Sunday, January 22, 2017

ಊರ ಜಾತ್ರೆಯಲ್ಲಿ ಬೊಂಬೆಯೊಂದು ಇಷ್ಟವಾಯಿತೇಕೆ.......


ಸಣ್ಣ ಟೇಬಲ್ ನ ಎದುರು ಕೂತು ನಿನ್ನ ಕಣ್ಣುಗಳನ್ನೇ ನೋಡುತಿದ್ದೆ , ಕಣ್ಣ ಬಿಂಬದಲ್ಲಿ ನನ್ನ ನೋಡುವ ಆಸೆಯಿಂದ. ಆ ನಿನ್ನ ಪುಟ್ಟ ಕಣ್ಣುಗಳು ರಾತ್ರಿ ಕಣ್ಣು ಮುಚ್ಚಿಕೊಂಡಾಗ ನನ್ನದು ಒಂದು ಕನಸು ಬಂದಿದ್ದರೆ !!,ಆ ಕನಸಿಗೆ ನೀನು ನಿನಗೂ ತಿಳಿಯದಂತೆ ಮುಗುಳ್ನಗಿದ್ದರೆ!!. ಯಾಕೋ ಎದೆ ಸಣ್ಣಗೆ ಕಂಪಿಸುತ್ತಿತ್ತು ನನ್ನದಲ್ಲದ ಕಲ್ಪನೆಗೆ.

ಹೌದು ಹಿಂದೆ ಎಂದೋ ನಿನಗೆಂದು ಬರೆದ ಕವಿತೆ ಯಾಕೋ ಆಪ್ತವಾಯಿತು ,

ಮೊನ್ನೆ ಮೊನ್ನೆ
ಚಂದಿರ ಸಿಂಗರಿಸಿಕೊಂಡಿದ್ದ
ನಿನ್ನನೇ ಅನುಕರಿಸಿ,
ಕೆನ್ನೆ ಕೆಂಪು, ಕಣ್ಣ ಹೊಳಪು
ಜೋಪಾನ , ಕದ್ದು ಬಿಟ್ಟಾನು
ನಿನ್ನ ಯಾಮಾರಿಸಿ.

ಎಲ್ಲ ಕಡೆ ನಿನ್ನನೇ ಹುಡುಕುದು, ನಿನ್ನೊಂದಿಗಿರಲು ಹಾತೊರೆಯುದು ಯಾಕೋ ಅಭ್ಯಾಸವಾಗಿದೆ. ಸಣ್ಣದಾಗಿ ಶುರುವಾದ ಮಾತು, ಪರಿಚಯದ ಮುಗುಳ್ನಗು ,  ನನ್ನ ಒಂಚೂರು ಬಿಡದೆ ಕಾಡಿದ್ದೇಕೆ? ಸುತ್ತ ನಿಯಮಗಳ ಬಲೆ ಹೆಣೆದು ಅದರೊಳಗೇ ಬದುಕುತಿದ್ದ ನಾನು ಎಲ್ಲ ನಿಯಮಗಳ ಗಾಳಿಗೆ ತೋರಿ ನಿನ್ನ ಬಯಸಿದ್ದೇಕೆ? . ಪ್ರತೀ ಸಲ ಸೋಲುತ್ತೇನೆ ನಿನ್ನ ಎದುರು, ಪ್ರತೀ ಮೌನಕ್ಕೋ ಉತ್ತರ ಹುಡುಕುತ್ತೇನೆ ............

ಕೆಲವೊಮ್ಮೆ ಮಾತಿಗಿಂತ ಮೌನವೇ ಹಿತವೆನಿಸುತ್ತದೆ, ನನಗೆ ನೀ ಹೇಳದ ಮಾತುಗಳ ಕಲ್ಪಿಸಿಕೊಂಡು. ನಿನ್ನ ಪ್ರತೀ ಮಾತಿಗೂ, ಮೌನಕ್ಕೋ ಕವಿತೆ ಬರೆಯಬಲ್ಲೆ, ನೀ ಒಲ್ಲೆ ಅನ್ನದಿದ್ದರೆ !!!.

ಮೌನ
ಕಣಿವೆ
ಮಾತು
ಪ್ರತಿಧ್ವನಿ.

ದೊಡ್ಡದಾಗಿ possessiveness ಕಾಡುತ್ತದೆ, ನೀನೇ ಬೇಕು ಎಂಬ ಹಂಬಲದ ಜೊತೆ. ನಿನ್ನೊಂದಿಗೆ ನಾನೇ ಇರಬೇಕು,ನಿನ್ನ ಪ್ರತಿಯೊಂದು ಮಾತು,ಯೋಚನೆಗಳಲ್ಲಿ ನನಗೂ ಪಾಲಿರಬೇಕು ,ಗೊತ್ತು ಆಸೆ ಚಿಕ್ಕದಲ್ಲ, ಆದರೊ ನನ್ನ ಜೊತೆ ನಾನೇ ಯುದ್ಧಕ್ಕೆ ನಿಲ್ಲುತ್ತೇನೆ ನಿನ್ನ ಗೆಲ್ಲುವ ನೆಪಕ್ಕೆ.ಮತ್ತೆ ಸೋಲುತ್ತೇನೆ,ನಗುತ್ತೇನೆ,ಅಳುತ್ತೇನೆ . ಭ್ರಮೆಗಳಿಗೆ ಕ್ಷಮೆಯೆಲ್ಲಿ ???!!.

ಒಂದು ಸುಳ್ಳು ಹೇಳಿಬಿಡು ,ನಿನಗೆ ನೀನೆ. ಹೀಗೇ ನನ್ನ ಹಾಗೆ ನಿನಗೂ ಆಗಿದೆ ಎಂದು . ಹಿತವೆನಿಸಬಹುದು ನಿನಗೂ, ನನಗು.


ಎಲ್ಲ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ, ನನ್ನ ನಾ ಕಳೆದು ಕೊಂಡೇನು. ಅದಕ್ಕೆ ಇರಬೇಕು ನಾ ನನ್ನೊಳಗೆ ಗುದ್ದಾಡುದು, ಒಂದು insecure feeling ಗೆ. ಎಲ್ಲ ನಿಯಮಗಳು ನಿನ್ನೆದುರು ಸದ್ದಿಲ್ಲದೆ ಜಾರಿಕೊಳ್ಳುತ್ತವೆ , ಯಾರನ್ನೂ , ಯಾವುದಕ್ಕೂ ಮತ್ತೆ ಮತ್ತೆ ಕೇಳದ ನಾನು , ನಿನ್ನಲ್ಲಿ ಎಷ್ಟು ಸಲ ಬೇಕಾದರೂ ಕೇಳಿಯೇನೂ . ತಿರಸ್ಕಾರ, ನಾಚಿಕೆ , ಅವಮಾನಗಳಿಗೆ ಅಭ್ಯಾಸವಾಗಿದೆ.


ತುಂಬಾ ಸಲ ಅಂದುಕೊಳ್ಳುತ್ತೇನೆ, ನಿನ್ನ ಬಗ್ಗೆ ಯೋಚಿಸಲೇ ಬಾರದೆಂದು, ಆದರೊ ಮತ್ತೆ ನನ್ನ ಸಮಯಗಳ ನಿನಗೆಂದು ಮಾರಿಕೊಳ್ಳುತ್ತೇನೆ. ಖಾಲಿಯಾದ ಸಮಯದ ಜೋಳಿಗೆಗೆ ಮತ್ತೊಂದಷ್ಟು ನೆನಪ ತುಂಬಿಕೊಳ್ಳುತ್ತೇನೆ, ಮುಂದೊಂದು ದಿನ , ನೀನೇ ಇರದ ಕ್ಷಣಕ್ಕೆ ಮೆಲುಕು ಹಾಕಲು.

ಖಾಲಿ ಜೋಳಿಗೆ ತುಂಬಾ
ನಿನ್ನ ನೆನಪು.
ಕೆಲವು ಕಪ್ಪು,
ಹಲವು ಬಿಳುಪು.

ನೀನು ಬಣ್ಣಗಳ ಕುಂಚ ಕೊಟ್ಟು ನೋಡು, ನಾ ಬದುಕ ಚಿತ್ರಗಾರ, ಪ್ರತೀ ಸಲ ಸೋಲುವವಗೆ ಬದುಕ ಗೆಲ್ಲುದು ಗೊತ್ತು. ನಮ್ಮದೆನ್ನುವವ ಪುಟ್ಟ ಪ್ರಪಂಚಕ್ಕೆ ನಾನೇ ಕಾವಲುಗಾರ, ದಂಡನಾಯಕ. ನಿನ್ನ ಕಾಯುದು, ಕನಸ ಆಯುದು ನನ್ನ ನಿತ್ಯ ಕಾಯಕ!!!!!.

ಕೊನೆಯದಾಗಿ,

ಊರ ಜಾತ್ರೆಯಲ್ಲಿ ಬೊಂಬೆಯೊಂದು ಇಷ್ಟವಾಯಿತು,ಇಷ್ಟವಾದದ್ದು ಅದರ ಅಂದ ಚಂದಕ್ಕಲ್ಲ, ಬೊಂಬೆ ಮಾರುವವ "ಸಾರ್ ಇದು ತಗೊಳ್ಳಿ ಚಂದವಿದೆ " ಎಂದು ಹೇಳಿದನೆಂದು ಅಲ್ಲ. ಕಾರಣವೇನೇ ಇರಲಿ ,ಬೊಂಬೆಯನೇ ನೋಡಿದೆ, ಕಣ್ಣ ಬಿಂಬದಲ್ಲಿ ನನ್ನ ನೋಡುವ ಆಸೆಯಿಂದ. ತೇಲೋ ಪುಟ್ಟ ಕಂಗಳಲಿ ದಿನಾ ಹುಡುಕುತ್ತೇನೆ ಕಳೆದುಕೊಂಡ ನನ್ನನ್ನು. ಜಾತ್ರೆ ಮುಗಿವ ಮೊದಲು ಹುಡುಕೋಣವೆ ಜೊತೆಗಿನ್ನು . . . . . . . .. . . . !!!!

ಬೋಂಬೆ ಕಂಗಳಲ್ಲಿ ಕಳೆದು ಹೋದ ಆ ಘಳಿಗೆ , ಅಮೃತ ಘಳಿಗೆ  ...............!!!

ಜಾತ್ರೆ ತೇರು ಮುಂದುವರಿಯುದು ...................................





Yours

Sush
















No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...