ಬೇರೆ ಯಾವ ರಾಜ್ಯಕ್ಕೂ ತನ್ನದೇ  ಆದ ಧ್ವಜವಿಲ್ಲ. ರಾಷ್ಟ್ರೀಯ ಧ್ವಜದಡಿ ನಾವೆಲ್ಲ ಒಂದು . ಹಾಗಿದ್ದರು ಕರ್ನಾಟಕವೇಕೆ ಅಧಿಕೃತವಾಗಿ ಅಲ್ಲದಿದ್ದರು ತನ್ನದೇ ಆದ ಬೇರೆ ಧ್ವಜವನ್ನು ಇಟ್ಟುಕೊಂಡಿತು?. ಯಾವುದೇ ಇತರ ರಾಜ್ಯಗಳಿಗೆ ಹೋಲಿಸಿದರೆ ನಾವು ಸುಮಾರು ಆರು ನೆರೆ ರಾಜ್ಯಗಳ ಜೊತೆ ನಮ್ಮ ಸರಹದ್ದನ್ನು ಹಂಚಿಕೊಳ್ಳುತ್ತೇವೆ ( ತೆಲಂಗಾಣವನ್ನೂ ಸೇರಿಸಿ ) ಹಾಗಾಗಿ ಬಹುಶಃ ಕರ್ನಾಟಕದ ಏಕೀಕರಣದ ಪೂರ್ವದ ಚಳವಳಿಗಳಲ್ಲಿ ಕನ್ನಡ ಮಾತಾಡುವ ಜನರನ್ನು ಒಂದೆಡೆ ಸೇರಿಸಲು ಒಂದು ಧ್ವಜದ ಅವಶ್ಯಕತೆಯನ್ನು ಆಗಿನ ಕನ್ನಡ ಚಳವಳಿಗಾರರಾದ ಎಮ್ .ಎ ರಾಮಮೂರ್ತಿ , ಆರ್ . ಹೆಚ್ ದೇಶಪಾಂಡೆ , ಉಮೇಶ್ ರಾವ್,ಆಲೂರು ವೆಂಕಟ ರಾವ್ , ಗುದ್ಲಪ್ಪ ಹಳ್ಳಿಕೆರೆ ಮುಂತಾದವರು ಮನಗಂಡಿರಬೇಕು .

ಒಂದು ಪ್ರದೇಶಕಷ್ಟೇ ಸೀಮಿತವಾದ ಚಳವಳಿಗಳಿಗೆ ರಾಷ್ಟ್ರಧ್ವಜವನ್ನು ಬಳಸುದು ಅಷ್ಟು ಸಮಂಜಸವಲ್ಲ. ಉದಾಹರಣೆಗೆ , ಗೋಕಾಕ್ ಚಳವಳಿ ,ಹೈದರಬಾದ್ -ಕರ್ನಾಟಕ ಚಳವಳಿಗಳಲ್ಲಿ ಅಥವಾ ಇನ್ನಾವುದೋ ಎರಡು ರಾಜ್ಯಗಳ ನಡುವಿನ ಸಮಸ್ಯೆಗಳಾದ , ಗಡಿಹಂಚಿಕೆ, ನೀರು ಹಂಚಿಕೆ ಇತ್ಯಾದಿ ಹೋರಾಟಗಳಲ್ಲಿ ರಾಷ್ಟ್ರ ಧ್ವಜ ಉಪಯೋಗಿಸಿದರೆ ಅದಕ್ಕೆ ಅರ್ಥವಿರುವುದಿಲ್ಲ. ಒಂದು ಸೀಮಿತ ಪ್ರದೇಶದ ಹಿತಾಸಕ್ತಿಗೆ ಅನುಗುಣವಾಗಿ  ಆ ಪ್ರದೇಶದ ಸಮ ಮನಸ್ಕ ಜನರನ್ನು ಒಂದುಗೂಡಿಸಬೇಕಾಗುತ್ತದೆ , ಇಂಗ್ಲೆಂಡಿನ ಧ್ವಜ ಹಿಡಿದು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕೆ ಹೋರಾಡಿದರೆ ಸ್ವಾತಂತ್ರ್ಯ ಸಿಗುತಿತ್ತೇ ?.

ಹಾಗೆಂದ ಮಾತ್ರಕ್ಕೆ ಒಂದು ರಾಜ್ಯ ತನ್ನದೇ ಆದ ಧ್ವಜ ಬಳಸಿದರೆ ಅದು ರಾಷ್ಟಧ್ವಜವನ್ನು ದಿಕ್ಕರಿಸಿದಂತಲ್ಲ ಅಥವ ರಾಷ್ಟ್ರದ ಏಕತೆಗೆ ಮತ್ತು ಒಗ್ಗಟ್ಟಿಗೆ ದಕ್ಕೆ ತರುತ್ತದೆ ಎಂದಲ್ಲ ಬದಲಾಗಿ ಯಾವುದೇ ಪರಿಸ್ಥಿಯಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಏಕತೆಯ ಪ್ರಶ್ನೆ ಬಂದಾಗ ಸಮಾನ ಮನೋಭಾವ ಮತ್ತು ಸಮಾನ ಸಂಸ್ಕೃತಿ , ಭಾಷೆ ಹೊಂದಿರುವ ಜನರನ್ನು ಒಂದೆಡೆ ಸೇರಿಸಿ ಹತೋಟಿಯಲ್ಲಿ ಇಟ್ಟುಕೊಳ್ಳುದು ಸುಲಭವಾದೀತು . ಇದೇ ಕಾರಣಕ್ಕೆ ಜಮ್ಮು- ಕಾಶ್ಮೀರ ತನ್ನದೇ ಆದ ಸಂವಿಧಾನ ಮತ್ತು ಧ್ವಜವನ್ನು ಹೊಂದಿದೆ , ಹಾಗಂತ ರಾಷ್ಟ್ರೀಯ ಧ್ವಜ ಮತ್ತು ರಾಷ್ಟ್ರದ ಏಕತೆಯನ್ನು ಪ್ರಶ್ನಿಸುವಂತಿಲ್ಲ

ಈ ಬಾರಿ ಕನ್ನಡ ರಾಜ್ಯೋತ್ಸವಕ್ಕೆ ಯಾವ ಧ್ವಜ ಹಾರಿಸುವುದು??

ಕರ್ನಾಟಕದ ಧ್ವಜ ಅನಧಿಕೃತವಾಗಿ ಅಧಿಕೃತವಾಗಿರುವ ಧ್ವಜ (Unofficially official) . ಅರಶಿನ ಕುಂಕುಮ ಎರಡು ಬಣ್ಣವಿರುವ ಧ್ವಜವನ್ನು ೧೯೭೪ ರಿಂದ ಎಲ್ಲ ಕನ್ನಡ ಪರ ಚಳವಳಿಗಳಲ್ಲಿ ಮತ್ತು ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಬಳಸಲಾಗುತ್ತಿದೆ ಆದರೆ ಈ ವರ್ಷ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮೂರು ಬಣ್ಣಗಳಾದ  ಅರಶಿನ   , ಬಿಳಿ ಮತ್ತು ಕುಂಕುಮ ಬಣ್ಣವಿರುವ ಮತ್ತು ಜೊತೆಗೆ ಗಂಡಭೇರುಂಡದ  ಚಿಹ್ನೆಯಿರುವ ಧ್ವಜವನ್ನು ವಿನ್ಯಾಸ ಮಾಡಿ ಅದನ್ನು ಕರ್ನಾಟಕದ ಅಧಿಕೃತ ಧ್ವಜವಾಗಿ ಬಳಸಲು ಕೇಂದ್ರದ ಮತ್ತು ಕಾನೂನಿನ ಮೊರೆಹೋಗಿದೆ . ಈ ಬಾರಿ ಯಾವ ಧ್ವಜ ಉಪಯೋಗಿಸುವುದು ಎಂಬುದು ಕೊಂಚ ಗೊಂದಲದ ವಿಷಯವೇ ಸರಿ ಯಾಕೆಂದರೆ ಎರಡೂ ಅಧಿಕೃತವಲ್ಲ.

ಧ್ವಜ ಯಾವುದೇ ಇರಲಿ ಅದು ಮೂಡಿಸುವ ಭಾವನೆ ಮುಖ್ಯವಾದದ್ದು. ಒಂದು ದೇಶವನ್ನು ಮತ್ತದರ ಅಸ್ತಿತ್ವವನ್ನು ಆ ದೇಶದ ಧ್ವಜ ಹೇಗೆ ಪ್ರತಿಬಿಂಬಿಸುವುದೋ ಹಾಗೆ ಒಂದು ರಾಜ್ಯದ ಅಥವಾ ಇನ್ನಾವುದೋ ಒಂದು ಸಂಸ್ಥೆಯ ಧ್ಯೇಯವನ್ನು ಮತ್ತು ಅದರ ಸಂಸ್ಕೃತಿಯನ್ನು ಅವುಗಳ ಧ್ವಜಗಳು ಬಿಂಬಿಸುತ್ತವೆ. ಕನ್ನಡಿಗರು ನಾವು ಜನ ಗಣ ಮನ ರಾಷ್ಟ್ರಗೀತೆಯನ್ನು ಹೇಗೆ ಹಾಡುತ್ತೇವೆಯೋ ಹಾಗೆ ಜೈ ಭಾರತ ಜನನಿಯ ತನುಜಾತೆ ನಾಡಗೀತೆಯನ್ನು ಅಷ್ಟೇ ತನ್ಮಯತೆಯಿಂದ ಹಾಡುತ್ತೇವೆ . ಒಂದು ಹಾಡು , ಒಂದು ಭಾಷೆ , ಒಂದು ಸಂಸ್ಕೃತಿ ಒಂದು ಧ್ವಜ ಇವೆಲ್ಲ ಒಂದು ರಾಜ್ಯದ ಜನತೆಯ ಹೆಮ್ಮೆ ಇವುಗಳೆಲ್ಲ ನಮ್ಮ ಇತಿಹಾಸದ ಸ್ಪಷ್ಟ ಕುರುಹುಗಳು ಹೋರಾಟದ ಸಂಕೇತಗಳು ಮತ್ತು  ವಿಕಾಸದ ಹೆಜ್ಜೆ ಗುರುತುಗಳು ಅಷ್ಟೇ , ಇವುಗಳೆಲ್ಲ ಯಾವತ್ತಿಗೂ ದೇಶದ ಭದ್ರತೆ ಮತ್ತು ಏಕತೆಗೆ ಧಕ್ಕೆತರುವಂತವುಗಳು ಆಗಲಾರವು .

ನಾವು ಈ ವಿಷಯದ ಬಗ್ಗೆ  ಮಾತಾಡುವಾಗ ಬರೀ ಏಕತೆ ಬಗ್ಗೆ ಮಾತಾಡಿದರೆ ತಪ್ಪಾದೀತು, ಜೊತೆಗೆ ನಮ್ಮ ವೈವಿಧ್ಯತೆ ಬಗ್ಗೆಯು ಮಾತಾಡಬೇಕಾಗುತ್ತದೆ, ನಮ್ಮದು ವಿವಿಧತೆಯಲ್ಲಿ ಏಕತೆ. ಇದನ್ನೆಲ್ಲಾ ಬದಲಾಯಿಸಿ ಯಾವುದೊ ಪಾಶ್ಚಿಮಾತ್ಯ ದೇಶದ ಹಾಗೆ ಅಥವ ಇನ್ನಾವುದೋ ಕಮ್ಯುನಿಸ್ಟ್ ರಾಷ್ಟ್ರಗಳ ಹಾಗೆ ಕೇವಲ ಏಕತೆಯನ್ನು  ಸಾಧಿಸಹೊರಟರೆ ದೇಶದ ಸಂಸ್ಕೃತಿಗೆ ಅದರ ವೈವಿಧ್ಯತೆಗೆ ಭಾರಿ  ಪೆಟ್ಟು ಆದೀತು ಅಷ್ಟೇ ಅಲ್ಲದೆ ಏಕತೆಗೆ ಭಂಗವು ಆದೀತು . ದೇಶದ ಸಂವಿಧಾನ  ಬರೆದ ಸಮಯದ ಪರಿಸ್ಥಿತಿಗಳು ಈಗ ಇಲ್ಲ ಹಾಗಾಗಿ ದೇಶದ ಬುದ್ದಿಜೀವಿಗಳು, ಆಡಳಿತಯಂತ್ರ ನಡೆಸುವವರು ದೇಶದ ಅಭಿವೃದ್ಧಿಯ ಹಿತದೃಷ್ಟಿ ಮತ್ತು ಜನರ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು, ಇಲ್ಲದಿದ್ದರೆ ಕೆಲವರು ಈ ವಿಷಯಗಳನ್ನು ತಮ್ಮ ರಾಜಕೀಯ ಲಾಭಗಳಿಗೆ ಉಪಯೋಗಿಸಿಕೊಂಡು ಇಂತಹ ಬೇಡಿಕೆಗಳ  ನಿಜ ಅರ್ಥ ಬದಲಾಗುವ ದುರದೃಷ್ಟ ಒದಗಿಬರಬಹುದು .

ಮತ್ತೆ ನವೆಂಬರ್ ಒಂದು ಬರಲಿದೆ . ಸಂದಿಗ್ದಗಳು , ದ್ವಂದ್ವಗಳು ನಮ್ಮ ಆಚರಣೆಗಳಾಗದಿರಲಿ ಬದಲಾಗಿ ನಮ್ಮ ಇತಿಹಾಸ , ಹೋರಾಟ, ನಾಡು ನುಡಿ ಸಂಸ್ಕೃತಿ ಸಾಹಿತ್ಯಗಳನ್ನು ತಿಳಿದುಕೊಂಡು  ಮತ್ತು ಅದನ್ನು ಇತರರಿಗೂ ತಿಳಿಸಿ ಅದರ ಅಭಿವೃದ್ಧಿಗೆ ಕೆಲಸಮಾಡಬೇಕು .

ಕೊನೆಯದಾಗಿ ,

ಗೊತ್ತೇ ನಿನಗೆ ,
ಕುವೆಂಪು ,ಬೇಂದ್ರೆ ಅಡಿಗ ?
ಗೊತ್ತಿಲ್ವೆ ,
ನೀ ಯಾವ ಸೀಮೆ ಕನ್ನಡಿಗ !!.














----------------------------------------------------------------ಸುಕೇಶ್ ಪೂಜಾರಿ 




Wednesday, October 17, 2018

ಚಪ್ಪಲಿ

ನಮ್ಮನ್ನು  ಕೆಲವರು
ಹವಾನಿಯಂತ್ರಿತ ಅಂಗಡಿಯ
ಗಾಜಿನ ಒಳಗೆ ಇಟ್ಟು
ಮಾರುವರು,
ಇನ್ನು ಕೆಲವರು
ಮುಚ್ಚಿದ ಯಾವುದೋ
ಅಂಗಡಿಯ ಎದುರೊ
ಅಥವಾ ಫೂಟ್ಪಾತ್ ನ ಮೇಲೆ .

ನಾವು ಕೂಡ ಹಾಗೆ
ಯಾರದೋ ಕಾಲುಗಳಿಗೆ ಸಿಕ್ಕಿಕೊಂಡು,
ಕೆಲವೊಂದು ,
ಹವಾನಿಯಂತ್ರಿತ ಅಂಗಡಿಯಿಂದ
ವಾತಾನುಕೂಲ ಕಾರುಗಳಲ್ಲಿ
ಹವಾನಿಯಂತ್ರಿತ ಆಫೀಸ್ ಗೆ.
ಇನ್ನು ಕೆಲವು,
ಫುಟ್ಪಾತ್ನಲ್ಲಿ ಅವಸರ
ಅವಸರವಾಗಿ ಸಿಕ್ಕಿಸಿಕೊಂಡು
ಮತ್ತದೇ ಫುಟ್ಪಾತ್ ಅಳೆಯುತ್ತೇವೆ .
ಹವಾಮಾನ ಪ್ರತಿಕೂಲ
ಎಲ್ಲವು ಜನ್ಮದ ಮೂಲ !!.

ಮೊನ್ನೆ ಅದಾವುದೊ
ದೇವಸ್ಥಾನದ ಎದುರು
ಹಾಗೆ ನಿಂತಿದ್ದೆವು
ಒಂದರ ಜೊತೆ ಇನ್ನೊಂದು.
ಕೆಲವೊಂದು ಹವಾನಿಯಂತ್ರಿತ
ಕೊಠಡಿಯಿಂದ ಬಂದವುಗಳು
ಇನ್ನು ಕೆಲವು ಫುಟ್ಪಾತ್ ಅಲೆದಾಡಿದವುಗಳು.
ಆತನ ಮುಂದೆ
ಎಲ್ಲವು ಒಂದೇ... !!.

ಎಲ್ಲರು ಒಂದೊಂದು
ಕಾಲು ಹತ್ತಿದವು
ಕಾಲ್ಕಿತ್ತವು.
ನಾ ನನ್ನ ಕಾಲಿಗೆ ಕಾಯುತಿದ್ದೆ,
ಕಾಲು ಹವಾನಿಯಂತ್ರಣ
ಬೇಡುತಿತ್ತು,
ನಾ ಫುಟ್ಪಾತ್ ಅಳೆಯುತ್ತಿದ್ದೆ
ಚಿಂದಿ ಆಗುವವರೆಗೆ ,
ಯಾರೋ ನನ್ನ ಚಿಂದಿ ಆಯುವವರೆಗೆ.... !!.



---------------------------------------------------------ಸುಕೇಶ್ ಪೂಜಾರಿ (ಸುಕೇಪು)



Saturday, August 25, 2018

ಮೂಷಿಕ ಪುರಾಣ


"ಇದೇನಿದು.... ? , ಗರುಡ ಪುರಾಣ, ಸ್ಕಂದ ಪುರಾಣ ಮತ್ತಿತರ ಪುರಾಣಗಳ ನಡುವೆ ಈ ಮೂಷಿಕ ಪುರಾಣ . ಹೌದು ಇತ್ತೀಚೆಗೆ ಆಫೀಸ್ನಲ್ಲಿ ಇಲಿಗಳ ಹಾವಳಿ ಜಾಸ್ತಿಯಾಗಿದೆ . ಅವುಗಳು ತಮ್ಮ ರಾಜಧಾನಿಯನ್ನು ನನ್ನ ಆಫೀಸ್ ನ  ಫಾಲ್ ಸೀಲಿಂಗ್ ನ ಒಳಗಡೆ ಕಟ್ಟಿ ಬಹಳ ದಿನಗಳಾಗಿವೆ .  ನಾನು ಆಫೀಸ್ ಬಿಡುವಾಗ ರಾತ್ರಿ ಒಂಬತ್ತು ಘಂಟೆಯಾಗುತ್ತದೆ, (ಕೆಲಸದ ಒತ್ತಡವಲ್ಲ ,ಬೆಳಿಗ್ಗೆ ಲೇಟ್ ಹೋಗುವ ಕಾರಣ  ಅಷ್ಟೇ ) ಸಹೋದ್ಯೋಗಿಗಳೆಲ್ಲ ಸಂಜೆಯಾಗುತ್ತಿದ್ದಂತೆ ಮನೆಗೆ ಹೋದರೆ ಈ ಇಲಿಗಳೇ ನನ್ನ ಒಂದಷ್ಟು ಹೊತ್ತಿನ ಸಂಗಾತಿಗಳು.ಅವೂ ಅಷ್ಟೇ ಎಲ್ಲರು ಹೋದಾಗಲೆ ಆಚೆ ಬರುತ್ತವೆ. ನಾನು ಸಂಜೆ ಉಳಿದ ಒಂದೆರಡು ಸ್ನಾಕ್ಸ್ ಮತ್ತು ಬಾಳೆಹಣ್ಣು ಇಟ್ಟು ಅವುಗಳ ಹೊಟ್ಟೆ ತುಂಬಿಸುದು ಸುಳ್ಳಲ್ಲ.

ಗೆಳೆಯನೊಬ್ಬ ಹೇಳುತಿದ್ದ ಈ ಇಲಿಗಳ ಕಾಟ ಯಾಕೋ ಜಾಸ್ತಿಯಾಗುತ್ತಿದೆ , EHS ಗೆ ಹಿಡಿಯಲು ಹೇಳಬೇಕು .ಇಲಿಗಳು ನಮಗೆ ಕಾಟ ಕೊಡುವುದೇ ಅಥವ ನಾವು ಇಲಿಗಳಿಗೆ ಕಾಟ ಕೊಡುವುದೇ .. . . ?
ಇದೇ ಆಫೀಸಿನ ಜಾಗದಲ್ಲಿ , ಇವೇ ಇಲಿಗಳ ತಾತ ಮುತ್ತಾತಂದಿರು ಬಿಲಗಳ ಮಾಡಿ ವರುಷಾನುಗಟ್ಟಲೆ ಬದುಕಿರಬಹುದು ಆದರೆ ನಾವು ಬಂದು ಅದೆಲ್ಲವ ನೆಲಸಮ ಮಾಡಿ ಬಹು ಅಂತಸ್ತಿನ ಕಟ್ಟಡಗಳ ಕಟ್ಟಿದ್ದಾಯಿತು, ಪಾಪ ಇಲಿಗಳು ಎಲ್ಲಿಗೆ ಹೋಗಬೇಕು , ಅವುಗಳಿಗು ಇರಲೊಂದು ಜಾಗ ಬೇಕು ತಾನೇ . ಈ ಭೂಮಿಯಲ್ಲಿ ಎಲ್ಲರಿಗು ಹಕ್ಕಿದೆ ಆದರೆ ಹಕ್ಕು ಕೇಳಲು ಇಲಿ ಕೋರ್ಟ್ ಗೆ ಹೋಗಲಾದೀತೇ ? ಅದಕ್ಕೆ ಇರಬೇಕು ಅದು ಮತ್ತೆ ಅದೇ ಕಟ್ಟಡದೊಳಗೆ ಬಿಡಾರ ಹೂಡಿದ್ದು ಸೇಡು ತೀರಿಸಿಕೊಳ್ಳಲು .

ಇಲಿಗೇನು ಗೊತ್ತು ಇದು ಶ್ರೀಯುತರ ಕಟ್ಟಡವೆಂದು . ಅದು ಬಹುಶ ಯೋಚಿಸರಬಹುದು ವಂಶಪಾರಂಪರ್ಯವಾಗಿ ಬಂದ ಬಿಲಗಳು ನೆಲಸಮವಾದುದಕ್ಕೆ ಯಾರೋ ಪರಿಹಾರವಾಗಿ ಮೂರು ಅಂತಸ್ತಿನ ಕಟ್ಟಡದೊಳಗೆ  ಜಾಗ ಕೊಟ್ಟಿದ್ದಾರೆಂದು !!.

ಇಲಿಗಳ ಬದುಕು ತುಂಬಾ ಸುಂದರವಾದದ್ದು. ಇರಲೊಂದು ಸೂರು ಮತ್ತು ಹೊಟ್ಟೆಗೊಂದಿಷ್ಟು ಆಹಾರ ಬಿದ್ದರೆ ಸಾಕು ಅಷ್ಟೇ ವಂಶಾಭಿವೃದ್ದಿ ಮಾಡಿಕೊಂಡು ನೆಮ್ಮದಿಯಾಗಿರುತ್ತವೆ . ಅದೇ ಮನುಷ್ಯನಿಗೆ . . . . . !! ಎಷ್ಟು ಇದ್ದರು ಸಾಲದು ಎಲ್ಲವು ಬೇಕು , ಎಲ್ಲ ಇದ್ದರೆ ಇನ್ನೂ ಏನೋ ಬೇಕು ಅದು ಏನು ಎನ್ನುದು ತಿಳಿಯದೆ, ಇರುವುದನ್ನು ಅನುಭವಿಸದೆ ಕೊರಗುತ್ತಾನೆ . ಇಲಿಗೆ ಒಂದೇ ವಸ್ತುವಿನ ;ಮೇಲೆ ಮೋಹ ಅಥವಾ ಆಸೆ ಅದು ಆಹಾರ ( ಇಲಿಯ ವೀಕ್ನೆಸ್ ), ಅದನ್ನೇ ಆಯುಧವಾಗಿ ಹಿಡಿದುಕೊಂಡು ನಾವು ಅದನ್ನುಆ ಮೋಹಜಾಲದಲ್ಲಿ ಬೀಳಿಸಿ  ಕೊಲ್ಲಲು , ಹಿಡಿಯಲು ಪ್ರಯತ್ನಿಸುತ್ತವೆ , ಆಹಾರಕ್ಕೆ ವಿಷಹಾಕಿಯೊ ಅಥವಾ ಆಹಾರವನ್ನು ಬೋನಿನ ಒಳಗೆ ಇಟ್ಟು ಹಿಡಿಯುದು ಸಾಮಾನ್ಯ . ಇಲಿಗೇನೋ ಒಂದೇ ವೀಕ್ನೆಸ್ ಆದರೆ ಮನುಷ್ಯನಿಗೆ ?!!!, ಹೆಣ್ಣು, ಹೊನ್ನು,ಮಣ್ಣು ಇನ್ನು ಏನೇನೋ ವ್ಯಾಮೋಹ ಇವಕ್ಕೆ ಬಲಿಯಾಗಿ ಎಷ್ಟೊಂದು ಜನ ಬೋನಿನೊಳಗೆ  ವಿಲಿ ವಿಲಿ ಒದ್ದಾಡಿದ್ದು ನೋಡಿಲ್ಲ .

ಡಿ .ವಿ .ಜಿ  ಅವರು ತಮ್ಮ ಒಂದು ಕಗ್ಗದಲ್ಲಿ ಹೀಗೆ ಬರೆದಿದ್ದಾರೆ .

ದನ ಸಿಂಗ ಹುಲಿ ಹಕ್ಕಿ ಹಾವು ಮೀನ್ ಗಳಿಗೆಲ್ಲ।
ಇನಿಸುಣಿಸು ,ಬೆದೆ ಬೇಡರು -ಅಷ್ಟೆ ಜೀವಿತವು।।
ಮನುಜನೆಂತನಿತರಿಂ ತೃಪ್ತಿವಡೆವನವಂಗೆ।
ಕ್ಷಣಕ್ಷಣವು ಹೊಸ ಹಸಿವು -ಮಂಕುತಿಮ್ಮ ।।

ದನ,ಸಿಂಹ, ಹುಲಿ, ಹಕ್ಕಿ, ಹಾವು, ಮೀನು ಮಂತಾದ ಪ್ರಾಣಿಗಳಿಗೆ ಹಸಿವಾದಾಗ ಆಹಾರ, ಸಂತಾನಾಭಿವೃದ್ಧಿ ಮತ್ತು ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೆ ಪೂರಕವಾದ ಅವಶ್ಯಕತೆಗಳನ್ನು ಬಿಟ್ಟರೆ ಬೇರಾವ ಆಸೆಗಳೂ ಇರದು ಮತ್ತು ಅವುಗಳ ಜೀವಿತವು ಅಷ್ಟಕ್ಕೇ ಸೀಮಿತವು. ಆದರೆ ಕೋಟ್ಯಂತರ ಆಸೆ ಆಕಾಂಕ್ಷೆಗಳ ಆಗರವೇ ಆದ ಮನುಷ್ಯ ಎಂದಿಗೂ ತೃಪ್ತನಾಗುವುದೇ ಇಲ್ಲ. ಕ್ಷಣ ಕ್ಷಣವೂ ಅವನ ಆಸೆಗಳ ಹಸಿವು ಅಧಿಕವಾಗುತ್ತಲೇ ಇರುತ್ತದೆ ಮತ್ತು ಅದಕ್ಕೆ ಕೊನೆಯಿಲ್ಲ . 

ಮನುಷ್ಯನಷ್ಟು ಸ್ವಾರ್ಥಿ ಪ್ರಾಣಿ ಇನ್ನೊಂದಿಲ್ಲ. ಮನುಷ್ಯ ಯಾವತ್ತು ಈ ಕ್ಷಣದಲ್ಲಿ ಬದುಕುದಿಲ್ಲ, ಅವನ ಮನಸ್ಸು ಯಾವಾಗಲು ಆಗಿಹೋದ ನಿನ್ನೆ ಬಗ್ಗೆಯೋ ಅಥವ ಬರುವ ನಾಳೆಯ  ಬಗ್ಗೆಯೋ ಯೋಚಿಸುತ್ತಿರುತ್ತದೆ. ಮನುಷ್ಯ ಈ ಕ್ಷಣವನ್ನು ನಿನ್ನೆಯೇ ಕಳೆದಿರುತ್ತಾನೆ ಅಥವಾ ನಾಳೆ ಯೋಚಿಸಿ ಕಳೆಯುತ್ತಾನೆ."ಇಂದು" ಎಂಬುವುದು ಬರೀ ಕೆಲವೊಂದು ಫೋಟೋಗಳಲ್ಲಿ ಅಷ್ಟೇ ಇರುತ್ತದೆ. ಮನುಷ್ಯ ತನಗಾಗಿ ಮತ್ತು ತನ್ನವರಿಗಾಗಿ ಬದುಕುತ್ತಾನೆ. ನಾಳೆಗಾಗಿ, ತಮ್ಮವರಿಗಾಗಿ ಶೇಖರಿಸುವ ಬುದ್ದಿ ಇರುವುದು ಮನುಷ್ಯನಿಗೆ ಮಾತ್ರ, ಬೇರೆ ಯಾವ ಪ್ರಾಣಿಯು ಹೊಟ್ಟೆ ತುಂಬಿದ ಮೇಲೂ ನಾಳೆಗಾಗಿ ಅಥವಾ ಮೋಜಿಗಾಗಿ ಬೇಟೆಯಾಡುದಿಲ್ಲ.ಹುಲಿ ಜಿಂಕೆಗಳ ಹಿಂಡಿಗೆ ದಾಳಿ ಮಾಡಿದರೆ ಒಂದು ಜಿಂಕೆಯನ್ನು ಹಿಡಿದೀತು ಅದೇ ಮನುಷ್ಯನಾದರೆ ಅವನಿಗೆ ಎಲ್ಲವು ಬೇಕು , ಇಡೀ ಹಿಂಡೇ ಬೇಕು ಅದು ಸಾಲದೆ ಪಕ್ಕದ ಕಾಡಿನ ಪ್ರಾಣಿಗಳು ಬೇಕಾದೀತು !!.

ಕಾಡು ಬಿಟ್ಟು ಮನೆಗೆ, ಊರಿಗೆ ದಾಳಿಮಾಡುದು ಬರೀ ಇಲಿಗಳಿಗಷ್ಟೇ ಸೀಮಿತವಾದುದಲ್ಲ. ದಿನಪತ್ರಿಕೆಗಳಲ್ಲಿ ನೀವೂ ಓದಿರಬಹುದು , ಚಿರತೆ, ಕಾಡಾನೆ ಮುಂತಾದ ಕಾಡನ್ನೇ ನಂಬಿ ಬದುಕುವ ಪ್ರಾಣಿಗಳು ಕಾಡು ನಾಶವಾದಾಗ  ಆಹಾರ ಹುಡುಕಿಕೊಂಡು ನಾಡಿನ ಕಡೆಗೆ ಬರುತ್ತವೆ. ಈ ಕಾಡುಗಳನ್ನೆಲ್ಲ ನಾಶಮಾಡಿ ,ನಮ್ಮ ಊರಿನ ವಿಸ್ತಾರ ಹೆಚ್ಚಿಸಿ ಇಂತಹ ಪರಿಸ್ಥಿತಿ ಸೃಷ್ಟಿಮಾಡಿದವರು ನಾವೇ ತಾನೇ. ಕಾಡಿನ ಮೇಲೆ , ಪೃಕೃತಿಯ ಮೇಲೆ ಹಸ್ತಕ್ಷೇಪ ಮಾಡಿರುವುದರಿಂದಲೇ ಇಂದು ವನ್ಯ ಜೀವಿಗಳು ನಾಡಿನೆಡೆಗೆ ಬರುವಂತಾದುದು. ಅವು ನಾಡಿಗೆ ಬಂದದ್ದಲ್ಲ ನಾವು ಕಾಡಿಗೆ ಹೋದದ್ದು, ಅವುಗಳ ಮನೆಯನ್ನು ದೋಚಿದ್ದು. ಪಾಪ ಅವುಗಳು ಇನ್ನೆಲ್ಲಿಗೆ ಹೋಗಬೇಕು??!!.

 "ಬದುಕುದು ಎಲ್ಲ ಜೀವಿಗಳ ಹಕ್ಕು".

ನಮ್ಮ ಪೂರ್ವಜರು, ಇಲಿ, ಹಾವು, ಹುಲಿ ಮುಂತಾದ ಪ್ರಾಣಿಗಳನ್ನು ದೇವರುಗಳ ಜೊತೆ ಕೂರಿಸಿ ಪೂಜೆಮಾಡುತಿದ್ದದು ಇದೇ ಕಾರಣಕ್ಕೆ . ಅವುಗಳಿಗು ತಮ್ಮ ತಮ್ಮ ಸ್ಥಾನ ಸಿಗಲಿ ಎಂದು , ಸ್ವಲ್ಪ ಭಯ ಭಕ್ತಿ ಇರಲಿ ಎಂದು.ಆನೆ ,ಇಲಿ,ಸಿಂಹ ,ಹಾವು,ಚಿರತೆ ,ಮುಂತಾದವು ಎಲ್ಲವು ದೇವರ ವಾಹನ , ಆದರೆ ಮನುಷ್ಯ ಮಾತ್ರ ಯಾವ ದೇವರ ವಾಹನ ಆಗದಿರುವುದು ವಿಪಾರ್ಯಾಸ!!.ಇತರ ಪ್ರಾಣಿಗಳಿಗಿರುವ ಆ ವಿಶೇಷ ಸ್ಥಾನ ಈ ಬಡಪಾಯಿ ಮನುಷ್ಯನಿಗಿಲ್ಲ. ಎಂತಹ  ನಾಚಿಕೆ. ಆದರು ಮನುಷ್ಯ ಮಾತ್ರ ಶ್ರೇಷ್ಠ ಪ್ರಾಣಿ .

ಮೊನ್ನೆ ಮೊನ್ನೆ ನಮ್ಮ ಊರಿನಲ್ಲಿ ಒಂದು ಗುಡ್ಡವನ್ನೇ ಕಡಿದು ನೆಲಸಮ ಮಾಡಿದರು, ಆದರೆ  ಅಲ್ಲೇ ಒಂದಷ್ಟು ಜಾಗ ಹಾಗೇ ಬಿಟ್ಟಿದ್ದವು, ದಪ್ಪ ದಪ್ಪದ ಮೂರು -ನಾಲ್ಕು ಮರಗಳು ಇತರ ತಮ್ಮವರನ್ನು ಕಳೆದುಕೊಂಡು ಹಾಗೇ ನಿಂತಿದ್ದವು ,ಮಾರಣಹೋಮಕ್ಕೆ ಸಾಕ್ಷಿಯಾಗಿ. ಅಲ್ಲೇ ಇದ್ದ ಯಾರನ್ನೋ ಕೇಳಿದೆ " ಆ ನಾಲ್ಕು ಮರಗಳನ್ನು ಯಾಕೆ ಬಿಟ್ಟದ್ದು ?" " ಅಲ್ಲಿ ನಾಗನ ಬನವಿದ" ಕಾನೂನಿಂದ ತಡೆಯಲಾಗದ್ದು ಒಂದು ನಂಬಿಕೆ ಮತ್ತು ಅದಕ್ಕೆ ಪ್ರತೀಕವಾದ ಒಂದು ಕಲ್ಲು ಆ ಮರಗಳನ್ನು ರಕ್ಷಿಸಿತ್ತು.

ಇನ್ನೇನೋ ವಿನಾಯಕ ಚತುರ್ಥಿ ಬರಿತ್ತಿದೆ . ಗಣಪನ ಜೊತೆಗೆ  ಇಲಿಯ  ಮೂರ್ತಿಗೂ  ಪಂಚಕಜ್ಜಾಯ, ಲಡ್ಡು ಇಟ್ಟು ಪೂಜೆ ಮಾಡುತ್ತಾರೆ. ಅದೇ ಜನ ಪೂಜೆ ಮುಗಿದು ಗಣಪತಿಯ ಆಚೆ ನೀರಿಗೆ ತಳ್ಳಿದಮೇಲೆ ,ಕಜ್ಜಾಯ ತಿನ್ನಲು ಇಲಿ ಬಂದರೆ ಹೊಡೆದು ಸಾಯಿಸುತ್ತಾರೆ . ಈ ಭಕ್ತಿಯೆಲ್ಲ ಬರೀ ಸಂಪ್ರದಾಯ ಮತ್ತು ತೋರಿಕೆಯ ಆಚರಣೆಯಷ್ಟೇಯಾಗಿ ಉಳಿದಿದೆ, ನಿಜ ಜೀವನದಲ್ಲಿ ಅದನ್ನು ಆಚರಿಸುವವರು ಕಡಿಮೆ. ಹೀಗೆ ಮುಂದುವರಿದರೆ ಎಷ್ಟೋ ಪ್ರಾಣಿಗಳು , ಕ್ರಿಮಿ ಕೀಟಗಳು ಈ ಭೂಮಿಯಿಂದ ಕಣ್ಮರೆಯಾದಾವು ಆಗ ನಾವು ದೇವರುಗಳಿಗೆ ಇಲೆಕ್ಟ್ರಾನಿಕ್ ವಾಹನಗಳ ನೀಡಬೇಕಾದೀತು.



--------------------------------------------------------------------ಸುಕೇಶ್ ಪೂಜಾರಿ



Monday, July 16, 2018

ದೀವಟಿಗೆ

ಎದೆಯ ಚಾವಡಿಯಲ್ಲಿ
ನೀ ನಗೆಯ ಹೂ ಮುಡಿದು
ಬಂದು ನಿಂತಾಗ
ಕನಸ ದೀವಟಿಗೆಯೊಂದು
ಹಾಗೇ ಹೊತ್ತಿಕೊಂಡಿತು ,
ಬೆಳಕು ಚೆಲ್ಲಿತು,

ಬಿಂಬಗಳೊಳಗೆ
ಪ್ರತಿಬಿಂಬ ಕೂಡಿ,
ನಾಚಿಕೆಯ ಕಂಬದಾಚೆಯಿಂದ
ಇಣುಕಿ ನೋಡಿ
ತೂಗುತಿದ್ದ ಹೆರಳ
ನೀ ಬೆರಳ ಅಂಚಿನಲ್ಲೇ ತೀಡಿ
ಹುಬ್ಬು ಕುಣಿಸಿದಾಗ
ಮಾಸದ ಬೆರಗ
ಚಿತ್ರವೊಂದು ಮೂಡಿಕೊಂಡಿತು.

ಸುತ್ತ ಕನಸ ಚಿತ್ತಾರ
ಲಘುಬಗೆಯ ಬಗೆಗೆ.
ತುಟಿಯ ರಂಗೋಲಿಯ
ಸುತ್ತ ಮಾತಿನ ಹಣತೆ,
ತೀರದ ದಾಹಕ್ಕೆ
ಮತ್ತೆ ಮತ್ತೆ ಬಲಿಯಾಗುದು
ಎದೆಯ ಮಿಡತೆ.

ಕನಸ ಕಾನನದೊಳಗೆ
ನಾ ಒಂಟಿ ಜೀವಿ,
ನೆನಪು ಜಂಟಿ ನಳಿಕೆಯ
ಹಳೆಯ ಕೋವಿ,
ಹೊಗೆಯಾಡುವುದು
ಸದ್ದು ಮಾಡದೆ,
ಜೊತೆಯಾಗುವುದು
ಸುದ್ದಿ ಇಲ್ಲದೆ.



--------------------------------------------------------------------ಸುಕೇಶ್ ಪೂಜಾರಿ

Saturday, June 30, 2018

ಒಂದು ತಪ್ಪಿನ ಸುತ್ತ



"ಹೇ ನಿನಗೆ ವೇದ ಗೊತ್ತಾ ..... ??".

ಆ ಕಡೆಯಿಂದ ಗೆಳೆಯನೊಬ್ಬ ಫೋನ್ ಮಾಡಿ ಹಾಗೆ ಕೇಳಿದ್ದ,

"ಹೌದು ಗೊತ್ತು , ಋಗ್ವೇದ, ಯಜುರ್ವೇದ , ಸಾಮ..... "

"ಅದಲ್ಲವೋ , ನಿನಗೆ  BSc ಯಲ್ಲಿ Physics ಕಲಿಸುತಿದ್ದರಲ್ಲ ಅವರು "

ಅವನ ದನಿಯಲ್ಲಿ ನನ್ನ ಬಗ್ಗೆ ಅದೇನೋ ಕಂಡುಹಿಡಿದ ಹೆಮ್ಮೆ ಮತ್ತು ಅದಕ್ಕಿಂತಲೂ ಅದರ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿಯುವ ಕುತೂಹಲ ಇತ್ತು .

ಹೌದು ಆಕೆ ವೇದ, ನಮ್ಮ ಫಿಸಿಕ್ಸ್ ಟೀಚರ್ , ಆಗಷ್ಟೇ MSc ಮುಗಿಸಿ ನಮ್ಮ ಕಾಲೇಜಿಗೆ ಅಧ್ಯಾಪಕಿಯಾಗಿ ಸೇರಿಕೊಂಡಿದ್ದರು. ಅವರದ್ದು ಮೊದಲ ವೃತ್ತಿ . ಅಧ್ಯಾಪನ ಅಂದ್ರೆ ನಿಮಗೆ ಗೊತ್ತಿರಬಹುದಲ್ಲ ,ತಮಗೆ ಗೊತ್ತಿಲ್ಲದನ್ನು ಇನ್ನೊಬ್ಬರಿಗೆ ಅರ್ಥವಾಗದಂತೆ ಹೇಳುದನ್ನು ಅಧ್ಯಾಪನ ಅನ್ನುತ್ತಾರೆ!!!. ಆಗಷ್ಟೇ MSc ಮುಗಿಸಿ ಬಂದಿದ್ರು , ಇನ್ನು ಕೇಳುದು ಬೇಡ , ಅವರು ಓದದಿದ್ದರು ನಾವು ಸ್ವಲ್ಪ ತಿಳಿದುಕೊಳ್ಳಲಿ ಅನ್ನುದು ಬಹುಶಃ ಅವರ ಪ್ರಾಮಾಣಿಕ ಪ್ರಯತ್ನ ಇರಬೇಕು, ಸಣ್ಣ ವಯಸ್ಸು ನಮಗೆ ನಮ್ಮ ಸೀನಿಯರ್ಸ್ ಅನ್ನು ಕಂಡ ಹಾಗೆ ಆಗುತಿತ್ತು, ಅದಲ್ಲದೆ ಆ ಕಾಲೇಜಿನಲ್ಲಿ ಹೀಗೆ ಒಂದು ವರ್ಷಕೆ ತರಬೇತಿಗೆಂಬಂತೆ  ಬಂದು ಹೋಗುವವರು ತುಂಬಾ ಜನ ಸಿಗುತ್ತಾರೆ ಅದಕ್ಕೇ ಇರಬೇಕು ಬಹುಷಃ ನಾವು ಈ ಮಹಿಳಾ ಮಣಿಗಳನ್ನು ನಮ್ಮ ಕಾಲೇಜು ದಿನಗಳಲ್ಲಿ ಅಷ್ಟು ಸೀರಿಯಸ್ ಆಗಿ ತಗೊಳ್ಳದೆ ಇದ್ದದ್ದು.

ಅದು ನಾನು ಓದಿದ ಡಿಗ್ರಿ ಕಾಲೇಜು , ಓದಿದ್ದು ಅನ್ನದಕ್ಕಿಂತ ಮೂರು ವರುಷ ಕಳೆದದ್ದು ಅನ್ನುದು ಸೂಕ್ತ. ಸಾಹಿತ್ಯದಲ್ಲಿ ಇದ್ದ ನನ್ನ ಅಭಿರುಚಿಗೆ ವಿಜ್ಞಾನ ಅಷ್ಟಾಗಿ ರುಚಿಸುತ್ತಿರಲಿಲ್ಲ, ಹಾಗಾಗಿ ತರಗತಿಗಳಲ್ಲಿ  ನನಗೆ ನನ್ನದೇ ಲೋಕವನ್ನು ಸೃಷ್ಟಿಸಿಕೊಂಡು  ಆರಾಮಾಗೆ ಇದ್ದೆ.
ನಮ್ಮದೊಂದು ವಿಚಿತ್ರ ತರಗತಿ ಇದ್ದದ್ದು 12 ಜನ, ಅದರಲ್ಲಿ 6 ಕೆಮಿಸ್ಟ್ರಿ ಮೇಜರ್ ಇನ್ನುಳಿದ 6 ಕಂಪ್ಯೂಟರ್ ಸೈನ್ಸ್ ಮೇಜರ್ . ನಾನು ಕೆಮಿಸ್ಟ್ರಿ ಮೇಜರ್ ನಮ್ಮ 6 ಜನರಲ್ಲಿ ಒಂದು ಹುಡುಗಿಯು ಇಲ್ಲ , ಇದ್ದ 4 ಹುಡುಗಿಯರು ಕಂಪ್ಯೂಟರ್ ಸೈನ್ಸ್. ಹುಡುಗಿಯರು ಎಲ್ಲ ಕೆಮಿಕಲ್ ಗಳಿಗೆ ಹೆದರಿ CPU ಒಳಗೆ ಸೇರಿಕೊಂಡ ಹಾಗಿತ್ತು. ಕಾಮನ್ ಕ್ಲಾಸುಗಳಾದ ಗಣಿತ ,ಭೌತಶಾಸ್ತ್ರ   ಒಟ್ಟಿಗೆ ಇರುತಿತ್ತು ಈ ಕ್ಲಾಸುಗಳಲ್ಲೇ ನಮ್ಮ ಕಿತಾಪತಿ ಜಾಸ್ತಿ . ಕಿತಾಪತಿಯನ್ನು ಸ್ವಲ್ಪ ಸಿಂಪಲ್ ಆಗಿ ಹುಡುಗಿಯರ ಮುಂದೆ ತೋರುವ  ಪೌರುಷ ಅನ್ನಬಹುದು!!!.

ಕೆಮಿಸ್ಟ್ರಿ ಕ್ಲಾಸಿನ   ಆರು  ಜನ ಹುಡುಗರ ಬಗ್ಗೆ ನಾನು ಇಲ್ಲಿ ಹೇಳಿಕೊಳ್ಳದಿದ್ದರೆ ಬೇರೆ ಎಲ್ಲೂ ಯಾರೊ ಹೇಳಿಕೊಳ್ಳುದಿಲ್ಲ!!. ಸ್ಟೀವನ್ ,ಸ್ವಲ್ಪ ಎತ್ತರ, ನೋಡೋಕೆ ಚೆಂದ ಇದ್ದ , ನಮ್ಮ ಕ್ಲಾಸ್ ಹುಡುಗಿಯರು ಮಾತಾಡೋಕೆ ಸಾಲದೇ , ಸೀನಿಯರ್ಸ್ , PUC ಹುಡುಗಿಯರೆಲ್ಲ ಪರಿಚಯ ಮಾಡಿಸಿಕೊಂಡಿದ್ದ, ಚೇತನ್ , ಆಗಿನ ಕಾಲದಲ್ಲೇ ಎರಡು ಮೊಬೈಲ್ ಫೋನ್ , ಡಿಸ್ಕವರ್ ಬೈಕ್ , ಮುಂದಿನದು ನಾನು ಹೇಳಬೇಕಾಗಿಲ್ಲ ನಿಮ್ಮ ನಿಮ್ಮ ಯೋಚನೆಗೆ ಬಿಟ್ಟದ್ದು , ಇನ್ನು ನಾನು ಹಳ್ಳಿಯಿಂದ ಬಂದವ,ಒಂದಷ್ಟು ದಿನ ಮಧ್ಯಾಹ್ನದ ಊಟಕ್ಕೆ ಬುತ್ತಿ ತಗೊಂಡು ಹೋಗುತಿದ್ದೆ , ಮತ್ತೆ ಸ್ವಲ್ಪ ಸಮಯದ ನಂತರ ಜೈನ ಮುನಿಗಳ ಆಶೀರ್ವಾದದಿಂದ ಬಿಸಿಯೂಟ ಕೊಡುತಿದ್ದರು. ಕಾಲೇಜು , ತಿರುಗಾಟ, ವಯೋ ಸಹಜ ಪೋಲಿಗಳು ಇತ್ಯಾದಿ ಎಲ್ಲ ಹೊಸತು . ನಮ್ಮ ಮೂವರದ್ದು ಜನುಮದ ಗೆಳೆತನ . ತಿರುಗಾಡಲು ಚೇತನ್ ನ ಬೈಕ್ ಇತ್ತು , ಸ್ಟೀವನ್ ತಾಯಿ ವಿದೇಶದಲ್ಲಿ ಇದ್ದದ್ದರಿಂದ ಅಲ್ಪ ಸ್ವಲ್ಪ ದುಡ್ಡು ಬರುತಿತ್ತು , ನಾನು ಇಬ್ಬರ ನಡುವೆ ಒಗ್ಗಿ ಹೋಗಿದ್ದೆ , ಇನ್ನು ಇಬ್ಬರು ಗಾಂಧಿ ಪೀಸ್ , ಜಾಸ್ತಿ ಹೇಳಬೇಕಾಗಿಲ್ಲ ಇಲ್ಲಿ ಬರುವ ಪಾತ್ರಗಳಿಗೆ ಮುಖ್ಯವಾದುದಲ್ಲ, ಮತ್ತೊಬ್ಬ, ಅತ್ತ ನಮ್ಮ ಕಡೆಗೂ ಅಲ್ಲ  ಗಾಂಧಿವಾದಿಯು ಅಲ್ಲ ಒಂದು ತಟಸ್ಥ ಧೋರಣೆ .

ಎಲ್ಲ ಡಿಗ್ರಿ ಕಾಲೇಜುಗಳಂತೆ ನಮ್ಮದು ನಡೆದಿತ್ತು , ವಿಶೇಷವೇನು ಇಲ್ಲ, ಅದೇ ಕ್ಲಾಸುಗಳು , NCC, ವಾರ್ಷಿಕೋತ್ಸವ , ಇತ್ಯಾದಿ ಇತ್ಯಾದಿ. ನಾನು ಕಾಲೇಜು ಮ್ಯಾಗಜಿನ್ ಗೆ ಕತೆ-ಕವಿತೆ ಬರೆದುಕೊಂಡು , ಇತರ ಕಾಲೇಜುಗಳಲ್ಲಿ ಕವಿತೆ ವಾಚಿಸಿಕೊಂಡು, ತರಗತಿಗಳ ಮದ್ಯದಲ್ಲಿ  ಖಾಲಿ ಹಾಳೆಗಳ ಮೇಲೆ ಗೀಚಿಕೊಂಡು , ಕಾಲೇಜಿನ ಲೈಬ್ರರಿಯಲ್ಲಿ ಯಾವುದೋ ಕನ್ನಡ ಪುಸ್ತಕ ಓದಿಕೊಂಡು ಆರಾಮಾಗೆ ಇದ್ದೆ. ಹೀಗೆ ಎರಡು ವರುಷ ಹೇಗೋ ಮುಗಿದಿತ್ತು , ನಾವುಗಳು ಸೀನಿಯರ್ಸ್ ಆದ್ವಿ.

ರಕ್ಷಿತ ಮತ್ತು ಫೋನ್ ನಂಬರ್:

ಮೂರನೇ ವರ್ಷಕ್ಕೆ ನಮಗೆ ಕೆಮಿಸ್ಟ್ರಿ ಕ್ಲಾಸ್ ತೆಗೆದುಕೊಳ್ಳಲು ಒಬ್ರು ಮೇಡಂ ಬರ್ತಿದ್ರು , ಆಕೆಯ ಹೆಸರು "ರಕ್ಷಿತ" (ಹೆಸರು ಬದಲಾಯಿಸಲಾಗಿದೆ) ಅವರೇ ಈ ಕಥೆಯ ನಾಯಕಿ ಮತ್ತು ನಮ್ಮ ಬದುಕಿನ ಖಳನಾಯಕಿ!!. ಮೊದಲೇ ಹೇಳಿದಂತೆ ಕೆಮಿಸ್ಟ್ರಿ ಕ್ಲಾಸ್ನಲ್ಲಿ ಇದ್ದದ್ದೆಲ್ಲ ಹುಡುಗರೇ , ಈ ಮೇಡಂ ಮೊದ  ಮೊದಲು ನಾಚಿಕೊಂಡು ,ಬೋರ್ಡಿಗೆ ಅಂಟಿಕೊಂಡೇ ಏನೋ ಪಾಠ ಮಾಡುತಿದ್ದರು ಬಹುಶಃ ನೇರವಾಗಿ ಹೇಳಬೇಕೆಂದರೆ ನೋಟ್ಸ್ ಓದುತಿದ್ದರು !!. ನಮಗೂ ಪಾಠದ ಅವಶ್ಯಕತೆ ಇರಲಿಲ್ಲ ಪಾಸ್ ಆಗುವ ಧೈರ್ಯ ಇತ್ತು . ಇಂಟರ್ನಲ್ ಗಳಲ್ಲಿ ಹೇಗೆ ಪಾಸ್ ಆಗುತಿದ್ದೆವು ಅನ್ನುದು ನಾವು ಡಿಗ್ರಿಯಲ್ಲಿ ಮಾಡಿದ ಅತಿ ದೊಡ್ಡ ಹಗರಣಗಳಲ್ಲಿ ಒಂದು ಅದನ್ನು ಕಡೆಯದಾಗಿ ಹೇಳುತ್ತೇನೆ.

ಒಂದು ದಿನ ಕೆಮಿಸ್ಟ್ರಿ ಯ ಗಂಡು ಪಡೆ ಕೆಮಿಸ್ಟ್ರಿ ಲ್ಯಾಬ್ ನಲ್ಲಿ ಇತ್ತು,  ,ಲ್ಯಾಬ್ ಹೊರಗಡೆ  ಸ್ಟಾಫ್ ರೂಮಿನಲ್ಲಿ ರಕ್ಷಿತ ತನ್ನ ಫೋನ್ ಅಲ್ಲೇ ಬಿಟ್ಟು ಎಲ್ಲೋ ಹೋಗಿದ್ದರು ,ಚೇತನ್ ಗೆ ಅದೇನು ಅನ್ನಿಸಿತೋ , ಹೋಗಿ ಆಕೆಯ ಫೋನ್ ನಿಂದ ಅವನ ಫೋನ್ ಗೆ ಮಿಸ್ಸ್ಡ್ ಕಾಲ್ ಮಾಡಿ ನಂಬರ್ ಪಡೆದುಕೊಂಡ , ಅವನೇ ಹೇಳಿದಂತೆ ಅವನಿಗೆ ಯಾವುದೇ ದುರುದ್ದೇಶ ಇರಲಿಲ್ಲ , ಯಾಕೋ ಸ್ವಲ್ಪ attitude ತೋರಿಸುತ್ತಿದ್ದಳು ಅಂತಾನೋ ಅಥವಾ ಅವನಿಗೆ ಕ್ಲಾಸ್ ನಲ್ಲಿ ಏನೋ ಅಂದಳು ಅಂತ ಸ್ವಲ್ಪ ಸತಾಯಿಸುವ ಇರಾದೆ ಅಷ್ಟೇ . ಅಲ್ಲಿಂದ ಶುರುವಾಯಿತು ರಕ್ಷಿತ ಮೇಡಂ ಗೆ ಕಾಟ , ಕ್ಲಾಸ್ ಅಲ್ಲಿ ಇದ್ದಾಗ , ಬೇರೆ ಕ್ಲಾಸಲ್ಲಿ ಇರುವಾಗ ಮಿಸ್ಸ್ಡ್ ಕಾಲ್ ಮಾಡುದು , ಮೆಸೇಜ್ ಮಾಡುದು ಇತ್ಯಾದಿ . ಇಷ್ಟೆಲ್ಲ ವಿಷಯಗಳು ನನಗೆ ತಿಳಿದದ್ದು ಆಮೇಲೆ , ಜೊತೆಗೆ ಇದ್ದರು ಈ ತರದ ಕಿಲಾಡಿ ಕೆಲಸವೊಂದು ನನ್ನ ಗಮನಕ್ಕೆ ಬರದೇ ನಡೆಯುತಿತ್ತು.

ನಾನು : ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿತಂತೆ

ನನ್ನ ಹತ್ರ  ಫೋನ್ ಇರಲಿಲ್ಲ , ಯಾವುದೋ ವಿಷಯಕ್ಕೆ ನನಗೆ ಫೋನ್ ನ ಅವಶ್ಯಕತೆ ಇತ್ತು , ಬಹುಶಃ NCC ಕ್ಯಾಂಪ್ ಗೆ ಹೊರ ರಾಜ್ಯಕ್ಕೆ ಹೋಗಲಿಕ್ಕೆ ಇತ್ತು ಒಂದಷ್ಟು ಇತರ ವಿದ್ಯಾರ್ಥಿಗಳನ್ನು ಕರೆದುಕೊಂಡು , ನಾನು ಚೇತನ್ ಬಳಿ ಕೇಳಿ ಒಂದು ಫೋನ್ ಪಡೆದುಕೊಂಡೆ ಆತನ ಬಳಿ ಇನ್ನೊಂದಿತ್ತು (ನನಗೆ ಕೊಟ್ಟ ಫೋನ್ ಸ್ವಲ್ಪ ದಿನ ಸ್ವಿಚ್ ಆಫ್ ಇತ್ತಂತೆ , ವಿಷಯ ನನಗೆ ಕೊನೆಗೆ ಗೊತ್ತಾಯಿತು ), ಮನೆಗೆ ತಲುಪಿ ಚಾರ್ಜ್ ಮಾಡಿ ಸ್ವಿಚ್ ಆನ್ ಮಾಡಿದೆ ,

ರಕ್ಷಿತ ಮೇಡಂ ನ (ನನಗೆ ಇನ್ನೂ ತಿಳಿದಿರಲಿಲ್ಲ ಅದು ನಮ್ಮ ಮೇಡಂ ನಂಬರ್ ಎಂದು ) ಮೆಸೇಜ್ಗಳು ಸಾಲು ಸಾಲು ಬಂದು inbox ಸೇರಿತು, ಯಾಕೋ ಸ್ವಲ್ಪ ಗಾಬರಿಯಾಯಿತು ಏನೋ ಇದೆ ಈ phone ನಲ್ಲಿ. ಮತ್ತದೇ ನಂಬರ್ನಿಂದ ಕಾಲ್ ಬಂತು , ನನಗೇನು ಗೊತ್ತು ಅದು ನಮ್ಮ ಮೇಡಂ ದು ಎಂದು ನಾನು ಮಾತಾಡಿದೆ , ಅಲ್ಲಿಗೆ ಎಲ್ಲ ಬಯಲಾಗಿತ್ತು ನಾನು ವಿಲನ್ ಆಗಿದ್ದೆ.

ಚೇತನ್ ಗೆ ಕಾಲ್ ಮಾಡಿದೆ, ಯಾರೋ ಹುಡುಗಿ ಫೋನ್ ಮಾಡಿತ್ತು ಅಂತ, "ಅದು ರಕ್ಷಿತಾ ಮೇಡಂ ಪರವಾಗಿಲ್ಲ ಬಿಡು text ಮಾಡು ಮಾತಾಡು ಅಂದ" , ನಾನು ಏನು text ಮಾಡಿದೆ ಎಂದು ನೆನಪಿಲ್ಲ ಬಹುಶಃ ನಾವು ಅಂತ ಗೊತ್ತಾದರು ನಾವು ಅಲ್ಲ ಅಂತ prove ಮಾಡೋಕೆ ಏನೋ ಹೇಳಿರಬೇಕು (ನಾನು ಮಾಡಿದ ದೊಡ್ಡ ತಪ್ಪು ಅದೇ , ಇದ್ದದ್ದು ಇದ್ದ ಹಾಗೆ ಹೇಳಿದ್ದರೆ ನಾನು ಬಚಾವ್ ಆಗುತಿದ್ದೆ, ಬಹುಷಃ ನಾನು ಇದರ ಜೊತೆ ಸಿಕ್ಕಿ ಹಾಕಿಕೊಂಡಿದ್ದರಿಂದ ಇರಬೇಕು ಚೇತನ್ ಸ್ವಲ್ಪ ಮಟ್ಟಿಗೆ ಪಾರಾದದ್ದು !! ಇಲ್ಲದಿದ್ದರೆ ಆತನ ಕಾಲೇಜ್ ದಿನಗಳು ಅಲ್ಲಿಗೆ ಮುಗಿಯುತಿದ್ದವೋ ಏನೋ ಯಾಕೆಂದರೆ ಎಲ್ಲರಿಗು ಒಂದು ಕಣ್ಣಿತ್ತು ಅವನ ಮೇಲೆ ).

ಮರುದಿನದ  ಕಾಲೇಜು ನನ್ನ ಪಾಲಿನ ಕರಾಳ ದಿನ. ಈಗ ಕ್ಲಾಸ್ ಅಲ್ಲಿ ಎಲ್ಲರಿಗು ವಿಷಯ ತಿಳಿದಿದೆ ಇತರ ಮೇಡಂಗಳು ಅದೇನೋ ಸಂಶಯಾಸ್ಪದವಾಗಿ ನೋಡುತಿದ್ದರು. ಫಿಸಿಕ್ಸ್ ನ ಹಿರಿಯ ಅಧ್ಯಾಪಕಿಯಾದ ಶಾಲಿನಿ ಮೇಡಂ (ಹೆಸರು ಬದಲಾಯಿಸಲಾಗಿದೆ),  ನನ್ನನ್ನು ಮತ್ತು ಚೇತನ್ ನ  ಡಿಪಾರ್ಟ್ಮೆಂಟ್ ಗೆ ಕರೆದರು. ಅಲ್ಲಿ ಏನಾಯಿತು ಎನ್ನುದು ನಿಮ್ಮ ಊಹೆಗೆ ಬಿಟ್ಟದ್ದು , ಕಡೆಗೂ sorry ಹೇಳಿ ತಪ್ಪು ಒಪ್ಪಿಕೊಂಡದ್ದಾಯಿತು. ಮಾಡದ ತಪ್ಪಿಗೆ ನಾನು ಬಲಿಪಶುವಾಗಿದ್ದೆ,


Sometime legends makes mistake: 

ಆ ಮಾತು ಇನ್ನು ನೆನಪಿದೆ, ಮೊದಲೇ ಹೇಳಿದಂತೆ ಕತೆ, ಕವಿತೆ, NCC,NSS ಅಂತ ಎಲ್ಲರ ಜೊತೆ ಬೆರೆತು ಒಳ್ಳೆ ಹುಡುಗ ಅಂತ ಹೆಸರು ಮಾಡಿದ್ದ ನಾನು ಖಳನಾಯಕನಾಗಿದ್ದೆ, ಕಾಲೇಜು ದಿನಗಳು ಮುಗಿಯುತ್ತಿತ್ತು ಒಂದಷ್ಟು ಕ್ಲಾಸ್ ಮತ್ತು ಲ್ಯಾಬ್ ಬಾಕಿ ಇತ್ತು. ನನ್ನನ್ನು ಅತೀ ಹೆಚ್ಚು ಇಷ್ಟಪಡುತಿದ್ದಕೆಮಿಸ್ಟ್ರಿ HOD ಗೋವಿಂದಪ್ಪ ಸರ್ ಅವರ ಕೊನೆಯ ಕ್ಲಾಸ್ ನಡೆದಿತ್ತು ಕೊನೆಗೆ ಅದೇನೋ ಹೇಳಿ ಬೋರ್ಡು ಕಡೆ ತಿರುಗಿ " Sometime Legends Makes Mistake "  ಅಂದರು. ಎಲ್ಲ ಕ್ಲಾಸ್ ನ ಆಚೆ ನಡೆದರೆ ನಾನಿನ್ನು ಕ್ಲಾಸಿನಲ್ಲೇ ಇದ್ದೆ, ಕಣ್ಣ ಹನಿಗಳು ಕೆನ್ನೆಯಿಂದ ಜಾರುತಿದ್ದವು . lifeನಲ್ಲಿ ಅತ್ತ ಕೆಲವೇ ಬೆರಳೆಣಿಕೆಯ ಕ್ಷಣಗಳಲ್ಲಿ ಅದೊ ಒಂದು.

ಅವರು ಕರೆದು ಎರಡು ಪೆಟ್ಟು ಕೊಟ್ಟು , ಬೈದು ಕಳುಹಿಸುತಿದ್ದರೂ ಅಷ್ಟೊಂದು ನೋವು ಆಗುತ್ತಿರಲಿಲ್ಲವೋ ಏನೋ, ಎದೆಯೊಳಗೊಂದು ಅಚ್ಚಳಿಯದ ನೋವಿನ ಗೆರೆ ಹಾಗೆ ಜೋರಾಗಿ ಬಿದ್ದಿತ್ತು.

ಮೇಲಿನ ಘಟನೆಯ ಪರಿಣಾಮಗಳು ಹಲವು ,

ರಕ್ಷಿತಾ ಮೇಡಂ ಲ್ಯಾಬ್ ಎಕ್ಸಾಮ್ನಲ್ಲಿ ಕಡಿಮೆ ಮಾರ್ಕ್ ಕೊಟ್ಟು ಸೇಡು ತೀರಿಸಿಕೊಂಡಿದ್ದರು, ಅದರಿಂದಾಗಿ ಒಂದು ಮಾರ್ಕ್ ಅಂತರದಲ್ಲಿ ಯೂನಿವರ್ಸಿಟಿ free ಸೀಟ್ ಸಿಗಲಿಲ್ಲ, ಇಷ್ಟಪಟ್ಟು ಮಾಡುತಿದ್ದ NCC ಅರ್ಧಕ್ಕೆ ನಿಂತಿತು, ಎಲ್ಲಕ್ಕಿಂತ ಜಾಸ್ತಿ ಮೂರು ವರುಷ ಗಳಿಸಿದ್ದ  ನಂಬಿಕೆಯನ್ನು ಕಳೆದುಕೊಂಡಿದ್ದೆ. ಕಾಲೇಜ್ ದಿನದ ನೆನಪುಗಳಿಗೊಂದು ಸಣ್ಣ ಕಪ್ಪು ಚುಕ್ಕೆ ಹಾಗೇ ಅಂಟಿ ಕೊಂಡಿತ್ತು.


ಇಂಟರ್ನಲ್ ಮಾರ್ಕ್ಸ್ ನ ಹಗರಣ :

ಆಗಷ್ಟೇ ಕಾಲೇಜು ಲೈಬ್ರರಿ ಗೆ ಜೆರಾಕ್ಸ್ ಮಾಡಿಸಲು ಒಬ್ಬರು ಸೇರಿಕೊಂಡಿದ್ದರು , ಅವರು ನಮ್ಮ ಊರಿನವರೆ, ನನಗೆ ಗೊತ್ತಿರುವವರು. ಈ ಮಹಿಳಾ ಅಧ್ಯಾಪಕಿಯರು ಮತ್ತು ಇತರ ಅಧ್ಯಾಪಕರು ಪ್ರಶ್ನೆ ಪತ್ರಿಕೆ ಅಲ್ಲಿ ಜೆರಾಕ್ಸ್ ಮಾಡಲು ಕೊಟ್ಟರೆ, ಒಂದು ಪ್ರತಿ ಮೊದಲೇ ನಮಗೆ ತಲುಪುತಿತ್ತು. ನಿಜವಾಗಿ ಹೇಳಬೇಕು ಅಂದರೆ ಈ ಉಪಾಯ ಮೊದಲು ಹೊಳೆದಿರಲಿಲ್ಲ , ಕಡೆಯ ಕೆಲವು ಇಂಟರ್ನಲ್ examಗಳಿಗಂತೂ ತುಂಬಾನೇ ಅನುಕೂಲವಾಗಿತ್ತು ಯಾಕೆಂದರೆ ಮಹಿಳಾಮಣಿಗಳು ಸೇಡು ತೀರಿಸಿಕೊಳ್ಳಲು ಅತೀ ಕಷ್ಟದ ಪ್ರಶ್ನೆಗಳ ಹಣೆಯುತ್ತಿದ್ದರು .


ಕಡೆಯದಾಗಿ:

ಇಷ್ಟೆಲ್ಲ ಬರೆದದ್ದು ನಾನು ಮಾಡಿದ್ದು ಸರಿ ಅಥವಾ ಇನ್ನಾರೋ ಮಾಡಿದ್ದು ತಪ್ಪು ಎಂದು ಸಾರುವುದಕ್ಕಲ್ಲ, ಈವಾಗ ಒಮ್ಮೆ ಹಿಂತಿರುಗಿ ಆ ಘಟನೆಗಳ ನೋಡಿದರೆ  ಅವರವರ ದೃಷ್ಟಿಯಲ್ಲಿ ಎಲ್ಲವೂ ಸರಿ ಮತ್ತು ಎಲ್ಲವೂ ತಪ್ಪು  ಎಲ್ಲವು ಬದಲಾಗುತ್ತದೆ. ಬದುಕಿನ ಯಾವುದೋ ಕಹಿ ಘಟನೆ ಸ್ವಾರಸ್ಯಕ ಕತೆಯಾಗುತ್ತದೆ ಮತ್ತು ಸಣ್ಣ  ನಗು ಮೂಡಿಸುತ್ತದೆ.
ತಪ್ಪು ಯಾರದೇ ಇರಲಿ ಅದರಲ್ಲಿ ನನ್ನ ಪಾತ್ರವು ಇತ್ತು, ಒಪ್ಪಿಕೊಳ್ಳಬೇಕಾದದ್ದೆ. ಕ್ಷಮೆ ಇರಲಿ.... 



----------------------------------------------------------------------------ಸುಕೇಶ್  

Saturday, March 24, 2018

ನಮ್ಮದಲ್ಲದ ಮನೆಗೆ

ನಮ್ಮದಲ್ಲದ ಮನೆಗೆ 



ಅದು ಮನೆಯಿಂದ ಮನೆಗೆ ಪಯಣ
ನಮ್ಮದೇ ಹಳೇ ಟ್ರಂಕುಗಳು,
ಅದರೊಳಗಿನ ಒಂದಷ್ಟು ಸಾಮಾನುಗಳು
ಕಳಚಿಟ್ಟ , ಮತ್ತೆ ಹಾಕುವ
ಒಂದಷ್ಟು ಬಟ್ಟೆಗಳ ಹೊತ್ತು
ನಮ್ಮದಲ್ಲದ ಮನೆಗೆ

 ಪೋಷಿಸಿದ ಮನೆ ಎದುರಿನ
ಗುಲಾಬಿ ಗಿಡ
ನಾಚುತ್ತ ಸ್ವಾಗತಿಸುತ್ತದೆ,
ಹಿಂದೆ ಆ ಮನೆಯಲ್ಲಿದ್ದವರು ಬಿಟ್ಟು ಹೋದ
ಹಳೇ ಕನ್ನಡಿ
ಅಪರಿಚಿತತೆಯ ನಗು ಚೆಲ್ಲುತ್ತದೆ
ಗೋಡೆಮೇಲಿನ  ಹಲ್ಲಿ
ನೆಂಟರು ಬಂದರೆಂದು ಸಂಭ್ರಮಿಸುತ್ತದೆ.

ಹೀಗೆ ಇಲ್ಲಿ ಯಾರೋ ನಮ್ಮ ಹಾಗೆ
ಅವರದಲ್ಲದ ಅವರ ಮನೆಗೆ
ನಡೆದಿರಬಹುದು ಅಲ್ಲಲ್ಲಿ
ಒಂದಷ್ಟು ಕುರುಹುಗಳ ಬಿಟ್ಟು
ಇತಿಹಾಸಕೊಂದಷ್ಟು ಪುರಾವೆ.

ನಾವು ನಮ್ಮ ಹಿಂದಿನ ಮನೆಯಲ್ಲಿ
ಬಿಟ್ಟು ಬರಲಿಲ್ಲವೇ,
ಹರಿದುಳಿದ ಒಂದಷ್ಟು ಬಟ್ಟೆ,
ಸವೆದುಳಿದ ಸಾಬೂನು,
ಒಡೆದ ಹಳೆ ಮಡಿಕೆ,
ದಿನಾಂಕ ಮುಗಿದ ಕ್ಯಾಲೆಂಡಾರ್ .
ಇನ್ನು ಅಲ್ಲಿಗೆ ಬರುವವರು
ಬರೆದಿಟ್ಟ ನಮ್ಮ ಲೆಕ್ಕ ನೋಡಿಯಾರು!!.

ಹೊಸ ಮನೆಗೆ ಬಂದಾಯಿತು
ಹೆಗಲ ಮೇಲಿನ ಭಾರ ಇಳಿಸಿ
ಉಸ್ಸಪ್ಪವೆಂದು
ನಿಟ್ಟುಸಿರು ಬಿಟ್ಟು
" ಹಾಲ್ ದೊಡ್ಡದಿದೆಯಲ್ವ "
ಎಂದು ಸಂಭ್ರಮಿಸಿದ್ದಾಯಿತು .

ಮೂಲೆ ಮೂಲೆಯೂ ಪ್ರೀತಿಯಿಂದ ಒರೆಸಿ,
ಬೇಕಾದಂತೆ ಜೋಡಿಸಿ
ಮತ್ತೆ ಯೋಚಿಸುತ್ತೇವೆ
ಎಷ್ಟು ದಿನ ಈ ಅಲೆದಾಟ 
ನಾವೂ ಇಂತಹದೆ ಒಂದು ಮನೆ ಕಟ್ಟಿಸಬೇಕು.
ಆಗ
ಹಳೆ ಕಡತಗಳ ನಡುವೆಯಿದ್ದ
ಹಾಳೆಗಳಿಲ್ಲದ ಖಾಲಿ ಚೆಕ್ ಪುಸ್ತಕ
ನಮಗಷ್ಟೇ ಕೇಳುವಂತೆ ಬಿಕ್ಕಳಿಸುತ್ತದೆ .

------------------------------------------------------ಸುಕೇಶ್ ಪೂಜಾರಿ



ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...