Saturday, February 18, 2017

ಊರ ಜಾತ್ರೆಯಲ್ಲಿ ಬೊಂಬೆಯೊಂದು ಇಷ್ಟವಾಯಿತೇಕೆ -೨

ಬೊಂಬೆ ಕಂಗಳಲ್ಲಿ ಕಳೆದು ಹೋದ ಆ ಘಳಿಗೆ , ಅಮೃತ ಘಳಿಗೆ  . . . . . . . . . . . . . !!!!.

ಜಾತ್ರೆ ತೇರು ಮುಂದುವರಿಯುತ್ತಿತ್ತು, ನಾನಿನ್ನೂ ಬೊಂಬೆ ಅಂಗಡಿ ಮುಂದೇನೇ ಇದ್ದೆ, ಅದೇ ಬೇಕು ಎನ್ನುವ ಹಂಬಲ, ಒಂದಷ್ಟು ಗೊಂದಲದ ಜೊತೆ,

ಚಿಕ್ಕವನಿದ್ದಾಗ, ಅಪ್ಪನ ಜೊತೆ ಜಾತ್ರೆಗೆ ಹೋದಾಗಲೆಲ್ಲ  ಯಾವುದೊ ಬೊಂಬೆಗೆ ಹಟ ಹಿಡಿದದ್ದು, ಜಾತ್ರೆಗೆಂದು ತಂದಿದ್ದ ಹೊಸಬಟ್ಟೆಯಲ್ಲೇ ನೆಲದ ಮೇಲೆ ಉರುಳಾಡಿ ,ಅತ್ತು ರಂಪ ಮಾಡಿದ್ದು , ಸುಮ್ಮನಿರದ ನನ್ನ , ಅಪ್ಪ ಗದರಿಸಿ, ಹೆದರಿಸಿ ಸುಮ್ಮನಾಗಿಸಿದ್ದು, ಎಲ್ಲರ ಮೇಲಿನ ಸಿಟ್ಟಿಗೆ ಊಟ ಬಿಟ್ಟು ಉಪವಾಸ ಮಾಡಿದ್ದು, ಕಣ್ಣ ಮುಂದೆ ಊರ ಜಾತ್ರೆಯ ಬೀದಿ ಹಾಗೆ ತೇಲಿ ಹೊಯ್ತು.

ಯಾರದೋ ಕೈಯಲ್ಲಿ ಪುಟ್ಟ ಬೊಂಬೆ ಕಂಡಾಗಲೆಲ್ಲ ಎದೆ ಮೆಲ್ಲ ನಲುಗುತಿತ್ತು . . . . . .

ಈಗ ಹಾಗೆ ಮತ್ತೆ ಅತ್ತು ರಂಪ ಮಾಡಿದರೆ ???.

ಸುಮ್ಮನಿದ್ದ ನಾನು , ಏನೋ ಕಂಡು ತಡಬಡಿಸಿ ಎದ್ದು , ಕಣ್ಣುಜ್ಜಿ ನಿನ್ನ ಕಂಡಾಗ , ಕಣ್ಣ ರೆಪ್ಪೆಗಳು ಮುಚ್ಚದೇ ಹಾಗೇ ನೋಡುತಿದ್ದವು. ಇಷ್ಟು ದಿವಸ ಎದೆಯ ಸೂತ್ರ ಹಿಡಿದು ಕಾದದ್ದು ಬಹುಶ ನಿನಗೇ ಇರಬೇಕು ಅನ್ನಿಸುತಿತ್ತು .

ಊರ ಬೀದಿಯಲ್ಲೇ
ದಾರಿ ತಪ್ಪಿದ ಹಾಗೆ,
ಮನಸು ದಿಕ್ಕು ಕೆಟ್ಟು ಕಂಗಾಲು,
ಸೂತ್ರವಿರದೆ ಹಾರಿತೆಲ್ಲೋ
ಹೃದಯ ಯಾಕೋ
ಸಣ್ಣ ದಿಗಿಲು .


ಒಂದೆರಡು ದಿನದ ಹಿಂದೆ ಚಂದಿರ ಮೈ ತುಂಬಿ ಹೊಳೆಯುತ್ತಿದ್ದ , ಬಾನ ತುಂಬಾ ಹುಣ್ಣಿಮೆಯ ಕಳೆ, ಭೂಮಿ ಉಸಿರ ಬಿಗಿ ಹಿಡಿದು ಆ ಘಳಿಗೆಗೆ ಕಾಯುತಿತ್ತು.

ನೀ ನನಗಿಷ್ಟವಾದ ಬಟ್ಟೆ ಉಟ್ಟು ಬಂದ ದಿನ ನಾ ನಿನಗೆ  ಕಾದಂತೆ . . . . . . . !!.

ಈ ಸಂಜೆ ಯಾಕೋ ತುಂಬಾ ಮೆಲ್ಲನೆ ಜಾರುತ್ತಿತ್ತು, ಬಾನ ತುಂಬಾ ಹಾರೋ ಹಕ್ಕಿ, ಮರಳಿ ಗೂಡು ಸೇರೋ ಬಯಕೆ,ಪುಟ್ಟ ಗೂಡಲ್ಲಿ ಕಾವೇರುವ ಮೊಟ್ಟೆ.
ಪಡುವಣ ಕಡಲಿನಲ್ಲಿ ಸೂರ್ಯ ಕಾಲು ತೊಳೆಯುತಿದ್ದ ಹಗಲಿಡೀ ಗಾರೆ ಕೆಲಸ ಮಾಡಿ ಸೋತು, ನೀರಿನ ತುಂಬಾ ಮಣ್ಣಿನ ಬಣ್ಣ.

ಒಂದು ಪೇಲವ ಮೌನ, ಮಾತಿನ ಕೊರತೆ, ಕಟ್ಟಿಟ್ಟ ಶಬ್ದಗಳ ಒರತೆ, ಹೇಳಬೇಕು ಎಂದು ಅಂದು ಕೊಂಡದ್ದನ್ನು ಹೇಳಿದ್ದರೆ ಇಷ್ಟೆಲ್ಲ ಬರೆಯ ಬೇಕು ಅನ್ನಿಸುತ್ತಿರಲಿಲ್ಲವೇನೋ. ಕರಗುವ ಸಮಯದ ಜೊತೆ ಕೊರಗುವ ನೆನಪು, ನೀ ನೆಪ .. .. . . .. . . .!!!!.

ಮಾತ ನಡುವಿನ
ಪುಟ್ಟ ಮೌನ,
ಬಿಡುವೆ ಇರದ
ಧ್ಯಾನ,
ಕ್ಷಣಿಕಕಾದರು
ಸೋಲಲೊಲ್ಲದೆ
ನನಗೆ ನಿನ್ನ ಮನ.


ಇರುಳ ಚಾದರ ಭೂಮಿ ತುಂಬಾ ಯಾರೋ ಎಳೆಯುತ್ತಿದ್ದರು ಅವಸರ ಅವಸರವಾಗಿ. ಪುಟ್ಟ ಗುಬ್ಬಿ ಹಕ್ಕಿ ಆಗಲೇ ನಿದ್ದೆಗೆ ಜಾರಿತ್ತು ,ಕಣ್ಣ ತುಂಬಾ ಕನಸು, ಒಣಗಿದ ಕಣಗಿಲೆಯಲ್ಲೊ ಮಧು ಮಕರಂದ ಸಿಕ್ಕಿದಂತೆ,

ಕನಸೇ ಮುಂಜಾನೆಗೆ ಭರವಸೆ. ಹಕ್ಕಿ ಬೆಳಗೆದ್ದು ಕಣಗಿಲೆ ಮರ ಹುಡುಕಬಹುದೇನೋ ... . . . .!!!

ಬಿದ್ದ ಕನಸುಗಳ
ಸಾಲು ಸಾಲು,
ಅವುಗಳಲ್ಲಿ ಹೆಚ್ಚಿನವು
ನಿನ್ನದೇ ಸಿಂಹಪಾಲು.
ಎದ್ದ ಕೂಡಲೇ ಕಣ್ಣುಜ್ಜಿ ಕೊಂಡರೆ,
ಕಣ್ಣ ಪರದೆ ತುಂಬಾ ಬಣ್ಣ
ಯಾರೋ ಚೆಲ್ಲಿ,ಸ್ವಲ್ಪ ಒರೆಸಿ ಹೋದಂತೆ,
ಗೋಜಲು, ಗೋಜಲು
ಇದು ಪ್ರತಿ ದಿನದ ಮಾಮೂಲು.


ಸುಮ್ಮನೆ ಹಾಗೆ ಒಂದಷ್ಟು ಹೊತ್ತು ಕಣ್ಣು ಮುಚ್ಚಿಕೊಂಡೆ, ಬೊಂಬೆ  ಬಿಂಬ ತೇಲಿ ಬಂತು, ಎಂದಿನಂತೆ. . ... . . . . .. !!. ಜಾಸ್ತಿ ನೋಡುವ ಆಸೆ , ಕಣ್ಣು ತೆರೆಯಬೇಕು ಅನ್ನಿಸಲಿಲ್ಲ,ಮನಸು ನಿನ್ನ ಸುತ್ತಲೇ ಸಮಾಧಿಯಾಗಿತ್ತು, ಕಾರಣಗಳಿಗೆ ಶಬ್ಧ, ವ್ಯಾಕರಣಗಳ ಸೇರಿಸಿ, ಹೇಳಿಬಿಟ್ಟರೆ , ಬರೆದರೆ, ಮತ್ತೆ ಎಲ್ಲ  ಖಾಲಿ ಖಾಲಿ. ಎದೆಯ ಕರ್ಟನ್ ತೆಗೆದು ಬಿಟ್ಟಂತೆ.!!

ಕಣ್ಣ ಮುಚ್ಚಿದರೆ
ಕಣ್ಣ ಪರದೆ  ಮೇಲೆ
ನೀನೇ ರಂಗನಾಯಕಿ.
ಕಣ್ಣ ತೆರೆಯಬೇಕು
ಅನ್ನಿಸುತ್ತಿಲ್ಲ
ನಾ ಕನಸಿನಲೇ ಪರಮ ಸುಖಿ.


bottom ಲೈನ್ ,

ಜಾತ್ರೆ ತುಂಬಾ ತಿರುಗಿ ಮತ್ತೆ ಅಲ್ಲಿಗೇ ಬಂದೆ. ಅದೇ ಅಂಗಡಿಗೆ, ಬೊಂಬೆ ಅಲ್ಲೇ ಇತ್ತು. ಖಾಲಿ ಜೇಬಿನೊಳಗೆ ಖಾಲಿ ಕೈ, ನಿಂತು ಹಾಗೇ ನೋಡುತಿದ್ದೆ, ಬೊಂಬೆಯ ಕಡೆಯದೊಂದು ಚಿತ್ರ ಎದೆಯೊಳಗೆ ಅಚ್ಚು ಒತ್ತುವ ತವಕದೊಂದಿಗೆ. ಅಂಗಡಿಯ ಮಾಲೀಕ ಎಲ್ಲ ಮುಚ್ಚಿಟ್ಟು, ಜಾತ್ರೆ ಮುಗಿಸಿ ಜಾಗ ಖಾಲಿ ಮಾಡುವ ಅವಸರದಲ್ಲಿದ್ದ,

ಬೊಂಬೆ ಮತ್ತೆ ಅಂಗಡಿಯವನ ಚೀಲ ಸೇರಿತ್ತು. ನಾ ಜಾರೊ ಕಂಬನಿ ಒರೆಸಿಕೊಳ್ಳಲು , ಖಾಲಿ ಜೇಬಿನಿಂದ ಕೈ ಎಳೆದು ಕೊಂಡೆ.

ಎದೆಯ ಕೊಳದಲಿ
ಬಗ್ಗಿ ನೋಡಿದರೆ
ಕಣ್ಣಿಂದ ಜಾರಿ ಬಿದ್ದ
ಕಂಬನಿಗೆ ,
ನಿನ್ನ ಪ್ರತಿಬಿಂಬ ಮೆಲ್ಲ
ಚದುರುತಿತ್ತು.

ಜಾತ್ರೆ ಮುಗಿದಿತ್ತು, ನಾ ಮುಂದಿನ ವರುಷ ಬೊಂಬೆ ಕೊಳ್ಳಲು ದಿನ ಎದುರು ನೋಡುತಿದ್ದೆ. ಖಾಲಿ ಜೇಬಿನ ತುಂಬಾ ಒಂದಷ್ಟು ಹಣ ತುಂಬಿಸಿಕೊಳ್ಳುತ್ತ.

ಜಾತ್ರೆ ಮತ್ತೆ ಬರುವುದು . . . . . . . . . . . . . . .  . .  .!!!!!!





.....................................................................................................................ಸುಕೇಶ್


Monday, February 6, 2017

ಅಂತರಾತ್ಮ

ಬೀಳೋ ಮುಂಚೆ
ಹೇಳೋ ಕೋಲು
ತಿಳಿದೋ
ತಿಳಿಯದೆಯೋ
ಮತ್ತೆ ಹಿಂಬಾಲಿಸುತೇನೆ
ಸರಿಯಾಗಿ ದಾರಿ ಹೇಳು.

ಸಣ್ಣ ಸದ್ದು
ನನಗಷ್ಟೇ ಕೇಳುತ್ತದೆ
ಎದೆಯ ಬಡಿತಕ್ಕಿಂತಲು
ಮೆಲ್ಲಗೆ.
ಕ್ಷೀಣ ಕಿವಿ,
ಸುತ್ತಮುತ್ತಲ
ಗೌಜು ಗದ್ದಲದ ನಡುವೆ
ತಡವರಿಸಿ, ಎದ್ದು ಬಿದ್ದು
ನಡೆಯುದು ಎಲ್ಲಿಗೆ.

ಬೆಳಕ ಕಿಡಿ ಕಣ್ಣ ಮುಚ್ಚಿದರು
ಕಾಣುತ್ತದೆ.
ಪುಟ್ಟ ಪುಟ್ಟ ಹೆಜ್ಜೆ
ಬಹು ದೂರ ಪಯಣ
ವಿರಮಿಸೋಣವೆಂದರೆ
ಕಿಡಿ ಆರಿ ಹೋಗುವ ಭಯ.

ಕಿರಿದು ದಾರಿ
ಎಲ್ಲ ಮುಗಿದು
ಕೊನೆಗೆ  ನಿಂತರೆ,
ಸರಿದ ದಾರಿಯ ತುಂಬಾ
ಅಲ್ಲಲ್ಲಿ ಬರೆದ ಅಸ್ಪಷ್ಟ ಮೈಲು ಕಂಬ.
ಹಾರೋ ಹಕ್ಕಿ, ಖಾಲಿ ಗೂಡು,
ಬದುಕು ಕೊನೆಯಿಂದ
ಮತ್ತೆ ಪ್ರಾರಂಭ.

ಎಲ್ಲ ಎಲ್ಲೆಯ ಮೀರಿ
ಬರದ  ನಾಳೆಯ,
ಇರದ ನಿನ್ನೆಯ ,
ಮರೆತ ಇಂದಿನ
ತುಂಬಾ ನನಗಾಗಿ ಬದುಕಿದ್ದು
ಒಂದಷ್ಟು ಹೊತ್ತು,
ಅದೆಷ್ಟೆನ್ನುದು ನನಗಷ್ಟೇ ಗೊತ್ತು.


ದಾರಿ ಹೇಳೋ ಕೋಲು,
ಎದೆಯೊಳಗಿನ ಸಣ್ಣ ಸದ್ದು
ಕಣ್ಣ ಕಿಡಿ,
ಬಿಡದೆ ಹಿಂಬಾಲಿಸಬೇಕು
ದಯವಿಟ್ಟು ದಾರಿ ಬಿಡಿ .

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...