Saturday, March 24, 2018

ನಮ್ಮದಲ್ಲದ ಮನೆಗೆ

ನಮ್ಮದಲ್ಲದ ಮನೆಗೆ 



ಅದು ಮನೆಯಿಂದ ಮನೆಗೆ ಪಯಣ
ನಮ್ಮದೇ ಹಳೇ ಟ್ರಂಕುಗಳು,
ಅದರೊಳಗಿನ ಒಂದಷ್ಟು ಸಾಮಾನುಗಳು
ಕಳಚಿಟ್ಟ , ಮತ್ತೆ ಹಾಕುವ
ಒಂದಷ್ಟು ಬಟ್ಟೆಗಳ ಹೊತ್ತು
ನಮ್ಮದಲ್ಲದ ಮನೆಗೆ

 ಪೋಷಿಸಿದ ಮನೆ ಎದುರಿನ
ಗುಲಾಬಿ ಗಿಡ
ನಾಚುತ್ತ ಸ್ವಾಗತಿಸುತ್ತದೆ,
ಹಿಂದೆ ಆ ಮನೆಯಲ್ಲಿದ್ದವರು ಬಿಟ್ಟು ಹೋದ
ಹಳೇ ಕನ್ನಡಿ
ಅಪರಿಚಿತತೆಯ ನಗು ಚೆಲ್ಲುತ್ತದೆ
ಗೋಡೆಮೇಲಿನ  ಹಲ್ಲಿ
ನೆಂಟರು ಬಂದರೆಂದು ಸಂಭ್ರಮಿಸುತ್ತದೆ.

ಹೀಗೆ ಇಲ್ಲಿ ಯಾರೋ ನಮ್ಮ ಹಾಗೆ
ಅವರದಲ್ಲದ ಅವರ ಮನೆಗೆ
ನಡೆದಿರಬಹುದು ಅಲ್ಲಲ್ಲಿ
ಒಂದಷ್ಟು ಕುರುಹುಗಳ ಬಿಟ್ಟು
ಇತಿಹಾಸಕೊಂದಷ್ಟು ಪುರಾವೆ.

ನಾವು ನಮ್ಮ ಹಿಂದಿನ ಮನೆಯಲ್ಲಿ
ಬಿಟ್ಟು ಬರಲಿಲ್ಲವೇ,
ಹರಿದುಳಿದ ಒಂದಷ್ಟು ಬಟ್ಟೆ,
ಸವೆದುಳಿದ ಸಾಬೂನು,
ಒಡೆದ ಹಳೆ ಮಡಿಕೆ,
ದಿನಾಂಕ ಮುಗಿದ ಕ್ಯಾಲೆಂಡಾರ್ .
ಇನ್ನು ಅಲ್ಲಿಗೆ ಬರುವವರು
ಬರೆದಿಟ್ಟ ನಮ್ಮ ಲೆಕ್ಕ ನೋಡಿಯಾರು!!.

ಹೊಸ ಮನೆಗೆ ಬಂದಾಯಿತು
ಹೆಗಲ ಮೇಲಿನ ಭಾರ ಇಳಿಸಿ
ಉಸ್ಸಪ್ಪವೆಂದು
ನಿಟ್ಟುಸಿರು ಬಿಟ್ಟು
" ಹಾಲ್ ದೊಡ್ಡದಿದೆಯಲ್ವ "
ಎಂದು ಸಂಭ್ರಮಿಸಿದ್ದಾಯಿತು .

ಮೂಲೆ ಮೂಲೆಯೂ ಪ್ರೀತಿಯಿಂದ ಒರೆಸಿ,
ಬೇಕಾದಂತೆ ಜೋಡಿಸಿ
ಮತ್ತೆ ಯೋಚಿಸುತ್ತೇವೆ
ಎಷ್ಟು ದಿನ ಈ ಅಲೆದಾಟ 
ನಾವೂ ಇಂತಹದೆ ಒಂದು ಮನೆ ಕಟ್ಟಿಸಬೇಕು.
ಆಗ
ಹಳೆ ಕಡತಗಳ ನಡುವೆಯಿದ್ದ
ಹಾಳೆಗಳಿಲ್ಲದ ಖಾಲಿ ಚೆಕ್ ಪುಸ್ತಕ
ನಮಗಷ್ಟೇ ಕೇಳುವಂತೆ ಬಿಕ್ಕಳಿಸುತ್ತದೆ .

------------------------------------------------------ಸುಕೇಶ್ ಪೂಜಾರಿ



No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...