Monday, February 6, 2017

ಅಂತರಾತ್ಮ

ಬೀಳೋ ಮುಂಚೆ
ಹೇಳೋ ಕೋಲು
ತಿಳಿದೋ
ತಿಳಿಯದೆಯೋ
ಮತ್ತೆ ಹಿಂಬಾಲಿಸುತೇನೆ
ಸರಿಯಾಗಿ ದಾರಿ ಹೇಳು.

ಸಣ್ಣ ಸದ್ದು
ನನಗಷ್ಟೇ ಕೇಳುತ್ತದೆ
ಎದೆಯ ಬಡಿತಕ್ಕಿಂತಲು
ಮೆಲ್ಲಗೆ.
ಕ್ಷೀಣ ಕಿವಿ,
ಸುತ್ತಮುತ್ತಲ
ಗೌಜು ಗದ್ದಲದ ನಡುವೆ
ತಡವರಿಸಿ, ಎದ್ದು ಬಿದ್ದು
ನಡೆಯುದು ಎಲ್ಲಿಗೆ.

ಬೆಳಕ ಕಿಡಿ ಕಣ್ಣ ಮುಚ್ಚಿದರು
ಕಾಣುತ್ತದೆ.
ಪುಟ್ಟ ಪುಟ್ಟ ಹೆಜ್ಜೆ
ಬಹು ದೂರ ಪಯಣ
ವಿರಮಿಸೋಣವೆಂದರೆ
ಕಿಡಿ ಆರಿ ಹೋಗುವ ಭಯ.

ಕಿರಿದು ದಾರಿ
ಎಲ್ಲ ಮುಗಿದು
ಕೊನೆಗೆ  ನಿಂತರೆ,
ಸರಿದ ದಾರಿಯ ತುಂಬಾ
ಅಲ್ಲಲ್ಲಿ ಬರೆದ ಅಸ್ಪಷ್ಟ ಮೈಲು ಕಂಬ.
ಹಾರೋ ಹಕ್ಕಿ, ಖಾಲಿ ಗೂಡು,
ಬದುಕು ಕೊನೆಯಿಂದ
ಮತ್ತೆ ಪ್ರಾರಂಭ.

ಎಲ್ಲ ಎಲ್ಲೆಯ ಮೀರಿ
ಬರದ  ನಾಳೆಯ,
ಇರದ ನಿನ್ನೆಯ ,
ಮರೆತ ಇಂದಿನ
ತುಂಬಾ ನನಗಾಗಿ ಬದುಕಿದ್ದು
ಒಂದಷ್ಟು ಹೊತ್ತು,
ಅದೆಷ್ಟೆನ್ನುದು ನನಗಷ್ಟೇ ಗೊತ್ತು.


ದಾರಿ ಹೇಳೋ ಕೋಲು,
ಎದೆಯೊಳಗಿನ ಸಣ್ಣ ಸದ್ದು
ಕಣ್ಣ ಕಿಡಿ,
ಬಿಡದೆ ಹಿಂಬಾಲಿಸಬೇಕು
ದಯವಿಟ್ಟು ದಾರಿ ಬಿಡಿ .

No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...