Sunday, March 18, 2018

ಮೌನ ಕಣಿವೆ-ಪ್ರತಿಧ್ವನಿ ೧

                                             ಮೌನ ಕಣಿವೆ-ಪ್ರತಿಧ್ವನಿ ೧

ಬೆಂಗಳೂರಿನಲ್ಲಿ ಮಾರ್ಚ್ ಗೆ  ಮಳೆ ಸುರಿಯುತಿತ್ತು. ಬೀಳೋ ಮಳೆಯ ಆ ಹಿಮ್ಮೇಳದ ಸದ್ದು  ಕೇಳಿಕೊಂಡು ಹಾಗೆ ಸುಮ್ಮನೆ  ಕುಳಿತರೆ ಏನೋ ಬರೆಯಬೇಕು ಅನಿಸುತ್ತದೆ, ಮಳೆಯ ಸದ್ದಿಗೆ ಮನ ಸೋಲದವರು ಯಾರು? .ಯಾರದೋ ಕೋಪ  ಬಿಸಿಲು , ಸಮಾಧಾನಿಸಲು ತಂಗಾಳಿ ಎಲ್ಲಿಂದಲೋ ಮಳೆ ಹೊತ್ತು ತಂದಿತ್ತು, ಅದು ಪುಟ್ಟ ಉಡುಗೊರೆ , ಒಂದಷ್ಟು ಹೊತ್ತು ಅಷ್ಟೇ , ಮಣ್ಣು ಒದ್ದೆಯಾಗಿ ಘಮಿಸುತಿತ್ತು, ಮಣ್ಣೊಳಗಿನ ಯಾವುದೋ ಬೀಜ ಹೊಸ ಚಿಗುರಿನ ಕನಸು ಕಾಣುತಿತ್ತು, ಒಂದು ಹೊಸ ಸೃಷ್ಟಿ.

ಮಳೆ ಬಂದಾಗಲೆಲ್ಲ ನನ್ನೂರು ನೆನಪಾಗುತ್ತದೆ " ಮಂಗಳೂರು " ಪಶ್ಚಿಮ ಘಟ್ಟ ಇಳಿದು ತೆಂಗು- ಕಂಗುಗಳ ನಡುವೆ ಉದ್ದಕ್ಕೆ ಹೊಯ್ದ ರಸ್ತೆಯಲ್ಲಿ ಮಳೆಯಲ್ಲೊಮ್ಮೆ ಹೋಗಿ ನೋಡಿ , ಅದು ಬರಿ ರಸ್ತೆಯಲ್ಲ ಊರು ಊರುಗಳ ನಡುವಿನ ಜಾರು ಬಂಡಿ , ಮನಸ್ಸು ಮಗುವಿನಂತೆ ತೇಲಾಡುತ್ತದೆ .

ಒಂದೆರಡು ತಿಂಗಳ ಹಿಂದೆ ಊರಿಗೆ ಹೊರಟಿದ್ದೆ . ಯಾಕೋ ಯಾವಾಗಲು ಬಸ್ಸಿನಲ್ಲಿ ಹೋಗುತಿದ್ದ ನನಗೆ ಈ ಬಾರಿ ರೈಲ್ ಗಾಡಿಯಲ್ಲಿ ಹೋಗುವ ಅನಿಸಿತು . ಬಸ್ಸಿನಲ್ಲಿ ಏನು ಮಜವಿದೆ ?? ರಾತ್ರಿ ಊಟ ಮಾಡಿ ಇಲ್ಲಿ ಮಲಗಿದರೆ ಮುಂಜಾನೆ ನನ್ನೂರಿನಲ್ಲಿ , ಎಲ್ಲಿಯ ಬೆಟ್ಟ, ಎಲ್ಲಿಯ ಜಲಪಾತ. ಹಸಿರ ಸಿರಿ ನೋಡುದೆಂತು ?. ಅದಕ್ಕೆ ಈ ಬಾರಿ ಪುಟ್ಟ ಬದಲಾವಣೆ .

ಕಿಟಕಿ  ಬದಿಯ ಕಾಯ್ದಿರಿಸಿದ ಸೀಟು, ಹೊರಗಡೆ ಉದ್ದುದ್ದುಕ್ಕೆ ಹಾಸಿ ಬಿಟ್ಟ ಕಂಬಿಗಳು .ರೈಲು ಹೊರಟಿತ್ತು , ಹೌದು ಅದೊಂದು ಮುಂಜಾನೆ ಬೆಂಗಳೂರಿನಿಂದ ನನ್ನೂರಾದ ಮಂಗಳೂರಿಗೆ ಹೊರಟಿದ್ದೆ .ಬೆಳಗ್ಗೆ ಆದ್ದರಿಂದ ಜಾಸ್ತಿ ಜನ ಇರಲಿಲ್ಲತಿಂಡಿ ಮುಗಿಸಿ ಕಿಟಕಿಯಾಚೆ ನೋಡುತ್ತಿದ್ದೆ . ರೈಲು ಅದಾವುದೋ ಲಯದೊಂದಿಗೆ ಓಡುತಿತ್ತು, ಬೆಂಗಳೂರು ದಾಟುವವರೆಗೆ ನೋಡಲೇನಿದೆ ಅದೇ ಕಾಂಕ್ರೀಟ್ ಕಟ್ಟಡಗಳು, ಇನ್ನೂ ಉಳಿದಿರುವ ಅಲ್ಪ ಸ್ವಲ್ಪ ಮರಗಳು , ಬದಲಾದ ಬೆಂಗಳೂರಿನ ಇತಿಹಾಸ ಹೇಳುತಿದ್ದವೋ ಅಥವಾ ಯಾರೋ ಅಂಟಿಸಿ ಹೋದ ಜಾಹಿರಾತಿಗೆ ಕಂಬಗಳಾಗಿ ಮೂಕ ಪ್ರೇಕ್ಷಕರಾಗಿ ನಿಂತಿದ್ದವೋ ಏನೋ . ಮನಸು ಏನೇನೋ ಯೋಚನೆಯಲ್ಲಿತ್ತು. ಸಕಲೇಶಪುರ ದಾಟುವರೆಗೆ "Auto Biography of Yogi" ಪುಸ್ತಕ ಓದುತಿದ್ದೆ . ರೈಲು ಊರು ಊರು ದಾಟುತಿದ್ದಾರೆ ನಾನು ಪುಟ - ಪುಟಗಳ ತಿರುವುತಿದ್ದೆ.

ಬೆಟ್ಟಗಳಿಗೆ ಸಮಾಂತರವಾಗಿ ರೈಲು ಓಡುತಿತ್ತು , ಓಡುತಿತ್ತು ಅನ್ನುದಕ್ಕಿಂತ ನಡೆಯುತಿತ್ತು ಎಂಬುದು ಸರಿಯಾದ ಶಬ್ದವೇನೋ!!. ಅದೆಷ್ಟೋ ಸುರಂಗ ಮಾರ್ಗಗಳೊಳಗೆ ಹೊಕ್ಕು ಆಚೆ ಬರುತಿತ್ತು,ದೊಡ್ಡ ಹಾವೊಂದು ಬಿಲದೊಳಗೆ ಹೋಗಿ ಬಂದಂತೆ, ಬಹುಶ ರೈಲು ಮಂಗಳೂರಿಗೆ ಹೊರಟಿದ್ದಕ್ಕೆ ಇರಬೇಕು ಶಬ್ದದ ಲಯದಲ್ಲಿ ಸ್ವಲ್ಪ ಬದಲಾವಣೆ ಇತ್ತು , ಕೆಲವೊಮ್ಮೆ ಯಕ್ಷಗಾನದ ಚೆಂಡೆಯಂತೆ, ಮತ್ತೆ ಕೆಲವೊಮ್ಮೆ ಹುಲಿಕುಣಿತದಂತೆ , ಹೌದು ಎಂತ ಇಂಪು !!!!. ಪುಟ್ಟ ಜಲ-ಝರಿಯೊಂದು ಎಲ್ಲಿಗೋ ಹರಿಯುತಿತ್ತು ಕಡಲು ಸೇರುವ ತವಕದೊಂದಿಗೆ.

ಜನ ತಮ್ಮ ಸೀಟು ಬಿಟ್ಟು ಬಾಗಿಲಲ್ಲಿ ನಿಂತು ಹೊರಗಡೆಯ ಸೌಂದರ್ಯ ನೋಡುತಿದ್ದರು , ಹೆಚ್ಚಿನವರು ನನ್ನಂತೆಯೆ ಮೊದಲ ಸರಿ ಬಂದವರು . ನೋಡುವ ಕಣ್ಣಿದ್ದರೆ ಪ್ರಕೃತಿ ನಮಗೇನು ಕಮ್ಮಿ ಮಾಡುದಿಲ್ಲ . ನಾನು ನನ್ನ ಸೀಟು ಬಿಟ್ಟು ಬಾಗಿಲ ಕಡೆ ಹೋದೆ . ಯಾರೋ ಮೆಟ್ಟಿಲುಗಳ ಮೇಲೆ ಕಾಲುಗಳ ಬಿಟ್ಟುಕೊಂಡು ಬಾಗಿಲಲ್ಲಿ ಕೂತಿದ್ದರು. ನಾನು ಬಂದುದ ನೋಡಿ ಯಾವುದೋ ಯೋಚನಾ ಲಹರಿಯನ್ನು ಅರ್ಧಕ್ಕೆ ಬಿಟ್ಟು ಮುಖವೆತ್ತಿ ನನ್ನತ್ತ ನೋಡಿದರು , ಹೌದು ಇದೇ ಕಂಗಳು , ನಾ ಪುಸ್ತಕ ಓದುತ್ತಿದ್ದಾಗ ನನ್ನಾಚೆ ಕದ್ದು ನೋಡುತಿದ್ದವು , ನಾ ತಿರುಗಿ ನೋಡಿದರೆ ಕಿಟಕಿಯಾಚೆ ದೂರಕೆ ನೋಡುತ್ತಾ ಏನನ್ನೋ ಹುಡುಕುತಿದ್ದವು . " ನಿಮಗೇನು ಅಭ್ಯಂತರ ಇಲ್ಲದಿದ್ದರೆ , ನಾನು ಒಂದಷ್ಟು ಹೊತ್ತು ಇಲ್ಲಿ ಕೂರ ಬಹುದ "ಒಂದು ಕ್ಷಣ ಎಲ್ಲೆಲ್ಲಿಗೋ ಓಡುತಿದ್ದ ನನ್ನೆಲ್ಲ ಯೋಚನೆಗಳ ಪಕ್ಕಕ್ಕೆ ಸರಿಸಿ ಕೇಳಿದೆ , ಆಕೆ ಒಂದಿಷ್ಟು ಮುಗುಳ್ನಕ್ಕು ಕೊಂಚ ಪಕ್ಕಕೆ ಸರಿದು ನನಗೊಂದಿಷ್ಟು ಜಾಗ ಮಾಡಿಕೊಟ್ಟಳು. ಆಕೆ ಬೀಸುತಿದ್ದ ತಂಗಾಳಿಗೆ ಮುಂಗುರುಳ ಹಿಡಿಯುವ ಪ್ರಯತ್ನದಲ್ಲಿದ್ದರೆ ನಾನು ನನ್ನನೇ ಮೀರಿ ಹೋಗುತಿದ್ದ ನನ್ನ ಕಲ್ಪನೆಗಳ ಹಿಡಿದಿಟ್ಟುಕೊಳ್ಳಲ್ಲು ಪ್ರಯತ್ನಿಸುತಿದ್ದೆ.

"ಮಾತನಾಡಿಸಲೋ ,ಬೇಡವೋ ?" ನನ್ನೊಳಗಿನ ನನ್ನದೇ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಲು ಹೆಣಗಾಡುತಿದ್ದೆ, ಆಕೆಗೆ ಅದೇನು ಅರ್ಥವಾಯಿತೋ ಒಮ್ಮೆ ನನ್ನತ್ತ ನೋಡಿ ಅನಂತ ಹಸಿರು ರಾಶಿಗಳ ನಡುವೆ ಕಣ್ಣಾಡಿಸುತ್ತಿದಳು . ಆಚೆಯಿಂದ ಬರುತ್ತಿದ್ದ ತಂಗಾಳಿಯೊಂದು ಅವಳ ಮೆಲ್ಲ ಸೋಕಿಕೊಂಡು ನನ್ನ ತಾಗಿಕೊಂಡು ಒಂದಿಷ್ಟು ಕಚಗುಳಿ ಇಟ್ಟು ಜಾರಿಕೊಳ್ಳುತಿತ್ತು . ನಾನು ಒಂದಷ್ಟು ಹೊತ್ತು ಸುಮ್ಮನೆ ಕೂತಿದ್ದೆ ಕೆಲವೊಂದು ಮೌನಗಳು ಮಾತಿಗಿಂತ ಆಪ್ಯಾಯಮಾನವಾಗಿರುತ್ತದೆ ಎಂದು ನನಗೆ ಗೊತ್ತು. ರೈಲಿಗೆ ಏನನಿಸಿತೋ ತುಂಬಾ ಮೆಲ್ಲಗೆ ಸಾಗುತಿತ್ತು , ಆ ಮಧುರ ಮೌನವೊಂದು ಅಷ್ಟು ಬೇಗ ಕಳೆದು ಹೋಗುದು ಅದಕ್ಕು ಬೇಡವಾಗಿತ್ತೇನೋ .

"ನಿಮ್ಮದು ಮಂಗಳೂರ ......!!" ನನಗೇ ಗೊತ್ತಿಲ್ಲದಂತೆ ಅದೊಂದು ಪ್ರಶ್ನೆ ಅವಳಿಗೆ ಕೇಳಿದೆ " ಅಲ್ಲ " ಎಂಬಂತೆ ತಲೆ ಅಲ್ಲಾಡಿಸಿದಳು . ಬಹುಶಃ ಇಷ್ಟು ಬೇಗ ಮೌನ ಮುರಿಯುದು ಇಷ್ಟವಿಲ್ಲವೇನೋ ಅಂದುಕೊಂಡೆ, ಆದರೇ ಅವಳ ಕಂಗಳಲ್ಲಿ ಒಂದು ನಗು ಇತ್ತು ,ಮುಖದಲ್ಲೊಂದು ಆಶ್ಚರ್ಯ. "ನಿಮ್ಮ ಹೆಸರೇನು . . . . ?" ಈ ಬಾರಿ ಧೈರ್ಯ ಮಾಡಿ ಕೇಳಿದೆ . ಆಕೆ ತಿರುಗಿ ನನ್ನತ್ತ ನೋಡಿದಳು, ಕಂಗಳು ಈಗ ವಿಷಾದ ರಾಗ ಹಾಡುತ್ತಿದಂತೆ ಅನಿಸಿತು.  "ಯಾಕೆ . . . ." ನನಗೆ ನಾನೇ ಕೇಳಿಕೊಂಡೆ . ಅದೇನೋ ಸನ್ನೆ ಮಾಡಿದಳು ಕೈಗಳಿಂದ , ಬಾಯಿಂದ , ನನ್ನೆದೆ ರೈಲು ಇಂಜಿನಿಗಿಂತಲೂ ಜೋರಾಗಿ ಹೊಡೆದುಕೊಳ್ಳುತ್ತಿತ್ತು , ಕಡೆಯದಾಗಿ ತುಟಿಗಳೆರಡರ ನಡುವೆ ಬೆರಳಿಟ್ಟುಕೊಂಡು ನನ್ನೆಡೆಗೆ ನೋಡಿದಳು . ಅವಳ ಕಂಗಳಲ್ಲಿ ಯಾವುದೋ ಅಸಹಾಯಕತೆಗೆ ಸಾಕ್ಷಿಯಾಗಿ ಒಂದೆರಡು ಕಣ್ಣ ಹನಿಗಳು ಇನ್ನೇನೋ ಜಾರಿಕೊಳ್ಳಲು ರೆಡಿಯಾಗಿದ್ದವು , "ಸೌಮ್ಯ" ನನಗೇ ಗೊತ್ತಿಲ್ಲದೆ ಉದ್ಗರಿಸಿದೆ ಆಕೆ ಮುದ್ದಾಗಿ ನಕ್ಕು ಬಿಟ್ಟಳು , ಬಹುಶಃ ಈವರೆಗೆ ಅವಳ ಸನ್ನೆಗಳ ಅರಿತು ಯಾರು ಅವಳ ಹೆಸರು ಕರೆದಿಲ್ಲವೊ ಏನೋ. ಈ ಬಾರಿ  ಜಾರೊ ಹನಿಗಳಿಗೆ ಉಗಮದಲ್ಲೇ ನಾ ಆಣೆಕಟ್ಟು ಕಟ್ಟಿದ್ದೆ.

ಅದೆಂತಹ ಹೆಸರಿಟ್ಟಿದ್ದರು ಅವಳಿಗೆ , ಆಕೆ ಮೌನಗಳಿಗೆ ಅನ್ವರ್ಥ ನಾಮ . ಹೌದು ಆಕೆ ಮೂಕಿ. ನಿಜ , ಶಬ್ದಗಳೊಂದಿಗೆ ಆಕೆ ಮಾತನಾಡಲಾರಳು, ಮಾತುಗಳಿಗೆ ಶಬ್ಧಗಳೇಕೆ ? ಎಷ್ಟೋ ಸಂದರ್ಭಗಳಲ್ಲಿ ಮಾತು ಹೇಳದ್ದನ್ನು ಒಂದು ಅರ್ಥಗರ್ಭಿತ ಮೌನ ಹೇಳಿರುತ್ತದೆ . ಸಣ್ಣ ಮಗು ಮಾತು ಕಲಿಯುವವರೆಗೆ ಅದಾವುದೋ ಅದರದೇ ಭಾಷೆಯಲ್ಲಿ ಮಾತಾಡುತ್ತದೆ ಅಮ್ಮನಿಗಷ್ಟೇ ಗೊತ್ತು ಅದರ ಮಾತು, ನೀವೇ ಸಾಕಿದ ನಾಯಿ ಅದೆಷ್ಟು ಪ್ರೀತಿಯಿಂದ ಮಾತಾಡಿಸುತ್ತದೆ . ಎಲ್ಲ ಮೌನಗಳ ಕೇಳಿಸಿಕೊಳ್ಳುವ ಹೃದಯ ಇರಬೇಕು ಅಷ್ಟೇ.

ಆಕೆ :

ಹೆಸರು "ಸೌಮ್ಯ", ಹುಟ್ಟಿನಿಂದಲು ಮೂಕಿ, ಒಂದಷ್ಟು ಅರ್ಧಂಬರ್ಧ ಶಬ್ಧಗಳು ಬಿಟ್ಟರೆ ಆಕೆಗೇನು ಬರುದಿಲ್ಲ , ಸಿತಾರ್ ನುಡಿಸುತ್ತಾಳೆ , ಬಹುಶಃ ಮಾತಲ್ಲಿ ಹೇಳಲಾಗದ್ದನ್ನು ಸಂಗೀತದ ಮೂಲಕ ಹೇಳುವ ಸಣ್ಣ ಪ್ರಯತ್ನ ಇರಬೇಕು , ಊರು ಕಾಸರಗೋಡಿನ ಅದಾವುದೋ ಹಳ್ಳಿ ಸದ್ಯಕ್ಕೆ ಇಷ್ಟೇ ಗೊತ್ತಾಗಿದ್ದು ಬಲ್ಲ ಮೂಲಗಳಿಂದ (Facebook)!!!!.

ಆಕೆ ನನ್ನ ಬಗ್ಗೆ ಕೇಳಿದಳು , ಉದ್ದಕ್ಕೊಂದು ದಾರಿ,ಒಂದಷ್ಟು ಹೊತ್ತು, ಬರಿ ಕೇಳಿಕೊಳ್ಳುವ ಮತ್ತು ಕೆಲವೊಮ್ಮೆ ನಗುವ ಜೀವ,ಯಾರಿಗು ಹೇಳಲಾರಳಲು ಅನ್ನುವ ಧೈರ್ಯದಲ್ಲಿ ಅದೆಲ್ಲವ ಹೇಳಿದೆ . ನನ್ನ ಬಾಲ್ಯ, ಕಾಲೇಜು , ಕವಿತೆ , ಕೆಲಸ , ಬ್ಲಾಗ್ , ಒಬ್ಬಂಟಿ ತಿರುಗಾಟ ಎಲ್ಲ . ಯಾರಲ್ಲೋ   ಹೇಳಿಕೊಳ್ಳಬೇಕೆಂದಿದ್ದೆ, ಬರಿ ಕೇಳಿಸಿಕೊಳ್ಳುವವರು ಸಿಕ್ಕಿಲ್ಲ. ಆದ್ರೆ ಇವತ್ತು ಆ ಮೌನ ಹಕ್ಕಿಯೊಂದು ನನ್ನೆಲ್ಲ ಮಾತುಗಳಿಗೆ ಕಿವಿಯಾಗುತಿತ್ತು.

ರೈಲುಗಾಡಿ ಊರು ಸೇರುವ ಹಂಬಲದಲ್ಲಿ ವೇಗ ಹೆಚ್ಚಿಸಿಕೊಂಡಿತ್ತು,ಆದರೆ ನನಗೆ ಊರು ಸೇರುವ ಅವಸರವಿರಲಿಲ್ಲ , ತಲೆ ತುಂಬಾ ಏನೋ ಯೋಚನೆಗಳು ನನ್ನ ಅನುಮತಿ ಇಲ್ಲದೇನೆ ನನ್ನದೇ ಪರಿಧಿಯ ದಾಟಲು ಪ್ರಯತ್ನಿಸುತಿತ್ತು .

"ನನಗೆ ಮಲಯಾಳಂ ಬರುದಿಲ್ಲವಲ್ಲ" ನನ್ನ ಕಲ್ಪನೆಗೆ ನಾನೇ ಒಳಗೊಳಗೆ  ನಗುತಿದ್ದೆ , ಈಗ ಭಾಷೆಯ ಅವಶ್ಯಕತೆ ಇರಲಿಲ್ಲ, ಎದುರಿಗಿದ್ದದ್ದು ಮೌನ ಪರ್ವತ , ಅದನ್ನು ಏರಿ ಒಮ್ಮೆ ಜೋರಾಗಿ ಕೂಗ ಬೇಕೆಂದೆನಿಸಿತು ಎಲ್ಲ ದಿಕ್ಕುಗಳಲ್ಲು ಪ್ರತಿಧ್ವನಿಸುವಂತೆ .

ಆಕೆಯನ್ನು ಯಾರೋ ಕರೆದರು,ಬಹುಶಃ ಅವಳ ಅಪ್ಪ ಇರಬೇಕು. ಎದ್ದು ಹೋದಳು ಆಕೆ, ಒಂದಷ್ಟು ಗೆಜ್ಜೆ ಸದ್ದುಗಳ ಜೊತೆಗೆ . ಹಾಗೆ ಎದ್ದು ಹೋದರೆ ಬಹುಶಃ ನಾ ಈಗ ಸುರಿವ ಮಳೆಯ ಜೊತೆಗೆ ಮಾತಾಡುತ್ತ ಇಷ್ಟೊಂದು ಬರೆಯುತಿರಲಿಲ್ಲವೇನೋ !! ಸಣ್ಣದಾಗಿ ಮುಗುಳ್ನಕ್ಕು"ನಿನಗೆ ತುಂಬಾ ಸಮಯವಿದೆ ಅರ್ಥ ಹುಡುಕಿಕೊ" ಅನ್ನುವ ಹಾಗಿತ್ತು ಅವಳ ಆ ನಗು.

ನಾನು ಇನ್ನೊಂದಷ್ಟು ಹೊತ್ತು ಅಲ್ಲೇ ಕೂತಿದ್ದೆ , ರೈಲುಗಾಡಿಗಿಂತಲೂ ವೇಗವಾಗಿ ಓಡುತಿದ್ದ ನನ್ನ ಮನಸ್ಸನ್ನು ಹಿಡಿದುಕೊಂಡು . ಸೂರ್ಯ ತನ್ನ ದಿನದ ಕೆಲಸ ಮುಗಿಸಿ ಪಡುವಣ ಕಡಲಿನಲ್ಲಿ ಕೈ ಕಾಲು ತೊಳೆಯಲು ರೆಡಿಯಾಗುತಿದ್ದ , ಇರುಳ ಬಾವಲಿಯೊಂದು ರೆಕ್ಕೆ ಬಿಚ್ಚಲು ತಯಾರಾಗುತ್ತಿತ್ತು, ಬೇಡವೆಂದರು ನಾ ಇಳಿಯುವ ಸ್ಟೇಷನ್ ಬೇಗ ಬಂದಿತ್ತು . ನಾ ನನ್ನ ಬ್ಯಾಗ್ ಬೆನ್ನಿಗೇರಿಸಿಕೊಂಡೆ . ಒಮ್ಮೆ ಆಕೆಯೆಡೆಗೆ ತಿರುಗಿ ಮುಗುಳ್ನಕ್ಕು ವಿದಾಯ ಹೇಳಬೇಕೆಂದುಕೊಂಡರೆ ನನಗಿಂತ ಮೊದಲು ಆಕೆಯೇ ನಗುತ್ತಿದ್ದಳು , ಮೌನಗಳ ಜೊತೆ ಈ ಮುಗುಳ್ನಗುಗಳಿಗೂ ಕೂಡ ಜೀವನ ಪೂರ್ತಿ ಅರ್ಥ ಕಂಡುಕೊಳ್ಳಲು ನಾನು ಪರದಾಡಬೇಕಾದೀತೆಂದು  ನನಗೆ ಆಗ ತಿಳಿದಿರಲಿಲ್ಲ!!.

*********************************************************************

ಅಂದೊಮ್ಮೆ  ಗೆಳೆಯನೊಬ್ಬನ ಜೊತೆ airport ಗೆ ಹೋಗಿದ್ದೆ , ವಿಶಾಲ ಹೂ ತೋಟಗಳು,ದೊಡ್ಡ ಕಟ್ಟಡ ಅಲ್ಲಲಿ ಪ್ಲಾಸ್ಟಿಕ್ ಮರಗಳು, ಗಿಡಗಳು. ವಿದಾಯ ಹೇಳಲು ಬಂದ ಕೆಲವರು ಅಳುತ್ತ ಕಣ್ಣೀರು ಒರೆಸುಕೊಳ್ಳುತಿದ್ದರು . ನನಗೆಲ್ಲ ಇದು ಹೊಸದು, ಗೆಳೆಯನ ಕೇಳಿದೆ ಇವರೆಲ್ಲ ಯಾಕೆ ಅಳುತಿದ್ದಾರೆ ? ಈಗ ಹಿಂದಿನಂತೆ ಇಲ್ಲ ನಾವು ಮನೆ ತಲುಪುವುದರ ಮೊದಲು  ( ಬೆಂಗಳೂರು ಟ್ರಾಫಿಕ್ ನಲ್ಲಿ ) ಅವರು ತಮ್ಮ ತಮ್ಮ ಮನೆ ಸೇರಿಕೊಳ್ಳುತ್ತಾರೆ , ವಿಡಿಯೋ ಕಾಲ್ ಮಾಡಿದರೆ ಯಾವಾಗ ಬೇಕೋ ಆವಾಗ ನೋಡಬಹುದು , ಎಲ್ಲಿದ್ದಾರೆ , ಏನು ಮಾಡುತ್ತಿದ್ದಾರೆ ಎನ್ನುದು ಅವರ ಸ್ಟೇಟಸ್ ಅಪ್ಡೇಟ್ ನಿಂದ ತಿಳಿಯುತ್ತದೆ. ಯಾವಾಗ ಬೇಕಾದರು ಬರಬಹುದು , ಹೋಗಬಹುದು . ತಂತ್ರಜ್ಞಾನದ ಮುಂದೆ ಪ್ರಪಂಚ ತುಂಬಾ ಚಿಕ್ಕದು, ಎಷ್ಟು ಚಿಕ್ಕದು ಎಂದರೆ ನಮ್ಮ ಹೈಸ್ಕೂಲ್ ತರಗತಿಗಳಲ್ಲಿ ತೋರಿಸುತಿದ್ದ ಗ್ಲೊಬ್ ಗಿಂತಲು ಚಿಕ್ಕದು !! ಆದರೂ ಜನ ಯಾಕೆ ಅಳುತ್ತಾರೆ ವಿದಾಯ ಹೇಳುವಾಗ ??.

ಏನೇ ಹೇಳಿ ಹಳೆಯ ಹಿಂದಿ ಸಿನಿಮಾಗಳಲ್ಲಿ, ರೈಲ್ವೆ ಸ್ಟೇಷನ್ನಲ್ಲಿ ಹರಿಯುತಿದ್ದ ಕಣ್ಣೀರಿಗೆ ಹೋಲಿಸಿದರೆ ಈಗ airport ನ ಪ್ಲಾಸ್ಟಿಕ್ ಮರದ ನೆರಳಲ್ಲಿ ಟಿಶ್ಯೂ ಹಿಡಿದುಕೊಂಡು ಆಳುವವರು ಯಾಕೋ ನಾಟಕೀಯವಾಗಿ ತೋರುತ್ತಾರೆ.

ನನಗಿದೆಲ್ಲ ಎಲ್ಲಿ ಅರ್ಥವಾಗಬೇಕು , ಸತ್ತವರಿಗು ಆಳದ ನಾನು ಒಂದಷ್ಟು ಹೊತ್ತು ಅವರವರ ದಾರಿ ಹುಡುಕುತ್ತ ದೂರ ಹೋಗುವವರಿಗೆ  ಅಳುತ್ತೇನೆಯೇ ?.

ಆದರೆ ಇಂದು ಆ ತರ ಇರಲಿಲ್ಲ , ಟ್ರೈನ್ನಲ್ಲೆ ಏನೋ ಬಿಟ್ಟು ಬಂದಂತೆ , ರೈಲುಗಾಡಿ ದೂರ ದೂರ ಹೋದಂತೆ ಯಾರೋ ಮನಸ್ಸಿಲ್ಲದೆ ಅವಸರ ಅವಸರವಾಗಿ ಎದ್ದು ಹೋದಂತೆ .
ರೈಲಿನ ಹಾರ್ನ್ ವಿದಾಯ ಹೇಳಿತ್ತು. ಬೆನ್ನಿಗೇರಿಸಿದ ಬ್ಯಾಗಿಗಿಂತ ಎದೆ ಭಾರವಾಗಿತ್ತು , ಹೆಜ್ಜೆಗಳು ವಿರುದ್ಧ ದಿಕ್ಕಿಗೆ ನಡೆಯಲು ಒಲ್ಲೇ  ಎನ್ನುತಿದ್ದವು ಆದರೆ ನಡೆಯಲೇ ಬೇಕು ಇದು ನನ್ನ ದಾರಿ.

ಹನಿಯ ಬಿಂದುವೊಂದು ಕಾಲ ಕೆಳಗೆ ಬಿತ್ತು , ಮಳೆ ಬಂತೇ ಎಂದು ತಲೆ ಮೇಲೆತ್ತಿದೆ , ಖಾಲಿ ಆಕಾಶ ಯಾವುದೋ ಹಕ್ಕಿ ಗುಂಪೊಂದು ದೂರಕ್ಕೆ ಹಾರುತಿತ್ತು. ಕೆನ್ನೆ ಹನಿಯ ಬಿಂದುವಿನ ಮೂಲವೆಲ್ಲಿ ಎಂಬ ಪ್ರಶ್ನೆಗೆ ಉತ್ತರಿಸುತಿತ್ತು.

(ಮುಂದುವರಿಯುದು  . . . . . . . . .)

ಸುಕೇಶ್ ಪೂಜಾರಿ (ಸುಕೇಪು)












No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...