Saturday, May 25, 2019

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು
ಕಾಯುತಿತ್ತು ಹೆಣ ಸುಡಲು
ನೆಲವ  ಅಗೆದು ಯಾರೋ
ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು
ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು
ವಿವಿಧ ಭಕ್ಷ್ಯ 
ಹೆಣದ ಮಾಂಸದ ಜೊತೆಗೆ .

ಕಾಯದೊಳಗಿದ್ದ ಜೀವ
ಮಾಯವಾಗಿತ್ತು,
ಈಗ ಅದು ಆಕಾಶಕಾಯ
ಚೇತನ-ಸಂಭ್ರಮ
ಜಡ-ಯಾತನೆ.

ಅಳಲು ಕಣ್ಣಿಗೊಂದು ಕಾರಣ
ಸಾವು ಸಾಧಾರಣ .
ಕಣ್ಣೀರಿಗೆ ಕೊನೆಯಿಲ್ಲ
ಅದಕ್ಕೆ ಜಾಸ್ತಿ ಬೆಲೆಯಿಲ್ಲ.

ಹೊತ್ತು ಸಾಗಿದೆ, ಸಂಜೆ ಮಾಗಿದೆ.
ಅತ್ತಿತ್ತ ಎತ್ತಿ ನಡೆದರು,
ಚಿರ ಶಾಂತಿ,ವಿಶ್ರಾಂತಿ.
ಬೆಂಕಿ ಇಟ್ಟರು
ಅಗ್ನಿಗೆ ಭೂರಿ-ಭೋಜನ
ಸ್ವರ್ಗಾವರೋಹಣ.

ಸೂರ್ಯ ಪಡುವಣ ಕಡಲಿಗೆ ಇಳಿದ
ದಿನದ ಸೂತಕ ಕಳೆಯಲು.
ಅತ್ತವರ ಕಣ್ಣೀರು
ಕೆನ್ನೆಯ ಪ್ರಪಾತದಲ್ಲಿ ಇಂಗುತಿತ್ತು,
ಬಂಧುಗಳು ಬಂದವರು ಹೋದರು
ಮನೆಯೊಳಗೆ ಗಾಳಿ
ಸುಟ್ಟ  ವಾಸನೆ ಒರೆಸುತಿತ್ತು .

ಪ್ರಶ್ನೆಯೊಂದು ಕಾಡುತಿತ್ತು ಕವಿಗೆ:
ಹುಟ್ಟಿನ ಜೊತೆ ಸಾವು ಹುಟ್ಟಿತೆ ??
ಸಾವಿನ ಜೊತೆ ಹುಟ್ಟು ಹುಟ್ಟಿತೆ ??
ಅಳಲೇ ..... ??ಸಂಭ್ರಮಿಸಲೇ ...... ??


----------------------------------------------------------------------------------------------ಸುಕೇಶ್ ಪೂಜಾರಿ






No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...