Monday, January 30, 2017

ಜಾತಿ

ನಾ ಹುಟ್ಟುವಾಗಲೇ
ಹುಟ್ಟಿಕೊಂಡಿತು,
ನನ್ನ ಸುತ್ತಲೇ
ಸುತ್ತಿಕೊಂಡಿತು.
ಪರದೆ ಮೇಲೆ ಯಾರೋ
ಸಣ್ಣಗೆ ಎಳೆದ ಗೆರೆ
ಅಳಿಸದೆ ಪರಿಧಿಯಾಯಿತು .

ಸುತ್ತಣ ಗೋಡೆ,
ಕೆಡವಿದಷ್ಟು ಕಟ್ಟೋ ಮಂದಿ,
ಹಾರೆ ಗುದ್ದಲಿಗಳ ಮೇಲೆ
ಹಾರೋ  ವಿಭಜನೆಯ ಪತಾಕೆ.
ಹಾಹಕಾರಗಳ ನಡುವೆ,
ಆಹಾರ ಬೇಯಿಸಿಕೊಂಡದ್ದು
ಅವರವರು, ಅವರವರ ಮತಕ್ಕೆ .

ಕಾಣದ ದೇವರುಗಳಿಗೆ
ಕೈ, ಕಾಲು, ಕಣ್ಣು ಕೊಟ್ಟು
ಅಲ್ಲಲ್ಲಿ ನಿಲ್ಲಿಸಿ ಆಯಿತು.
ಅವ ಏನು ಮಾಡಿಯಾನು
ಪೂಜಿಸಲೊಂದು ಜಾತಿ,
ಬೇಡಲೊಂದು .
ಎಂದೂ ಮುಗಿಯದ ಇಷ್ಟಾರ್ಥ!!.

ಅಂದು ಗುರು ಹೇಳಿದ್ದ
ಒಂದೇ ಜಾತಿ,ಮತ,ಕುಲ.
ನಾವು ಕೇಳಲಿಲ್ಲವಲ್ಲ,
ಗುರುವಿನ
ಗುಲಾಮನಾಗಲಿಲ್ಲ.
ಒಬ್ಬೊಬ್ಬರಿಗೆ ಒಂದೊಂದು
ಮೀಸಲಾತಿ,
ಹೀಗೇ ಆದರೆ ಮುಂದೊಂದು ದಿನ
ಪೂರ್ತಿ ಅವನತಿ.!!!

--------------------------------------------------------ಸುಕೇಶ್ 


Sunday, January 22, 2017

ಊರ ಜಾತ್ರೆಯಲ್ಲಿ ಬೊಂಬೆಯೊಂದು ಇಷ್ಟವಾಯಿತೇಕೆ.......


ಸಣ್ಣ ಟೇಬಲ್ ನ ಎದುರು ಕೂತು ನಿನ್ನ ಕಣ್ಣುಗಳನ್ನೇ ನೋಡುತಿದ್ದೆ , ಕಣ್ಣ ಬಿಂಬದಲ್ಲಿ ನನ್ನ ನೋಡುವ ಆಸೆಯಿಂದ. ಆ ನಿನ್ನ ಪುಟ್ಟ ಕಣ್ಣುಗಳು ರಾತ್ರಿ ಕಣ್ಣು ಮುಚ್ಚಿಕೊಂಡಾಗ ನನ್ನದು ಒಂದು ಕನಸು ಬಂದಿದ್ದರೆ !!,ಆ ಕನಸಿಗೆ ನೀನು ನಿನಗೂ ತಿಳಿಯದಂತೆ ಮುಗುಳ್ನಗಿದ್ದರೆ!!. ಯಾಕೋ ಎದೆ ಸಣ್ಣಗೆ ಕಂಪಿಸುತ್ತಿತ್ತು ನನ್ನದಲ್ಲದ ಕಲ್ಪನೆಗೆ.

ಹೌದು ಹಿಂದೆ ಎಂದೋ ನಿನಗೆಂದು ಬರೆದ ಕವಿತೆ ಯಾಕೋ ಆಪ್ತವಾಯಿತು ,

ಮೊನ್ನೆ ಮೊನ್ನೆ
ಚಂದಿರ ಸಿಂಗರಿಸಿಕೊಂಡಿದ್ದ
ನಿನ್ನನೇ ಅನುಕರಿಸಿ,
ಕೆನ್ನೆ ಕೆಂಪು, ಕಣ್ಣ ಹೊಳಪು
ಜೋಪಾನ , ಕದ್ದು ಬಿಟ್ಟಾನು
ನಿನ್ನ ಯಾಮಾರಿಸಿ.

ಎಲ್ಲ ಕಡೆ ನಿನ್ನನೇ ಹುಡುಕುದು, ನಿನ್ನೊಂದಿಗಿರಲು ಹಾತೊರೆಯುದು ಯಾಕೋ ಅಭ್ಯಾಸವಾಗಿದೆ. ಸಣ್ಣದಾಗಿ ಶುರುವಾದ ಮಾತು, ಪರಿಚಯದ ಮುಗುಳ್ನಗು ,  ನನ್ನ ಒಂಚೂರು ಬಿಡದೆ ಕಾಡಿದ್ದೇಕೆ? ಸುತ್ತ ನಿಯಮಗಳ ಬಲೆ ಹೆಣೆದು ಅದರೊಳಗೇ ಬದುಕುತಿದ್ದ ನಾನು ಎಲ್ಲ ನಿಯಮಗಳ ಗಾಳಿಗೆ ತೋರಿ ನಿನ್ನ ಬಯಸಿದ್ದೇಕೆ? . ಪ್ರತೀ ಸಲ ಸೋಲುತ್ತೇನೆ ನಿನ್ನ ಎದುರು, ಪ್ರತೀ ಮೌನಕ್ಕೋ ಉತ್ತರ ಹುಡುಕುತ್ತೇನೆ ............

ಕೆಲವೊಮ್ಮೆ ಮಾತಿಗಿಂತ ಮೌನವೇ ಹಿತವೆನಿಸುತ್ತದೆ, ನನಗೆ ನೀ ಹೇಳದ ಮಾತುಗಳ ಕಲ್ಪಿಸಿಕೊಂಡು. ನಿನ್ನ ಪ್ರತೀ ಮಾತಿಗೂ, ಮೌನಕ್ಕೋ ಕವಿತೆ ಬರೆಯಬಲ್ಲೆ, ನೀ ಒಲ್ಲೆ ಅನ್ನದಿದ್ದರೆ !!!.

ಮೌನ
ಕಣಿವೆ
ಮಾತು
ಪ್ರತಿಧ್ವನಿ.

ದೊಡ್ಡದಾಗಿ possessiveness ಕಾಡುತ್ತದೆ, ನೀನೇ ಬೇಕು ಎಂಬ ಹಂಬಲದ ಜೊತೆ. ನಿನ್ನೊಂದಿಗೆ ನಾನೇ ಇರಬೇಕು,ನಿನ್ನ ಪ್ರತಿಯೊಂದು ಮಾತು,ಯೋಚನೆಗಳಲ್ಲಿ ನನಗೂ ಪಾಲಿರಬೇಕು ,ಗೊತ್ತು ಆಸೆ ಚಿಕ್ಕದಲ್ಲ, ಆದರೊ ನನ್ನ ಜೊತೆ ನಾನೇ ಯುದ್ಧಕ್ಕೆ ನಿಲ್ಲುತ್ತೇನೆ ನಿನ್ನ ಗೆಲ್ಲುವ ನೆಪಕ್ಕೆ.ಮತ್ತೆ ಸೋಲುತ್ತೇನೆ,ನಗುತ್ತೇನೆ,ಅಳುತ್ತೇನೆ . ಭ್ರಮೆಗಳಿಗೆ ಕ್ಷಮೆಯೆಲ್ಲಿ ???!!.

ಒಂದು ಸುಳ್ಳು ಹೇಳಿಬಿಡು ,ನಿನಗೆ ನೀನೆ. ಹೀಗೇ ನನ್ನ ಹಾಗೆ ನಿನಗೂ ಆಗಿದೆ ಎಂದು . ಹಿತವೆನಿಸಬಹುದು ನಿನಗೂ, ನನಗು.


ಎಲ್ಲ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ, ನನ್ನ ನಾ ಕಳೆದು ಕೊಂಡೇನು. ಅದಕ್ಕೆ ಇರಬೇಕು ನಾ ನನ್ನೊಳಗೆ ಗುದ್ದಾಡುದು, ಒಂದು insecure feeling ಗೆ. ಎಲ್ಲ ನಿಯಮಗಳು ನಿನ್ನೆದುರು ಸದ್ದಿಲ್ಲದೆ ಜಾರಿಕೊಳ್ಳುತ್ತವೆ , ಯಾರನ್ನೂ , ಯಾವುದಕ್ಕೂ ಮತ್ತೆ ಮತ್ತೆ ಕೇಳದ ನಾನು , ನಿನ್ನಲ್ಲಿ ಎಷ್ಟು ಸಲ ಬೇಕಾದರೂ ಕೇಳಿಯೇನೂ . ತಿರಸ್ಕಾರ, ನಾಚಿಕೆ , ಅವಮಾನಗಳಿಗೆ ಅಭ್ಯಾಸವಾಗಿದೆ.


ತುಂಬಾ ಸಲ ಅಂದುಕೊಳ್ಳುತ್ತೇನೆ, ನಿನ್ನ ಬಗ್ಗೆ ಯೋಚಿಸಲೇ ಬಾರದೆಂದು, ಆದರೊ ಮತ್ತೆ ನನ್ನ ಸಮಯಗಳ ನಿನಗೆಂದು ಮಾರಿಕೊಳ್ಳುತ್ತೇನೆ. ಖಾಲಿಯಾದ ಸಮಯದ ಜೋಳಿಗೆಗೆ ಮತ್ತೊಂದಷ್ಟು ನೆನಪ ತುಂಬಿಕೊಳ್ಳುತ್ತೇನೆ, ಮುಂದೊಂದು ದಿನ , ನೀನೇ ಇರದ ಕ್ಷಣಕ್ಕೆ ಮೆಲುಕು ಹಾಕಲು.

ಖಾಲಿ ಜೋಳಿಗೆ ತುಂಬಾ
ನಿನ್ನ ನೆನಪು.
ಕೆಲವು ಕಪ್ಪು,
ಹಲವು ಬಿಳುಪು.

ನೀನು ಬಣ್ಣಗಳ ಕುಂಚ ಕೊಟ್ಟು ನೋಡು, ನಾ ಬದುಕ ಚಿತ್ರಗಾರ, ಪ್ರತೀ ಸಲ ಸೋಲುವವಗೆ ಬದುಕ ಗೆಲ್ಲುದು ಗೊತ್ತು. ನಮ್ಮದೆನ್ನುವವ ಪುಟ್ಟ ಪ್ರಪಂಚಕ್ಕೆ ನಾನೇ ಕಾವಲುಗಾರ, ದಂಡನಾಯಕ. ನಿನ್ನ ಕಾಯುದು, ಕನಸ ಆಯುದು ನನ್ನ ನಿತ್ಯ ಕಾಯಕ!!!!!.

ಕೊನೆಯದಾಗಿ,

ಊರ ಜಾತ್ರೆಯಲ್ಲಿ ಬೊಂಬೆಯೊಂದು ಇಷ್ಟವಾಯಿತು,ಇಷ್ಟವಾದದ್ದು ಅದರ ಅಂದ ಚಂದಕ್ಕಲ್ಲ, ಬೊಂಬೆ ಮಾರುವವ "ಸಾರ್ ಇದು ತಗೊಳ್ಳಿ ಚಂದವಿದೆ " ಎಂದು ಹೇಳಿದನೆಂದು ಅಲ್ಲ. ಕಾರಣವೇನೇ ಇರಲಿ ,ಬೊಂಬೆಯನೇ ನೋಡಿದೆ, ಕಣ್ಣ ಬಿಂಬದಲ್ಲಿ ನನ್ನ ನೋಡುವ ಆಸೆಯಿಂದ. ತೇಲೋ ಪುಟ್ಟ ಕಂಗಳಲಿ ದಿನಾ ಹುಡುಕುತ್ತೇನೆ ಕಳೆದುಕೊಂಡ ನನ್ನನ್ನು. ಜಾತ್ರೆ ಮುಗಿವ ಮೊದಲು ಹುಡುಕೋಣವೆ ಜೊತೆಗಿನ್ನು . . . . . . . .. . . . !!!!

ಬೋಂಬೆ ಕಂಗಳಲ್ಲಿ ಕಳೆದು ಹೋದ ಆ ಘಳಿಗೆ , ಅಮೃತ ಘಳಿಗೆ  ...............!!!

ಜಾತ್ರೆ ತೇರು ಮುಂದುವರಿಯುದು ...................................





Yours

Sush
















Saturday, January 14, 2017

ಚಿತ್ರ ಬರಹ -೩


ಈ ಲೇಖನ ಬರೆಯೋಕೆ ಯಾಕೋ ಸ್ವಲ್ಪ ನಾಚಿಕೆ ಆಗುತ್ತದೆ,ಸಣ್ಣದಾಗಿ guilt ಕಾಡುತ್ತದೆ ಎಲ್ಲೋ ಯಾರದೋ ಹಸಿವಿನ ಕೂಗು, ಪುಟ್ಟ ಹೊಟ್ಟೆಯ ಚೀರಾಟ ಕೇಳಿದಂತೆ,ಕೊನೆಯ ಉಸಿರು ಎಳೆಯಲು ಶಕ್ತಿ ಇಲ್ಲದೆ, ಯಾರೋ ಮತ್ತೆ ತೆರೆಯದೆ ಕಣ್ಣು ಮುಚ್ಚಿದಂತೆ ಅನಿಸುತ್ತದೆ.

ನಾನು ದುಡಿದದ್ದು, ಎಷ್ಟು ಬೇಕಾದರೂ ತಿನ್ನುತ್ತೇನೆ,ಎಷ್ಟು ಬೇಕಾದರೂ ವೇಸ್ಟ್ ಮಾಡುತ್ತೇನೆ. ಏನಿವಾಗ ?? ಎಷ್ಟೋ ಜನ ಹೀಗೇ ಅಂದುಕೊಂಡು ಹೋಟೆಲ್,ಮನೆಗಳಲ್ಲಿ ಬಿಸಾಡಿದೆಷ್ಟು?. ಒಮ್ಮೆ ಯೋಚಿಸಿ ಪಕ್ಕದ ಬೀದಿಯಲ್ಲೇ ಯಾರೋ ದಿನ ಪೂರ್ತಿ ಸರಿಯಾಗಿ ಊಟಮಾಡದೆ,ಬೇಡಿದವರ ಕೈಯಲ್ಲಿ ಬೈಸಿಕೊಂಡು , ನಿತ್ರಾಣದಿಂದ ನಿದ್ದೆ ಹೋಗಿರಬಹುದು.

ಯಾರು ಹೊಣೆ? ನಾವೇ, ಇನ್ನಾರು?? ದೇಶ ಸ್ವತಂತ್ರಗೊಂಡು ಇಷ್ಟೊಂದು ವರ್ಷವಾದರೂ ನಮಗೆ, ದಾರಿದ್ರ್ಯ,ಹಸಿವು,ಪೌಷ್ಟಿಕ ಆಹಾರದ ಕೊರತೆಗಳನ್ನು ದೂರ ಮಾಡಲಾಗಲಿಲ್ಲ. ಅಂಥವರು ನಾವು smart city , cashless ವ್ಯವಹಾರಗಳ ಬಗ್ಗೆ ಮಾತಾಡುತ್ತೇವೆ . ರಾಜಕೀಯ, ಸಿನೆಮಾ, ಕ್ರಿಕೆಟ್, ಹಾಳು ಮೂಳು ಸುದ್ದಿಗಳ  ಸದ್ದಿನ ಜೊತೆ ಯಾರದೋ ಹಸಿವಿನ ಚೀರಾಟ ನಮಗೆ ಕೇಳುದೇ ಇಲ್ಲ.

ನಿಮಗೊಂದು ಆತಂಕ ಪಡಬೇಕಾದಂಥ ವಿಷಯ ಗೊತ್ತೇ, ನಮ್ಮ ದೇಶ ಪ್ರಪಂಚದಲ್ಲೇ ಅತೀ ಹೆಚ್ಚು ಹಸಿವಿನಿಂದ ಮತ್ತು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವವರ ಹೊಂದಿರುವ ದೇಶ ,ಒಟ್ಟು ೧೯೪ ಮಿಲಿಯನ್ ಗೂ ಜಾಸ್ತಿ ಜನ ತುತ್ತು ಅನ್ನಕ್ಕೂ ಗತಿಯಿಲ್ಲದೆ (ಸಾಯುತ್ತಿದ್ದಾರೆ) ಬದುಕುತ್ತಿದ್ದಾರೆ. ಇಡೀ ಪ್ರಪಂಚದಲ್ಲಿ ಒಟ್ಟು ೭೯೫ ಮಿಲಿಯನ್ ಜನ ಒಂದು ಹೊತ್ತಿನ ಅನ್ನಕ್ಕಾಗಿ ಕಾಯುತ್ತಾ ಬದುಕುತ್ತಾರೆ. ನಾಳೆ ಮತ್ತೆ ನಿಮ್ಮ ತಟ್ಟೆಯಲ್ಲಿ ತಿನ್ನದೇ ಉಳಿದ ಆಹಾರ ಬಿಸಾಡುವಾಗ ಈ ಅಂಕಿಅಂಶವನ್ನು ಜ್ಞಾಪಿಸಿಕೊಳ್ಳಿ.

ಇಸ್ಟೇ ಅಲ್ಲ ಈ ಕೆಳಗಿನ ಅಂಕಿಅಂಶಗಳ ನೋಡಿದರೆ ನೀವು ಬೆಚ್ಚಿ ಬೀಳುತ್ತೀರಿ.

ದೇಶದ ಒಟ್ಟು 15% ಜನ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ.
ಸುಮಾರು 30% ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ.
3000 ಮಕ್ಕಳು ಆಹಾರದ ಕೊರತೆಯಿಂದ ದಿನಾ ಸಾಯುತ್ತಿದ್ದಾರೆ.
(ಮೇಲಿನ ಅಂಕಿಅಂಶಗಳು India state hunger index ಮತ್ತು Global hunger index ನಿಂದ )

ನಮ್ಮ ದೇಶದ ಮಧ್ಯಪ್ರದೇಶ ರಾಜ್ಯದಲ್ಲಿ ಇಥಿಯೋಪಿಯಾ ಮತ್ತು ಸೂಡಾನ್ ದೇಶಗಳಿಗಿಂತಲೂ ಜಾಸ್ತಿ ಜನ ಹಸಿವಿನಿಂದ ನರಳುತ್ತಿದ್ದಾರೆ.

ನಾಚಿಕೆ ಆಗಬೇಕಾದದ್ದೆ, ಅದಕ್ಕೆ ಇನ್ನೂ ಮುಂದುವರಿದ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡು ತಿರುಗುತ್ತಿದ್ದೇವೆ.

ನಮ್ಮಲ್ಲಿ,ಯಾವುದೋ ಕಲ್ಲಿಗೆ ಸುರಿಯಲು ಹಾಲು,ಮೊಸರು ಇದೆ,ಇನ್ನಾವುದೋ ಕೋಟಿ ಕೋಟಿ ದೇವರುಗಳಿಗೆ ಇಡಲು ಬೆಣ್ಣೆ , ತುಪ್ಪ, ಹಣ್ಣು ಹಂಪಲುಗಳಿವೆ,ಹೋಮ ಹವಣಗಳಿಗೆ ಸುರಿಯಲು ದವಸ ಧಾನ್ಯಗಳಿವೆ,ಆದರೆ ಅದೇ ಗುಡಿಗಳ ಮುಂದೆ, ಇನ್ನಾವುದೋ ರಸ್ತೆಗಳಲ್ಲಿ , ಎಲ್ಲೋ ಮಾರ್ಕೆಟ್ ಗಳಲ್ಲಿ ಹೊಟ್ಟೆ ಹುಳಗಳಿಗೆ ಆಹಾರವಿಲ್ಲದೆ ಬಿದ್ದುಕೊಂಡಿರುವ ಜೀವಗಳ ಕೇಳುವವರಿಲ್ಲ,

 ನಮ್ಮಲ್ಲಿ ಬೇಕಾದಷ್ಟು ಜನಸಂಖ್ಯೆ ಇದೆ ಒಂದಷ್ಟು ಜನ ಹಸಿವಿನಿಂದ ಸತ್ತರೆ ನಮಗೇನೂ..... !!

ಒಮ್ಮೆ ಯೋಚನೆ ಮಾಡಿ ದೇಶದ ಈ ಪರಿಸ್ಥಿತಿಗೆ ನಾವೂ ಒಂದಷ್ಟು ಹೊಣೆ ಅನ್ನಿಸುದಿಲ್ಲವೆ. ನಾವು ಸೃಷ್ಟಿಸಿಕೊಂಡ ನಿಯಮಗಳು , ನಮ್ಮ ರಾಜಕೀಯದ ಕಿತ್ತಾಟ, ದಿನಾ ಸುಳ್ಳು ಸುದ್ದಿಗಳನ್ನೇ ಹಬ್ಬಿಸುವ ನಮ್ಮ news channel ಗಳು,ನಮ್ಮ ಉಡಾಫೆ ಧೋರಣೆಗಳು, ಎಲ್ಲೋ ಒಂದುಕಡೆ ನಾವೇ ಹೊಣೆ ಹೊತ್ತು ತಲೆಬಾಗಿಸ ಬೇಕಾಗ ಬಹುದು.

ಜನರಿಗೆ ಇಂಟರ್ನೆಟ್ ಉಚಿತ ಒದಗಿಸಲು ಯೋಚಿಸುವ ಸರ್ಕಾರ, ಮೊದಲು ಜನರ ಹಸಿವು ನೀಗಿಸಲು ಪ್ರಯತ್ನಿಸಬೇಕು.ಸಂಘ ಸಂಸ್ಥೆಗಳು ವರ್ಷ ವರ್ಷ ಸಿನಿಮಾ ನಾಯಕ ನಾಯಕಿಯರ, ರಾಜಕೀಯದವರ ಕರೆಸಿ ವಾರ್ಷಿಕೋತ್ಸವ ಮಾಡಿದರೆ ಸಾಲದು, ಜನರ, ಕೈಲಾಗದವರ ಕಷ್ಟ ಅರಿತು ಸಹಾಯ ಮಾಡಬೇಕು. ದೇಶದಲ್ಲಿ ಸರಿಯಾದ ಶೇಖರಣಾ ಘಟಕಗಳಿಲ್ಲದೆ ಎಷ್ಟೋ ಆಹಾರ ಪದಾರ್ಥಗಳು ಹಾಳಾಗುತ್ತಿವೆ ,ಸಮರ್ಪಕವಾದ ಪೂರೈಕೆಯ ವಿಧಾನಗಳಿಲ್ಲದೆ ಅರ್ಧದಲ್ಲೇ ಹಾಳಾಗಿ ಹೋಗುತ್ತಿವೆ ಇವೆಲ್ಲವುಗಳ ನಿರ್ವಹಣೆಯಾಗ ಬೇಕು .ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯುವ ಜನಾಂಗದ ಸಮರ್ಪಕ ಬಳಕೆಯಾಗ ಬೇಕು. 

ನಾವು ಮನುಷ್ಯರು, ನಮ್ಮ ಮೂಲ ಒಂದೇ, ಹಂಚಿ ತಿನ್ನ ಬೇಕಾದವರು. ಕಿತ್ತಾಡಿಕೊಂಡು ಅಲ್ಲ. ಎಲ್ಲ ಒಂದಾದರೆ ಮತ್ತೊಂದಿಷ್ಟು ಮನೋಬಲವಿದ್ದರೆ ಈ ಸಮಸ್ಯೆಯನ್ನು ಕಿತ್ತೊಗೆಯಬಹುದು.

ಗಾಂಧೀಜಿ ಎಲ್ಲೋ ಹೇಳಿದ ಮಾತು “Be the change you want to see in the world.” 

Are you????.

ಯೋಚನೆ ಮಾಡಿ......... 



.......  . . . . . . . . . . . .. .. . . . . . . .. . . . . . . .. ಸುಕೇಶ್ 

Tuesday, January 10, 2017

Sunday, January 1, 2017

ಚಿತ್ರ ಬರಹ -೧



ಹಾಯ್,

ಆಗಷ್ಟೇ ಹೇಳಿದ್ದೆ ಹೊಸ ವರುಷದ ಹೊಸ resolution,

ಹಾಗೇ  ಹೀಗೆ ಹೊಳೆವ  ಕೆಲವು ಸಾಲುಗಳನ್ನು ಯಾವುದೋ ಫೋಟೋ ಜೊತೆ ಸೇರಿಸುತ್ತೇನೆ. 

ವಾರಕ್ಕೆ ಒಂದು ಆಗಲಿಲ್ಲವಾದರೂ, ತಿಂಗಳಿಗೊಂದೋ , ಎರಡೋ ಬರೆವ ಸಣ್ಣ ಪ್ರಯತ್ನ . 

ಈ ಬರಹಗಳು ನಿಮ್ಮನ್ನೊಂದಿಷ್ಟು inspire ಮಾಡಿದರೆ ನನಗಷ್ಟೇ ಸಾಕು . 

ನಿಮ್ಮ ಸಲಹೆ ಸೂಚನೆಗಳಿಗೆ ಈ ಬ್ಲಾಗಿನ ಬಾಗಿಲು ಸದಾ ತೆರೆದಿರುತ್ತದೆ.

ಮೊದಲನೆಯದು :

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...