Thursday, December 28, 2017

ಒಂದೂರಿನ ಒಂಚೂರು ಕಥೆ -ಹಂಪಿ

ಯಾಕೋ ಎಲ್ಲಿಗಾದರು ಒಬ್ಬನೇ ಹೋಗಿ ಬರಬೇಕೆನಿಸಿತು.ನನ್ನೊಳಗಿನ ನನ್ನ ಹುಡುಕಲು. ಬದುಕಿಗೆ ಒಂದಷ್ಟು ಹೊತ್ತಿನ ಏಕಾಂತದ ಅವಶ್ಯಕತೆ ಇತ್ತು. ಒಂದಷ್ಟು ಬಟ್ಟೆಗಳನ್ನ  ಬ್ಯಾಗ್ ಗೆ ತುಂಬಿಸಿಕೊಂಡು  ರೈಲ್ ಹತ್ತಿದೆ.

ಈ ವಾರಾಂತ್ಯ ಒಬ್ಬನೆ ಹಂಪಿಗೆ ಹೋಗುತ್ತಿದ್ದೇನೆ ಎಂದಾಗ ಒಂದಷ್ಟು ಜನ ನಗುತ್ತಾ ಅಂದರು " ಅಲ್ಲೇನಿದೆ ? ಬರಿ ಕಲ್ಲು ,ವಿರೂಪಗೊಂಡ ವಿಗ್ರಹಗಳು,ಧ್ವಂಸಗೊಂಡ ದೇವಾಲಯಗಳು. ಈ ಬಿಸಿಲಿಗೆ ಅಲ್ಲಿ ಹೋಗಿ ಏನು  ಮಾಡುವೆ ?". ನನಗೆ ನನ್ನದೇ ಆದ ಕಾರಣಗಳಿದ್ದವು , ಪ್ರತೀ ದಿನ ,ಪ್ರತೀ ವಾರ ಅದೇ ಜನ ಮತ್ತದೇ ಜಾಗ, ಟ್ರಾಫಿಕ್ ನೋಡಿ ಬೇಸತ್ತ ನನಗೆ ಎಂದು ಕಾಣದ ಒಂದು ಊರು , ಎಂದು ಮಾತಾಡದ ಜನಗಳು ಅಲ್ಲಿನ ಇತಿಹಾಸ ಪರಂಪರೆ ನೋಡಬೇಕಿತ್ತುಅದೂ ಅಲ್ಲದೆ ನನ್ನದೊಂದು ಸ್ವಾರ್ಥ ಬೇರೆ ಇತ್ತು "ಎಲ್ಲ ಎಲ್ಲೆಗಳ ಮೀರಿ , ನನ್ನೊಳಗೆ ನಾನಾಗಿ ನನ್ನನ್ನೇ ಹುಡುಕುವ ಪ್ರಯತ್ನ ಅದಾಗಿತ್ತು " ಎನ್ನನ್ನೇ ಹುಡುಕುವ ಮೊದಲು ನೀವು ಏನನ್ನು ಕಳೆದುಕೊಂಡಿರುದು ಅನ್ನುವ ಅರಿವು ನಮಗೆ ಬೇಕು. ಹೌದು ಆ ಅರಿವು ನನಗಿತ್ತು ಅದಕ್ಕಾಗಿಯೇ ಈ ಪ್ರಯತ್ನ. 

ರೈಲು ಸರಿಯಾದ ಸಮಯಕ್ಕೆ ಬಂದು ನನ್ನನ್ನೇ ಕಾಯುತಿತ್ತು,ಮೊದಲೇ ಕಾಯ್ದಿರಿಸಿದ ಸೀಟ್ ನನ್ನ ಬರುವಿಕೆಯ ನಿರೀಕ್ಷೆಯಲ್ಲಿತ್ತು.ನನ್ನ ಹಾಗೆ ಇನ್ನೂ ಹಲವರು ಹಂಪಿ ನೋಡುವ ಹಂಬಲದಿಂದ ಅದೇ ರೈಲು ಹತ್ತಿದ್ದರು. 

ರೈಲು ಜೋರಾಗಿ ಒಮ್ಮೆ ಹಾರ್ನ್ ಮಾಡಿ ರೈಲು ನಿಲ್ದಾಣಕ್ಕೆ ವಿದಾಯ ಹೇಳಿ ಹೊರಟಿತ್ತು. ನಾ ನಿದ್ದೆಗೆ ಜಾರಿದ್ದೆ. 

ಸೂರ್ಯ ತನ್ನ ಮೊದಲ ಬಂಗಾರದ ಬಣ್ಣದ ಕಿರಣಗಳ ಬಿಡುತ್ತಾ ಬೆಟ್ಟದಾಚೆಯಿಂದ ಎದ್ದು ಬರುತಿದ್ದ,ಮತ್ತೊಂದು ಹೊಸ ಬೆಳಗು ಹೊಸ ಊರಿನಲ್ಲಿ. ಹೊಸಪೇಟೆಯಲ್ಲಿ ರೈಲಿನಿಂದ ಇಳಿದು ಹಂಪಿಗೆ ಹೋಗಲು ಬಸ್ ಹಿಡಿಯಬೇಕಿತ್ತು (ಹೊಸಪೇಟೆಯಿಂದ ಸುಮಾರು ೧೮ ಕಿ.ಮೀ ). ಒಂದಷ್ಟು ಜನರ ಗುಂಪು ಬಸ್ ನಿಲ್ದಾಣದ ಕಡೆಗೆ ಚಲಿಸುತ್ತಿತ್ತು ನಾನು ಅವರನ್ನು ಸೇರಿಕೊಂಡೆ. ಅದರಲ್ಲೊಬ್ಬರು ಮಾತಿಗೆ ಇಳಿದರು " ಯಾವ ಊರು ? ಹೆಸರೇನು ಎಂದು ?" ನಾನು ನನ್ನ ವಿವರ ಹೇಳಿದೆ ಮತ್ತು ಅವರನ್ನು ಕೇಳಿದೆ . ಅವರ ಹೆಸರು "ಜ್ವಾಲಾ" ಬೆಂಗಳೂರಿನವರೆ ಅವರು ಹಂಪಿಗೆ   ಒಬ್ಬರೇ ಬಂದಿದ್ದರು ನನ್ನ ಹಾಗೆ " ನೀವು ಕೂಡ ಒಬ್ಬರೇ ಅಲ್ವ ಬನ್ನಿ ಜೊತೆಗೆ ನೋಡೋಣ " ಅಂದರು . ನನಗೇ ಯಾಕೋ ಒಬ್ಬನೇ ಸುತ್ತ ಬೇಕು ಅಂದರೆ ಇವರೇಕೆ ಗಂಟು ಬಿದ್ದರು ಅನಿಸಿತು ಆದರೆ ಯಾಕೋ ನಿರಾಕರಿಸುವ ಮನಸಾಗಲಿಲ್ಲ. ವಯಸ್ಸಿನಲ್ಲಿ ಹಿರಿಯರು ,ನನಗೊ ಹೊಸ ಊರು ,ಜನ ಹಾಗಾಗಿ ಜೊತೆಗಿರಲಿ ಅಂದುಕೊಂಡೆ ಇನ್ನುಳಿದ ಅವರ ಕಥೆ ಕೊನೆಗೆ ಹೇಳುತ್ತೇನೆ. 

ಅದೊ,ಇದೂ ಮಾತಾಡುತ್ತ , ಬಸ್ಸಿನಲ್ಲಿದ್ದ ಒಬ್ಬ ಅದೇ ಊರಿನ ಹಿರಿಯರ ಉಚಿತ ಉಪದೇಶ ಕೇಳುತ್ತ ( ಆ ಉಪದೇಶದ ಬಗ್ಗೆ ಬರೆದರೆ ಅದೇ ಒಂದು ಲೇಖನ ಆಗ ಬಹುದು!!!) ಹಂಪಿ ತಲುಪಿದ್ದೆ. ಒಂದಿಷ್ಟು ಉಪಹಾರ ಮಾಡಿ ಹಂಪಿಯ ಪ್ರಸಿದ್ಧ ತಾಣಗಳ ಕಣ್ತುಂಬಿಸಿ ಕೊಳ್ಳುತಿದ್ದೆ. 

ಹಂಪಿಯ ಇತಿಹಾಸ ಹೇಳುದು ನನ್ನ ಈ ಲೇಖನದ ಉದ್ದೇಶವಲ್ಲದಿದ್ದರು , ಒಂದಿಷ್ಟು ಮಾಹಿತಿ ನೀಡದಿದ್ದರೆ ತಪ್ಪಾದಿತೇನೋ. ಹಂಪಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದೆ, ಇದು ವಿಶ್ವ ಪಾರಂಪರಿಕ ಕ್ಷೇತ್ರವೆಂದು ಮನ್ನಣೆ ಪಡೆದಿದೆ . ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಹಕ್ಕ-ಬುಕ್ಕ ರಿಂದ ಕಟ್ಟಲ್ಪಟ್ಟು ಕೃಷ್ಣದೇವರಾಯ ನಿಂದ ಸಂಭ್ರದ್ದಿಹೊಂದಿ ಬಹಮನಿ ಸುಲ್ತಾನರಿಂದ ಕೊಳ್ಳೆ ಹೊಡೆಯಲ್ಪಟ್ಟ ಸಂಸ್ಥಾನ . ಹಂಪಿಯು ತುಂಗಾಭದ್ರಾ ನದಿಯ ದಂಡೆಯ ಮೇಲೆ ಇದೆ , ಸುತ್ತಲು ಕಲ್ಲು ಬಂಡೆಗಳ ಬೆಟ್ಟಗಳಿಂದ ಸುತ್ತುವರಿದಿದೆ. ಕೆಲವೊಂದು ಮಾಹಿತಿ ಪ್ರಕಾರ ಇದು ರಾಮಾಯಣ ಕಾಲದ ಪಂಪಾ ಕ್ಷೇತ್ರವಾಗಿತ್ತು, ವಾಲಿಯ ಸಾಮ್ರಾಜ್ಯವಾಗಿತ್ತು ಅನ್ನುವ ಪ್ರತೀತಿ ಇದೆ ಇದಕ್ಕೆ ಪೂರಕವಾಗಿ ನದಿಯ ಆ ಬದಿಗೆ  ಅಂದರೆ ಆನೆಗುಂಡಿ ಎಂಬ ಊರಿನಲ್ಲಿ ವಾಲಿಬೆಟ್ಟ, ಅಂಜನಾದ್ರಿ ಬೆಟ್ಟ( ಹನುಮಂತನ ಜನ್ಮಸ್ಥಳ), ಪಂಪ ಸರೋವರ, ಶಬರಿ ರಾಮನಿಗೆ ಕಾದ ಸ್ಥಳ,ಚಿಂತಾಮಣಿ (ರಾವಣ ಸೀತೆಯನ್ನು ಅಪಹರಿಸಿದ ಸುದ್ದಿ ಕೇಳಿ ಚಿಂತೆಯಿಂದ ರಾಮ ಕೂತ ಸ್ಥಳ ) ಹಾಗು ವಾಲೀ- ಸುಗ್ರೀವರು ಯುದ್ಧಮಾಡುವಾಗ ರಾಮ ಮರೆಯಿಂದ ನಿಂತು ಬಾಣ ಬಿಟ್ಟ ಪ್ರದೇಶಗಳಿವೆ, ಹಾಗೆ ಹಂಪಿಯ ಹಲವಾರು ಕೆತ್ತನೆಗಳಲ್ಲಿ ರಾಮಾಯಣದ ಚಿತ್ರಣಗಳನ್ನು ಕಾಣ ಬಹುದು. 

ಬಹಮನಿ ಸುಲ್ತಾನರಿಂದ ಲೂಟಿಯಾಗುವ ಮೊದಲು ಹಂಪಿ ಬಹಳ ಸಂಪತ್ತು ಭರಿತವಾಗಿತ್ತು ಎನ್ನುವ ಉಲ್ಲೇಖಗಳಿವೆ . ಹಂಪಿಯನ್ನು ಆಳಿದ ಪ್ರಸಿದ್ಧ ರಾಜರುಗಳಾದ ಹರಿಹರ , ಹಕ್ಕ-ಬುಕ್ಕರು , ಕೃಷ್ಣದೇವರಾಯ ಮೊದಲಾದವರು ಕಲೆ, ಶಿಲ್ಪಕಲೆ , ಪ್ರಜಾಕ್ಷೇಮ ಕೃಷಿ , ನೀರಾವರಿ , ಕೋಟೆ ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸಿರುದು ಕಂಡು ಬರುತ್ತದೆ, ಅದಕ್ಕೆ ಸಾಕ್ಷಿಯಾಗಿ ಅಳಿದುಳಿದ ದೇವಾಲಯಗಳು , ವಿರೂಪಗೊಂಡ ವಿಗ್ರಹಗಳು , ಪಾಳುಬಿದ್ದ ಸಂತೆಯ ಕಲ್ಲುಗಳು ಇತಿಹಾಸ ಹೇಳುತ್ತಾ ನಿಂತಿವೆ . 

ಹಂಪಿಯ ಪ್ರಮುಖ ದೇವಾಲಯವಾದ  ವಿರೂಪಕ್ಷ ದೇವಸ್ಥಾನದಲ್ಲಿ ಈಗಲೂ ದಿನ ನಿತ್ಯ ಪೂಜೆ ನಡೆಯುತ್ತಿದೆ. ಊರ ಜನರೆಲ್ಲ ಸೇರಿ ಪ್ರತೀ ವರ್ಷ ಜಾತ್ರೆ ನಡೆಸುತ್ತಾರೆ. ಇಲ್ಲಿಯ ಇತರ  ಪ್ರಮುಖ ದೇವಾಲಯಗಳಾದ ಸಾಸಿವೆ ಕಾಳು ಗಣಪತಿ,ಕಡಲೆ ಕಾಳು ಗಣಪತಿ , ಶ್ರೀ ಕೃಷ್ಣ ದೇವಾಲಯ,ಉಗ್ರ ನರಸಿಂಹ ದೇವಾಲಯ ಭೂಮಿಯೊಳಗೆ ಕಟ್ಟಲ್ಪಟ್ಟ ಶಿವ ದೇವಾಲಯಗಳಳ್ಳಿ ಯಾವುದೇ ಪೂಜೆ ನಡೆಯುತ್ತಿಲ್ಲ (ಕೆಲವೊಂದರಲ್ಲಿ ವಿಗ್ರಹಗಳೇ ಇಲ್ಲ ಮತ್ತು ಅಳಿದುಳಿದ ಕೆಲವು ವಿಗ್ರಹಗಳು ವಸ್ತು ಸಂಗ್ರಾಲಯದಲ್ಲಿದೆ). 

ಹಂಪಿಯ ಕೆಲವು ಆಕರ್ಷಣೀಯ ಸ್ಥಳಗಳು :

ವಿರೂಪಾಕ್ಷ ದೇವಾಲಯ 
ಹೇಮಕೂಟ 

ಶಿಥಿಲಾವಸ್ಥೆಯಲ್ಲಿರುವ ಸೂಳೆ ಬಜಾರ್ 

ಲಕ್ಷ್ಮಿ ಮತ್ತು ತನ್ನ ಸ್ವಂತ ಕೈಗಳನ್ನು ಕಳೆದುಕೊಂಡಿರುವ ಉಗ್ರ ನರಸಿಂಹ 
ಭೂಮಿಯೊಳಗೆ ಕಟ್ಟಿರುವ ಶಿವ ದೇವಾಲಯ (ಪಾತಾಳೇಶ್ವರ ದೇವಾಲಯ)

ಲೋಟಸ್ ಮಹಲ್ 


ಲೋಟಸ್ ಮಹಲ್ 


ಆನೆಗಳನ್ನು ಕಟ್ಟಿಡುತಿದ್ದ ಸ್ಥಳ 


ರಂಗನಾಥ ದೇವಾಲಯ 

ಮಹಾನವಮಿ ದಿಬ್ಬ 


ಅಳಿದುಳಿದ ಅವಶೇಷಗಳು 


ವಿಠ್ಠಲ ದೇವಾಲಯ 

ಹಜಾರ ರಾಮ ದೇವಾಲಯದ ಹೊರ ಗೋಡೆಯಲ್ಲಿನ ಕೆತ್ತನೆಗಳು 

ಹಜಾರ ರಾಮ ದೇವಾಲಯ


ರಾಣಿಯ ಸ್ನಾನ ಗ್ರಹ 


ರಾಣಿಯ ಸ್ನಾನ ಗ್ರಹ (ಒಳಾಂಗಣ)



ವಿಶ್ವ ಪ್ರಸಿಧ್ಧ ಕಲ್ಲಿನ ರಥ 



ಅಂಜನಾ ಪರ್ವತ ಹನುಮಂತನ ಜನ್ಮಸ್ಥಳ 


ಚಿಂತಾಮಣಿ 


ತುಂಗಾ-ಭದ್ರ ಆಣೆಕಟ್ಟು 


ಅಂಜನಾ ಪರ್ವತದಿಂದ ಸೂರ್ಯಾಸ್ತಮಾನದ ದೃಶ್ಯ 


ಅಂಜನಾ ಪರ್ವತದಿಂದ ಹಂಪಿಯ ನೋಟ 


ಅಂಜನಾ ಪರ್ವತದಿಂದ ಹಂಪಿಯ ನೋಟ


ಅಂಜನಾ ಪರ್ವತದಿಂದ ಹಂಪಿಯ ನೋಟ


ಹಂಪಿಯಲ್ಲಿ ಬರಿ ಇಷ್ಟೇ ಅಲ್ಲ ಹಲವಾರು ಸ್ಥಳಗಳಿವೆ. ಸಾಸಿವೆ ಕಾಳು , ಕಡಲೆ ಕಾಳು ಗಣಪತಿ , ಮತಾಂಗ ಪರ್ವತ , ಋಷಿಮುಖ ಪರ್ವತ , ಪಂಪಾ ಸರೋವರ ಮತ್ತು  ಕೃಷ್ಣ ದೇವಾಲಯ ಇನಿತರ ಪ್ರಮುಖವು . 


ಎರಡು ದಿನ ಹಂಪಿಯೆಲ್ಲ ಸುತ್ತಾಡಿ ಕೊನೆಗೆ ಬಂದು ಅಂಜನಾ ಪರ್ವತದ ೫೭೫ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬಂದು ಕೂತೆ , ನನಗೊಮ್ಮೆ ಪೂರ್ತಿ ಹಂಪಿಯನ್ನು ಒಟ್ಟಿಗೆ ನೋಡಬೇಕಿತ್ತು . ಕಣ್ಣು ಮುಚ್ಚಿಕೊಂಡು ಒಂದುಕ್ಷಣ ಯೋಚಿಸಿದೆ "ಈಗಲೇ ಹಂಪಿ ಹೀಗೆ ಇದೆ ಇನ್ನು ನೂರಾರು ವರುಷಗಳ ಹಿಂದೆ ಎಲ್ಲ ವೈಭವಗಳ ತುಂಬಿಕೊಂಡಾಗ ಹೇಗಿರಬಹುದಿತ್ತು ?" ಯಾಕೋ ತುಂಬಾ late ಆಗಿ ಹುಟ್ಟಿದೆ ಅನಿಸಿದ್ದು ಸುಳ್ಳಲ್ಲ.ಸೂರ್ಯ ಮೆಲ್ಲನೆ  ಅಂಜನಾ ಪರ್ವತ ಇಳಿಯುತ್ತಿದ್ದ , ಅಂದು ಹಂಪಿ ಲೂಟಿಯಾದಾಗ ಬಹುಶ ಸೂರ್ಯ ನೋಡಲಾಗದೆ ಬಹುಶ ಬೇಗನೆ ಮುಳುಗಿರಬೇಕು ಅಂದುಕೊಂಡೆ.

ಒಂದು ಸಾಮ್ರಾಜ್ಯ ಪತನವಾಗಿ ಅದು ಹೇಗೆ ಬರಿಯ ಇತಿಹಾಸವಾಗುತ್ತದೆ ಎಂಬುದ ತಿಳಿಯಬೇಕಾದರೆ ಹಂಪಿ ನೋಡಬೇಕು . ಹಂಪಿ ಎಲ್ಲ ಇದ್ದು ಎಲ್ಲವನ್ನು ಕಳೆದುಕೊಂಡ ನತದೃಷ್ಟ ಸಾಮ್ರಾಜ್ಯ. ಸದ್ಯಕ್ಕೆ ಹಂಪಿಯ ಮಟ್ಟಿಗೆ ಹೇಳಬೇಕಾದರೆ , ಸರಕಾರ ಸ್ವಲ್ಪ ಕಾಳಜಿವಹಿಸಿಕೊಂಡು ಅಳಿದುಳಿದ ಅವಶೇಷಗಳನ್ನು ರಕ್ಷಿಸುವ ಕೆಲಸಮಾಡಿದೆ . ಹಲವಾರು ಭಗ್ನಗೊಂಡ ಮೂರ್ತಿಗಳು, ಇನ್ನಿತರ ಇತಿಹಾಸದ ಪುರಾವೆಗಳನ್ನು  ವಸ್ತು ಸಂಗ್ರಹಾಲಯದಲ್ಲಿ ಇಟ್ಟು ಕಾಪಾಡಲಾಗಿದೆ. ಸ್ವಚ್ಛತೆ ಹಂಪಿಯನ್ನು ಕಾಡುತ್ತಿದೆ , ಪ್ರವಾಸಿಗರಿಗೆ ಸೂಕ್ತವಾದ ಅನುಕೂಲಗಳನ್ನು ಕಲ್ಪಿಸಿಕೊಡಬೇಕಾಗಿದೆ . ಪಾಳುಬಿದ್ದ ಕೆಲವೊಂದು ಸಣ್ಣ ಪುಟ್ಟ ಕಲ್ಲಿನ ಮಂಟಪಗಳನ್ನು ಅಂದಗೊಳಿಸಿ ಮುಂದಿನ ಪೀಳಿಗೆಗೆ ಕಾಪಾಡಬೇಕಿದೆ. 

"ಕಲೆ ಶಿಲ್ಪಕಲೆ , ಸಾಹಿತ್ಯ ಇನ್ನಿತರ ಸಂಸ್ಕೃತಿಗಳ ಹೊಂದಿರುವ ಶ್ರೀಮಂತ ದೇಶ ನಮ್ಮದು , ಅದನ್ನೆಲ್ಲ ಸರಿಯಾಗಿ ಕಾಪಾಡಲಾಗದ ಬಡವರು ನಾವು."

ಪಾಳುಬಿದ್ದದು, ಶಿಥಿಲವಾದದ್ದು ಹಂಪಿಯಲ್ಲ , ನಮ್ಮ ಮನಸ್ಸು.ನಮ್ಮದೇ ಇತಿಹಾಸದ ಕಡೆ ನಾವು ನೋಡುವ ದೃಷ್ಟಿಕೋನ. ಕೆಲವರಂತು ಅಮರ ಶಿಲ್ಪಿಗಳು (ಅಮರ ಪ್ರೇಮಿಗಳು ) ಅಲ್ಲಲ್ಲಿ ಗೋಡೆಗಳಲ್ಲಿ ತಮ್ಮ ಜಂಟಿ ಹೆಸರುಗಳನ್ನು ಕೆತ್ತಿದ್ದಾರೆ, ತಮ್ಮ ಕೈಯಲ್ಲಿ ಆಗೂದಿಷ್ಟೇ ಎಂಬುದನ್ನು ಸಾಬೀತು ಪಡಿಸಲು !!. 

ಹಂಪಿಯಿಂದ ಆನೆಗುಂದಿಗೆ ಬಸ್ ಹತ್ತಿದ್ದೆ . ಯಾರೋ ಜೊತೆಗೆ ತಂದ ಮೂಟೆಯನ್ನು ಬಸ್ ಒಳಗೆ ಹಾಕಲು ಹೆಣಗಾಡುತಿದ್ದರು " ರೀ ನಿಮಗೆ ಆಗಲ್ಲ ಬಿಡಿ , ಈ ಕಡೆ ಕೊಡಿ ನಾನೇ ಎತ್ತಿ ಮೇಲೆ ಹಾಕುತ್ತೇನೆ " ಎಂದು ಇನ್ನೊಬ್ಬರು ಸಹಾಯ ಹಸ್ತ ಚಾಚಿದರು , ಅದಕ್ಕೆ ಆ ಹಿರಿಯ ಮಹಾನುಭಾವರು ಒಂದು ಮಾತು ಹೇಳಿದರು " ಎಂತೆಂತ ಬಂಡೆ ಕಲ್ಲುಗಳ ಕೆತ್ತಿ ಅಷ್ಟೆಲ್ಲ ಎತ್ತರಗಳಲ್ಲಿ ಯಾವುದೇ ಯಂತ್ರಗಳ ಸಹಾಯವಿಲ್ಲದೆ ನಮ್ಮ ಹಿರಿಯರೆಲ್ಲ ಎತ್ತಿ ಇಟ್ಟಿದ್ದಾರೆ , ಇದೆಲ್ಲ ಯಾವ ಮಹಾ ". ಅವರ ಆ ಮಾತುಗಳಲ್ಲಿ ಒಂದು ಅಭಿಮಾನವಿತ್ತು, ನಮ್ಮ ಪೂರ್ವಜರ ಕೌಶಲ್ಯದ ಬಗ್ಗೆ ಹೆಮ್ಮೆ ಇತ್ತು. ನಮಗೆ ಈಗ ಬೇಕಾಗಿರುದು ಅದೇ . ವಾಟ್ಸಪ್ಪ್ , ಫೇಸ್ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಲ್ಲಿ ಬಂದಿಯಾದ ನಮಗೆ ಮತ್ತೆ ಇಂತಹ ಅಭೂತಪೂರ್ವ ಇತಿಹಾಸ ನಿರ್ಮಿಸಲು ಸಮಯವೆಲ್ಲಿದೆ !!!?

ಕೆಲವರಂತು ಕೇಳಿದರು ಒಬ್ಬನೆ ತಿರುಗಾಡಿ ಏನು ಮಾಡಿದೆ?. ನಾನೆಲ್ಲಿ ಒಂಟಿಯಾಗಿದ್ದೆ ? ಎರಡು ದಿನದಲ್ಲಿ ನನಗೆ ಹಾಗೆ ಎಂದು ಅನ್ನಿಸಲೇ ಇಲ್ಲ. ಯಾರದೋ ಪುಟ್ಟ ಮಗು (ಬೀದಿ ಬದಿಯ ಕೆಲಸ ಮಾಡುವ ) ನನ್ನ ಕನ್ನಡಕ ಹಾಕಿಸಿಕೊಂಡು ನನ್ನ ಜೊತೆ ಫೋಟೋ ತೆಗೆಸಿಕೊಂಡಿತು. ಅದಕ್ಕೆ ಆ ಫೋಟೋ ತೋರಿಸಿದಾಗ ಅದರ ಮುಖದಲ್ಲಿನ ಆ ನಗು ಬಹುಶ ಬೇರೆಲ್ಲೋ ಸಿಗುದು ಕಷ್ಟ . ಯಾರೋ ಬೀದಿಯ ಮಕ್ಕಳ ಜೊತೆ ಕೂತು ಒಂದಷ್ಟು ತಿಂಡಿ ತಿಂದೆ. ಆಟೋ ಚಾಲಕನೊಬ್ಬ " ಸರ್ ಅಲ್ಲಿ ಹೋಗಿ , ಇಲ್ಲಿಂದ ಅಲ್ಲಿ ಹೋಗಿ " ಎನ್ನುತ್ತಾ ಹೋದಲ್ಲೆಲ್ಲ ಸಿಗುತ್ತಾ ದಾರಿ ಹೇಳುತಿದ್ದ . ಊರ ಯಾರೋ ಹಿರಿಯರೊಬ್ಬರು ಚಿಂತಾಮಣಿಯ ಕಥೆ ಹೇಳಿದ್ದರು , ಹೀಗೆ ಪಟ್ಟಿ ದೊಡ್ಡದಿದೆ. ಇದಕ್ಕಿಂತ ಮಿಗಿಲಾಗಿ ಹಂಪಿಯ ಒಂದೊಂದು ಕಲ್ಲು ಇತಿಹಾಸದ ವೈಭವ, ಕ್ರೌರ್ಯ ಹೇಳುತಿತ್ತು. 

 "ಜ್ವಾಲಾ"

ಸುಮಾರು ೬೦ ಆಸುಪಾಸಿನೊಳಗಿನ ಹಿರಿಯ ವ್ಯಕ್ತಿ, "ಅಂಕಲ್ ನೀವು  ಹೇಗೆ ಹಂಪಿಗೆ ಬಂದದ್ದು?". ದಿನವಿಡೀ ಒಟ್ಟಿಗೆ ಸುತ್ತಾಡಿ ಒಂದು ಆತ್ಮೀಯತೆ ಮೂಡಿತ್ತು ಕುತೂಹಲದಿಂದ ಕೇಳಿದೆ . ನನ್ನ ಕುತೂಹಲಕ್ಕೆ ಕಾರಣವಿತ್ತು, ಅಂಕಲ್ ಕೈಯಲ್ಲಿ ಯಾವುದೇ ಬ್ಯಾಗ್ ಇರಲಿಲ್ಲ ಹಂಪಿಗೆಂದೇ ಬಂದವರಲ್ಲ .ಕೈಯಲ್ಲೊಂದು ಪ್ಲಾಸ್ಟಿಕ್ ಚೀಲ ಅದರಲ್ಲಿ ಕೆಲವು ಕಾಗದ ಪಾತ್ರಗಳು ಜೊತೆಗೊಂದು ಲುಂಗಿ ಇಷ್ಟೇ ಇದ್ದದ್ದು . "ನಾನು ಬೇರೆ ಎಲ್ಲೋ ಹೋಗಬೇಕಿತ್ತು" ಬೆಂಗಳೂರಿಂದ ಅಲ್ಲೇ ಸುಮಾರು ೮೦ ಕಿ.ಮೀ ಒಳಗೆ ರೈಲ್ ತಪ್ಪಿ ಹೊಯುತು ಏನು ಮಾಡಲಿ ಎಂದು ಹಾಗೇ ನಿಲ್ದಾಣದಲ್ಲಿ ಕೂತಿದ್ದೆ , ಹಂಪಿಗೆ ಹೋಗುವ ರೈಲುಗಾಡಿ ಬಂತು ಟಿಕೆಟ್ ತೆಗೆದುಕೊಂಡು ಹತ್ತಿ ಕೂತೆ . ನನಗೊ ಒಮ್ಮೆ ಹಂಪಿ ನೋಡಬೇಕಿತ್ತು  ಹಾಗೆ ಬಂದೆ . ಬೆಳಗ್ಗೆ ಮನೆಗೆ ಫೋನ್ ಮಾಡಿ ನಾನು ಹಂಪಿಯಲ್ಲಿದ್ದೇನೆ ಫೋನ್ ನಲ್ಲಿ ಚಾರ್ಜ್ ಇಲ್ಲ ಸಂಜೆ ವಾಪಾಸ್ ಬರುತ್ತೇನೆ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿ ಒಂದು ದಿನವಿಡಿ ನನ್ನ ಜೊತೆಗಿದ್ದರು.  

ವಿಧಿ ಯಾರನ್ನು ಎಲ್ಲಿ ಎಲ್ಲಿ ಜೊತೆಯಾಗಿಸುತ್ತದೆ. ಪಯಾಣದ ನಡುವೆ ಯಾರೋ ಸಿಕ್ಕವರು ಅದೆಷ್ಟು ಆತ್ಮೀಯರಾಗಿ ಬಿಡುತ್ತಾರೆ. ಮೊನ್ನೆ ಹಂಪಿಯಿಂದ ಬಂದ ಮೇಲೆ ಕೆಲವು ದಿನದ ನಂತರ ಫೋನ್ ಮಾಡಿದೆ ಯೋಗಕ್ಷೇಮ ಕೇಳಲು . ಅವರ ಪ್ರೀತಿ ಅಭಿಮಾನ ಮರೆಯುದು ಕಷ್ಟ. 

"ನಾನೇಕೆ ಹಂಪಿಗೆ ಹೋದೆ ?"

ಕೆಲವು ತಿಂಗಳ ಹಿಂದೆ ನಾ ಯಾವುದೋ ಬೆಟ್ಟ , ಅಳಿದುಳಿದ ಕಲ್ಲಿನ ಕೆತ್ತನೆಗಳ ಅವಶೇಷಗಳ ನೋಡುತ್ತಾ ಅಳೆಯುತ್ತಿದ್ದೆ . ಅದು ಕನಸು ಒಂದಿಷ್ಟೇ ನೆನಪಿತ್ತು. ಬೆಳಗ್ಗೆ ಎದ್ದಾಗ ಆ ತರದ ಜಾಗಕ್ಕೆ ಹೋಗಬೇಕೆನಿಸಿತು . ಬಹುಶ ಕನಸು ಪೂರೈಸಿಕೊಳ್ಳಲು ಹಂಪಿಗಿಂತ ಒಳ್ಳೆಯ ಜಾಗ ಸಿಗುದು ಕಷ್ಟ.!!!. 


"ಹಂಪಿ ಆಯಿತು ಮುಂದೆ....... ?"

ಕನ್ಯಾಕುಮಾರಿ ಕರೆಯುತ್ತಿದ್ದಾಳೆ, ಹೋಗಿ ಬಂದು ಮತ್ತೆ ಬರೆಯುತ್ತೇನೆ. 

ಧನ್ಯಾವಾದಗಳೊಂದಿಗೆ 

ಸುಕೇಶ್ ಪೂಜಾರಿ 













3 comments:

  1. Excellent....ಒಂದ್ ಲೇಟರ್ ಕೂಡ ಬಿಡದೇ ಓಧಿದೇನೆ... ತುಂಬಾ ಖುಷಿ ಐತ್ ಮಗಾ... ಕನ್ಯಾಕುಮಾರಿ ಗೆ ನಾನ್ ಸ ಬರ್ತೇನೆ... ಇಷ್ಟೆಲ್ಲ ಖುಷಿ ಸಿಗುತ್ತೆ ಅಂದ್ರೆ ಯಾಕ್ ಕೂರಬೇಕು ಸುಮ್ನೇ....

    ReplyDelete
  2. ಜಗದ ಮಾಯಾಲೋಕದಲ್ಲಿ
    ನನ್ನೊಳಗಿನ ನನ್ನನ್ನು
    ಮರೆಯುತ್ತಿರುವ ನನಗೆ
    ನನ್ನೊಳಗಿನ ಚೇತನಾ ಶಕ್ತಿಯನ್ನು
    ಅರಿಯಲು ಬರೆದಂತಿದೆ
    ಈ ಲೇಖನ

    ReplyDelete
  3. ನಿಮ್ಮ ಪ್ರೀತಿ ಅಭಿಮಾನಕ್ಕೆ ಧನ್ಯವಾದಗಳು.

    ReplyDelete

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...