Monday, July 16, 2018

ದೀವಟಿಗೆ

ಎದೆಯ ಚಾವಡಿಯಲ್ಲಿ
ನೀ ನಗೆಯ ಹೂ ಮುಡಿದು
ಬಂದು ನಿಂತಾಗ
ಕನಸ ದೀವಟಿಗೆಯೊಂದು
ಹಾಗೇ ಹೊತ್ತಿಕೊಂಡಿತು ,
ಬೆಳಕು ಚೆಲ್ಲಿತು,

ಬಿಂಬಗಳೊಳಗೆ
ಪ್ರತಿಬಿಂಬ ಕೂಡಿ,
ನಾಚಿಕೆಯ ಕಂಬದಾಚೆಯಿಂದ
ಇಣುಕಿ ನೋಡಿ
ತೂಗುತಿದ್ದ ಹೆರಳ
ನೀ ಬೆರಳ ಅಂಚಿನಲ್ಲೇ ತೀಡಿ
ಹುಬ್ಬು ಕುಣಿಸಿದಾಗ
ಮಾಸದ ಬೆರಗ
ಚಿತ್ರವೊಂದು ಮೂಡಿಕೊಂಡಿತು.

ಸುತ್ತ ಕನಸ ಚಿತ್ತಾರ
ಲಘುಬಗೆಯ ಬಗೆಗೆ.
ತುಟಿಯ ರಂಗೋಲಿಯ
ಸುತ್ತ ಮಾತಿನ ಹಣತೆ,
ತೀರದ ದಾಹಕ್ಕೆ
ಮತ್ತೆ ಮತ್ತೆ ಬಲಿಯಾಗುದು
ಎದೆಯ ಮಿಡತೆ.

ಕನಸ ಕಾನನದೊಳಗೆ
ನಾ ಒಂಟಿ ಜೀವಿ,
ನೆನಪು ಜಂಟಿ ನಳಿಕೆಯ
ಹಳೆಯ ಕೋವಿ,
ಹೊಗೆಯಾಡುವುದು
ಸದ್ದು ಮಾಡದೆ,
ಜೊತೆಯಾಗುವುದು
ಸುದ್ದಿ ಇಲ್ಲದೆ.



--------------------------------------------------------------------ಸುಕೇಶ್ ಪೂಜಾರಿ

No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...