Monday, January 15, 2018

ಕಾಯಿನ್ ಬೂತ್ ನಲ್ಲಿ ಕಳೆದು ಹೋದ ಕಹಾನಿಗಳು ........ ...



ಕೈಯಲೊಂದಿಷ್ಟು ಒಂದು ರೂಪಾಯಿ ನಾಣ್ಯಗಳನ್ನು ಹಿಡಿದುಕೊಂಡು ಕಾಯಿನ್ ಫೋನ್ ನ ಮುಂದೆ ನಿಂತು ಅತ್ತಕಡೆಯಿಂದ ಬರುವ  "ಹಲೋ" ಗೆ ಕಾಯುವಾಗ ಫೋನ್ ಗಿಂತ  ಜಾಸ್ತಿ ವೇಗದಲ್ಲಿ  ಎದೆ ಬಡಿದು  ಕೊಳ್ಳುತಿತ್ತು. ಅಂದು ಮಾತಾಡಲು ಎಷ್ಟೊಂದು ವಿಷಯಗಳಿದ್ದರು ಅದಕ್ಕಾಗಿ ಅದೆಷ್ಟು ಸಮಯವಿದ್ದರೂ ಕೈಯಲ್ಲಿದ್ದದ್ದು ಒಂದ್ದಿಷ್ಟೇ ನಾಣ್ಯಗಳು . ಪ್ರತೀ ನಿಮಿಷ ಮುಗಿಯುವಾಗ ಆಗುವ ಸದ್ದಿಗೆ ಕೈಯಾಲ್ಲಿದ್ದ ಮತ್ತೊಂದು ನಾಣ್ಯ ಬಲಿಯಾಗುತಿತ್ತು. ಕೆಲವೊಮ್ಮೆಯಂತೂ  ಒಂದು ನಿಮಿಷದ ಮೌನಕ್ಕೆ,ಅತ್ತಕಡೆಯಿಂದ ಬರುವ ಉಸಿರಾಟದ ಸದ್ದಿಗೆ "ಮತ್ತೆ ?" ಅನ್ನುವ ಎಂದೂ ಮುಗಿಯದ ಪ್ರಶ್ನೆಗೆ ಕೈಯಲ್ಲಿದ್ದ ಅಷ್ಟೂ ನಾಣ್ಯಗಳು ಕಾಯಿನ್ ಬೂತ್ ನ ಹೊಟ್ಟೆ ಸೇರಿಕೊಳ್ಳುತ್ತಿದ್ದವು.ಮತ್ತೂ ಏನೋ ಮಾತಾಡುವ ಹಂಬಲದಿಂದ ಕಿಸೆಯಲ್ಲಿ ಕೈಯಾಡಿಸಿದೆರೆ ನಾಣ್ಯಗಳ ಸದ್ದಿಲ್ಲ.ಕಡಿದುಕೊಂಡ ತಂತಿಗೆ ಎದೆ ಜೋತು ಬಿದ್ದಿತ್ತು.

                                                   ******************
               
ಮೊನ್ನೆ ಹೀಗೆ ಮಾತಾಡುವಾಗ ರೂಮ್ ಗೆ ಬಂದಿದ್ದ ಗೆಳೆಯನ ಕೇಳಿದೆ " ರೀ ನಿಮ್ಮ ಲವ್ ಸ್ಟೋರಿ ಹೇಳಿ" ಹೊರಗಡೆ ತಣ್ಣಗೆ ಗಾಳಿ ಬೀಸುತಿತ್ತು ಒಳಗಡೆ ಸೇರಿದ್ದ ಒಂದು ಪೆಗ್ ಮೆಲ್ಲಗೆ ಕಥೆ ಶುರುಮಾಡಿತ್ತು. " ಅವಳು ನಮ್ಮ ಮನೆಗೆ ಬಂದಿದ್ಳು ಯಾವುದೋ function ಗೆ  , ನನ್ನ ತಂಗಿದ್ದು ಫ್ರೆಂಡ್ ಕಣೋ " ಇವಳನ್ನು ಎಲ್ಲೋ ನೋಡಿದೆ ಅನ್ನಿಸಿತು " ನಿಮ್ಮದೇ ಕಾಲೇಜು " ಮಾತಿಗೆ ಶುರುವಿಟ್ಟಳು. ಎಲ್ಲಿ ನಿಮ್ಮ ಮನೆ? " ಇದೇ  ಪಕ್ಕದ ಹಳ್ಳಿಯ ಎರಡನೇ ಬೀದಿ".

"ಎಷ್ಟು ಗಂಟೆಯ ಬಸ್ "

ಅಷ್ಟೇ ನನ್ನ ದಿನಚರಿ ಬದಲಾಗಿತ್ತು. ಅದೇ ಬಸ್ ನನ್ನ ಮನೆ ಪಕ್ಕದ ಸ್ಟಾಂಡ್ ನಲ್ಲಿ ಬರುತಿತ್ತು, ಆದರೂ ನನಗೆ ಅಷ್ಟೊಂದು ಹೊತ್ತು ಕಾಯುವ ವ್ಯವಧಾನವೆಲ್ಲಿ?!!. ಪಕ್ಕದ ಹಳ್ಳಿಯ ಎರಡನೇ ಬೀದಿ ನನ್ನ ಕಾಲೇಜು ಮುಗಿವವರೆಗಿನ ಬಸ್ stop ಆಗಿತ್ತು, ಜೊತೆಗೆ ಕೂತರು ಮಾತಾಡಲೊಂದಿಷ್ಟು ಸಂಕೋಚವೇ ಇತ್ತು.ವಾರಾಂತ್ಯದ ಅಜ್ಜಿಮನೆಗೆ ಹೋಗುವ ಬಸ್ ಗೆ ಜೊತೆಗೆ ಕಾಯುತ್ತಿದ್ದೆವು. ಜೊತೆಗೆ ನಡೆದ ಪ್ರತೀ ಹೆಜ್ಜೆಗಳಿಗೆ ಒಂದು, ನಗುವಿತ್ತು,ಕತೆಯಿತ್ತು.

PUC ಅದು ಹೇಗೋ ಸದ್ದೇ ಇಲ್ಲದೆ ಜಾರಿತ್ತು." ನಾನು ಇಂಜಿನಿಯರ್ ಮಾಡುತ್ತೇನೆ, ನೀನು ಬಾರೋ"
ನಮ್ಮ ಹಣೆಯಲ್ಲಿ ಇಂಜಿನಿಯರಿಂಗ್ ಎಲ್ಲಿ ಬರೆದಿತ್ತು, ಸದ್ಯಕ್ಕೆ PUC ಪಾಸಾಗುದಷ್ಟೇ ಬದುಕಿನ ಗುರಿಯಾಗಿತ್ತು.ಹೇಗೋ PUC ಪಾಸಾಗಿತ್ತು, ಗೆಳೆಯರೆಲ್ಲ ಬಿ. ಫಾರ್ಮ ಮಾಡುವ ಎಂದರು ನಾನು ಅವರ ಜೊತೆ ಸೇರಿಕೊಂಡೆ . ಆಕೆ ಎಲ್ಲೋ ಇಂಜಿನಿಯರಿಂಗ್ ಸೇರಿದಳು, ಯಾವ ಕಾಲೇಜು ಎಂದು ಗೊತ್ತಿಲ್ಲ, ಆವಾಗ ಎಲ್ಲ ಈ ಮೊಬೈಲ್ ಫೋನ್ ಇರ್ಲಿಲ್ಲ ಅಲ್ವ . ನಮ್ಮ ಏರಿಯಾದಲ್ಲಿ ಇರುವುದೇ ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳು. ಒಂದು ದಿನ ಗೆಳೆಯನನ್ನು ಕರೆದುಕೊಂಡು ನಾಲ್ಕೂ ಕಾಲೇಜಿನ ಗೇಟ್ ಕಾದೆ ಆದರೆ ಅವಳ ಸುಳಿವಿಲ್ಲ. ಆದರೆ ಒಂದು ದಿನ ಊರ ಪಾರ್ಕ್ ನಲ್ಲಿ ಒಬ್ಬನೇ ಕುಳಿತಿದ್ದಾಗ ಅವಳ ತಮ್ಮ ಬಂದ "ಕುರುಡನಿಗೆ ಕಣ್ಣು ಬಂದ ಹಾಗೆ ಆಯಿತು". " ಏ ನಿನ್ನ ಅಕ್ಕ ಯಾವ ಕಾಲೇಜ್ ಗೆ ಹೋಗುವುದು ಈಗ ?" .

"ಕಾಲೇಜು ಹೆಸರು ನಂಗೊತ್ತಿಲ್ಲ ಇಲ್ಲೇ ಪಕ್ಕದಲ್ಲಿ ".
ಚಂದದ ಅಕ್ಕ ಇದ್ರೆ ತಮ್ಮನಿಗೆ ಸ್ವಲ್ಪ ಧಿಮಾಕು ಜಾಸ್ತಿ. ಕಣ್ಣು ಬಂದು ಏನು ಪ್ರಯೋಜನ ನೋಡೋಕೆ ಬೆಳಕು ಇರ್ಲಿಲ್ಲ.

ಕಾಲದ ಚಕ್ರ ಉರುಳುತಿತ್ತು , ನಾ ನನ್ನ ಹೃದಯನ ಎಲ್ಲೋ ಕಟ್ಟಿ ಇಟ್ಟಿದ್ದೆ ಇನ್ನದರ ಅವಶ್ಯಕತೆ ಇಲ್ಲ ಅನ್ನುವ ಹಾಗೆ. ಕೋತಿ ಹೃದಯ ಮರದಲ್ಲಿ ಅಂತೆ,  "ನನ್ನ ಹೃದಯ ?".

ತಂತ್ರಜ್ಞಾನ ಬೆಳೆಯುತಿತ್ತು, ಸ್ಮಾರ್ಟ್ ಫೋನ್ , ಇಂಟರ್ನೆಟ್ ಎಲ್ಲರ ಕೈಯಲ್ಲಿ ತಿರುಗಾಡ ತೊಡಗಿತು. ಹಾಗೆ ಒಂದು ದಿನ ಫೇಸ್ಬುಕ್ ನಲ್ಲಿ ಒಂದು ಮೆಸೇಜ್ ಬಂತು , "ಹಾಯ್ ... ನೆನಪಿದೆಯ ?", ಅದೇ ಹುಡುಗಿ, ಅದೇ ದಿನ ಸಂಜೆ ಭೇಟಿಯಾದೆ. ಆಕೆ ಇಂಜಿನಿಯರಿಂಗ್ ಮುಗಿಸಿ ಇಲ್ಲೇ ಐಟಿ  ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. " ನಿಮ್ಮ ಮನೆಗೆ ಫೋನ್ ಮಾಡಿದೆ ಸುಮಾರು ಸರ್ತಿ , ಯಾರೋ ಹೆಂಗಸು ಫೋನ್ ತೆಗೆಯುತ್ತಿದ್ದರು , ಹಾಗೆ ಕಟ್ ಮಾಡುತಿದ್ದೆ ಯಾಕೋ ಭಯ ಆಗುತಿತ್ತು." ಮನೆಯಲ್ಲಿದ್ದ ಹಳೇ ಲ್ಯಾಂಡ್ ಲೈನ್ ಫೋನ್ ಮತ್ತು ಫೋನ್ ರಿಂಗಾದ ಕೂಡಲೇ ಓಡಿ ಬಂದು ರಿಸೀವ್ ಮಾಡುತಿದ್ದ ಅತ್ತಿಗೆ ಮೇಲೆ ಒಟ್ಟಿಗೆ ಕೋಪ ಬಂತು. "

"ನಿನ್ನ ತಮ್ಮ ಸಿಕ್ಕಿದ, ನಿನ್ನ ಬಗ್ಗೆ ಕೇಳಿದ್ದಕ್ಕೆ ಗೊತ್ತಿಲ್ಲ ಅಂದ".ಆಕೆ ಮನೆಗೆ ಹೋಗಿ ಅದೆಷ್ಟು ಬೈದಿರಬಹುದೊ . ನನಗೊ ಅದೇ ಬೇಕಿತ್ತು, ಸೇಡು ತೀರಿಸಿಕೊಳ್ಳ ಬೇಕಿತ್ತು . " ನಿಮ್ಮ ಮದುವೆ ಆಯ್ತಾ ?" ಇಲ್ಲ ಮುಂದಿನ ತಿಂಗಳು ೧೮ ಕ್ಕೆ, ನನ್ನ ಸಂಬಂಧಿಕರ ಮಗಳೇ . "ನಿನ್ನದು ?" ಕೇಳಬೇಕೆಂದು ಕೊಂಡವನಿಗೆ ಅವಳ ಕತ್ತಿನಲ್ಲಿ ನೇತಾಡುತಿದ್ದ ಕರಿಮಣಿ ಉತ್ತರ ಹೇಳಿತ್ತು. ಮನೆ ಕಡೆ ಬನ್ನಿ ಒಮ್ಮೆ ನಮ್ಮವರ ಪರಿಚಯ ಆದ ಹಾಗೆ ಆಗುತ್ತದೆ . " ಸರಿ " . ಕುಡಿಯುತ್ತಿದ್ದ ಕಾಫಿ ಯಾಕೋ ಎಂದಿಗಿಂತ ಜಾಸ್ತಿ ಕಹಿ ಇದ್ದ ಹಾಗೆ ಇತ್ತು. ನನಗೆ ಅವಳನ್ನು ಇವತ್ತು ಕಂಡ ಖುಷಿಗಿಂತ ಮೊದಲೇ ಸಿಗಬಾರದಿತ್ತೆ ಎನ್ನುವ ದುಃಖ ಜಾಸ್ತಿ ಕಾಡುತಿತ್ತು.

"ನನ್ನ ಅಜ್ಜಿಗೆ ಮೈ ಹುಷಾರಿಲ್ಲ ನಿಮ್ಮ ಗಾಡಿ ತಗೊಂಡು ಮನೆಗೆ ಬನ್ನಿ ಪ್ಲೀಸ್ " ಒಂದು ದಿನ ಆಕೆ ಅಳುತ್ತಾ ಫೋನ್ ಮಾಡಿದಳು. ಹಳೆ ಹುಡುಗಿಯ ಕಣ್ಣೀರು ಕೇಳಿಸಿಕೊಂಡು  ಸುಮ್ಮನಿರಲಾಗದೆ ಅವರ ಮನೆಗೆ ಹೋದೆ. ಅವಳ ತಮ್ಮ, ನನ್ನ ಲೈಫ್ ನ ವಿಲನ್  ಅಲ್ಲೇ ಮನೆಯಲ್ಲಿದ್ದ ಚೋಟುದ್ದ ಇದ್ದವ ನನ್ನ ಎತ್ತರಕ್ಕೆ ಬೆಳೆದಿದ್ದ , "ಚೆನ್ನಾಗಿದ್ದೀರಾ ಅಂಕಲ್ ಅಂದ ". ನರ್ಸ್ ಇಂಜೆಕ್ಷನ್ ಕೊಟ್ಟು ನೋವಾಗಿಲ್ಲ ತಾನೇ ಅಂದ ಹಾಗಿತ್ತು ಅವನ ಮಾತು . " ಎಂಥಾ ದೊಡ್ಡ ತಪ್ಪು ಮಾಡಿದೆ ತಮ್ಮ ನೀನು ಅಂದುಕೊಂಡೆ ".

ಅಜ್ಜಿ ಉಬ್ಬಸದಿಂದ ಏದುಸಿರು ಬಿಡುತ್ತಿದ್ದರು, ಪಕ್ಕದಲ್ಲೇ ಇದ್ದ ನರ್ಸಿಂಗ್ ಹೋಂ ಗೆ ಸೇರಿಸಿದೆ ಸ್ವಲ್ಪ ಹುಷಾರಾದವರು ಪಕ್ಕಕ್ಕೆ ಕರೆಸಿಕೊಂಡು ಮಾತಿಗಿಳಿದರು ," ನನ್ನ ಮೊಮ್ಮಗಳನ್ನೇ ಮದುವೆ ಆಗುತ್ತೀಯ ಅಂದುಕೊಂಡಿದ್ದೆ , ಅವಳು ಎಲ್ಲಾ ಹೇಳಿದ್ಲು ನನಗೆ , ಅವಳ ಮದುವೆ ಟೈಂನಲ್ಲಿ ತುಂಬಾ ಬೇಜಾರು ಮಾಡಿಕೊಂಡು ಇದ್ಲು , ಇಷ್ಟು ಸಣ್ಣ ಊರಲ್ಲಿ ಅದೆಲ್ಲೋ ಹೋದೆ ನೀನು ?"

ಅಜ್ಜಿಗೇನು ಗೊತ್ತು ಬೆಂಗಳೂರು ಬೆಳೆದು ಎಷ್ಟು ದೊಡ್ಡದಾಗಿದೆ ಎಂದು. ಯಾಕೋ ಈ ಫೇಸ್ಬುಕ್ , ವಾಟ್ಸ್ಯಾಪ್ ಗಳು ೧೫ ವರುಷಗಳ ಹಿಂದೆ ಇದ್ದಿದ್ದರೆ ? ಎಂದೆಣಿಸಿತು . ಮನೆಯಿಂದ ಮಡದಿ ಫೋನ್ ಮಾಡಿದಳು " ಬಂದೆ ಇರು ಫ್ರೆಂಡ್ ಅಜ್ಜಿಗೆ ಹುಷಾರಿಲ್ಲ ಆಸ್ಪತ್ರೆಯಲ್ಲಿ ಇದ್ದೇನೆ".  ನಾ ಹೇಳಿದ ಮಾತು ಆಕೆಗೊ ಕೇಳಿಸಿರಬೇಕು, ಕಣ್ಣಲ್ಲೇ ಥ್ಯಾಂಕ್ಸ್ ಹೇಳಿದಳು .

 ನನಗು ಮಾತು ಬೇಡವಾಗಿತ್ತು.

ನನಗೆ ನನ್ನದೇ ಆದ ಬದುಕಿದೆ , ಅವಳಿಗೆ ಅವಳದ್ದು. ಬಾಳ ದಾರಿಯಲ್ಲಿ ಜೊತೆಗೆ ಒಂದಿಷ್ಟು ದೂರ ನಡೆದು ,ಯಾವುದೋ ನಿಲ್ದಾಣದ ಜನ ಜಂಗುಳಿಯ ನಡುವೆ ಕಣ್ಮರೆಯಾದವಳು ಆಕೆ. ಈಗ ಮತ್ತೆ ಇನ್ನಾವುದೋ ನಿಲ್ದಾಣದಲ್ಲಿ ಮತ್ತೆ ಪ್ರತ್ಯಕ್ಷವಾದರೆ?. ಬದುಕು, ಪಯಣ ಹಿಂದಿನಂತಿಲ್ಲವಲ್ಲ."ಫ್ರೆಂಡ್ " ಅಷ್ಟೇ, ಮನಸಿನೊಳಗೆ ಅಂದುಕೊಂಡರು ಆ ಮಾತು ನನಗೆ ಕೇಳುವಷ್ಟು ಜೋರಾಗೆ ಹೇಳಿದ್ದೆ.

                                                         ********************

"ಅಮ್ಮ ಇವತ್ತು ಶುಕ್ರವಾರ ಅಣ್ಣನ ಫೋನ್ ಬರುತ್ತದೆ ನಾಲ್ಕು ಗಂಟೆಗೆ ".ಗದ್ದೆಯಲ್ಲಿ ಕೆಲಸ ಮಾಡುತಿದ್ದ ಅಮ್ಮನಿಗೆ ನಾ ಹೇಳಿದೆ . ನಾನು ಆಗಿನ್ನು ಸಣ್ಣ ಹುಡುಗ SSLC  ಓದುತಿದ್ದೆ. ಅಣ್ಣ ಸೌದಿಯಲ್ಲಿ ಇದ್ದರು. ನನ್ನ ಹಳ್ಳಿಯಲ್ಲಿ ಫೋನ್ ಇದ್ದದ್ದು ನಾಲ್ಕೈದು ಮನೆಗಳಲ್ಲಿ ಅಷ್ಟೇ. ನನ್ನ ಮನೆಯಿಂದ ಸುಮಾರು ಅರ್ಧ ಕಿ.ಮೀ ದೂರದ ಶೆಟ್ಟರ ಮನೆಯಲ್ಲಿ ಒಂದು BSNL ಫೋನ್ ಇತ್ತು ಅಣ್ಣ ಶುಕ್ರವಾರ ರಜಾ ದಿವಸ ೪ ಗಂಟೆಗೆ ಫೋನ್ ಮಾಡುತಿದ್ದದು ಅಲ್ಲಿಗೆ. ಅಮ್ಮ ಎಷ್ಟೋ ಸಲ ಹೋಗಿ ಲೈನ್ ಸಿಗದೆ ನಿರಾಶೆಯಿಂದ ವಾಪಸ್ ಬಂದದ್ದು ಇದೆ. ಅಮ್ಮನ ಜೊತೆ ನಾನು ಹೋಗುತಿದ್ದೆ ಅಲ್ಲಿಗೆ ಯಾಕೆಂದರೆ ಆ ಕಾಲದಲ್ಲಿ t.v ಯು ಎಲ್ಲರ ಮನೆಯಲ್ಲಿ ಇರಲಿಲ್ಲ ಆದರೆ ಅಲ್ಲಿ ಇತ್ತು , ಬ್ಲಾಕ್ ಅಂಡ್ ವೈಟ್ ಟಿವಿ ಗೆ ಬಣ್ಣದ ಗಾಜು ಅಂಟಿಸಿದ್ದರು.  "ವಾವ್ ಕಲರ್ ಟಿವಿ".             

ಅಣ್ಣ ಮೊನ್ನೆ ಹೀಗೆ ಗೊಣಗುತ್ತಿದ್ದರು " ಎರೆಡೆರಡು ಫೋನ್ ಇದ್ದರು ಯಾರು ಫೋನ್ ಮಾಡುದಿಲ್ಲ , ನಾವು ಮಾಡಿದರು ನೋಡಿ ಸುಮ್ಮನಿರುತ್ತಾರೆ , ಮೊದಲೆಲ್ಲ ವಾರವಿಡಿ  ಕಾಯುತಿದ್ದರು.

                                                         *****************

ಈಗ ಫೋನ್ ಎಲ್ಲರ ಕೈಯಲ್ಲಿದೆ ಕಿಸೆಯಲ್ಲಿ ರಿಂಗ್ ಆಗುತಿದ್ದರು ಎಷ್ಟೋ ಜನಕ್ಕೆ ಕೇಳುದೇ ಇಲ್ಲ , ಕೆಲವರಂತೂ ನೋಡಿಯೂ ನೋಡದವರ ಹಾಗೆ ಜಾಣ ಕುರುಡುತನ ನಟಿಸುತ್ತಾರೆ . 
ತಂತ್ರಜ್ಞಾನದ ಜೊತೆಗೆ ನಾವು ಅಷ್ಟೊಂದು ಬದಲಾಗಿ ಬಿಟ್ಟೆವೆ , ಎಲ್ಲರನ್ನು ಒಟ್ಟಿಗೆ ಸೇರಿಸಬೇಕಾದ ಈ ತಂತ್ರಜ್ಞಾನಗಳು ನಮ್ಮ ನಮ್ಮ ಸಂಭಂದಗಳನ್ನು ಒಡೆಯುತಿದ್ದಾವೆಯೇ ?. ಕೆಲವೊಂದು ಜಗಳಗಳು ಶುರುವಾಗುದೆ ಕುಟುಂಬದವರ ವಾಟ್ಸಾಪ್ಪ್ ಗ್ರೂಪಿನಲ್ಲಿ. ಎಷ್ಟೋ ಸಲ ಈ ತಂತ್ರಜ್ನಾದ ಬಳಕೆಯನ್ನೇ ನಿಲ್ಲಿಸಿ ಬಿಡುವ ಅನ್ನಿಸುತ್ತದೆ. ಫೋನ್ ಮೆಸೇಜ್ ನಲ್ಲೇ ಶುರುವಾಗುವ ಕಲಹಗಳು ಎಷ್ಟೋ ಒಳ್ಳೆಯ ಸಂಬಂಧಗಳನ್ನು ಕೊನೆಗೊಳಿಸುತ್ತವೆ.
ಕೆಲವರಂತೂ ಎಷ್ಟು ಅಂಟಿಕೊಂಡಿದ್ದಾರೆ ಎಂದರೆ ಪಕ್ಕದ ರೂಮ್ನಲ್ಲೇ ಇರುವ ಗೆಳೆಯನನ್ನು ಊಟಕ್ಕೆ ವಾಟ್ಸಪ್ಪ್ ನಲ್ಲಿ ಕರೆಯುತ್ತಾರೆ.!!!.


ನಿಮಿಷಕ್ಕೆ ಒಂದು ರುಪಾಯಿಯ ನಾಣ್ಯ ಹಾಕಿ ಮಾತಾಡುತಿದ್ದ ಕಾಯಿನ್ ಫೋನ್ ಗಳು ಮ್ಯೂಸಿಯಂ ಸೇರಿದವು , ಯಾರದೇ ಫೋನ್ ಬರಲಿ ಯಾವುದೇ ತಾರತಮ್ಯ ಮಾಡದೆ ಒಂದೇ ರೀತಿ ರಿಂಗ್ ಆಗುತಿದ್ದ ಹಳೆಯ ಲ್ಯಾಂಡ್ ಲೈನ್ ಮೂಲೆ ಸೇರಿತು, ಇವುಗಳಲ್ಲಿ ಸಂಪರ್ಕ ಕಳೆದುಕೊಂಡವೆಷ್ಟೋ , ಪಡೆದುಕೊಂದವೆಷ್ಟೋ. ಹೀಗೆ ಯೋಚಿಸುತ್ತಿದ್ದೆ ಕಿಸೆಯಲ್ಲಿದ್ದ ಫೋನ್ ರಿಂಗಾಯಿತು , ಈ ನಂಬರ್ ನ ಎಲ್ಲೋ ನೋಡಿದ ನೆನಪು ,

"ಹಲೋ ... "

ಆ ಕಡೆಯಿಂದ ಹುಡುಗಿ ದ್ವನಿ,

"ಸರ್ ನಿಮಗೆ ಕ್ರೆಡಿಟ್ ಕಾರ್ಡ್ ಬೇಕಾ . . . . . . . . . . . . !!!!"

"ಬೇಡ ನನಗೆ ಒಂದು ರೂಪಾಯಿ ನಾಣ್ಯ ಬೇಕು " ಯಾಕೋ ಕೇಳಬೇಕೆಂದೆಣಿಸಿತು .

ಇಂತ ಪ್ರಶ್ನೆಗೆ ಕೋಪಗೊಳ್ಳುತಿದ್ದ ನನಗೆ ಯಾಕೋ ಆಗ ನನ್ನದೇ ಯೋಚನೆಗೆ ನಗು ಬಂತು, ಕಣ್ಮುಂದೆ ಹಳದಿ ಕಪ್ಪು ಬಣ್ಣದ ಕಾಯಿನ್ ಬಾಕ್ಸ್ ,ಕಿವಿಯಲ್ಲಿ ಐವತ್ತೇ ಸೆಕೆಂಡ್ ಆಗುತ್ತಿದ್ದಂತೆ  ಶುರುವಾಗುತಿದ್ದ ಕೀ, ಕೀ ಶಬ್ದ . ಎದೆ ಮೆಲ್ಲಗೆ ಬಡಿಯುತ್ತ , ಜಾಸ್ತಿ ಸದ್ದು ಮಾಡದೆ ಕೇಳುತಿದ್ದ, ಆಕಡೆಯಿಂದ ಬರುವ ,             

" ಹಲೋ. . . . . . . . . .  "





ಸುಕೇಶ್ ಪೂಜಾರಿ

Follow me on Facebook : https://www.facebook.com/sukesh.sush







1 comment:

  1. ನಿನ್ನ follower ಮಗಾ ನಾನು....ಎಸ್ಟ್ರೋಡಿನರಿ...

    ReplyDelete

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...